RCB ಅಭಿಮಾನಿಗಳಿಗೆ ನಮ್ಮ ಮೆಟ್ರೋ ಉಚಿತ ಪ್ರಯಾಣ!, BMRCL ಸ್ಪಷ್ಟನೆ ಇಲ್ಲಿದೆ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಾವಳಿ ನಡೆದಾಗಲೂ ಕ್ರಿಕೆಟ್ ಪ್ರೇಮಿಗಳಿಗೆ ಅನುಕೂಲವಾಗುವಂತೆ ನಮ್ಮ ಮೆಟ್ರೋ (Bengaluru Namma Metro) ಸೇವಾ ಅವಧಿಯ ವಿಸ್ತರಣೆ, ಪೇಪರ್ ಟಿಕೆಟ್ ಸೇರಿದಂತೆ ಇನ್ನಿತರ ವ್ಯವಸ್ಥೆ ಮಾಡಿತ್ತು, ಇದು ನಿಜ ಸಹ. ಆದರೆ ಮೇ 31ರಂದು ನಡೆಯಲಿರುವ ಫೈನಲ್ ಐಪಿಎಲ್ ಪಂದ್ಯಾವಳಿಗಾಗಿ ಆರ್‍ಸಿಬಿ ಅಭಿಮಾನಿಗಳಿಗೆ ಬೆಂಗಳೂರಿನಲ್ಲಿ ಉಚಿತ ಮೆಟ್ರೋ ಪ್ರಯಾಣ ಲಭ್ಯವಿರುತ್ತದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಖುದ್ದು ಬಿಎಂಆರ್‍ಸಿಎಲ್ ಸ್ಪಷ್ಟನೆ ನೀಡಿದೆ. ಪಂದ್ಯ ನಡೆಯೋದು ಗುಜರಾತ್ ಅಹ್ಮಮಾಬಾದಿನ ಮೋದಿ ಸ್ಟೇಡಿಯಂನಲ್ಲಿ. ಬೆಂಗಳೂರಿನ ನಮ್ಮ ಮೆಟ್ರೋಗೆ ಯಾಕೆ ಉಚಿತ ಟಿಕೆಟ್ ಅಂತಾನೂ ಯೋಚಿಸದ ಕೆಲವರು ನೆಟ್‌ನಲ್ಲಿ ಉಚಿತ ಟಿಕೆಟ್ ಪಡೆಯೋದು ಹೇಗೆಂದು ಸರ್ಚ್ ಮಾಡಲು ಶುರು ಮಾಡಿದ್ದಾರೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ತಿಳಿಸಿರುವ ಮಾಹಿತಿ ಪ್ರಕಾರ, ಕೆಲವು ಖಾಸಗಿ ವ್ಯಕ್ತಿಗಳು/ಸಂಸ್ಥೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹಾಗೂ ಜಾಹೀರಾತು ಪ್ರಸಾರ ಮಾಡಲಾಗಿದೆ. 2026ರ ಮೇ 31ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯಾವಳಿಯ ಪ್ರಯುಕ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅಭಿಮಾನಿಗಳಿಗೆ ಬೆಂಗಳೂರಿನಲ್ಲಿ ಉಚಿತ ಮೆಟ್ರೋ ಪ್ರಯಾಣ ಸೌಲಭ್ಯ ಲಭ್ಯವಿರುತ್ತದೆ ಎಂದು ತಪ್ಪಾಗಿ ಪ್ರಚಾರ ಮಾಡಿದ್ದಾರೆ ಎಂದು ಹೇಳಿದೆ..

ಉಚಿತ ಪ್ರಯಾಣ ಯೋಜನೆ ಘೋಷಿಸಿಲ್ಲ
ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಈ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಮೆಟ್ರೋ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಮೇ 31ರಂದು ಆರ್‌ಸಿಬಿ ಅಭಿಮಾನಿಗಳಿಗೆ ಅಥವಾ ಯಾವುದೇ ಇತರ ಪ್ರಯಾಣಿಕರಿಗೆ ಉಚಿತ ಮೆಟ್ರೋ ಪ್ರಯಾಣ ಸೌಲಭ್ಯ ಒದಗಿಸುವ ಯಾವುದೇ ಯೋಜನೆಯನ್ನು ಬಿಎಂಆರ್‌ಸಿಎಲ್ ಘೋಷಿಸಿಲ್ಲ. ಆ ಬಗ್ಗೆ ಅನುಮೋದನೆ ನೀಡಿಲ್ಲ ಎಂದು ದೃಢಪಡಿಸಿದೆ. ಇದದೊಂದು ಸಂಪೂರ್ಣ ಸುಳ್ಳು ಪ್ರಚಾರವೆಂದು ತಿಳಿಸಿದೆ. ಹೀಗಿದ್ದು ಆರ್‌ಸಿಬಿ ಅಭಿಮಾನಿಗಳು ಸುಳ್ಳು ಸುದ್ದಿ ನಂಬಿ ಉಚಿತ ಪ್ರಯಾಣಕ್ಕೆ ಮುಂದಾದರೆ ವಾಪಾಸ್ ಬರಬೇಕಾಗುತ್ತದೆ. ಇಲ್ಲವೇ ದುಡ್ಡು ಕೊಡ್ಡು ಪ್ರಯಾಣಿಸಬೇಕಾಗುತ್ತದೆ.
