ನಿತ್ಯ ₹70 ಲಕ್ಷ ಖರ್ಚಾಗುವ ಕಲಾಪಕ್ಕೆ ಜೆಡಿಎಸ್-ಬಿಜೆಪಿ ಅಡ್ಡಿ: ಜನರ ತೆರಿಗೆ ಹಣ ಪೋಲು! ಸಚಿವ ಆಕ್ರೋಶ
ಬೆಂಗಳೂರು: ಕರ್ನಾಟಕದಲ್ಲಿ ಆಗಸ್ಟ್ 13ರಿಂದ ಮುಂಗಾರು ಅಧಿವೇಶನವೇನೋ ನಡೆಯುತ್ತಿದೆ. ಆದರೆ ರಾಜ್ಯದ ಜ್ವಲಂತ ಸಮಸ್ಯೆ, ಅಭಿವೃದ್ಧಿ, ಅಕ್ರಮಗಳ ಕುರಿತು ಚರ್ಚೆಗಳು ಆಗುತ್ತಿಲ್ಲ. ಯೋಜನೆಗಳಿಗೆ ರೂಪುರೇಷೆ ತಯಾರಾಗುತ್ತಿಲ್ಲ. ರಾಜ್ಯದ ಜನರ ತೆರಿಗೆ ಹಣ ಪೋಲಾಗುತ್ತಿದ್ದು, ಇದಕ್ಕೆ ಜೆಡಿಎಸ್-ಬಿಜೆಪಿ ಕಾರಣವಾಗಿದೆ. ಕಾಲಹರಣ ಬಿಟ್ಟು ಚರ್ಚೆಗೆ ಬರುವಂತೆ ದೊಸ್ತಿ ನಾಯಕರಿಗೆ ಸಚಿವ ಶಿವರಾಜ್ ತಂಗಡಗಿ ಅವರು ಸವಾಲು ಹಾಕಿದ್ದಾರೆ.
ಬಿಜೆಪಿ-ಜೆಡಿಎಸ್ ದೋಸ್ತಿಗಳು 08ನೇ ದಿನದ ಕಲಾಪವನ್ನೂ ಯಶಸ್ವಿಯಾಗಿ ಹಾಳು ಮಾಡಲು ಮುಂದಾಗಿದ್ದಾರೆ. ವಿಧಾನಮಂಡಲದ ಒಂದು ದಿನದ ಕಲಾಪಕ್ಕೆ ಸುಮಾರು 60-70 ಲಕ್ಷ ರೂಪಾಯಿ ಸಾರ್ವಜನಿಕ ಹಣ ಖರ್ಚಾಗುತ್ತದೆ. ಈ ಹಣ ಜನರ ಸಮಸ್ಯೆಗಳ ಚರ್ಚೆ, ನೀತಿ ರೂಪಣೆ ಮತ್ತು ಪರಿಹಾರ ಕಂಡುಕೊಳ್ಳಲು ವಿನಿಯೋಗವಾಗಬೇಕು. ಆದರೆ ಹಾಗಾಗುತ್ತಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ರಾಜಕೀಯ ತೆವಲಿಗೆ ಕಲಾಪ ಬಲಿ
ಆದರೆ, ಜನರ ಪರ ಹೋರಾಡಬೇಕಾದ ಬಿಜೆಪಿ-ಜೆಡಿಎಸ್‌ಗಳು ರಾಜಕೀಯ ತೆವಲಿಗೆ ಸದನವನ್ನು ಬಲಿಕೊಡುತ್ತಿವೆ. ವಿಪರ್ಯಾಸವೆಂದರೆ, ಆಡಳಿತ ಪಕ್ಷದ ಸದಸ್ಯರೇ ಪ್ರಶ್ನೋತ್ತರ ಕಲಾಪದಲ್ಲಿ ಸರ್ಕಾರವನ್ನು ಪ್ರಶ್ನಿಸಿ ಜನರ ಪರ ಉತ್ತರ ಪಡೆಯುತ್ತಿದ್ದಾರೆ. ಸರ್ಕಾರವನ್ನು ಪ್ರಶ್ನಿಸಬೇಕಾದ ಪ್ರತಿಪಕ್ಷಗಳು ಮಾತ್ರ ಟೈಮ್‌ಪಾಸ್-ಪಿಕ್ನಿಕ್ ರಾಜಕೀಯದಲ್ಲಿ ತೊಡಗಿವೆ ಎಂದು ಅವರು ಗುಡುಗಿದರು.
ನಾಗೇಂದ್ರ ವಿಚಾರದಲ್ಲಿ ಚರ್ಚೆಗೆ ಸಿದ್ಧ: ಸಚಿವ
ಸಚಿವ ಬಿ. ನಾಗೇಂದ್ರ ಅವರ ವಿಚಾರದಲ್ಲಿ ಚರ್ಚೆಗೂ ಕಾಂಗ್ರೆಸ್ ನಾಯಕರು, ಸರ್ಕಾರ ಸಿದ್ಧವಾಗಿದೆ. ನೋಟಿಸ್ ನೀಡಿ ನಿಯಮಾನುಸಾರ ಚರ್ಚೆಗೆ ಬರಲು ಪ್ರತಿಪಕ್ಷಗಳೇ ಸಿದ್ಧರಿಲ್ಲ. ನೋಟಿಸ್ ನೀಡದಿದ್ದರೂ ನಿಯಮಾವಳಿಗೆ ವಿನಾಯಿತಿ ನೀಡಿ ಚರ್ಚೆಗೆ ಅವಕಾಶ ಕಲ್ಪಿಸುವಂತೆ ಸಭಾಧ್ಯಕ್ಷರನ್ನು ನಾವು ಕೋರುತ್ತೇವೆ. ತಾಕತ್ತಿದ್ದರೆ ಸದನಕ್ಕೆ ಬಂದು ಚರ್ಚಿಸಿ. ಪಲಾಯನ ರಾಜಕಾರಣ ಮಾಡಬೇಡಿ ಎಂದು ಅವರು ಸವಾಲು ಹಾಕಿದ್ದಾರೆ.
