Driverless car: ಬೆಂಗಳೂರಿನಲ್ಲಿ ರಸ್ತೆಗಿಳಿದ ಡ್ರೈವರ್ ಇಲ್ಲದ ವಾಹನ: ಹೇಗಿದೆ ನೋಡಿ
ಬೆಂಗಳೂರಿನಲ್ಲಿ ಚಾಲಕ ರಹಿತ ಕಾರು ರಸ್ತೆಗಿಳಿದಿದೆ. ಇದ್ಯಾವುದೋ ವೈಜ್ಞಾನಿಕ ಸಿನಿಮಾದ ಕಥೆಯಲ್ಲ ಬದಲಾಗಿ ನಿಜ, ಚಾಲಕನೇ ಇಲ್ಲದೇ ಆರಾಮಾಗಿ ರಸ್ತೆಯಲ್ಲಿ ಓಡಾಡುವ ಈ ವಾಹನವನ್ನು ಕಂಡರೆ ಗಾಬರಿಯಾಗಬೇಡಿ.
ಅನಿರುದ್ಧ್ ರವಿಶಂಕರ್ ಎಂಬ ಟ್ವಿಟರ್ ಬಳಕೆದಾರರು ವಿಚಿತ್ರವಾಗಿ ಕಾಣುವ, ಸ್ವಯಂ ಚಾಲಿತ ವಾಹನವು ಬೆಂಗಳೂರಿನ ರಸ್ತೆಗಳಲ್ಲಿ ಸಂಚರಿಸುತ್ತಿರುವಾಗ ಅದರ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಾಹನವನ್ನು ಜನತೆ ಕುತೂಹಲದಿಂದ ನೋಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಟ್ವಿಟರ್ ನಲ್ಲಿ ಈ ವೀಡಿಯೊ 12,000 ಕ್ಕೂ ಹೆಚ್ಚು ಬಾರಿ ವೀಕ್ಷಣೆ ಪಡೆದುಕೊಂಡಿದೆ. ಕಾಮೆಂಟ್‌ಗಳ ವಿಭಾಗದಲ್ಲಿ, ಜನರು ವಿಚಿತ್ರವಾಗಿ ಕಾಣುವ ಕಾರಿನ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಭಾರತದ ಸೈಬರ್ ಟ್ರಕ್ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನಂತರ ಇದನ್ನು zPod ವಾಹನ ಎಂದು ಗುರುತಿಸಲಾಗಿದೆ. ಇದು ಮುಂದಿನ ತಲೆಮಾರಿನ ವಾಹನ ಎಂದು ಗುರುತಿಸಲಾಗಿದೆ.
On the streets of Bengaluru. @peakbengaluru pic.twitter.com/VtahXpa6Mh
— anirudh ravishankar (@anrdh89) July 22, 2023
ಭಾರತದ ಮೊದಲ ಸ್ವಯಂಚಾಲಿತ ವಾಹನ
ಝಡ್‌ಪಾಡ್ ವಾಹನ ಎನ್ನುವುದು ಬೆಂಗಳೂರು ಮೂಲದ ಮೈನಸ್ ಝೀರೋ ಎಂಬ ಸ್ಟಾರ್ಟಪ್‌ನ ಕನಸಿನ ಕೂಸು. ಕೃತಕ ಬುದ್ಧಿಮತ್ತೆ (AI) ಸಂಸ್ಥೆಯು ಅಭಿವೃದ್ಧಿಪಡಿಸಿದ ಸಂಪೂರ್ಣ ಸ್ವಯಂ-ಚಾಲನಾ ತಂತ್ರಜ್ಞಾನವನ್ನು ಪ್ರದರ್ಶಿಸುವ ಭಾರತದ ಮೊದಲ ಸ್ವಾಯತ್ತ ವಾಹನ ಎಂದು ಇದನ್ನು ಗುರುತಿಸಲಾಗಿದೆ.
ಕಳೆದ ಕೆಲವು ದಿನಗಳಲ್ಲಿ ಫ್ರೇಸರ್ ಟೌನ್ ಬಳಿ ಎರಡು ಬಾರಿ ಈ ವಾಹನ ಕಾಣಿಸಿಕೊಂಡಿದೆ ಮತ್ತು ಸ್ಟಾರ್ಟ್ಅಪ್ ಕಂಪನಿ ಸಾರ್ವಜನಿಕ ರಸ್ತೆಗಳಲ್ಲಿ ವಾಹನವನ್ನು ಪರೀಕ್ಷಿಸುತ್ತಿದೆ ಎಂದು ಬೆಂಗಳೂರು ನಿವಾಸಿಗಳು ಹೇಳುತ್ತಾರೆ.
