Bengaluru WFH: ಮನೆ - ಆಫೀಸ್ ಕೆಲಸದ ಸಂಕಷ್ಟದಲ್ಲಿ ಮಗು ಕಳೆದುಕೊಂಡ ತಾಯಿ, ನೊಂದು ಆತ್ಮಹತ್ಯೆ
Bengaluru WFH: ಬೆಂಗಳೂರಿನಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದ್ದು, ಸಣ್ಣ ಮಗುವೊಂದು ಮೃತಪಟ್ಟಿದೆ. ಮಗುವಿನ ಸಾವನ್ನು ನೋಡಿ ತಾಯಿ ಸಹ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಣ್ಣ ಮಕ್ಕಳನ್ನು ನೋಡಿಕೊಳ್ಳುವುದು ಸವಾಲು. ಮಕ್ಕಳನ್ನು ಒಂದೆರಡು ಕ್ಷಣಗಳು ಬಿಟ್ಟರೂ ಸಹ ದೊಡ್ಡ ಅನಾಹುತಗಳನ್ನು ಮಾಡಿಕೊಳ್ಳುವ ಅಪಾಯವಿರುತ್ತದೆ. ಇದೀಗ ಬೆಂಗಳೂರಿನಲ್ಲೂ ಅಂತಹ ಘಟನೆಯೊಂದು ನಡೆದಿದೆ. ಮನೆಯಲ್ಲಿದ್ದ ಬಕೆಟ್ ನೀರಿನಲ್ಲಿ ಮುಳುಗಿದ ಮಗುವೊಂದು ಮೃತಪಟ್ಟಿದೆ. ಮಗುವಿನ ಸಾವಿಗೆ ನಾನೇ ಕಾರಣ ಎಂದು ನೊಂದ ತಾಯಿಯೂ ಸಹ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆಲಸ ಮುಗಿಸಿ ಮನೆಗೆ ಹಿಂದಿರುಗಿ ಬಂದ ಪತಿಯು ಇದನ್ನೆಲ್ಲ ನೋಡಿ ಆಘಾತಕ್ಕೆ ಒಳಗಾಗಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಚಂದ್ರಾಲೇಔಟ್ ಪೊಲೀಸ್ ಠಾಣಾದಲ್ಲಿ ಪ್ರಕರಣ ದಾಖಲಾಗಿದೆ.
ದುರಂತದಲ್ಲಿ ಮೃತಪಟ್ಟ ಮಹಿಳೆಯನ್ನು ಸಾಫ್ಟ್‌ವೇರ್ ಉದ್ಯೋಗಿ ಪ್ರತಿಭಾ (29) ಹಾಗೂ ಅವರ 11 ತಿಂಗಳ ಗಂಡು ಮಗು ಅಗಸ್ತ್ಯ ಎಂದು ಹೇಳಲಾಗಿದೆ. ಮಗು ಸಾವನ್ನಪ್ಪಿರುವುದು ಪ್ರತಿಭಾ ಅವರಿಗೆ ಆಘಾತವನ್ನುಂಟು ಮಾಡಿದೆ. ಪ್ರತಿಭಾ ಅವರು ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಗುರುವಾರ ಸಂಜೆ ಟೆರೇಸ್ ಮೇಲೆ ಒಣಗಲು ಹಾಕಿದ್ದ ಬಟ್ಟೆಗಳನ್ನು ತರುವುದಕ್ಕೆ ಹೋದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ.

ತಾಯಿ ಟೆರೇಸ್ ಮೇಲೆ ಒಣಗಿ ಹಾಕಿದ್ದ ಬಟ್ಟೆಯನ್ನು ತರುವುದಕ್ಕೆ ಹೋದ ಸಂದರ್ಭದಲ್ಲಿಯೇ ಮಗು ಆಟವಾಡಿಕೊಂಡು ಬಚ್ಚಲು ಮನೆಗೆ ಹೋಗಿದ್ದು, ನೀರು ತುಂಬಿದ್ದ ಬಕೆಟ್‌ನಲ್ಲಿ ಮುಳುಗಿ ಉಸಿರುಗಟ್ಟಿ ಸಾವನ್ನಪ್ಪಿದೆ. ಬಟ್ಟೆಗಳನ್ನು ತೆಗೆದುಕೊಂಡು ಕೆಳಗೆ ಬಂದಾಗ ಪ್ರತಿಭಾ ಅವರೊಗೆ ಮಗುವಿನ ಪರಿಸ್ಥಿತಿ ನೋಡಿ ದಿಕ್ಕೇ ತೋಚದಂತಾಗಿದೆ. ಮಗು ಮೃತಪಟ್ಟಿದೆ ಎನ್ನುವುದು ಖಚಿತವಾಗುತ್ತಿದ್ದಂತೆಯೇ ಪ್ರತಿಭಾ ಅವರು ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ. ಈ ವಿಷಯ ಅವರು ಬರೆದಿಟ್ಟ ಡೆತ್ ನೋಟ್‌ನಲ್ಲಿ ಬಹಿರಂಗವಾಗಿದೆ.
