Double Decker Flyover: ಬುಧವಾರವೇ ಡಬಲ್ ಡೆಕ್ಕರ್ ಮೇಲ್ಸೇತುವೆ ಉದ್ಘಾಟನೆ; ಸಮಯ, ಮಾಹಿತಿ
ಬೆಂಗಳೂರಿನ ಬಹುನಿರೀಕ್ಷಿತ 3.3 ಕಿಲೋ ಮೀಟರ್ ಉದ್ದದ ಡಬಲ್ ಡೆಕ್ಕರ್ ಮೇಲ್ಸೇತುವೆ ಬುಧವಾರ ಉದ್ಘಾಟನೆಯಾಗಲಿದೆ. ರಾಗಿ ಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ (ಸಿಎಸ್‌ಬಿ) ಜಂಕ್ಷನ್‌ವರೆಗೆ ವಾಹನ ಸಂಚಾರಕ್ಕೆ ಮುಕ್ತವಾಗಲಿದ್ದು, ಬುಧವಾರ ಮಧ್ಯಾಹ್ನ 3 ಗಂಟೆಗೆ ಉದ್ಘಾಟಿಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.
ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಸಾರಿಗೆ ಸಚಿವ ಮತ್ತು ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ ಮತ್ತು ಇತರ ಸ್ಥಳೀಯ ಶಾಸಕರು ಮೇಲ್ಸೇತುವೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಡಬಲ್ ಡೆಕ್ಕರ್-ಫ್ಲೈಓವರ್ ಮೇಲಿನ ಡೆಕ್‌ನಲ್ಲಿ ಎಲಿವೇಟೆಡ್ ಮೆಟ್ರೋ ಕಾರಿಡಾರ್ ಮತ್ತು ವಾಹನ ಸಂಚಾರಕ್ಕಾಗಿ ಕೆಳಗಿನ ಡೆಕ್‌ನಲ್ಲಿ ಎಲಿವೇಟೆಡ್ ರಸ್ತೆಯನ್ನು ಒಳಗೊಂಡಿದೆ. ಡಬಲ್ ಡೆಕ್ಕರ್ ಮೇಲ್ಸೇತುವೆ ಉದ್ಘಾಟನೆಯಿಂದ ಎಸ್‌ಬಿ ಜಂಕ್ಷನ್‌ನಲ್ಲಿ ಟ್ರಾಫಿಕ್ ಕಡಿಮೆಯಾಗಲಿದ್ದು, ವಾಹನ ಸವಾರರಿಗೆ ಭಾರಿ ಅನುಕೂಲವಾಗಲಿದೆ.
ವಾಹನ ಸಂಚಾರಕ್ಕೆ ಮೇಲ್ಸೇತುವೆ ಸಜ್ಜಾಗಿದ್ದರು ಬಿಎಂಆರ್ ಸಿಎಲ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಉದ್ಘಾಟನೆಯನ್ನು ವಿಳಂಬ ಮಾಡಲಾಗುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿ ನಾಯಕರು ಪ್ರತಿಭಟನೆನೆ ಮಾಡಿದ್ದರು. ಶೀಘ್ರದಲ್ಲೇ ವಾಹನ ಸಂಚಾರಕ್ಕೆ ಅನುಮತಿ ಕೊಡದೇ ಇದ್ದರೆ ಬಲವಂತವಾಗಿ ಮೇಲ್ಸೇತುವೆ ತೆರೆಯುವುದಾಗಿ ಎಚ್ಚರಿಕೆ ನೀಡಿದ್ದರು.
ರಾಗಿಗುಡ್ಡದಿಂದ ಡಬ್ಬಲ್ ಡೆಕ್ಕರ್ ಮೇಲ್ಸೇತುವೆ ಮೂಲಕ ಬರುವ ವಾಹನ ಬಳಕೆದಾರರು ರ್‍ಯಾಂಪ್ ಮೂಲಕ ಹೊಸೂರು ರಸ್ತೆ ಮತ್ತು ರ್‍ಯಾಂಪ್ ಮೂಲಕ ಎಚ್‌ಎಸ್‌ಆರ್ ಲೇಔಟ್ ತಲುಪುತ್ತಾರೆ. ನೆಲಮಟ್ಟದಲ್ಲಿರುವ ರ್‍ಯಾಂಪ್ ಬಿ, ಬಿಟಿಎಂ ಬದಿಯಿಂದ ಹೊರವರ್ತುಲ ರಸ್ತೆ ಮತ್ತು ಹೊಸೂರು ರಸ್ತೆಯನ್ನು ಪ್ರವೇಶಿಸಲು ರಾಂಪ್ ಎ ಅನ್ನು ಸಂಪರ್ಕಿಸುತ್ತದೆ.
ಎಚ್‌ಎಸ್‌ಆರ್ ಲೇಔಟ್‌ನಿಂದ ಬರುವವರು ರಾಂಪ್ ಎ ಮತ್ತು ಹಳದಿ ಲೈನ್ ಮೆಟ್ರೋ ಲೈನ್‌ನ ಮೇಲೆ ಹಾದು ಹೋಗುವ ರಾಂಪ್ ಡಿ ಮೂಲಕ ರಾಗಿಗುಡ್ಡ ಕಡೆಗೆ ತಲುಪಲು ಸಾಧ್ಯವಾಗುತ್ತದೆ ಮತ್ತು ಡೌನ್ ರಾಂಪ್ ಇ ಬಿಟಿಎಂ ಲೇಔಟ್‌ಗೆ ಪ್ರವೇಶಿಸಬಹುದು.












Click it and Unblock the Notifications