ಡಿ.ಕೆ.ಸುರೇಶ್ ಅಭ್ಯರ್ಥಿಯಾದರೆ ಆರ್.ಅಶೋಕ್ ಗೆಲ್ತಾರಾ?
ಕನಕಪುರ: 'ಬಂಡೆ' ಎಂದೇ ರಾಜಕಾರಣದಲ್ಲಿ ಫೇಮಸ್ ಆಗಿರುವ ಡಿಕೆ ಬ್ರದರ್ಸ್ ವಿರುದ್ಧ ಬಿಜೆಪಿ ರಣತಂತ್ರ ರೂಪಿಸಿದೆ. ಅಶೋಕ್ ಮುಂದಾಳತ್ವದಲ್ಲೇ ಕನಕಪುರ ಕೋಟೆ ಗೆಲ್ಲಲು ಬಿಜೆಪಿ ಸಿದ್ಧವಾಗಿದೆ. ಇದೇ ಹೊತ್ತಲ್ಲಿ ಡಿ.ಕೆ. ಶಿವಕುಮಾರ್ ನಾಮಪತ್ರ ಅನರ್ಹವಾಗುವ ಅನುಮಾನದಲ್ಲಿ ಡಿಕೆಶಿ ಸಹೋದರ ಡಿ.ಕೆ. ಸುರೇಶ್ ಅಖಾಡಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ.
ಅತ್ತ ಅಣ್ಣ ಡಿ.ಕೆ. ಶಿವಕುಮಾರ್ ಕನಕಪುರ ಕ್ಷೇತ್ರದಿಂದ ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾಗಿದೆ. ಆದರೆ ಈ ಸಂದರ್ಭದಲ್ಲಿ ಡಿ.ಕೆ. ಸುರೇಶ್ ಕೂಡ ನಾಮಿನೇಷನ್ ಮಾಡಿದ್ದಾರೆ. ಅಕಸ್ಮಾತ್ ಡಿಕೆಶಿ ನಾಮಪತ್ರ ಅನರ್ಹವಾದರೆ ಡಿ.ಕೆ. ಸುರೇಶ್ ಅಖಾಡದಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. ಇದರ ಜೊತೆಗೆ ಶಿವಕುಮಾರ್ ಹೊರತು ಸುರೇಶ್ ಸ್ಪರ್ಧೆ ಮಾಡಿದರೆ ಆರ್. ಅಶೋಕ್ ಗೆಲುವು, ಸೋಲಿನ ಮೇಲೆ ಯಾವ ಪರಿಣಾಮ ಎದುರಾಗಬಹುದು? ಎಂಬುದರ ಬಗ್ಗೆ ಸಂಪೂರ್ಣ ವಿಶ್ಲೇಷಣೆ ನೋಡೋಣ.

ಕಾಂಗ್ರೆಸ್ ಕೋಟೆಗೆ ಬಿಜೆಪಿ ಎಂಟ್ರಿ
ಪದೇಪದೆ ಪಿಎಂ ಮೋದಿ ಹಾಗೂ ಬಿಜೆಪಿ ಕೇಂದ್ರದ ವರಿಷ್ಠರ ಬಗ್ಗೆ ಡಿಕೆ ಬ್ರದರ್ಸ್ ವಾಗ್ದಾಳಿ ನಡೆಸುತ್ತಿದ್ದ ಕಾರಣಕ್ಕೆ ಟಾರ್ಗೆಟ್ ಆಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕಾರಣಕ್ಕೆ ಡಿ.ಕೆ. ಶಿವಕುಮಾರ್ ಸೋಲಿಗೆ ಬಿಜೆಪಿ ವರಿಷ್ಠರೇ ಹಳ್ಳ ತೋಡಿರುವ ಮಾತು ಕೂಡ ಕೇಳಿಬರುತ್ತಿದೆ. ಈ ನಡುವೆ ಡಿಕೆಶಿ ವಿರುದ್ದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಅನುಮತಿ ಪ್ರಶ್ನಿಸಿದ್ದ ಅರ್ಜಿ ವಜಾಗೊಂಡಿದೆ. ಸಿಬಿಐ ತನಿಖೆಗೆ ಅನುಮತಿ ಪ್ರಶ್ನಿಸಿದ್ದ ಡಿಕೆಶಿ ಅರ್ಜಿ ವಜಾಗೊಂಡ ಹಿನ್ನೆಲೆ ಬಿಗ್ ಶಾಕ್ ಸಿಕ್ಕಂತಾಗಿದೆ. ಇದೇ ಸಂದರ್ಭದಲ್ಲಿ ಅಣ್ಣನಿಗೆ ತಮ್ಮ ಹೆಗಲು ನೀಡಿದ್ದಾಗಿದೆ.
