Bengaluru Weather: ಮುಂದಿನ 3 ದಿನ ಮೈಕೊರೆವ ಚಳಿ ಎಚ್ಚರಿಕೆ, ಗರಿಷ್ಠ-ಕನಿಷ್ಠ ತಾಪಮಾನದ ಮುನ್ಸೂಚನೆ
ಬೆಂಗಳೂರು, ಜನವರಿ 23: ಐಟಿ ಕೇಂದ್ರ ಬೆಂಗಳೂರಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಕಂಡು ಬರುತ್ತಿರುವ ಚಳಿ ವಾತಾವರಣದಿಂದ ಜನರು ತತ್ತರಿಸಿದ್ದಾರೆ. ಸಂಜೆಯಾದರೆ ಸಾಕು ವಿಪರೀತ ಚಳಿ ದಾಖಲಾಗುತ್ತಿದೆ. ವಿವಿಧ ಬಡಾವಣೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಕುಸಿತ ಕಂಡು ಬಂದಿದೆ. ಇತ್ತೀಚೆಗೆ ಮಳೆಯಾದ ದಿನದಿಂದ ಇನ್ನೂವರೆಗೂ ಚಳಿ, ದಟ್ಟ ಮಂಜಿನ ವಾತಾವರಣ ದಾಖಲಾಗುತ್ತಿದೆ. ಇದು ಮುಂದಿನ ಮೂರು ದಿನ ಮುಂದಿವರೆಯುವ ನಿರೀಕ್ಷೆಗಳು ಇವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು ನಗರಾದ್ಯಂತ ಚಳಿ ಆವರಿಸಿಕೊಂಡಿದ್ದು, ಕೆಲವು ದಿನಗಳಿಂದ ಸಂಜೆ ಮತ್ತು ರಾತ್ರಿ ಆದರೆ ಸಾಕು ಇನ್ನಿಲ್ಲದಂತೆ ಚಳಿ ಬಾಧಿಸುತ್ತಿದೆ. ತಾಪಮಾನದಲ್ಲಿ ಇಳಿಕೆ ಆಗಿದ್ದು, ಈ ಚಳಿ ಮತ್ತು ಮಂಜಿನ ಪ್ರಭಾವ ಇಷ್ಟಕ್ಕೆ ಮುಗಿಯದೇ ಮುಂದಿನ ಮೂರು ದಿನಗಳ ಕಾಲ ಮುಂದುವರಿಯಲಿದೆ.

ನಗರದಲ್ಲಿ ಸಂಜೆ 6 ಗಂಟೆ ನಂತರ ನಿಧಾನವಾಗಿ ಚಳಿ ಆವರಿಸುತ್ತದೆ. ನಸುಕಿನ ಜಾವ ಮೈಕೊರೆವ ಚಳಿ ಕಂಡು ಬರುತ್ತಿದ್ದು, ಬೆಳಗ್ಗೆ 9 ಗಂಟೆ ಆದರೂ ಇನ್ನೂ ಚಳಿ ಅನುಭವ ಆಗುತ್ತಿದೆ. ಆಗಾಗ ತಾತ್ಕಾಲಿಕವಾಗಿ ಬಂದು ಹೋಗುವ ಮಳೆಯ ಮಧ್ಯೆ ಮಂಜಿನ ವಾತಾವರಣ, ಚಳಿ ಜನರ ನಿದ್ದೆಗೆಡಿಸಿದೆ. ಇದಲ್ಲದೇ ಮಧ್ಯಾಹ್ನ ನಗರಾದ್ಯಂತ ಶುಷ್ಕ ವಾತಾವರಣ ದಾಖಲಾಗುತ್ತಿದೆ.
ಮುಂದಿನ ಮೂರು ದಿನ ನಗರದಲ್ಲಿ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ 28-29 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂಬ ಮುನ್ಸೂಚನೆ ಇದೆ. ಈ ವೇಳೆ ಬೆಳಗ್ಗೆ ಮತ್ತು ರಾತ್ರಿ ಮಂಜು ಕವಿಯಲಿದೆ. ಕನಿಷ್ಠ ತಾಪಮಾನ ಮತ್ತಷ್ಟು ಕುಸಿತ ಕಾಣುವ ಸಾಧ್ಯತೆಯು ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂದು ಗುರುವಾರ (ಜನವರಿ 23) ಬೆಳಗ್ಗೆ 9 ಗಂಟೆ ಹೊತ್ತಿಗೆ ಬೆಂಗಳೂರು ಎಚ್‌ಎಎಲ್ ಏರ್‌ಪೋರ್ಟ್‌ನಲ್ಲಿ 16, ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ 17 ಮತ್ತು ಬೆಂಗಳೂರು ನಗರದಲ್ಲಿ 17.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಈ ಮೂರು ಸ್ಥಳಗಳಲ್ಲಿ ಗರಿಷ್ಠ ತಾಪಮಾನ 28-30 ಡಿಗ್ರಿ ಸೆಲ್ಸಿಯಸ್ ಇತ್ತು.
ರಾಜ್ಯಾದ್ಯಂ ಒಣಹವೆ-ಚಳಿ ದಾಖಲು
ಬೆಂಗಳೂರು ಮಾತ್ರವಲ್ಲದೇ, ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿದಿದೆ. ಚಳಿಯಲ್ಲಿ ಏರಿಳಿತ ಕಂಡು ಬರುತ್ತಿದೆ. ಎರಡು ದಿನ ಚಳಿ ಇದ್ದರೆ, ಮರು ದಿನ ವಿಪರೀತ ಬಿಸಲಿನ ಅನುಭವವಾಗುತ್ತಿದೆ. ಕೆಲವೊಮ್ಮೆ ರಾತ್ರಿ ಸೆಕೆ ಅನ್ನಿಸಿದರೆ, ಮರು ದಿನವೇ ಚಳಿಯ ಅನುಭವವಾಗುತ್ತಿದೆ.
ಚಿಕ್ಕಮಗಳೂರಿನಲ್ಲಿ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬೆಳಗಾವಿ ವಿಮಾನ ನಿಲ್ದಾಣ, ಬೀದರ್,ವಿಜಯಪುರ ಜಿಲ್ಲೆಗಳಲ್ಲಿ ತಲಾ 12 ಡಿ.ಸೆ., ಭಾಗಲಕೋಟೆ, ಧಾರವಾಡ 13 ಡಿ.ಸೆ., ಹಾಸನ ಮತ್ತು ಚಿಂತಾಮಣಿ 14, ಗದಗ, ಹಾವೇರಿ, ಆಗುಂಬೆ, ಮಂಡ್ಯ, ಮಡಿಕೇರಿ, ಮೈಸೂರು ಮತ್ತು ಶಿವಮೊಗ್ಗ ದಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದೇ ರೀತಿ ಮುಂದಿನ ಕೆಲವು ದಿನಗಳ ಕಾಲ ರಾಜ್ಯದಲ್ಲಿ ಚಳಿ, ಶುಷ್ಕ ವಾತಾವರಣ ಮುಂದುವರಿಯಲಿದೆ ಎಂದು ಭಾರತೀಯ ಹಾವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications