ಶಾಸಕ ಮುನಿರತ್ನಗೆ ಎದುರಾಯ್ತು ಮತ್ತೊಂದು ದೊಡ್ಡ ಕಂಟಕ
ಜಾತಿ ನಿಂದನೆ, ಕೊಲೆ ಬೆದರಿಕೆ ಹಾಗೂ ಅತ್ಯಾಚಾರ ಪ್ರಕರಣಗಳಲ್ಲಿ ಸಿಲುಕಿಕೊಂಡಿರುವ ಬಿಜೆಪಿ ಶಾಸಕ ಮುನಿರತ್ನ ಅವರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಮುನಿರತ್ನ ಅವರು ರಾಜರಾಜೇಶ್ವರಿ ನಗರದ ಶಾಸಕರಗಿದ್ದು, ಇಲ್ಲಿ ಮೊತ್ತದ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ತನಿಖೆಗೆ ಬಿಬಿಎಂಪಿ ಆದೇಶಿಸಿದೆ.
ಈ ಹಿಂದೆ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಳೆದ 2020ರಿಂದ 2022ರ ಅವಧಿಯಲ್ಲಿ ನಡೆದಿದ್ದ ಕಾಮಗಾರಿಗಳಲ್ಲಿ ಬರೋಬ್ಬರಿ 500 ಕೋಟಿ ರೂಪಾಯಿಗೂ ಹೆಚ್ಚಿನ ಅವ್ಯವಹಾರ, ಅಕ್ರಮಗಳು ನಡೆದಿರುವ ಅನುಮಾನ ವ್ಯಕ್ತವಾಗಿದೆ. ಹಾಗಾಗಿ ಬಿಬಿಎಂಪಿಯ ಕಂದಾಯ ವಿಭಾಗದ ವಿಶೇಷ ಆಯುಕ್ತರ ಮುಂದಾಳತ್ವದಲ್ಲಿ ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

ಈ ಅವಧಿಯಲ್ಲಿ ಕ್ಷೇತ್ರದಲ್ಲಿ ಯಾವುದೇ ಕಾಮಗಾರಿ ನಡೆಸದೆ ನಕಲಿ ಬಿಲ್ ಮಾಡಿರುವ ಆರೋಪ ಕೂಡ ಕೇಳಿಬಂದಿದೆ. ಇದೀಗ ಬಿಬಿಎಂಪಿ ಕಂದಾಯ ವಿಭಾಗದ ಮುನೀಶ್ ಮೌದ್ಗಿಲ್ ಅವರ ನೇತೃತ್ವದಲ್ಲಿ ಇದರ ತನಿಖೆಗೆ ಸಮಿತಿ ಕೂಡ ರಚನೆಯಾಗಿದೆ. ಈ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತನಿಖೆಗೆ ಆದೇಶ ಹೊರಡಿಸಿದ್ದಾರೆ.
ಇನ್ನು ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಈ ಹಿಂದೆಯೂ ಮುನಿರತ್ನ ಅವರೇ ಶಾಸಕರಾಗಿ ಇದ್ದಿದ್ದರಿಂದ ಈ ಅವ್ಯವಹಾರಗಳಿಗೂ ಅವರಿಗೂ ಸಂಬಂಧ ಇರಬಹುದು ಎಂದು ಸಂಶಯ ವ್ಯಕ್ತವಾಗಿದೆ. ತನಿಖಾ ವರದಿಯಲ್ಲಿ ಮುನಿರತ್ನ ಅವರ ಮತ್ತೆ ಕೇಳಿಬಂದರೆ, ಈ ಪ್ರಕರಣ ಕೂಡ ಮುನಿರತ್ನ ಅವರನ್ನು ಸುತ್ತಿಕೊಳ್ಳಲಿದೆ.
ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಈಗಾಗಲೇ ಗುತ್ತಿಗೆದಾರರೊಬ್ಬರು ಜಾತಿ ನಿಂದನೆ, ಕೊಲೆ ಬೆದರಿಕೆ ಆರೋಪ ಮಾಡಿದ್ದರು. ಈ ಕೇಸ್ ಸಂಬಂಧ ಅವರ ಬಂಧನವೂ ಆಗಿತ್ತು. ಬಳಿಕ ಈ ಕೇಸ್‌ನಲ್ಲಿ ಜಾಮೀನು ಪಡೆದು ಹೊರಬರುತ್ತಿರುವಾಗಲೇ ಮುನಿರತ್ನ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿತ್ತು. ಮಹಿಳೆಯೊಬ್ಬರು ಮುನಿರತ್ನ ವಿರುದ್ಧ ಅತ್ಯಾಚಾರ ಕೇಸ್ ದಾಖಲಿಸಿದ್ದರು. ಈ ಸಂಬಂಧ ರಾಮನಗರ ಪೊಲೀಸರು ಕೂಡ ಮುನಿರತ್ನ ಅವರನ್ನು ಮತ್ತೆ ವಶಕ್ಕೆ ಪಡೆದಿದ್ದರು.

