ಬೆಂಗಳೂರಿಗರಿಗೆ ಎಗ್ ಪಫ್ ಮೇಲೆ ಯಾಕಷ್ಟು ಕ್ರೇಜ್! ಎಗ್ ಪಫ್ ಕ್ರಾಲ್ ಬಗ್ಗೆ ನಿಮ್ಗೊತ್ತಾ?
ಬೆಂಗಳೂರಲ್ಲಿ ಏಕ್‌ದಂ ಎಗ್ ಪಫ್ ತಿನ್ನೋ ಕ್ರೇಜ್ ಶುರುವಾಗಿದೆ. ಪೆಟ್ಟಿ ಅಂಗಡಿಯಿಂದ ದೊಡ್ಡ ಕೇಕ್ ಪ್ಯಾಲೇಸ್ ತನಕ ಎಲ್ಲ ಕಡೆ ಎಗ್ ಪಫ್ ಪ್ರೇಮಿಗಳ ಜಾಥಾ ಶುರುವಾಗಿದೆ. ಈ ಕ್ರೇಜ್ ಗಮನಿಸಿ ಎಗ್ ಪಫ್ ಕ್ರಾಲ್ trend ಬೇರೆ ಶುರುವಾಗಿದೆ. ಬಹಳ ಇಂಟರೆಸ್ಟಿಂಗ್ ಅನಿಸೋ ಕಥೆ ಇದು.
ಈಗಷ್ಟೇ ಮಳೆಗಾಲ ಬೆಂಗಳೂರಿಗೆ ಕಾಲಿಟ್ಟಿದೆ. ಬೆಳಗು, ಸಂಜೆ, ರಾತ್ರಿ ಅನ್ನದೇ ಮಳೆ ಸುರಿಯುತ್ತಿರುತ್ತದೆ. ಉಧೋ ಅಂತ ಸುರೀತಿರೋ ಮಳೆಯನ್ನ ನೋಡುತ್ತ ಬಿಸಿ ಬಿಸಿ ಟೀ ಹೀರುತ್ತಾ ಹಂಗೆ ಎಗ್ ಪಫ್ ಸವೀತಿದ್ರೆ.. ಆಹ್ ಆ ಫೀಲ್ ಅನುಭವಿಸಿಯೇ ತಿಳೀಬೇಕು. ಅಂದ ಹಾಗೆ ಈ ಎಗ್ ಪಫ್‌ಗೆ ಮುಟ್ಟಾ ಪಫ್ಸ್ ಅನ್ನೋ ಹೆಸರೂ ಇದೆ.

'ಬೆಂಗಳೂರಿಗರಿಗೆ ಎಗ್ ಪಫ್ ಇಷ್ಟ ಆಗೋದಕ್ಕೆ ಕಾರಣವಿದೆ' ಅಂತ ಮಾತು ಶುರು ಮಾಡ್ತಾರೆ ಪ್ರಸಿದ್ಧ ಚೆಫ್ ಅವಿನ್ ಥಾಲಿಯತ್. ಅವರ ಪ್ರಕಾರ ಬೆಂಗಳೂರಿನಲ್ಲಿ ಎಗ್‌ಪಫ್ ಕ್ರೇಜ್ ಬೆಳೆಯಲು ಮುಖ್ಯ ಇಲ್ಲಿನ ಹವಾಮಾನ ಮತ್ತು ಈ ಕಾಂಬಿನೇಷನ್‌ನ ಅದ್ಭುತ ಟೇಸ್ಟ್.
ಹಳೆ ಬೇಕರಿಗಳಿಗೆ ವಿಸಿಟ್
ಜನರ ಈ ಮೈಂಡ್‌ಸೆಟ್ ಅನ್ನು ಅರ್ಥ ಮಾಡಿಕೊಂಡಿರೋ ಅವಿನ್ ಥಾಲಿಯತ್ ಎಗ್ ಪಫ್ ಕ್ರಾಲ್ ಅನ್ನೋ ವಿಶೇಷ ಕಾರ್ಯಕ್ರಮ ಮಾಡುತ್ತಾರೆ. ಕಳೆದ ಶನಿವಾರ ಈ ಪ್ರೋಗ್ರಾಂ ಇತ್ತು. ಅನೇಕರು ಇದ್ರಲ್ಲಿ ಭಾಗವಹಿಸಿದರು. ಅದೇನ್ ಕಾರ್ಯಕ್ರಮ ಅಂದರೆ ಈ ವೀಕೆಂಡಲ್ಲಿ ಬೆಂಗಳೂರಿನ ಹಳೆಯ ಬೇಕರಿಗಳಿಗೆಲ್ಲ ವಿಸಿಟ್ ಮಾಡುತ್ತಾ ಬರುವುದು. ಅಲ್ಲೆಲ್ಲ ಪಫ್ ಹೇಗೆ ಮಾಡ್ತಾರೆ ಅನ್ನೋದನ್ನು ಸಾಧ್ಯವಾದರೆ ನೋಡೋದು, ಸಾಧ್ಯವಾಗದಿದ್ದರೆ ಅಲ್ಲಿನ ಪಫ್ ರುಚಿಯನ್ನು ಎದೆಗಿಳಿಸಿಕೊಳ್ಳೋದು.
ಬೆಳಗ್ಗಿಂದ ಮಧ್ಯಾಹ್ನದವರೆಗೂ ಬೇಕರಿ ಮೇಲೆ ಬೇಕರಿ ವಿಸಿಟ್. ಅಷ್ಟರಲ್ಲಾಗಲೇ ಹೊಟ್ಟೆಯೊಳಗೆ ಪಫ್ ತುಂಬಿಕೊಂಡಿರುತ್ತದೆ. ಆಮೇಲೆ ಅವಿನ್ ಥಾಲಿಯತ್ ಅವರು ಸ್ಥಾಪಿಸಿರೋ ಲಾವೊನ್ ಅಕಾಡೆಮಿಯಲ್ಲಿ ಮಾಸ್ಟರ್‌ಕ್ಲಾಸ್ ಎಕ್ಸ್ ಪೀರಿಯನ್ಸ್ ಮಾಡೋದು. ಆಮೇಲೆ ವಾಪಸ್ ಮನೆಗೆ ಹೋಗೋದ ಅಂದರೆ ನೋ ನೋ. ಅಲ್ಲಿ ನೀವೇ ಖುದ್ದಾಗಿ ನಿಮಗಿಷ್ಟವಾಗಿರುವ ಪೇಸ್ಟ್ರಿಯನ್ನು ಮಾಡಬಹುದು, ಹೇಗೆ ಅಂತ ಅಲ್ಲಿರುವವರು ಕಲಿಸಿಕೊಡ್ತಾರೆ.
ಎಗ್ ಪಫ್ ಫೀಲೇ ಬೇರೆ ಗುರು!
ಬಾಯಿಗಿಟ್ಟ ಕೂಡಲೇ ಗರಿಗರಿಯಾಗಿ ಬಿಚ್ಚಿಕೊಳ್ಳುವ ಪದರ. ಅದರೊಳಗೆ ಚೀಸ್ ಬೆರೆತ ಪಫ್ ಪೇಸ್ಟ್ರಿ. ಇದರ ಒಳಗಡೆ ಮಸಾಲೆ ಘಮ. ಫ್ರೈ ಮಾಡಿರುವ ಈರುಳ್ಳಿ ಜೊತೆಗೆ ಗಟ್ಟಿ ಬೇಯಿಸಿದ ಮೊಟ್ಟೆ. ಅವಿನ್ ಸೇರಿದಂತೆ ಗುಣಮಟ್ಟ, ರುಚಿಗೆ ಬೆಲೆ ಕೊಡುವ ಶೆಫ್‌ಗಳು ಈ ಪಫ್ ಅನ್ನು ಕೈಯಲ್ಲೇ ಮಾಡ್ತಾರೆ. ಬಂಗಾರದ ಬಣ್ಣಕ್ಕೆ ಬರೋವರೆಗೂ ಓವನ್‌ನಲ್ಲಿ ಬೇಯಿಸುತ್ತಾರೆ. ಬಿಸಿ ಬಿಸಿ ಪಫ್, ತಿನ್ನಲು ಗರಿಗರಿ, ರುಚಿ ರುಚಿ, ಮನಸ್ಸೆಂಬೋ ಮನಸ್ಸಿಗೆ ಫುಲ್ ಖುಷ್.
ಕೇರಳ ಕರ್ನಾಟಕ ಮತ್ತು ತಮಿಳುನಾಡಿನ ಬಹುತೇಕ ಎಲ್ಲಾ ಬೇಕರಿಗಳು ಪ್ರತಿದಿನ ಈ ಬೇಯಿಸಿದ ಪೇಸ್ಟ್ರಿಗಳನ್ನು ಗ್ರಾಹಕರಿಗಾಗಿ ಸಿದ್ಧಪಡಿಸಿ ಇಡುತ್ತವೆ. ಕೆಲವರ ಪ್ರಕಾರ ಇದರ ಇತಿಹಾಸವು ಭಾರತದಲ್ಲಿದ್ದ ಬ್ರಿಟಿಷರ ಕಾಲಕ್ಕೆ ಹೋಗುತ್ತದೆ. ಬ್ರಿಟಿಷರ ವಸಾಹತುಶಾಹಿ ಆಡಳಿತದ ಅವಧಿಯಲ್ಲಿ ಭಾರತಕ್ಕೆ ಪರಿಚಯಿಸಲ್ಪಟ್ಟ ಯುರೋಪಿಯನ್ ಪಫ್ ಪೇಸ್ಟ್ರಿಯ ರೂಪಾಂತರವೇ ಈ ಎಗ್ ಪಫ್ ಇರಬಹುದು ಅನ್ನೋ ಮಾತಿದೆ. ಕೇರಳದ ಬೇಕರಿಗಳು ಈ ಯುರೋಪಿಯನ್ ಪಫ್ ಮೇಕಿಂಗ್ ಟೆಕ್ನಾಲಜಿಯನ್ನು ಅರ್ಥ ಮಾಡಿಕೊಂಡು, ಅದಕ್ಕೆ ಊರಲ್ಲೇ ಮಸಾಲೆ ಮತ್ತು ಇತರ ವಸ್ತುಗಳನ್ನು ಸೇರಿಸಿ ಇಂದು ನಾವು ನೋಡುತ್ತಿರುವ ಎಗ್ ಪಫ್ ರೂಪಕ್ಕೆ ತಂದಿದ್ದಾರೆ.
ಎಗ್ ಪಫ್ ನಾಸ್ತಾಲ್ಜಿಯಾ
ದಕ್ಷಿಣ ಭಾರತದ ಈ ಹಳೆಯ ಬೇಕರಿಗಳು ಅತ್ಯಂತ ರುಚಿಕರವಾದ ಕೈಗೆಟುಕುವ ಬೆಲೆಯ ಮತ್ತು ಸ್ಥಳೀಯರ ನಾಲಿಗೆಗೆ ಒಗ್ಗುವಂತಹ ತಿಂಡಿಗಳನ್ನು ತಯಾರಿಸುವುದರಲ್ಲಿ ಪರಿಣತಿ ಪಡೆದಿವೆ. ಅಂತಹ ತಿಂಡಿಗಳ ಪಟ್ಟಿಯಲ್ಲಿ ಎಗ್ ಪಫ್ ಯಾವಾಗಲೂ ಮೊದಲ ಸ್ಥಾನದಲ್ಲಿದೆ. ಇದು ಹೊಟ್ಟೆ ತುಂಬಿಸುವ ಜೊತೆಗೆ ನಾಸ್ತಾಲ್ಜಿಯಾ ಫೀಲನ್ನೂ ಕೊಡುತ್ತದೆ.
ಈ ಎಗ್ ಪಫ್ ಜರ್ನಿ ಮೊದಲು ಶಿವಾಜಿನಗರದಲ್ಲಿರುವ ಎಕ್ಸೆಲ್ಸಿಯರ್ ಬೇಕರಿಯಿಂದ ಆರಂಭವಾಗಿತ್ತು. ಅದಾದ ನಂತರ ಕೌಸರ್ ಬೇಕರಿ ಮತ್ತು ಥೋಮ್ಸ್ ಬೇಕರಿಗಳಿಗೆ ಭೇಟಿ ನೀಡಿ ಪಫ್ ಸವಿಯಲಾಗುತ್ತದೆ. ಕೊನೆಯದಾಗಿ ಲಾವೊನ್ ಅಕಾಡೆಮಿಯಲ್ಲಿ ಮಲೇಷಿಯನ್ ಶೈಲಿಯ ಎಗ್ ಪಫ್ ಮತ್ತು ಸಾಂಪ್ರದಾಯಿಕ ಕೇರಳ ಬೆಂಗಳೂರು ಶೈಲಿಯ ಎಗ್ ಪಫ್ಗಳನ್ನು ಪ್ರಾಯೋಗಿಕವಾಗಿ ತಯಾರಿಸುವ ಸೆಷನ್ ಮೂಲಕ ಈ ಪ್ರವಾಸ ಮುಕ್ತಾಯಗೊಳ್ಳುತ್ತದೆ. ಸದ್ಯಕ್ಕೆ ಈ ಪ್ರೋಗ್ರಾಂ ಮುಗಿದಿದೆ. ಮುಂದೆ ಇದ್ರೆ ನೀವೂ ಒಂದ್ ಕೈ ನೋಡಬಹುದು.
ಬರಹ: ಭವಾನಿ ಭಟ್














Click it and Unblock the Notifications