Namma Metro: ಟೆಕ್ಕಿಗಳಿಗೆ ಸಿಹಿಸುದ್ದಿ, ಹಳದಿ ಮಾರ್ಗದ ಪ್ರಾಯೋಗಿಕ ಸಂಚಾರ ಆರಂಭ
ಬೆಂಗಳೂರು, ಜೂನ್ 12: ಬೆಂಗಳೂರು ನಗರದ ಟೆಕ್ಕಿಗಳಿಗೆ ಸಿಹಿಸುದ್ದಿ. ಆರ್. ವಿ. ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ನಮ್ಮ ಮೆಟ್ರೋ ಪ್ರಾಯೋಗಿಕ ಸಂಚಾರವನ್ನು ಆರಂಭಿಸಲು ಬಿಎಂಆರ್‌ಸಿಎಲ್ ದಿನಾಂಕ ನಿಗದಿ ಮಾಡಿದೆ. ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದರೆ ಸಾಫ್ಟ್‌ವೇರ್ ಇಂಜಿನಿಯರ್‌ಗಳಿಗೆ ಅನುಕೂಲವಾಗಲಿದೆ.
ಆರ್. ವಿ. ರಸ್ತೆ-ಬೊಮ್ಮಸಂದ್ರ ಮಾರ್ಗ 18.82 ಕಿ. ಮೀ. ಉದ್ದವಿದೆ. 16 ನಿಲ್ದಾಣಗಳನ್ನು ಹೊಂದಿರುವ ಇದು ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಸೇರಿದೆ. ಈ ಮಾರ್ಗ ಆರ್. ವಿ. ರಸ್ತೆ ನಿಲ್ದಾಣದಲ್ಲಿ ಹಸಿರು ಮಾರ್ಗಕ್ಕೆ, ಜಯದೇವ ನಿಲ್ದಾಣದಲ್ಲಿ ಗುಲಾಬಿ ಮಾರ್ಗಕ್ಕೆ ಸಂಪರ್ಕ ಕಲ್ಪಿಸುತ್ತದೆ.

ಜೂನ್ 7ರಂದು ಆರ್. ವಿ. ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಆರಂಭಿಸಲು ಬಿಎಂಆರ್‌ಸಿಎಲ್ ಮುಂದಾಗಿತ್ತು. ಆದರೆ ಹೊಸ ತಂತ್ರಾಂಶ ಅಪ್‌ಲೋಡ್ ಮಾಡುವುದು ತಡವಾದ ಕಾರಣ ಅದು ಸಾಧ್ಯವಾಗಲಿಲ್ಲ. ಈಗ ಜೂನ್ 13ರಂದು ಆರ್. ವಿ. ರಸ್ತೆ-ಬೊಮ್ಮಸಂದ್ರ ಸಂಪೂರ್ಣ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಆರಂಭವಾಗಲಿದೆ.
ಮಾರ್ಗ, ನಿಲ್ದಾಣದ ವಿವರ: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಬರುವ ಆರ್. ವಿ. ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ 16 ನಿಲ್ದಾಣಗಳಿವೆ. ಆರ್. ವಿ. ರಸ್ತೆ, ಬಿಟಿಎಂ ಬಡಾವಣೆ, ಸಿಲ್ಕ್ ಬೋರ್ಡ್, ಎಚ್‌ಎಸ್‌ಆರ್ ಲೇಔಟ್, ಆಕ್ಸ್‌ಫರ್ಡ್ ಕಾಲೇಜು, ಮುನೇಶ್ವರ ನಗರ, ಚಿಕ್ಕಬೇಗೂರು, ಬಸಾಪುರ ರಸ್ತೆ, ಹೊಸ ರೋಡ್, ಎಲೆಕ್ಟ್ರಾನಿಕ್ ಸಿಟಿ-1, ಎಲೆಕ್ಟ್ರಾನಿಕ್ ಸಿಟಿ-2, ಹುಸ್ಕೂರು ರಸ್ತೆ, ಹೆಬ್ಬಗೋಡಿ, ಬೊಮ್ಮಸಂದ್ರ ಪ್ರಮುಖವಾಗಿವೆ.
ಹಳದಿ ಮಾರ್ಗದಲ್ಲಿ ನಮ್ಮ ಮೆಟ್ರೋ ಕಾಮಗಾರಿಗಳು ಬಹುತೇಕ ಪೂರ್ಣಗೊಳ್ಳುತ್ತಾ ಬಂದಿದೆ. ಪ್ರಾಯೋಗಿಕ ಸಂಚಾರ ನಡೆಸಲು ಚೀನಾದಿಂದ ಮೆಟ್ರೋ ಬೋಗಿ ಸಹ ಆಗಮಿಸಿದ್ದು, ಹೆಬ್ಬುಗೋಡಿ ನಿಲ್ದಾಣದಲ್ಲಿದೆ. ಬಿಎಂಆರ್‌ಸಿಎಲ್ ರೈಲುಗಳ ಪ್ರಾಯೋಗಿಕ ಸಂಚಾರ ಆರಂಭ ಮಾಡಿ, 37 ಪರೀಕ್ಷೆಗಳನ್ನು ನಡೆಸಲಿದೆ. ಈ ಮಾರ್ಗದಲ್ಲಿ ಕಾರ್ಪೊರೇಟ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ಬಿಎಂಆರ್‌ಸಿಎಲ್ ವಿಶೇಷ ವಿನ್ಯಾಸದ ಮೆಟ್ರೋ ನಿಲ್ದಾಣವನ್ನು ನಿರ್ಮಾಣ ಮಾಡಿದೆ.
