ಆಸ್ತಿ ಬಾಕಿ ಉಳಿಸಿಕೊಂಡವರಿಗೆ ಬಿಬಿಎಂಪಿಯಿಂದ ಬಿಗ್‌ಶಾಕ್!
ಬೆಂಗಳೂರಲ್ಲಿ ಆಸ್ತಿ ಮಾಲೀಕರಿಗೆ ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಬಿಗ್ ಶಾಕ್ ಕೊಟ್ಟಿದೆ. ಬಿಬಿಎಂಪಿಗೆ ಹೆಚ್ಚು ಆದಾಯ ನೀಡುವ ಆದಾಯ ಮೂಲಗಳಲ್ಲಿ ಆಸ್ತಿ ತೆರಿಗೆ ಸಂಗ್ರಹವೂ ಪ್ರಮುಖವಾಗಿದೆ. ಇದೇ ಕಾರಣಕ್ಕೆ ಬಿಬಿಎಂಪಿಯು ಆಸ್ತಿ ತೆರಿಗೆ ಸಂಗ್ರಹಕ್ಕೆ ಸಂಬಂಧಿಸಿದಂತೆ ಮಹತ್ವದ ಹೆಜ್ಜೆಗಳನ್ನು ಇರಿಸುತ್ತಿದೆ. ಇದೀಗ ಬೆಂಗಳೂರಿನಲ್ಲಿ ಸುದೀರ್ಘ ಅವಧಿಯಿಂದ ಆಸ್ತಿ ಬಾಕಿ ಉಳಿಸಿಕೊಂಡಿರುವವರಿಗೆ ಶಾಕ್ ನೀಡಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ (ಬೆಂಗಳೂರಲ್ಲಿ) ಈಗಾಗಲೇ ಐತಿಹಾಸಿಕ ಒಂದು ಬಾರಿ ಪರಿಹಾರ(OTS) ಯೋಜನೆಯನ್ನು ಪರಿಚಯಿಸಿದೆ. ಅಲ್ಲದೇ ಈ ಯೋಜನೆಯ ಅಡಿ ಆಸ್ತಿ ತೆರಿಗೆಯ ಬಾಕಿದಾರರಿಗೆ ಬಡ್ಡಿ ಮತ್ತು ದಂಡ ಮನ್ನಾ ಮಾಡುತ್ತಿದೆ. ಆದರೆ, ಬಿಬಿಎಂಪಿಯ ಈ ಮಹತ್ವದ ಯೋಜನೆಯನ್ನು ಬೆಂಗಳೂರಿನ ಆಸ್ತಿ ಮಾಲೀಕರು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಬಿಬಿಎಂಪಿ ಹೇಳಿತ್ತು.

ಇದೀಗ ಬೆಂಗಳೂರು ಪೂರ್ವ ವಲಯದಲ್ಲಿನ ಬೇಬಾಕಿದಾರರಿಗೆ (ಹೆಚ್ಚು ಬಾಕಿ ಉಳಿಸಿಕೊಂಡವರು - ಆಸ್ತಿ ಸುಸ್ತಿದಾರರು) ದೊಡ್ಡ ಶಾಕ್ ಅನ್ನೇ ಕೊಟ್ಟಿದೆ. ಬೆಂಗಳೂರಿನ ಪೂರ್ವ ವಲಯದಲ್ಲಿ ಅತೀ ಹೆಚ್ಚು ಬೇ ಬಾಕಿ ಉಳಿಸಿಕೊಂಡಿರುವ ವಸತಿಯೇತರ (ಮನೆಗಳನ್ನು ಹೊರತುಪಡಿಸಿ) ಆಸ್ತಿಗಳಿಗೆ ಬೀಗ ಜಡಿಯುತ್ತಿದೆ.
