MLA Munirathna: ಆ ಮೂವರು ನನ್ನನ್ನ ತುಂಬಾ ದಿನ ಉಳಿಸಲ್ಲ, ಶಾಸಕ ಮುನಿರತ್ನ ಆರೋಪ
ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಅವರ ಮೇಲೆ ಇಂದು ಕಾಂಗ್ರೆಸ್ ಕಾರ್ಯಕರ್ತರು ಮೊಟ್ಟೆ ಎಸೆದು ಹಲ್ಲೆಗೆ ಯತ್ನಿಸಿದ್ದಾರೆ ಎಂದು ವರದಿಯಾಗಿದೆ. ಈ ಸಂಬಂಧ ಮೂವರನ್ನು ಈಗಾಗಲೇ ಬಂಧಿಸಲಾಗಿದ್ದು, ತಮ್ಮ ಮೇಲಿನ ಹಲ್ಲೆ ಬಗ್ಗೆ ಶಾಸಕ ಮುನಿರತ್ನ ಅವರ ಮೂವರ ಮೇಲೆ ಆರೋಪ ಮಾಡಿದ್ದಾರೆ.
ಬೆಂಗಳೂರಿನ ಕಂಠೀರವ ಸ್ಟುಡಿಯೋ ಬಳಿ ಮುನಿರತ್ನ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರ ಗುಂಪೊಂದು ಮೊಟ್ಟೆ ಹಾಗೂ ಕಲ್ಲಿನಿಂದ ಎಸೆದಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಘಟನೆ ಬಳಿಕ ಅಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿಯೂ ನಡೆದು, ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದಾರೆ.

ಘಟನೆ ಬಳಿಕ ತಮ್ಮ ಮೇಲಿನ ದಾಳಿ ಖಂಡಿಸಿ ಮುನಿರತ್ನ ಅವರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಇನ್ನು ಈ ಹಲ್ಲೆ ಬಗ್ಗೆ ಮುನಿರತ್ನ ಅವರು ಗಂಭೀರ ಆರೋಪ ಮಾಡಿದ್ದಾರೆ. ನನ್ನ ಕೊಲೆಯ ಹಿಂದೆ ಮೂವರು ಇದ್ದಾರೆ ಎಂದು ಬಹಿರಂಗವಾಗಿ ಆರೋಪ ಮಾಡಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್, ಸಹೋದರ ಡಿ.ಕೆ.ಸುರೇಶ್ ಹಾಗೂ ಕುಸುಮಾ ಹನುಮಂತರಾಯಪ್ಪ ಅವರೇ ಇಂದಿನ ದಾಳಿಗೆ ಕಾರಣ ಎಂದು ದೂರಿದ್ದಾರೆ. ನನ್ನ ಜೀವಕ್ಕೆ ಏನೇ ಅಪಾಯ ಆದರೂ ಅದಕ್ಕೆ ಈ ಮೂವರೇ ಕಾರಣ ಎಂದೂ ಮುನಿರತ್ನ ಹೇಳಿದ್ದಾರೆ.
ನನ್ನನ್ನು ರಾಜಕೀಯವಾಗಿ ಮುಗಿಸಲು ಈ ರೀತಿ ಕೊಲೆ ಯತ್ನ ನಡೆದಿದೆ. ಕುಸುಮಾ ಅವರನ್ನು ಶಾಸಕಿ ಮಾಡಲು ನನ್ನ ಮೇಲೆ ಮೊದಲಿನಿಂದಲೂ ಸಂಚು ರೂಪಿಸುತ್ತಿದ್ದಾರೆ ಎಂದು ಕಾರಣ ನೀಡಿದ್ದಾರೆ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮುನಿರತ್ನ ಅವರು ಎದುರು ಕಾಂಗ್ರೆಸ್‌ನ ಕುಸುಮಾ ಹನುಮಂತರಾಯಪ್ಪ ಅವರು ಸ್ಪರ್ಧಿಸಿ ಸೋಲು ಕಂಡಿದ್ದರು. ಈ ವೇಳೆಯೂ ಇಬ್ಬರ ನಡುವೆ ಭಾರಿ ಕೆಸರೆರಚಾಟ ನಡೆದಿತ್ತು.
ಮುನಿರತ್ನ ಅವರ ಮೇಲಿನ ಹಲ್ಲೆಯನ್ನು ಬಿಜೆಪಿ ಖಂಡಿಸಿದೆ. ರಾಜರಾಜೇಶ್ವರಿ ನಗರ ಶಾಸಕರಾದ ಮುನಿರತ್ನ ಅವರ ಮೇಲೆ ಗೂಂಡಾಗಳು ಹಲ್ಲೆ ನಡೆಸಿರುವುದು ಖಂಡನೀಯ. ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಕಾನೂನು ಸುವ್ಯವಸ್ಥೆ ಪಾತಾಳಕ್ಕೆ ಕುಸಿದಿರುವುದಕ್ಕೆ ದಿನನಿತ್ಯವೂ ವರದಿಯಾಗುತ್ತಿರುವ ಪ್ರಕರಣಗಳೇ ಸಾಕ್ಷಿಯಾಗಿದೆ ಎಂದು ಕಿಡಿಕಾರಿದೆ.

ಕೆಲವೇ ದಿನಗಳ ಹಿಂದೆ ಶಕ್ತಿಸೌಧದೊಳಗೆ ರೌಡಿಗಳನ್ನು ಒಳಬಿಟ್ಟು ಪರಿಷತ್ ಸದಸ್ಯರ ಮೇಲೆ ಹಲ್ಲೆ ಮಾಡಿಸಿದ್ದ ಕಾಂಗ್ರೆಸ್ ಸರ್ಕಾರ ಈಗ ಜನಪ್ರತಿನಿಧಿಯೊಬ್ಬರ ಮೇಲೆ ಸಾರ್ವಜನಿಕವಾಗಿ ಹಲ್ಲೆ ಮಾಡಿಸಿದೆ. ಜನಪ್ರತಿನಿಧಿಗಳಿಗೆ ರಕ್ಷಣೆ ಇಲ್ಲವೆಂದ ಮೇಲೆ ಜನಸಾಮಾನ್ಯರ ಗತಿಯೇನು? ಸರ್ಕಾರಿ ಪ್ರಾಯೋಜಿತ ಹಲ್ಲೆ, ದಾಳಿಗಳ ಮೂಲಕ ದ್ವೇಷದ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂದು ಖಂಡಿಸಿದೆ.
ಶಾಸಕ ಮುನಿರತ್ನ ಅವರ ಮೇಲೆ ಹಲ್ಲೆ ಮಾಡುವ ಮೂಲಕ ಸರ್ಕಾರ ರಾಜರಾಜೇಶ್ವರಿ ಕ್ಷೇತ್ರದ ಮತದಾರರನ್ನು ಅವಮಾನಿಸುತ್ತಿದೆ. ಅಧಿಕಾರದ ದರ್ಪದಲ್ಲಿ ಒಬ್ಬ ಜನಪ್ರತಿನಿಧಿಯ ಮೇಲೆ ಹಲ್ಲೆ, ದಬ್ಬಾಳಿಕೆ ಮಾಡುತ್ತಿರುವುದು ಖಂಡನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ಹೊರಹಾಕಿದ್ದಾರೆ.












Click it and Unblock the Notifications