ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 5 ಜಾಗಗಳಲ್ಲಿ 2ರಲ್ಲಿ ಶುರುವಾಯ್ತು ವಿರೋಧ!
Bengaluru's Second International Airport: ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇದೀಗ ಶಾರ್ಟ್ ಲಿಸ್ಟ್ ಮಾಡಿರುವ ಜಾಗಗಳಲ್ಲಿ ಸಂಕಷ್ಟ ಎದುರಾಗಿದ್ದು. ಎರಡನೇ ವಿಮಾನ ನಿಲ್ದಾಣ ಜಾಗ ನಿಗದಿ ಮಾಡುವ ಮೊದಲ ಹಂತವೇ ಮುಕ್ತಾಯವಾಗುತ್ತಿಲ್ಲ. ಆದರೆ, ತಮಿಳುನಾಡು ಈಗಾಗಲೇ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಬೇಕಾದ ಎಲ್ಲಾ ಮಾದರಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ತಮಿಳುನಾಡಿನ ಹೊಸೂರಿನಲ್ಲಿ ಈಗಾಗಲೇ ವಿಮಾನ ನಿಲ್ದಾಣದ ಜಾಗ ಫೈನಲ್ ಆಗಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಹಣಾ ಸಂಸ್ಥೆಯೊಂದಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿ. ಬೆಂಬಲಿತ ಫೇರ್‌ಫ್ಯಾಕ್ಸ್ ಸಂಸ್ಥೆಯೊಂದಿಗೆ ಚರ್ಚೆ ನಡೆದಿದೆ. ಆದರೆ, ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಮೊದಲಿದ್ದ ಡಿಮ್ಯಾಂಡ್ ಕಡಿಮೆಯಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಜಾಗ ಕಳೆದುಕೊಳ್ಳುವ ಆತಂಕ.
ನಗರದ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕನಸು ಸದ್ಯಕ್ಕೆ ಈಡೇರುವ ಲಕ್ಷಣಗಳು ಕಾಣಿಸುತ್ತಿಲ್ಲ. ಯಾಕೆಂದರೆ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮೊದಲು ಯಾವುದಾದರೂ ಜಾಗ ರಾಜ್ಯ ಸರ್ಕಾರ ಶಾರ್ಟ್ ಲಿಸ್ಟ್ ಮಾಡುವುದರೊಂದಿಗೆ ಕೇಂದ್ರ ಸರ್ಕಾರವೂ ಸಹ ಶಾರ್ಟ್ ಲಿಸ್ಟ್ ಮಾಡಬೇಕು. ಆದರೆ, ಮೊದಲ ಹಂತದಲ್ಲೇ ಭಾರೀ ಹಿನ್ನಡೆ ಎದುರಾಗುತ್ತಿದೆ. ಇದೀಗ ಶಾರ್ಟ್ ಲಿಸ್ಟ್ ಮಾಡಿರುವ ಮತ್ತೊಂದು ಜಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಚಾರದಲ್ಲಿ ನೆಲಮಂಗಲ ಹಾಗೂ ಸೋಲೂರು ಭಾಗದಲ್ಲಿ ರೈತರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಎರಡೂ ಜಾಗಗಳು ಶಾರ್ಟ್ ಲಿಸ್ಟ್ ಮಾಡಿರುವ ಪ್ರದೇಶಗಳಲ್ಲಿ ಪ್ರಮುಖವಾಗಿವೆ. ಈ ಭಾಗದಲ್ಲಿ ಫಲವತ್ತದ ಕೃಷಿ ಭೂಮಿ ಇದೆ. ಇಲ್ಲಿ ವಿಮಾನ ನಿಲ್ದಾಣದ ನಿರ್ಮಾಣ ಮಾಡಿದರೆ ಭೂಮಿ ಕಳೆದುಕೊಳ್ಳಲಿದ್ದೇವೆ ಎನ್ನುವ ಆತಂಕ ರೈತರದ್ದು. ನೆಲಮಂಗಲದ ದಾಸೇಗೌಡನಪಾಳ್ಯದಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಕೆಲವರು ನಿರಂತರ ಪ್ರತಿಭಟನೆಯಿಂದ ಅಸ್ವಸ್ಥರಾಗಿ ಆಸ್ಪತ್ರೆಗೂ ದಾಖಲಾಗಿದ್ದಾರೆ. ಜನರಿಗೆ ಇಲ್ಲಿನ ಶಾಸಕ ಎನ್ ಶ್ರೀನಿವಾಸ್ ಅವರು ಧೈರ್ಯ ತುಂಬಿದ್ದಾರೆ.
ಇನ್ನೊಂದು ತಿಂಗಳಿನಲ್ಲಿ ಅಧ್ಯಯನ ವರದಿ: ಇನ್ನು ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮೂರು ಪ್ರದೇಶದಲ್ಲಿ 5 ಜಾಗಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆ. ಈ ಜಾಗಗಳಲ್ಲಿ ಎಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು ಎಂದರೆ, ಕೇಂದ್ರ / ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಉನ್ನತ ಮಟ್ಟದ ವರದಿಯನ್ನು ಸಲ್ಲಿಸಬೇಕಿದೆ. ಈ ವರದಿಯು ಇನ್ನೊಂದು ತಿಂಗಳಿನಲ್ಲಿ ಸಲ್ಲಿಕೆಯಾಗುವ ಸಾಧ್ಯತೆ ಇದೆ. ಇದಾದ ಮೇಲೆ ಅಂತಿಮವಾಗುವ ಸಾಧ್ಯತೆ ಇದೆ.
ವಿಮಾನ ನಿಲ್ದಾಣಕ್ಕೆ ಭೂಮಿ ನಿಗದಿಯಾದರೆ, ಭೂಸ್ವಾಧೀನ ಅಥವಾ ಆ ಭಾಗದಲ್ಲಿ ಮುಂದಿನ ಯೋಜನೆಗಳನ್ನು ರೂಪಿಸಿಕೊಳ್ಳಲು ಸುಲಭವಾಗಲಿದೆ. ಆದರೆ, ವಿಮಾನ ನಿಲ್ದಾಣಕ್ಕೆ ಪ್ರಾಥಮಿಕವಾಗಿ ಜಾಗಗಳನ್ನು ಶಾರ್ಟ್ ಲಿಸ್ಟ್ ಮಾಡುವ ಪ್ರಕ್ರಿಯೆಯೇ ವಿಳಂಬವಾಗುತ್ತಿದೆ. ಹೀಗಾಗಿ ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ವಿಚಾರವು ತಮಿಳುನಾಡಿನ ಹೊಸೂರು ವಿಮಾನ ನಿಲ್ದಾಣಕ್ಕಿಂತ ಕೆಲವೊಂದು ವಿಚಾರಗಳಲ್ಲಿ ತಾಂತ್ರಿಕವಾಗಿ ಹಿಂದಿದೆ ಎಂದು ಹೇಳಲಾಗಿದೆ.












Click it and Unblock the Notifications