ಅಣ್ಣನ ಪ್ರತಿ ಕಷ್ಟಕ್ಕೂ ಬೆಂಬಲ
ಡಿ.ಕೆ. ಸುರೇಶ್ ಹಾಗೂ ಡಿ.ಕೆ. ಶಿವಕುಮಾರ್ ನಡುವೆ ಉತ್ತಮ ಒಡನಾಟವಿದೆ. ಅಣ್ಣ-ತಮ್ಮನ ನಡುವೆ ಬಾಂಧವ್ಯ ಗಟ್ಟಿಯಾಗಿದೆ. ಇದೇ ಕಾರಣಕ್ಕೆ ಅಣ್ಣನಿಗೆ ಏನೇ ಕಷ್ಟ ಬಂದರೂ ತಮ್ಮ ಡಿ.ಕೆ. ಸುರೇಶ್ ಬಂಡೆ ರೀತಿ ನಿಲ್ಲುವುದು ಮಾಮೂಲು. ಈಗಲೂ ಅಷ್ಟೇ ಅಂತಹದ್ದೇ ಪ್ರಸಂಗ ಎದುರಾಗಿದೆ. ಡಿ.ಕೆ. ಶಿವಕುಮಾರ್ ನಾಮಪತ್ರ ಅನರ್ಹವಾಗುವ ಅನುಮಾನ ಮೂಡಿದ್ದೇ ತಡ ಡಿ.ಕೆ. ಸುರೇಶ್ ಅಲರ್ಟ್ ಆಗಿದ್ದರು. ಕಾಂಗ್ರೆಸ್ ವರಿಷ್ಠರ ಆದೇಶದಂತೆ ನಾಮಪತ್ರ ಸಲ್ಲಿಕೆಗೆ ಬೇಕಾದ ದಾಖಲೆ ಕೂಡಲೇ ಸಿದ್ಧಮಾಡಿಕೊಂಡು ಅಖಾಡಕ್ಕೆ ಡಿ.ಕೆ. ಸುರೇಶ್ ಎಂಟ್ರಿ ಕೊಟ್ಟಿದ್ದು, ಬಿಜೆಪಿ ತಂತ್ರಕ್ಕೆ 'ಕೈ' ಪಡೆ ಪ್ರತಿತಂತ್ರ ಹೆಣೆದಂತಿದೆ.
ಆರ್. ಅಶೋಕ್ ಗೆಲುವು ಪಕ್ಕಾ?
ಡಿ.ಕೆ.ಶಿವಕುಮಾರ್ ಚುನಾವಣಾ ಅಖಾಡದಿಂದ ದೂರ ಉಳಿದರೆ ಆರ್.ಅಶೋಕ್ ಗೆಲುವು ಪಕ್ಕಾ ಎಂಬುದು ಮೇಲ್ನೋಟಕ್ಕೆ ತಿಳಿಯುವ ಉತ್ತರ. ಆದರೆ ಇನ್‌ಸೈಡ್ ಸ್ಟೋರಿಯೇ ಬೇರೆ ಇದೆ. ಅಂದಹಾಗೆ ಕನಕಪುರ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಎನ್ನುವ ಜೊತೆಗೆ, ಡಿ.ಕೆ.ಶಿವಕುಮಾರ್‌ಗೆ ಇರುವಷ್ಟೇ ವರ್ಚಸ್ಸು ಡಿ.ಕೆ. ಸುರೇಶ್‌ಗೂ ಇದೆ. ಆ ಪ್ರಕಾರ ನೋಡುವುದಾದರೆ ತಳಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರ ಜೊತೆ ಡಿ.ಕೆ. ಶಿವಕುಮಾರ್‌ಗಿಂತ ಡಿ.ಕೆ. ಸುರೇಶ್‌ಗೆ ಹಿಡಿತ ಜಾಸ್ತಿ. ಅಣ್ಣ ಶಾಸಕನಾಗಿ, ಮಂತ್ರಿಯಾಗುವವರೆಗೂ ತಮ್ಮ ಡಿ.ಕೆ. ಸುರೇಶ್ ತಳಮಟ್ಟದಲ್ಲಿ ಪಕ್ಷ ಕಟ್ಟಿ ಬೆಳೆಸಿದ್ದು ಗೊತ್ತೇ ಇದೆ.
ಹೀಗೆ ತಳಮಟ್ಟದಲ್ಲಿ ಪರಿಚಯ ಇರುವ ಡಿ.ಕೆ. ಸುರೇಶ್ ಅಣ್ಣ ಡಿಕೆಶಿ ಅನುಪಸ್ಥಿತಿಯಲ್ಲಿ ಅಶೋಕ್ ಎದುರು ಕನಕಪುರ ರೇಸ್‌ನಲ್ಲಿ ಮುಂಚೂಣಿಗೆ ಬರುವುದು ಮಾಮೂಲು. ಈ ಎಲ್ಲಾ ಲೆಕ್ಕಾಚರ ಎಣಿಸಿಯೇ ಕಾಂಗ್ರೆಸ್ ಲೀಡರ್ಸ್ ಡಿ.ಕೆ. ಸುರೇಶ್ ಕೈಯಲ್ಲಿ ನಾಮಪತ್ರ ಹಾಕಿಸಿದ್ದಾರೆ. ಮತ್ತೊಂದು ಕಡೆ ಆರ್. ಅಶೋಕ್ ಕೂಡ ಇದನ್ನೆಲ್ಲಾ ಅರಿತು ಚುನಾವಣಾ ಲೆಕ್ಕಾಚಾರ ಹಾಕುತ್ತಿದ್ದಾರೆ. ಅಶೋಕ್ ಜೊತೆ ಬಿಜೆಪಿ ಹೈಕಮಾಂಡ್ ಕೂಡ ಅಖಾಡ ಪ್ರವೇಶ ಮಾಡಿದೆ. ಹೀಗಾಗಿ ಸೋಲು-ಗೆಲುವಿನ ಲೆಕ್ಕಾಚಾರ ಶುರುವಾಗಿದ್ದು, ವಿಜಯಲಕ್ಷ್ಮಿ ಯಾರ ಪಾಲಿಗೆ ಒಲಿಯುತ್ತಾಳೆ ಎಂಬುದನ್ನ ಕಾದು ನೋಡಬೇಕಿದೆ.












Click it and Unblock the Notifications