Beyond Bengaluru: ಬೆಂಗಳೂರಿನಾಚೆ ಕರ್ನಾಟಕದಾದ್ಯಂತ ಅಭಿವೃದ್ಧಿ; ಡಿಕೆಶಿ ಮಹತ್ವದ ಘೋಷಣೆ, ಈ ಭಾಗಗಳಿಗೆ ಗುಡ್‌ನ್ಯೂಸ್
Beyond Bengaluru: ಬೆಂಗಳೂರು ಹಾಗೂ ಬೆಂಗಳೂರು ಕೇಂದ್ರೀತ ಅಭಿವೃದ್ಧಿ ಮಾತ್ರ ಆಗುತ್ತಿದೆ. ಇದರಿಂದ ಕರ್ನಾಟಕದ ವಿವಿಧ ಪ್ರದೇಶ ಹಾಗೂ ಉತ್ತರ ಕರ್ನಾಟಕ ಪ್ರದೇಶವು ಅಭಿವೃದ್ಧಿ ವಂಚಿತ ಅಥವಾ ಹಿಂದುಳಿಯುತ್ತಿದೆ ಎನ್ನುವ ಆರೋಪವು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ. ಅದರಲ್ಲೂ ಮುಖ್ಯವಾಗಿ ಬಿಡದಿ ಟೌನ್‌ಶಿಪ್ ನಿರ್ಮಾಣ ಯೋಜನೆ, ಟನಲ್ ರೋಡ್ ಪ್ರಾಜೆಕ್ಟ್ ಹಾಗೂ ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ವಿವಿಧ ವಿಷಯಗಳು ಚರ್ಚೆಯಾದ ನಂತರ ಈ ಕೂಗು ಇನ್ನಷ್ಟು ಹೆಚ್ಚಾಗಿದೆ. ಇದೀಗ ಕೊನೆಗೂ ಬಿಯಾಂಡ್ ಬೆಂಗಳೂರು ಅಭಿವೃದ್ಧಿ ಯೋಜನೆಯ ಬಗ್ಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮಾತನಾಡಿದ್ದಾರೆ.
ಬಿಯಾಂಡ್ ಬೆಂಗಳೂರು / ಬೆಂಗಳೂರಿನ ಆಚೆಗೆ ಅಭಿವೃದ್ಧಿ ವಿಚಾರಗಳ ಬಗ್ಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮಾತನಾಡಿದ್ದಾರೆ. ಅಭಿವೃದ್ಧಿ ಕೇವಲ ರಾಜಧಾನಿಗೆ ಸೀಮಿತವಾಗಿರದೆ ಕರ್ನಾಟಕದ ಪ್ರತಿಯೊಂದು ಭಾಗಕ್ಕೂ ತಲುಪಬೇಕು ಎಂಬ ಆಶಯದೊಂದಿಗೆ, ಸರ್ಕಾರವು 'ಬೆಂಗಳೂರಿನಾಚೆ' ಮೂಲಕ ಇಡೀ ರಾಜ್ಯದಾದ್ಯಂತ ಹೊಸ ಹೂಡಿಕೆಗಳು, ಉದ್ಯೋಗ ಮತ್ತು ಆರ್ಥಿಕ ಅವಕಾಶಗಳನ್ನು ಬೆಳೆಸಲು ಮುಂದಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಡಿ.ಕೆ ಶಿವಕುಮಾರ್ ಅವರು, ಕರಾವಳಿ-ಮಲೆನಾಡು ಪ್ರದೇಶದ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ತುಂಬಲಾಗುತ್ತಿದೆ, ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು ಮತ್ತು ಮೈಸೂರಿನಲ್ಲಿ ಜಾಗತಿಕ ತಂತ್ರಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಮತ್ತು 'ಶುದ್ಧ ಗಾಳಿ-ಆರೋಗ್ಯಕರ ಕರ್ನಾಟಕ'ದಂತಹ ಉಪಕ್ರಮಗಳು ಪರಿಸರ ಸ್ನೇಹಿ ಕ್ರಮಗಳ ಮೂಲಕ ಸಮಗ್ರ ಅಭಿವೃದ್ಧಿಯನ್ನು ವೇಗಗೊಳಿಸುತ್ತಿವೆ ಎಂದಿದ್ದಾರೆ.