zPod ನಾಲ್ಕು ಆಸನಗಳ ಎಲೆಕ್ಟ್ರಿಕ್ ವಾಹನವಾಗಿದ್ದು, ಇದು ಡ್ಯಾಶ್‌ಬೋರ್ಡ್ ಅಥವಾ ಸ್ಟೀರಿಂಗ್ ವೀಲ್‌ನಂತಹ ಸಾಂಪ್ರದಾಯಿಕ ಕಾರಿನ ಯಾವುದೇ ವೈಶಿಷ್ಟ್ಯಗಳನ್ನು ಹೊಂದಿಲ್ಲ. ಬದಲಾಗಿ, ಇದು ಟ್ರಾಫಿಕ್ ಅನ್ನು ನ್ಯಾವಿಗೇಟ್ ಮಾಡಲು ಕೃತಕ ಬುದ್ಧಿಮತ್ತೆ ಮತ್ತು ಅದರ ಕ್ಯಾಮೆರಾಗಳನ್ನು ಅವಲಂಬಿಸಿದೆ. ಮೈನಸ್ ಝೀರೋ ಹೇಳುವಂತೆ ಈ ವಾಹನವನ್ನು ನಿರ್ವಹಿಸಲು ಯಾವುದೇ ಮಾನವ ಅಗತ್ಯವಿಲ್ಲ.
ರಸ್ತೆ ಅಪಘಾತ ಕಡಿಮೆ ಮಾಡಲು ಯತ್ನ
ಕಂಪನಿಯ ವೆಬ್‌ಸೈಟ್‌ನಲ್ಲಿ, ಈ ವಾಹನ ಟ್ರಾಫಿಕ್ ದಟ್ಟಣೆ ಮತ್ತು ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ ಎಂದು ಹೇಳಿದೆ. ಇದರ zPod ಎರಡು ದಿಕ್ಕಿನಲ್ಲಿ ಸಂಚರಿಸುತ್ತದೆ ಮತ್ತು ಸ್ಟೀರಿಂಗ್‌ನ ಅಗತ್ಯ ಕೂಡ ಇರುವುದಿಲ್ಲ. ಇದರಿಂದ ನೀವು ಯೂ ಟರ್ನ್ ತೆಗೆದುಕೊಳ್ಳುವ ಅಗತ್ಯವಿಲ್ಲ, ಹಿಂದಕ್ಕೆ ಮುಂದಕ್ಕೆ ಚಲಿಸುತ್ತದೆ ಎಂದು ಹೇಳಿದೆ.
zPod ಆರು ಕ್ಯಾಮೆರಾಗಳನ್ನು ಬಳಸುತ್ತದೆ. ನಾಲ್ಕು ಅಕ್ಕ ಪಕ್ಕಗಳಲ್ಲಿ ಮತ್ತು ಎರಡು ಕ್ಯಾಮೆರಾ ಮುಂಭಾಗ ಮತ್ತು ಹಿಂಭಾಗದಲ್ಲಿ ಅಳವಡಿಸಲಾಗಿದೆ. ಈ ಕ್ಯಾಮೆರಾಗಳು, ಎಂಬೆಡೆಡ್ ಎಐ ಸಿಸ್ಟಮ್ ಜೊತೆಗೆ ಟ್ರಾಫಿಕ್ ಪರಿಸ್ಥಿತಿಗಳನ್ನು ವಿಶ್ಲೇಷಿಸಲು ಮತ್ತು ಅಡೆತಡೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.
"ಸಮಗ್ರ ಕ್ಯಾಮೆರಾ-ಸೆನ್ಸಾರ್ ಸೂಟ್‌ನೊಂದಿಗೆ ಸುಸಜ್ಜಿತವಾಗಿದೆ, zPod ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ಸೆರೆಹಿಡಿಯುತ್ತದೆ, ಎಂಬೆಡೆಡ್ ಕೃತಕ ಬುದ್ದಿಮತ್ತೆ (AI) ಸಿಸ್ಟಮ್‌ಗೆ ಡೇಟಾವನ್ನು ನೀಡುತ್ತದೆ. ಈ ತಂತ್ರಜ್ಞಾನವು ದೃಶ್ಯ ಮಾಹಿತಿಯನ್ನು ಪ್ರಕ್ರಿಯೆಗೊಳಿಸುತ್ತದೆ, ಸಂಚಾರ ದಟ್ಟಣೆಯನ್ನು ತಪ್ಪಿಸುವುದು, ವೇಗ ನಿಯಂತ್ರಣ ಮತ್ತು ನಿಖರವಾದ ನಿಲುಗಡೆ ಮಾಡುತ್ತದೆ" ಎಂದು ಸ್ಟಾರ್ಟ್ಅಪ್ ವಿವರಿಸುತ್ತದೆ. ವಸತಿ ಸಮುದಾಯಗಳು ಮತ್ತು ಕಾಲೇಜು ಕ್ಯಾಂಪಸ್‌ಗಳಂತಹ ನಿಯಂತ್ರಿತ ಪರಿಸರಗಳಿಗೆ ಈ ವಾಹನ ಸೂಕ್ತವಾಗಿದೆ.












Click it and Unblock the Notifications