ಪರಪ್ಪನ ಅಗ್ರಹಾರ ಜೈಲಿನಿಂದ ಮುನಿರತ್ನ ಅವರನ್ನು ಕಗ್ಗಲೀಪುರ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ಕೂಡ ನಡೆಸಲಾಗಿತ್ತು. ಇನ್ನು ಮುನಿರತ್ನ ಅವರು ಎಚ್‌ಐವಿ ಪಾಸಿಟಿವ್ ಸಂತ್ರಸ್ತೆಯನ್ನು ಹನಿಟ್ರ್ಯಾಪ್‌ಗೆ ಬಳಸಿಕೊಂಡಿದ್ದಾರೆ ಎನ್ನುವ ಗಂಭೀರ ಆರೋಪ ಮಾಡಲಾಗಿದ್ದು, ಸಂತ್ರಸ್ತ ಮಹಿಳೆಯೊಬ್ಬರು ಮುನಿರತ್ನ ವಿರುದ್ಧ ಅತ್ಯಾಚಾರದ ಕೇಸ್ ದಾಖಲಿಸಿದ್ದರು.
ಮಹಿಳೆ ದೂರಿನಲ್ಲಿ ತಿಳಿಸಿರುವಂತೆ ಖಾಸಗಿ ರೆಸಾರ್ಟ್‌ನಲ್ಲಿ ಆಕೆಯ ವಿರುದ್ಧ ಮುನಿರತ್ನ ಅತ್ಯಾಚಾರ ನಡೆದಿರುವುದಾಗಿ ಡಿವೈಎಸ್‌ಪಿ ದಿನಕರ್ ಶೆಟ್ಟಿ ಸಮ್ಮುಖದಲ್ಲಿ ಹೇಳಿಕೆ ಕೊಟ್ಟಿದ್ದರು. ʼಕೋವಿಡ್ ವೇಳೆ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗಿತ್ತು. ವಿಡಿಯೋ ಕಾಲ್ ಮಾಡಿ ನನ್ನೊಂದಿಗೆ ಮಾತನಾಡುತ್ತಿದ್ದರು. ಬಳಿಕ ಕರೆ ಮಾಡಿ ನನ್ನನ್ನು ನಗ್ನವಾಗಿ ಇರುವಂತೆ ಒತ್ತಾಯಿಸುತ್ತಿದ್ದರು. ನಾನು ಅದಕ್ಕೆ ಒಪ್ಪಿರಲಿಲ್ಲ ಎಂದಿದ್ದರು.
ʼನನ್ನನ್ನು ಒಂದು ಸ್ಥಳಕ್ಕೆ ಬರಲು ಹೇಳಿದ್ದರು. ಅಲ್ಲಿ ನನ್ನನ್ನು ತಬ್ಬಿಕೊಳ್ಳಲು ಮುಂದಾದಾಗ ವಿರೋಧ ಮಾಡಿದ್ದೆ. ಅದಕ್ಕೆ, ಅವರು ಇದೆಲ್ಲ ರಾಜಕೀಯದಲ್ಲಿ ಕಾಮನ್ ಎಂದು ಹೇಳಿದ್ದರು. ಬಳಿಕ ನನ್ನ ಮೇಲೆ ಅತ್ಯಾಚಾರ ಮಾಡಿ, ಯಾರಿಗೂ ಹೇಳದಂತೆ ಬೆದರಿಸಿದ್ದರು. ಅತ್ಯಾಚಾರದ ವಿಡಿಯೋ ಇಟ್ಟುಕೊಂಡು ನನ್ನ ಮೇಲೆ ಪದೇ ಪದೇ ಅತ್ಯಾಚಾರ ಮಾಡಿದ್ದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಇದೇ ಕೇಸ್‌ನಲ್ಲಿ ಶಾಸಕ ಮುನಿರತ್ನ ಅವರು ಸದ್ಯ ಮತ್ತೆ ಜೈಲುಪಾಲಾಗಿದ್ದಾರೆ. ಈಗ ಹೊರಗೆ ಮತ್ತೊಂದು ಕಂಟಕ ಎದುರಾಗುವ ಸಾಧ್ಯತೆ ಇದೆ.












Click it and Unblock the Notifications