ಬೆಂಗಳೂರು ಮೀರಿ ಕರ್ನಾಟಕದ ಪ್ರತಿಯೊಂದು ಭಾಗಕ್ಕೂ ಅವಕಾಶ ತಲುಪಿಸುವ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಗುರಿ ಭಿನ್ನವಾಗಿದೆ ಎಂದು ನೆಟ್ಟಿಗರು ಹೇಳಿದ್ದಾರೆ.
ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ ಕರ್ನಾಟಕದ ಸಾಧನೆ
ಶಾಂಘೈನಲ್ಲಿ ನಡೆದ 48ನೇ ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ ಕರ್ನಾಟಕಕ್ಕೆ ಹೆಮ್ಮೆಯ ಕ್ಷಣ. ಭಾರತ ತಂಡದ ಭಾಗವಾಗಿ ಕರ್ನಾಟಕವನ್ನು ಪ್ರತಿನಿಧಿಸಿದ್ದ 16 ಯುವ ಸ್ಪರ್ಧಿಗಳ ಪೈಕಿ 9 ಮಂದಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರವಕ್ಕೆ ಪಾತ್ರರಾಗಿದ್ದಾರೆ. ಇವರಲ್ಲಿ ಒಬ್ಬರು ಬೆಳ್ಳಿ ಪದಕ ಗೆದ್ದರೆ, 8 ಮಂದಿ 'ಮೆಡಲಿಯನ್ ಫಾರ್ ಎಕ್ಸಲೆನ್ಸ್' ಗೌರವ ಪಡೆದಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೇಕಿಂಗ್ ವಿಭಾಗದಲ್ಲಿ ಸ್ಮೃತಿ ನಂಬಿಯಾರ್ ಬೆಳ್ಳಿ ಪದಕ ಗೆದ್ದಿರುವುದು ವಿಶೇಷ ಸಾಧನೆಯಾಗಿದೆ. ಇದರ ಜೊತೆಗೆ ಭಾರತಕ್ಕೆ 'ಬೆಸ್ಟ್ ಆಫ್ ನೇಷನ್' ಪ್ರಶಸ್ತಿಯೂ ಲಭಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಪವನ್ ಬಿ. ಎಸ್., ಸುಹಾನ್ ಮಸ್ಕರೇನಸ್, ಮಲ್ಲಿನಾಥ್, ಜಯಂತ್ ಕೆ., ದೀಪು ಎಂ. ಎಸ್., ಧನುಷಾ ಎಂ. ಜಿ., ಅಭಿಷೇಕ್ ಸೊಮ್ಮಣ್ಣ ಶಿಗನಳ್ಳಿ ಮತ್ತು ವಿನಯ್ ಎಂ. ಎಚ್. ಅವರು ಕೂಡ ತಮ್ಮ ಅತ್ಯುತ್ತಮ ಪ್ರದರ್ಶನದ ಮೂಲಕ ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ.
ಪ್ರತಿಯೊಂದು ಪದಕದ ಹಿಂದೆ ಹಲವು ವರ್ಷಗಳ ಪರಿಶ್ರಮ, ಶಿಸ್ತು ಮತ್ತು ದೃಢಸಂಕಲ್ಪ ಇರುತ್ತದೆ. ನಮ್ಮ ಯುವ ಪ್ರತಿಭೆಗಳು ಕರ್ನಾಟಕದ ಹೆಸರನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುತ್ತಿರುವುದನ್ನು ಕಂಡು ಹೆಮ್ಮೆಪಡುತ್ತೇನೆ. ಯುವಕರು ಕಲಿಯಲು, ಬೆಳೆಯಲು ಮತ್ತು ತಮ್ಮ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಅಗತ್ಯವಿರುವ ಎಲ್ಲ ಅವಕಾಶಗಳನ್ನು ಕಲ್ಪಿಸುವುದನ್ನು ನಾವು ಮುಂದುವರಿಸುತ್ತೇವೆ ಎಂದೂ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.


Click it and Unblock the Notifications