ಹಳದಿ ಮಾರ್ಗದ ವಿಶೇಷ ಎಂದರೆ ಮೆಟ್ರೋ ರೈಲುಗಳ ಜೊತೆ ಉಳಿದ ವಾಹನಗಳು ಸಂಚಾರ ನಡೆಸಲು ಅನುಕೂಲವಾಗುವ ನಗರದ ಮೊದಲ ಡಬಲ್ ಡೆಕ್ಕರ್ ಎಲಿವೇಟೆಡ್ ಕಾರಿಡಾರ್. ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ತನಕ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಮಾಡಲಾಗಿದೆ. ಪ್ರಾಯೋಗಿಕ ಸಂಚಾರ ಪೂರ್ಣಗೊಂಡು ರೈಲ್ವೆ ಸುರಕ್ಷತಾ ಆಯುಕ್ತರು ಪರಿಶೀಲನೆ ನಡೆಸಿದ ಬಳಿಕ ಮಾರ್ಗದಲ್ಲಿ ರೈಲುಗಳ ಸಂಚಾರ ಆರಂಭವಾಗಲಿದೆ.
ಆರ್. ವಿ. ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಬಿಎಂಆರ್‌ಸಿಎಲ್ ಚಾಲಕ ರಹಿತ ನಮ್ಮ ಮೆಟ್ರೋ ರೈಲನ್ನು ಓಡಿಸಲಿದೆ. ಬೆಂಗಳೂರು ನಗರದ ಮೊದಲ ಚಾಲಕ ರಹಿತ ನಮ್ಮ ಮೆಟ್ರೋ ಮಾರ್ಗ ಇದಾಗಿದೆ. ಆದ್ದರಿಂದ ಸಿಗ್ನಲಿಂಗ್ ಸೇರಿದಂತೆ ಹಲವು ಪರೀಕ್ಷೆಗಳನ್ನು ನಡೆಬೇಕಿದೆ. ಬಳಿಕ ರೈಲ್ವೆ ಸುರಕ್ಷತಾ ಆಯುಕ್ತರು ಪರಿಶೀಲಿಸಿ ವಾಣಿಜ್ಯ ಸಂಚಾರಕ್ಕೆ ಒಪ್ಪಿಗೆ ನೀಡಲಿದ್ದಾರೆ.
ಬಿಎಂಆರ್‌ಸಿಎಲ್ ಹಳದಿ ಮಾರ್ಗದಲ್ಲಿ 45 ದಿನಗಳ ತನಕ ಸಿಗ್ನಲಿಂಗ್ ವ್ಯವಸ್ಥೆ, ದೂರ ಸಂಪರ್ಕ ವ್ಯವಸ್ಥೆ, ವಿದ್ಯುತ್ ಸರಬರಾಜು ಸೇರಿದಂತೆ 37 ಮಾದರಿಯ ಪರೀಕ್ಷೆಗಳನ್ನು ನಡೆಸಲಿದೆ. ಬಳಿಕ ರೈಲ್ವೆ ಸುರಕ್ಷತಾ ಆಯುಕ್ತರು ಪರಿಶೀಲನೆಗೆ ಆಗಮಿಸಲಿದ್ದಾರೆ. ಈ ಮಾರ್ಗದಲ್ಲಿ ಡಿಸೆಂಬರ್ ಅಂತ್ಯಕ್ಕೆ ರೈಲು ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.
ಚೀನಾದಲ್ಲಿ ತಯಾರು ಮಾಡಲಾಗದ 6 ಬೋಗಿಯ ಚಾಲಕ ರಹಿತ ನಮ್ಮ ಮೆಟ್ರೋ ರೈಲಿನ ಮೂಲಕ ಈ ಮಾರ್ಗದಲ್ಲಿ ಬಿಎಂಆರ್‌ಸಿಎಲ್ ಪ್ರಾಯೋಗಿಕ ಸಂಚಾರವನ್ನು ನಡೆಸಲಿದೆ. ಫೆಬ್ರವರಿಯಲ್ಲಿಯೇ ಬೋಗಿಯು ಹೆಬ್ಬಗೋಡಿ ಡಿಪೋಗೆ ಬಂದಿದ್ದು, ಚೀನಾದಿಂದ ಆಗಮಿಸಿದ ತಜ್ಞರು ಅದರ ಜೋಡಣೆ ಪೂರ್ಣಗೊಳಿಸಿದ್ದಾರೆ.












Click it and Unblock the Notifications