ಚಾರ್ಜ್ ಶೀಟ್ ನಲ್ಲಿ ನಾಗೇಂದ್ರ ಹೆಸರಿಲ್ಲ
ಸಚಿವ ಬಿ. ನಾಗೇಂದ್ರ ವಿರುದ್ಧ ಯಾವುದೇ ಆಧಾರಸಹಿತ ಆರೋಪವಿಲ್ಲ. ಎಸ್ಐಟಿ ಚಾರ್ಜ್ ಶೀಟ್ ನಲ್ಲಿ ಅವರ ಹೆಸರೂ ಇರಲಿಲ್ಲ. ರಾಜಕೀಯಕ್ಕಾಗಿ ಇಡಿ ಅವರ ಹೆಸರು ಸೇರಿಸಿತು. ನ್ಯಾಯಾಲಯ ಜಾಮೀನು ನೀಡಿದ್ದು, ನಾಗೇಂದ್ರ ಅವರಿಂದ ನಯಾಪೈಸೆ ರಿಕವರಿ ಆಗಿಲ್ಲ. ಅವರು ಹಣ ಪಡೆದಿದ್ದಾರೆಂಬ ಆಧಾರವೂ ಇಲ್ಲ. ಹೀಗಾಗಿ ತಮ್ಮ ಸುಳ್ಳು ಆರೋಪಗಳ ಸರಮಾಲೆ ಕಳಚಿ ಬೀಳುವ ಭಯಕ್ಕೆ ಪ್ರತಿಪಕ್ಷಗಳು ಚರ್ಚೆಗೆ ಸಿದ್ಧರಿಲ್ಲ ಎಂದು ಅವರು ವಿವರಿಸಿದರು.
ರಾಜ್ಯದ ಜನರ ತೆರಿಗೆ ಹಣ ಅಮೂಲ್ಯವಾದದ್ದು. ಪ್ರತಿಪಕ್ಷಗಳು ಇನ್ನಾದರೂ ಎಚ್ಚೆತ್ತುಕೊಂಡು ಜನರ ಸಮಸ್ಯೆಗಳ ಬಗ್ಗೆ ಚರ್ಚೆಗೆ ಬರಬೇಕು. ಅದನ್ನು ಬಿಟ್ಟು ಈ ರೀತಿ ಕಾಲ ಹರಣ ಮಾಡುವುದು ಸರಿಯಲ್ಲ ಎಂದು ಅವರು ಎಚ್ಚರಿಸಿದರು.
ಕಳೆದ ಹತ್ತು ದಿನಗಳಲ್ಲಿ ಎಂಟು ದಿನ ಕಲಾಪ ನಡೆದಿವೆ. ಅದರಲ್ಲಿ ಪ್ರತಿ ದಿನವು ಬಿಜೆಪಿ ವಿಪಕ್ಷ ನಾಯಕ ಆರ್.ಅಶೋಕ್, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಒಂದೇ ಹಠ ಹಿಡಿದಿದ್ದಾರೆ. ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಭಟನೆ, ಘೋಷಣೆ, ನಾಗೇಂದ್ರನನ್ನು ರಾಜೀನಾಮೆ ಕೊಡಿಸುವಂತೆ ಒತ್ತಾಯ, ಸಂಪುಟದಿಂದ ಕೈ ಬಿಡುವಂತೆ ಆಗ್ರಹಿಸುತ್ತಾರೆ ಬಂದಿದ್ದಾರೆ. ಇದರಿಂದ ಯಾವುದೇ ಗಂಭೀರ ವಿಚಾರಗಳು ಚರ್ಚೆ ನಡೆಯಲು ಅವಕಾಶ ದೊರೆತಿಲ್ಲ. ಇದರಿಂದ ಜನರ ತೆರಿಗೆ ಹಣ ಸುಮ್ಮನೇ ಪೋಲಾಗುತ್ತಿದೆ. ಸಾಲದೆಂಬಂತೆ ಇಂದು ಸೋಮವಾರ ವಿಧಾನಸೌಧ ಮುತ್ತಿಗೆ ಯತ್ನ ನಡೆಸಲಾಯಿತು. ಇದೆಲ್ಲ ಹೈಡ್ರಾಮಾ ಎಂದು ಸಾರ್ವಜನಿಕು ಮಾತನಾಡಿಕೊಳ್ಳುತ್ತಿದ್ದು, ದಯಮಾಡಿ ನಾಗೆಂದ್ರ ಅವರ ವಿಚಾರಕ್ಕೆ ಕೆಲವು ಸಮಯ ಮೀಸಲಿಟ್ಟು, ಉಳಿದ ಎಲ್ಲ ಸಮಯ ಜನರ ಸಮಸ್ಯೆ, ನಾಡಿನ ಅಭಿವೃದ್ಧಿ ಕುರಿತು ಚರ್ಚಿಸುವಂತೆ ಆಗ್ರಹ ಕೇಳಿ ಬರುತ್ತಿದೆ.


Click it and Unblock the Notifications
