Business Park: ಬೆಂಗಳೂರು ಏರ್‌ಪೋರ್ಟ್ ಬಳಿ ದೊಡ್ಡ ಬಿಸಿನೆಸ್ ಪಾರ್ಕ್, ಏನೆಲ್ಲ ಇರಲಿದೆ?
ಜಾಗತಿಕವಾಗಿ ಮನ್ನಣೆ ಗಳಿಸಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಅಭಿವೃದ್ಧಿ ಕಾರ್ಯಗಳಲ್ಲಿ ಮುಂದಡಿ ಇಟ್ಟಿದೆ. ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ (ಬಿಐಎಎಲ್) ಅಂಗಸಂಸ್ಥೆಯಾದ ಬೆಂಗಳೂರು ಏರ್‌ಪೋರ್ಟ್ ಸಿಟಿ ಲಿಮಿಟೆಡ್ (ಬಿಎಸಿಎಲ್) ಬರೋಬ್ಬರಿ 2 ಮಿಲಿಯನ್ ಚದರ ಅಡಿಯಷ್ಟು ವಿಶಾಲವಾದ ಬಿಸಿನೆಸ್ ಪಾರ್ಕ್ ನಿರ್ಮಿಸಲು ಮುಂದಾಗಿದೆ.
ಬಿಐಎಎಲ್ ಈ ಬಿಸಿನೆಸ್ ಪಾರ್ಕ್ ಯೋಜನೆಯನ್ನು ನಿನ್ನೆ ಘೋಷಣೆ ಮಾಡಿದೆ. ಈ ಯೋಜನೆಯು 2024-2029ರ ಕರ್ನಾಟಕದ ಹೊಸ ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ) ನೀತಿಯ ಭಾಗವಾಗಿದೆ ಎಂದು ಹೇಳಿದೆ. ಬರೋಬ್ಬರಿ 3.50 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವುದು ಹಾಗೂ ರಾಜ್ಯದ ಆರ್ಥಿಕತೆಗೆ 50 ಶತಕೋಟಿ ಡಾಲರ್‌ಗಳಷ್ಟು ಕೊಡುಗೆ ನೀಡುವ ಮೂಲಕ ಬೆಂಗಳೂರನ್ನು ಜಾಗತಿಕ ಸಾಮರ್ಥ್ಯ ಕೇಂದ್ರವಾಗಿ ಸ್ಥಾಪಿಸುವುದು ಇದರ ಗುರಿ ಎಂದು ವರದಿಯಾಗಿದೆ.

ಬೆಂಗಳೂರು ಏರ್‌ಪೋರ್ಟ್ ಸಮೀಪವೇ ಸುಮಾರು 17.7 ಎಕರೆ ಪ್ರದೇಶದಲ್ಲಿ ಬಿಸಿನೆಸ್ ಪಾರ್ಕ್ ತಲೆ ಎತ್ತಲಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕ್ಯಾಂಪಸ್‌ನಲ್ಲೇ ಬಿಸಿನೆಸ್ ಪಾರ್ಕ್ ನಿರ್ಮಾಣವಾಗಲಿದೆ. ಬಿಸಿನೆಸ್ ಪಾರ್ಕ್‌ಗಳು, ಶೈಕ್ಷಣಿಕ ಮತ್ತು ಆರೋಗ್ಯ, ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು, ವಿವಿಧ ಮನರಂಜನೆ ಮತ್ತು ಆತಿಥ್ಯ ಸೌಲಭ್ಯಗಳೊಂದಿಗೆ ಮಿಶ್ರ ಬಳಕೆಯ ಪ್ರದೇಶವಾಗಿ ಬೆಂಗಳೂರು ವಿಮಾನ ನಿಲ್ದಾಣದ ಬಳಿ ವಿನ್ಯಾಸಗೊಳಿಸಲಾಗಿದೆ.
ಬೆಂಗಳೂರು ಜಾಗತಿಕ ಸಾಮರ್ಥ್ಯ ಕೇಂದ್ರಗಳ ವಲಯದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಬೆಂಗಳೂರಿನಲ್ಲಿ ಐಟಿ, ಜೈವಿಕ ತಂತ್ರಜ್ಞಾನ, ವಾಹನ ಮತ್ತು ಏರೋಸ್ಪೇಸ್‌ನಂತಹ ಉದ್ಯಮಗಳನ್ನು ಒಳಗೊಂಡಂತೆ ಭಾರತದ ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ) ವಲಯದ ಶೇ 36ರ ನೆಲೆಯಾಗಿದೆ ಎಂದು ಬೆಂಗಳೂರು ಏರ್‌ಪೋರ್ಟ್ ಸಿಟಿ ಲಿಮಿಟೆಡ್‌ನ (ಬಿಎಸಿಎಲ್) ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಸಿಇಒ ರಾವ್ ಮುನುಕುಟ್ಲ ಹೇಳಿದ್ದಾರೆ.