ಇನ್ನು ಪ್ರತಿಭಾ ಅವರು ಹಲವು ರೀತಿಯಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎನ್ನುವ ವಿಚಾರವು ಸಹ ಇದೀಗ ಬಹಿರಂಗವಾಗಿದೆ. ಮೊದಲು ಅವರು ಆತ್ಮಹತ್ಯೆಗೆ ಮಾತ್ರೆ ತೆಗೆದುಕೊಂಡಿದ್ದಾರೆ. ಇದಾದ ಮೇಲೆ ಕೈಕುಯ್ದುಕೊಂಡು ಆತ್ಮಹತ್ಯೆಗೆ ಶರಣವಾಗುವುದಕ್ಕೆ ಪ್ರಯತ್ನಿಸಿದ್ದಾರೆ. ಆದರೆ, ರಕ್ತ ಬರದೆ ಇರುವುದನ್ನು ನೋಡಿ ಕೊನೆಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾತ್ರಿ ಪ್ರತಿಭಾ ಅವರ ಪತಿ ಮಹಾಂತೇಶ್ ಅವರು ಕೆಲಸ ಮುಗಿಸಿಕೊಂಡು ಮನೆಗೆ ಬಂದ ಸಂದರ್ಭದಲ್ಲಿ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ತಮ್ಮ ಬಳಿಯಿದ್ದ ಮತ್ತೊಂದು ಕೀಲಿಯಿಂದ ಬಾಗಿಲು ತೆರೆದು ಒಳಹೋದಾಗ ಪ್ರತಿಭಾ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಕಾಣಿಸಿದ್ದಾರೆ. ಮಗು ಹಾಸಿಗೆಯ ಮೇಲೆ ಮಲಗಿದ ಸ್ಥಿತಿಯಲ್ಲಿತ್ತು ಎಂದು ಹೇಳಲಾಗಿದೆ.
ಡೆತ್‌ನೋಟ್ ಬರೆದಿಟ್ಟಿದ್ದ ಪ್ರತಿಭಾ
ಮನೆಗೆ ಬಂದ ಕೂಡಲೇ ಪತಿಗೆ ದಿಕ್ಕೇ ತೋಚದಂತಾಗಿದೆ. ಪತ್ನಿ ಯಾಕೆ ಆತ್ಮಹತ್ಯೆ ಮಾಡಿಕೊಂಡರು ಏನಾಯ್ತು ಎಂದು ತಿಳಿಯದೆ ಕಣ್ಣೀರಾಗಿದ್ದಾರೆ. ಸ್ಥಳದಲ್ಲೇ ಸಿಕ್ಕ ಡೆತ್ ನೋಟ್ ನೋಡಿದ ಮೇಲೆ ಪ್ರತಿಭಾ ಅವರು ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ತಿಳಿದಿದೆ. ಪ್ರತಿಭಾ ಅವರು ಬರೆದಿಟ್ಟ ಡೆತ್‌ನೋಟ್‌ನಲ್ಲಿ ನನ್ನ ಮಗುವಿನ ಸಾವಿಗೆ ನಾನೇ ಕಾರಣವಾದೆ, ಅವನನ್ನು ನನ್ನಿಂದ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ನಾನು ಸಹ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆಯಲಾಗಿದೆ. ನೇಣಿಗೆ ಶರಣಾಗುವುದಕ್ಕೂ ಮುಂಚೆ ಪ್ರತಿಭಾ ಅವರು 15 ಮಾತ್ರೆಗಳನ್ನು ನುಂಗಿದ್ದರು, ಕೈ ಕುಯ್ದುಕೊಂಡು ಸಾಯುವುದಕ್ಕೆ ಪ್ರಯತ್ನ ಮಾಡಿದ್ದರು ಎಂದೂ ಹೇಳಲಾಗಿದೆ. ಚಂದ್ರಾಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆ - ಕಚೇರಿ ಕೆಲಸ ನಿಭಾಯಿಸುವ ಸವಾಲು
ಇನ್ನು ಮನೆ ಹಾಗೂ ಕಚೇರಿ ಕೆಲಸವನ್ನು ನಿಭಾಯಿಸುವುದು ಹಲವರಿಗೆ ಸವಾಲಾಗಿದೆ ಪರಿಣಮಿಸಿದೆ ಎನ್ನುವುದು ಈ ಪ್ರಕರಣ ಮೂಲಕ ಹೆಚ್ಚು ಚರ್ಚೆಗೂ ಕಾರಣವಾಗಿದೆ.












Click it and Unblock the Notifications