ಯಡಿಯೂರಪ್ಪ ನೇತೃತ್ವ: ಬಿಜೆಪಿ ನಿಯೋಗದಿಂದ ರಾಜ್ಯಪಾಲರಿಗೆ ದೂರು
ಬೆಂಗಳೂರು, ಫೆಬ್ರವರಿ 14: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ನಿಯೋಗವು ರಾಜಭವನಕ್ಕೆ ತೆರಳಿ ಗುರುವಾರ ದೂರು ಸಲ್ಲಿಸಿದೆ.
ಹಾಸನದ ಬಿಜೆಪಿ ಶಾಸಕ ಪ್ರೀತಂಗೌಡ ಅವರ ಮನೆಯ ಮೇಲೆ ಜೆಡಿಎಸ್ ಕಾರ್ಯಕರ್ತರಿಂದ ನಡೆದಿದೆ ಎನ್ನಲಾದ ಕಲ್ಲು ತೂರಾಟ ಖಂಡಿಸಿ ಬಿಜೆಪಿ ನಿಯೋಗ ರಾಜ್ಯಪಾಲರಿಗೆ ದೂರು ಸಲ್ಲಿಸಿದೆ.
ಬಿಎಸ್ ಯಡಿಯೂರಪ್ಪ, ಕೆಎಸ್ ಈಶ್ವರಪ್ಪ ಇನ್ನಿತರೆ ಬಿಜೆಪಿ ನಾಯಕರು ತೆರಳಿ ದೂರು ನೀಡಿದರು. ಶಾಸಕ ಪ್ರೀತಂಗೌಡ ದೇವೇಗೌಡರ ವಿಕೆಟ್ ಕೆಲವೇ ದಿನದಲ್ಲಿ ಉರುಳುತ್ತದೆ' ಎಂದು ಪ್ರೀತಂಗೌಡ ಅವರು ಹೇಳಿದ್ದಾರೆ ಎಂದು ಕೆಲವು ವಾಹಿನಿಗಳಲ್ಲಿ ವರದಿ ಆಗಿದೆ.

ಇದರಿಂದಾಗಿ ಸಿಟ್ಟಿಗೆದ್ದ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ.ಆದರೆ ಪ್ರತಿಭಟನೆ ಮುಗಿದ ಮೇಲೆ ಯಾರೋ ಕೆಲವರು ಕಿಡಿಗೇಡಿಗಳು ಪ್ರೀತಂ ಗೌಡ ಮನೆ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಘಟನೆಯಲ್ಲಿ ಪ್ರೀತಂ ಗೌಡ ಬೆಂಬಲಿಗ ರಾಹುಲ್ ಅವರಿಗೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ರಾಹುಲ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆತರಲಾಗಿದೆ.
ಈಗಾಗಲೇ ಜೆಡಿಎಸ್ ನ ಐದು ಮಂದಿ ಮೇಲೆ ಹಾಸನದಲ್ಲಿ ಎಫ್‌ಐಆರ್ ದಾಖಲಾಗಿದೆ. ಇದೀಗ ಬಿಜೆಪಿಯು ಪ್ರೀತಂಗೌಡ ಮನೆ ಮೇಲೆ ಕಲ್ಲು ತೂರಾಟ ಖಂಡಿಸಿ ಅವರ ವಿರುದ್ಧ ರಾಜ್ಯಪಾಲರ ಬಳಿ ದೂರು ದಾಖಲಿಸಿದ್ದಾರೆ.ಜೆಡಿಎಸ್ ದೂರು ನೀಡಿದರೆ ಜಾಮೀನುರಹಿತ ಸೆಕ್ಷನ್ ಹಾಕ್ತಾರೆ ಅದೇ ಬಿಜೆಪಿ ದೂರು ನೀಡಿದರೆ ಜಾಮೀನು ಸಹಿತ ಸೆಕ್ಷನ್ ಹಾಕಿ ಅವರನ್ನು ರಕ್ಷಿಸುತ್ತಿದ್ದಾರೆ ಎಂದು ಬಿಎಸ್ ಯಡಿಯೂರಪ್ಪ ದೂರಿದ್ದಾರೆ.
ಹಾಸನದಲ್ಲಿ ಮೈತ್ರಿ ಸರ್ಕಾರದಿಂದ ಕೀಳುಮಟ್ಟದ ರಾಜಕೀಯ ನಡೆಯುತ್ತಿದೆ.ಈ ಕುರಿತು ಕೇಂದ್ರ ಗೃಹಸಚಿವರಿಗೂ ದೂರು ನೀಡುತ್ತೇವೆ. ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.












Click it and Unblock the Notifications