Namma Metro: ಬೆಟ್ಟ ಹಲಸೂರು ಮೆಟ್ರೋ ನಿಲ್ದಾಣ ಕೈ ಬಿಟ್ಟ BMRCL
ಬೆಂಗಳೂರು, ಡಿಸೆಂಬರ್ 07: ಬೆಂಗಳೂರಿನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ಮಾರ್ಗದಲ್ಲಿ ಬೆಟ್ಟ ಹಲಸೂರು ಮೆಟ್ರೋ ನಿಲ್ದಾಣ ನಿರ್ಮಾಣವನ್ನು ಕೈ ಬಿಡಲಾಗಿದೆ. ಒಪ್ಪಂದದಂತೆ ಹಣ ಪೂರೈಕೆ ಆಗದ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್ ಈ ನಿರ್ಧಾರಕ್ಕೆ ಬಂದಿದೆ.
ಬೆಂಗಳೂರಿನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೆಟ್ರೋಗಾಗಿ ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಕಾಮಗಾರಿಯು ಬಿರುಸಿನಿಂದ ನಡೆಯುತ್ತಿದೆ. ಈ ನೀಲಿ ರೇಖೆಯ ಮೆಟ್ರೋ ಮಾರ್ಗವು ಒಟ್ಟು 37 ಕೀಲೋ ಮೀಟರ್ ಉದ್ದವಿದೆ. ಈ ಮಾರ್ಗದಲ್ಲಿ ಬರುವ ಮೆಟ್ರೋ ನಿಲ್ದಾಣಗಳ ಪೈಕಿ ಒಂದಾದ ಬೆಟ್ಟ ಹಲಸೂರು ನಿಲ್ದಾಣ ನಿರ್ಮಾಣ ಮಾಡುವುದಿಲ್ಲ ಎಂದು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ (ಬಿಎಂಆರ್‌ಸಿಎಲ್) ತಿಳಿಸಿದೆ.
ದೊಡ್ಡಜಾಲ ಮತ್ತು ಬಾಗಲೂರು ಕ್ರಾಸ್ ನಡುವೆ ಎಂಬೆಸ್ಸಿ ಗ್ರೂಪಿನ ನಿವಾಸಿಗಳ ಇದ್ದಾರೆ. ಈ ಕಾರಣಕ್ಕೆ ಆ ಭಾಗದಲ್ಲಿ ಬೆಟ್ಟ ಹಲಸೂರು ಮೆಟ್ರೋ ನಿಲ್ದಾಣಕ್ಕೆ ಯೋಜಿಸಲಾಗಿತ್ತು. ನಿಲ್ದಾಣದ ನಿರ್ಮಾಣಕ್ಕೆ ಸುಮಾರು 140 ಕೋಟಿ ರೂ. ನೀಡಲು ಬಿಎಂಆರ್ ಸಿಎಲ್ ನೊಂದಿಗೆ ಎಂಬೆಸ್ಸಿಯು ಕಂಪನಿ ಒಪ್ಪಂದ ಸಹ ಮಾಡಿಕೊಂಡಿತ್ತು.

ಸದ್ಯ ಕಾಮಗಾರಿ ಚುರುಕೊಂಡಿದ್ದು, ಬಿಎಂಆರ್ ಸಿಎಲ್ ನೊಂದಿಗೆ ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಈ ಮೆಟ್ರೋ ನಿಲ್ದಾಣ ನಿರ್ಮಾಣವಾಗಬೇಕಿತ್ತು. ಆದರೆ ಆ ಕಂಪನಿ ಯಾವುದೇ ರೀತಿಯ ಹಣ ಒದಗಿಸಿಲ್ಲ. ಈ ಬಗ್ಗೆ ಸಂಪರ್ಕಿಸಿದಾಗಲೂ ಆಂತರಿಕ ಸಮಸ್ಯೆಯಿಂದ ಅಷ್ಟು ಹಣವನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿತ್ತು. ಈ ಎಲ್ಲ ಕಾರಣಗಳಿಂದ ಆ ಭಾಗದಲ್ಲಿ ಉದ್ದೇಶಿತ ಮೆಟ್ರೋ ನಿಲ್ದಾಣ ನಿರ್ಮಾಣ ಸಾಧ್ಯವಿಲ್ಲ.