ಈ ಬಿಸಿನೆಸ್ ಪಾರ್ಕ್ ಶೀಘ್ರದಲ್ಲೇ ಬೆಂಗಳೂರರು ಏರ್‌ಪೋರ್ಟ್‌ಗೆ ಬರಲಿರುವ ಮೆಟ್ರೋ ಸಂಪರ್ಕದಿಂದಾಗಿ ಸಾಕಷ್ಟು ಅಭಿವೃದ್ಧಿಯನ್ನು ಪಡೆಯಲಿದೆ. ಅಲ್ಲದೆ ಮೆಟ್ರೋ ಸಂಪರ್ಕವು ಏರ್‌ಪೋರ್ಟ್ ಬಳಿ ನಿರ್ಮಾಣವಾಗುವ ಬಿಸಿನೆಸ್ ಪಾರ್ಕ್ ಅನ್ನು ಬೆಂಗಳೂರಿನ ಕೇಂದ್ರ ಭಾಗಕ್ಕೆ ಸಂಪರ್ಕಿಸುತ್ತದೆ.
ಇದರಿಂದ ವೇಗದ ಪ್ರಯಾಣ ಹಾಗೂ ಹೆಚ್ಚು ಪರಿಸರ ಸ್ನೇಹಿ ಮಾರ್ಗದ ಬೆಂಬಲ ಕೂಡ ಇದಕ್ಕೆ ಸಿಗಲಿದೆ ಎಂದು ಹೇಳಲಾಗುತ್ತಿದೆ. ಭಾರತದ ಮೊದಲ ಕನ್ಸರ್ಟ್ ಅರೆನಾ ಅನ್ನು ವಿಮಾನ ನಿಲ್ದಾಣದ ಪರಿಸರದಲ್ಲಿ ನಿರ್ಮಿಸುವುದು, ಹಾಗೆಯೇ ಕನ್ವೆನ್ಷನ್ ಹಾಗೂ ಪ್ರದರ್ಶನ ಕೇಂದ್ರಗಳನ್ನು ತೆರೆಯುವುದು ಕೂಡ ಏರ್‌ಪೋರ್ಟ್ ಸಿಟಿಯ ಭವಿಷ್ಯದ ಯೋಜನೆಗಳಲ್ಲಿ ಒಳಗೊಂಡಿವೆ ಎನ್ನಲಾಗಿದೆ.
2023ರಲ್ಲಿ ಬಿಡುಗಡೆಯಾದ ಈ ಕರ್ನಾಟಕದ ಹೊಸ ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ) ನೀತಿಯು 2029ರ ವೇಳೆಗೆ ಬರೋಬ್ಬರಿ 500 ಹೊಸ ಜಿಸಿಸಿಗಳನ್ನು ಆಕರ್ಷಿಸುವ ಗುರಿಯನ್ನು ಹೊಂದಿದ. ಈ ಜಿಸಿಸಿಗಳು ಬಹುರಾಷ್ಟ್ರೀಯ ಕಂಪನಿಗಳಿಗೆ ಬ್ಯಾಕ್-ಆಫೀಸ್ ಕಾರ್ಯಗಳು, ಐಟಿ ಬೆಂಬಲ ಮತ್ತು ಗ್ರಾಹಕ ನಿರ್ವಹಣೆಯಂತಹ ಕಾರ್ಯಾಚರಣೆಗಳನ್ನು ನಿರ್ವಹಿಸುವ ಕೇಂದ್ರಗಳಾಗಿದ್ದು, ಈ ಜಿಸಿಸಿ ಕ್ಷೇತ್ರಕ್ಕೆ ಮೀಸಲಾದ ನೀತಿಯನ್ನು ಹೊಂದಿರುವ ಭಾರತದ ಮೊದಲ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಲಿದೆ.












Click it and Unblock the Notifications