ಅನಂತ್ ರಾಜ್ ಆತ್ಮಹತ್ಯೆ ಕೇಸ್: ಆತನ ಪ್ರೇಯಸಿ ರೇಖಾ ಸೆರೆ
ಬೆಂಗಳೂರು, ಮೇ. 20: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣದಲ್ಲಿ ಆತನ ಪ್ರೇಯಸಿ ಎನ್ನಲಾದ ಮಹಿಳೆಯನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇನ್ನು ಆಕೆ ಬಂಧನದ ಬೆನ್ನಲ್ಲೇ ವೈರಲ್ ಆಗಿರುವ ಅಡಿಯೋ ಸಂಬಂಧ ಅನಂತರಾಜು ಅವರ ಪತ್ನಿ ಸುಮಾ ಅವರನ್ನು ವಿಚಾರಣೆಗೆ ಒಳಪಡಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಕೆ.ಆರ್. ಪುರಂ ನಿವಾಸಿ ರೇಖಾ ಬಂಧಿತ ಅರೋಪಿ. ಅನಂತರಾಜು ಅತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದ ಬಳಿಕ ರೇಖಾ ತಲೆ ಮರೆಸಿಕೊಂಡಿದ್ದಳು. ಬುಧವಾರ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ಬಳಿಕ ರೇಖಾಳನ್ನ ಬಂಧಿಸಿದ್ದು, ಆಕೆಯ ಪತಿ ವಿನೋದ್ ಮತ್ತು ಸ್ನೇಹಿತೆ ಸ್ಪಂದನಾ ಅವರ ಪಾತ್ರದ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಅಡಿಯೋ ಸಂಭಾಷಣೆ ಖಚಿತತೆ:
ಇನ್ನು ಅನಂತರಾಜು ಆತ್ಮಹತ್ಯೆಗೂ ಮುನ್ನ ಅವರ ಪತ್ನಿ ಸುಮಾ ಹಾಗೂ ಆಪ್ತ ಸ್ನೇಹಿತೆ ರೇಖಾ ನಡುವೆ ನಡೆದಿದೆ ಎನ್ನಲಾದ ಅಡಿಯೋ ಅಸಲಿತನ ಬಗ್ಗೆ ಪೊಲೀಸರು ಖಚಿತ ಪಡಿಸಿಕೊಂಡಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಈ ಆಡಿಯೋ ಕ್ಲಿಪ್ ಅಸಲಿ ಎಂಬುದು ಗೊತ್ತಾಗಿದೆ. ಅದರ ಪ್ರಕಾರ ಅನಂತರಾಜು ಆತ್ಮಹತ್ಯೆ ನಿರ್ಧಾರದ ಹಿಂದೆ ಪತ್ನಿ ಸುಮಾ ಅವರ ಕೈವಾಡ ಇದೆಯಾ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನು ಅಡಿಯೋದಲ್ಲಿ ಸಂಭಾಷಣೆ ಅನಂತರಾಜು ಅವರ ಪತ್ನಿ ಸುಮಾ ಅವರು ಹಿಂಸೆ ಕೊಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆತ್ಮಹತ್ಯೆಗೂ 20 ದಿನ ಮುನ್ನ ಸುಮಾ ಹಾಗೂ ರೇಖಾ ನಡುವೆ ನಡೆದಿರುವ ಮೊಬೈಲ್ ಸಂಭಾಷಣೆಯಲ್ಲಿ ಅನಂತರಾಜು ಸಾಯುವುದಾಗಿ ಸುಮಾ ಭವಿಷ್ಯ ನುಡಿದಿರುವುದು ಇದೀಗ ದೊಡ್ಡ ಚರ್ಚೆ ಹುಟ್ಟು ಹಾಕಿದೆ.

ಡೆತ್ ನೋಟ್ ಬಗ್ಗೆ ಅನುಮಾನ:
ಅನಂತರಾಜು ಆತ್ಮಹತ್ಯೆ ಮಾಡಿಕೊಂಡ ಬಳಿಕ ಅವರ ಮನೆಯಲ್ಲಿಯೇ ಡೆತ್ ನೋಟ್ ಸಿಕ್ಕಿತ್ತು ಎನ್ನಲಾಗಿದೆ. ಡೆತ್ ನೋಟ್ ಆಧರಿಸಿ ಆತನ ಪತ್ನಿ ಸುಮಾ ಅವರು ದೂರು ನೀಡಿದ್ದರು. ಅನಂತರಾಜು ಅವರ ಪತ್ನಿ ಸುಮಾ ಅವರ ಅಡಿಯೋ ಕ್ಲಿಪ್ ಹೊರ ಬಿದ್ದಿರುವುದರಿಂದ ಈ ಡೆತ್ ನೋಟ್ ಬಗ್ಗೆ ಸಾಕಷ್ಟು ಅನುಮಾನಗಳನ್ನು ಹುಟ್ಟು ಹಾಕಿದೆ. ಡೆತ್ ನೋಟ್ ಅನಂತರಾಜು ಬರೆದಿಟ್ಟಿದ್ದನೇ ಇಲ್ಲವೇ ಅನಂತರಾಜು ಆತ್ಮಹತ್ಯೆ ಹಿನ್ನೆಲೆಯಲ್ಲಿ ಸುಮಾ ಅವರೇ ಡೆತ್ ನೋಟ್ ಬರೆದು ಅದರ ಮೂಲಕ ಅನಂತರಾಜು ಪ್ರೇಯಸಿ ವಿರುದ್ಧ ದೂರು ನೀಡಿದರೇ ಎಂಬ ಅನುಮಾನ ಹುಟ್ಟ ಹಾಕಿದೆ. ಈ ಬಗ್ಗೆ ಪೊಲೀಸರೇ ಸ್ಪಷ್ಟಪಡಿಸಬೇಕು. ಯಾಕೆಂದರೆ ಡೆತ್ ನೋಟ್ ಪೊಲೀಸರಿಗೂ ಸಿಕ್ಕಿರಲಿಲ್ಲ. ಸುಮಾ ಅವರೇ ಸ್ವತಃ ನನಗೆ ಡೆತ್ ನೋಟ್ ಸಿಕ್ಕಿದೆ ಎಂದು ಹೇಳಿ ಅದನ್ನಾಧರಿಸಿ ದೂರು ನೀಡಿದ್ದರು. ಇದೀಗ ಅವರೇ ಮಾತನಾಡಿದ್ದಾರೆ ಎನ್ನಲಾದ ಅಡಿಯೋದಲ್ಲಿ ತನ್ನ ಗಂಡ 20 ದಿನದಲ್ಲಿ ಸಾಯುತ್ತಾನೆ. ನಾನು ಕೊಡೋ ಟಾರ್ಚರ್ ನಿಂದ ಅವನೇ ಸಾಯುತ್ತಾನೆ ಎಂದು ಹೇಳಿರುವ ಅಡಿಯೋ ನೋಡಿದ್ರೆ, ಗಂಡನ ಆತ್ಮಹತ್ಯೆ ಪ್ರಕರಣದಲ್ಲಿ ಬಚಾವ್ ಆಗಲು ಡೆತ್ ನೋಟ್ ಕ್ರಿಯೇಟ್ ಮಾಡಲಾಗಿದೆಯಾ ಎಂಬ ಅನುಮಾನ ಕೂಡ ಹುಟ್ಟಿಕೊಂಡಿದೆ.












Click it and Unblock the Notifications