ನಿಲ್ದಾಣ ಕೈಬಿಟ್ಟ ಬಗ್ಗೆ ಅನುಮತಿ ಪಡೆಯಬೇಕು
ಮೆಟ್ರೋ ಕಾಮಗಾರಿಯ ಸಮಗ್ರ ಯೋಜನಾ ವರದಿ (ಡಿಪಿಆರ್)ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುಮೋದನೆ ಆಗಿರುತ್ತದೆ. ನಂತರ ಯಾವುದಾದರೂ ನಿಲ್ದಾಣವನ್ನು ಯೋಜನೆಯಲ್ಲಿ ಸೇರಿಸಬೇಕಾದರೆ ಇಲ್ಲವೇ ನಿಲ್ದಾಣವನ್ನು ಕೈ ಬಿಡಬೇಕಾದಂತಹ ಸಂದರ್ಭಗಳಲ್ಲಿ ಉನ್ನತ ಮಟ್ಟದ ಸಮಿತಿಯ ಅನುಮೋದನೆ ಪಡೆಯಬೇಕಾಗುತ್ತದೆ. ಈ ಬಗ್ಗೆ ಆದಷ್ಟು ಶೀಘ್ರವೇ ಅನುಮತಿ ಪಡೆಯಲಾಗುವುದು ಎಂದು ಬಿಎಂಆರ್‌ಸಿಎಲ್ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಬಿಎಂಆರ್‌ಸಿಎಲ್ ಬೆಂಗಳೂರು ಮತ್ತು ಕೆಐಎ ವಿಮಾನ ನಿಲ್ದಾಣ ನಡುವಿನ ಮಾರ್ಗದಲ್ಲಿ ಎರಡು ಹೊಸ ಮೆಟ್ರೋ ನಿಲ್ದಾಣಗಳಿಗಾಗಿ ಯೋಜನೆ ರೂಪಿಸಲಾಗುತ್ತಿದೆ. ಖಾಸಗಿ ಕಂಪನಿಗಳು ಈ ನಿಲ್ದಾಣ ನಿರ್ಮಾಣಕ್ಕೆ ಅನುದಾನ ನೀಡಲಿವೆ.
ಹೊಸದಾದ ಚಿಕ್ಕಜಾಲ ನಿಲ್ದಾಣದ ಬಗ್ಗೆ ಸ್ಥಳೀಯರು ಮತ್ತು ಜನಪ್ರತಿನಿಧಿಗಳಿಂದ ಮನವಿ ಬಂದಿದೆ. ದೊಡ್ಡಜಾಲ ಮತ್ತು ಬೆಟ್ಟಹಲಸೂರು ನಿಲ್ದಾಣಗಳ ನಡುವೆ ಹೊಸದಾದ ನಿಲ್ದಾಣ ನಿರ್ಮಾಣವಾಗಲಿದೆ. ಹೊಸ ನಿಲ್ದಾಣ ನಿರ್ಮಾಣಕ್ಕೆ ಈಗಾಗಲೇ ಪ್ರಾಥಮಿಕ ಒಪ್ಪಿಗೆ ಸಿಕ್ಕಿದೆ. ಈ ಬಗ್ಗೆ ಕೆಲವೇ ದಿನಗಳಲ್ಲಿ ಸ್ಪಷ್ಟ ಚಿತ್ರಣ ಬರಲಿದೆ ಎನ್ನಲಾಗಿತ್ತು. ಅದರಂತೆ ಇದೀಗ ಹಣ ಪೂರೈಕೆ ಆಗಿಲ್ಲವಾದ್ದರಿಂದ ಈ ಮೆಟ್ರೋ ನಿಲ್ದಾಣ ನಿರ್ಮಾಣಕ್ಕೆ ಬ್ರೇಕ್ ಬಿದ್ದಿದೆ.












Click it and Unblock the Notifications