ಮೆಟ್ರೋ ಪ್ರಯಾಣಕ್ಕೆ ಅನುಮೋದಿತ ಟಿಕೆಟ್ ಬಳಸಿ
ಮೆಟ್ರೋ ಪ್ರಯಾಣ ಉಚಿತವಾಗಿರುತ್ತದೆ ಎಂದು ಜಾಹೀರಾತು ನೀಡಲು, ಪ್ರಚಾರ ಮಾಡಲು ಅಥವಾ ಪ್ರತಿನಿಧಿಸಲು ಯಾವುದೇ ವ್ಯಕ್ತಿ/ಸಂಸ್ಥೆ ಅಥವಾ ಸಂಘಟನೆಗೆ ಬಿಎಂಆರ್‌ಸಿಎಲ್ ಯಾವುದೇ ಅನುಮತಿ ಅಥವಾ ಅಧಿಕೃತ ಮಾನ್ಯತೆ ನೀಡಿಲ್ಲ. ಮೆಟ್ರೋದಲ್ಲಿ ಪ್ರಯಾಣಿಸಲು ಎಲ್ಲಾ ಪ್ರಯಾಣಿಕರು ಟಿಕೆಟ್ ಖರೀದಿಸಬೇಕು ಅಥವಾ ಸ್ಮಾರ್ಟ್ ಕಾರ್ಡ್, ಕ್ಯೂಆರ್ ಟಿಕೆಟ್, ಎನ್‌ಸಿಎಂಸಿ ಕಾರ್ಡ್ ಅಥವಾ ಬಿಎಂಆರ್‌ಸಿಎಲ್ ಸೂಚಿತ ಇತರೆ ಪ್ರಯಾಣ ಟಿಕೆಟ್ ಬಳಸುವುದು ಕಡ್ಡಾಯವಾಗಿದೆ. ಮೆಟ್ರೋ ಪ್ರಯಾಣವು ಬಿಎಂಆರ್‌ಸಿಎಲ್‌ನ ಪ್ರಚಲಿತ ದರ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ ಎಂದು ಉಲ್ಲೇಖಿಸಲಾಗಿದೆ.
ವದಂತಿ, ಸುಳ್ಳು ನಂಬದಂತೆ ಮೆಟ್ರೋ ಮನವಿ
ಸಾರ್ವಜನಿಕರು ಅನಧಿಕೃತ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು, ಜಾಹೀರಾತುಗಳು ಅಥವಾ ಸಂದೇಶ, ವದಂತಿಗಳನ್ನು ನಂಬದಂತೆ ಮೆಟ್ರೋ ಅಧಿಕಾರಿಗಳು ಮನವಿ ಮಾಡಿದ್ದಾರೆ. ಬೆಂಗಳೂರು ಮೆಟ್ರೋ ಸಂಬಂಧಿಸಿದಂತೆ ಯಾವುದೇ ಮಾಹಿತಿ, ವಿಷಯ ತಿಳಿಯಲು ಬಿಎಂಆರ್‌ಸಿಎಲ್‌ನ ಅಧಿಕೃತ ಪ್ರಕಟಣೆಗಳು ಮತ್ತು ಅಧಿಕೃತ ಮಾಧ್ಯಮ ವರದಿ ಅವಲಂಬಿಸುವಂತೆ ವಿನಂತಿಸಿಕೊಂಡಿದ್ದಾರೆ.
ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಸುರಕ್ಷಿತ, ವಿಶ್ವಾಸಾರ್ಹ, ಸುಗಮ ಹಾಗೂ ಪರಿಣಾಮಕಾರಿ ರೈಲು ಸೇವೆಗಳನ್ನು ಒದಗಿಸಲು ಬಿಎಂಆರ್‌ಸಿಎಲ್ ಸದಾ ಬದ್ದವಾಗಿದೆ. ಇಂತಹ ಯಾವುದೇ ತಪ್ಪು ಮಾಹಿತಿ ಪ್ರಚಾರ ಮಾಡದಂತೆ ಕೋರಿದ್ದು, ಈ ಕುರಿತು ಸಾರ್ವಜನಿಕರು ನಮ್ಮೊಂದಿಗೆ ಸಹಕರಿಸಬೇಕೆಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













Click it and Unblock the Notifications