ಪೂರ್ವ ವಲಯ ಮಹಾತ್ಮ ಗಾಂಧಿ ರಸ್ತೆಯಲ್ಲಿ ಬರುವ ಮಿಟ್ಟಲ್ ಟವರ್ಸ್‌ನಲ್ಲಿ ಬಾಕಿ ಆಸ್ತಿ ತೆರಿಗೆ ಪಾವತಿಸದ ಗೋಯಲ್ ಆಸ್ತಿದಾರರನ್ನು ಭೇಟಿ ಮಾಡಿ, ಬೀಗಮುದ್ರೆ ಹಾಕಲು ಪಾಲಿಕೆ ಮುಂದಾಗಿದೆ. ಆದರೆ, ಆಸ್ತಿ ಮಾಲೀಕರು ಬಾಕಿಯಿದ್ದ 17.42 ಲಕ್ಷ ( 17,42,412)ಗಳ ಆಸ್ತಿ ತೆರಿಗೆಯನ್ನು ಕೂಡಲೇ ಪಾವತಿಸಲಾಗಿದೆ ಎಂದು ಹೇಳಿದ್ದಾರೆ ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪೂರ್ವ ವಲಯ ವ್ಯಾಪ್ತಿಯಲ್ಲಿ ಈಗಾಗಲೇ ವಿಭಾಗವಾರು ಹೆಚ್ಚು ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರು ಹಾಗೂ ಪರಿಷ್ಕರಣೆ ಪ್ರಕರಣಗಳಿಗೆ ನೋಟಿಸ್‌ಗಳನ್ನು ಜಾರಿ ಮಾಡಲಾಗಿದ್ದು, ಸಾಕಷ್ಟು ಸಮಯಾವಕಾಶವನ್ನು ನೀಡಿದ್ದರೂ ಕೂಡಾ ಬಾಕಿ ಆಸ್ತಿ ತೆರಿಗೆಯನ್ನು ಪಾವತಿಸಿರುವುದಿಲ್ಲ. ಈ ಕಾರಣ ವಾಣಿಜ್ಯೇತರ ಆಸ್ತಿಗಳಿಗೆ ಬೀಗ ಮುದ್ರೆ ಹಾಕಿ ಬಾಕಿ ಆಸ್ತಿ ತೆರಿಗೆ ವಸೂಲಿ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಹೇಳಿದೆ.
ಪರಿಷ್ಕರಣೆ ಪ್ರಕಟಣ ಹಾಗೂ ಹೆಚ್ಚು ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರ 10 ಆಸ್ತಿಗಳಿಗೆ ಖುದ್ದಾಗಿ ಭೇಟಿ ನೀಡಿ ಬಾಕಿ ಆಸ್ತಿ ವಸೂಲಿ ಮಾಡುವ ಕೆಲಸ ಮಾಡಲಾಗುತ್ತಿದೆ.
ಪೂರ್ವ ವಲಯ ವ್ಯಾಪ್ತಿಯಲ್ಲಿ 2418 ಪರಿಷ್ಕರಣೆ ಪ್ರಕರಣಗಳ ಆಸ್ತಿಗಳಿಂದ ಸುಮಾರು 66 ಕೋಟಿ ರೂಪಾಯಿ ಬಾಕಿ ಆಸ್ತಿ ತೆರಿಗೆ ಬರಬೇಕಿದೆ. 32,584 ಸುಸ್ತಿದಾರರಿಂದ 61.76 ಕೋಟಿ ರೂಪಾಯಿ ಬಾಕಿ ಆಸ್ತಿ ತೆರಿಗೆ ಬರಬೇಕಿದೆ. ಅಭಿಯಾನದ ಮೂಲಕ ಹಂತ-ಹಂತವಾಗಿ ಎಲ್ಲಾ ಆಸ್ತಿಗಳಿಂದ ಬಾಕಿ ಆಸ್ತಿ ತೆರಿಗೆ ಸಂಗ್ರಹಿಸುವುದಾಗಿ ಬಿಬಿಎಂಪಿ ಹೇಳಿದೆ.
ಬಾಕಿ ಆಸ್ತಿ ತೆರಿಗೆ ಉಳಿಸಿಕೊಂಡವರಿಗೆ ನೋಟಿಸ್ ನೀಡಿದ ಬಳಿಕ ಸಾಕಷ್ಟು ಸಮಯಾವಕಾಶವನ್ನು ನೀಡಲಾಗುತ್ತಿದೆ. ಆದರೂ ಪಾವತಿ ಮಾಡಿಲ್ಲವೆಂದರೆ ಅಟ್ಯಾಚ್ಮೆಂಟ್ ಆರ್ಡರ್ ನೀಡಲಾಗುತ್ತದೆ. ಅದಕ್ಕೂ ಸ್ಪಂದಿಸಿಲ್ಲವೆಂದರೆ ವಸತಿಯೇತರ ಆಸ್ತಿಗಳಿಗೆ ಬೀಗ ಮುದ್ರೆ ಹಾಕುವುದಾಗಿ ಹೇಳಿದೆ.












Click it and Unblock the Notifications