Bengaluru Weather: ನಗರಕ್ಕೆ ಇಂದು ಭಾರೀ ಮಳೆ, ಯೆಲ್ಲೋ ಅಲರ್ಟ್; ಮುಂದಿನ 3 ದಿನ ಹೇಗಿರಲಿದೆ ಹವಾಮಾನ?
ಬೆಂಗಳೂರು: ಹಿಂಗಾರು ಮಳೆ ಸಕ್ರಿಯವಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಒಂದೆರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. 24 ಗಂಟೆಗಳಿಂದ ನಗರದಲ್ಲಿ ಜಿಟಿ ಜಿಟಿ ರೂಪದಲ್ಲಿರುವ ಈ ಮಳೆ ಇಂದು ಶನಿವಾರ (ಅ.24) ಸಂಜೆ ಹೊತ್ತಿಗೆ ವಿವಿಧ ಕಡೆಗಳಲ್ಲಿ ಜೋರು ಮಳೆ ಆಗಿದ್ದು, ಈ ಮಳೆ ತಡರಾತ್ರಿವರೆಗೂ ಮುಂದುವರಿಯುವ ನಿರೀಕ್ಷೆ ಇದೆ. ಗುಡುಗು ಸಹಿತ ಭಾರೀ ಮಳೆ ಕಾರಣಕ್ಕೆ ಇಂದು ಬೆಂಗಳೂರು ನಗರ ಜಿಲ್ಲೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮುಂದಿನ ಮೂರು ದಿನ ಹೇಗಿರುತ್ತೆ? ನಗರದ ಹವಾಮಾನ...
ನಗರಾದ್ಯಂತ ಮೋಡ ಕವಿದ ಮಬ್ಬು ವಾತಾವರಣ ಸೃಷ್ಟಿ ಜೊತೆಗೆ ಆಗಾಗ ಹನಿ ಹನಿ ಮಳೆ ಬರುತ್ತಲೇ ಇದೆ. ಕೆಲವೆಡೆ ಜೋರು ಮಳೆಯು ಆಗುತ್ತಿದೆ. ಕೋರಮಂಗಲ, ಎಲೆಕ್ಟ್ರಾನಿಕ್ ಸಿಟಿ, ದೊಮ್ಮಲೂರು, ಡೈರಿ ವೃತ್ತ, ಮೆಜೆಸ್ಟಿಕ್, ವಿಜಯನಗರ, ಕೆಂಗೇರಿ, ಹೆಬ್ಬಾಳ, ಯಲಹಂ ಹಾಗೂ ನಗರದ ಪ್ರಮುಖ ಬಡಾವಣೆಗಳಲ್ಲಿ ಹಗುರದಿಂದ ಸಾಧಾರಣ ಮಲೆ ಆಗಿದೆ. ಮಳೆಗೆ ಪ್ರಮುಖ ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡಚರಣೆ ಉಂಟಾಗುತ್ತಿದೆ. ಮುಂದಿನ ಮೂರು ದಿನ ಅಕ್ಟೋಬರ್ 27ರವರೆಗೆ ಇದೇ ರೀತಿ ಹಗುರದಿಂದ ಸಾಧಾರಣ ಮಳೆ ಸುರಿಯಲಿದೆ.

ಬೆಂಗಳೂರಿನ ತಾಪಮಾನದಲ್ಲಿ ಇಳಿಕೆ
ಮಳೆಗಾದಲ್ಲೂ ಬಿಸಿಲಿನಂತಹ ವಾತಾವರಣ ಕಂಡು ಬರುತ್ತಿದ್ದ ಬೆಂಗಳೂರಿನಲ್ಲಿ ಹಿಂಗಾರು ಮಳೆ ಸಕ್ರಿಯವಾಗುತ್ತಿದ್ದಂತೆ ತಾಪಮಾನದಲ್ಲಿ ಇಳಿಕೆ ಆಗಿದೆ. ಇಂದು ಗರಿಷ್ಠ 27 ಡಿಗ್ರಿ ಸೆಲ್ಸಿಯಸ್, ಕನಿಷ್ಟ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಮುಂದಿನ ಮೂರು ದಿನಗಳಲ್ಲಿ ಹಗುರ ಮಳೆಯ ಜೊತೆಗೆ ಆಗಾಗ ಬಿಸಿಲಿನ ವಾತಾವರಣ ನಿರ್ಮಾಣವಾಗಬಹುದು. ಗರಿಷ್ಠ ತಾಪಮಾನ 28 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ತಿಳಿಸಿದೆ.
ಹುಬ್ಬಳ್ಳಿ, ಹಾವೇರಿ, ರಾಯಚೂರಲ್ಲೂ ಮಳೆ
ಮಳೆ ಆಗದೇ ಬರಗಾಲ ಎದುರಿಸಿದ್ದ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ವ್ಯಾಪ್ತಿಯಲ್ಲಿ ಹಿಂಗಾರು ಧಾರಾಕಾರ ಮಳೆ ಸುರಿಸಿದೆ. ಇದರಿಂದಾಗಿ ಜೋಳ, ಸೂರ್ಯಕಾಂತಿ, ಸಜ್ಜೆ, ಕಡಲೆ ಸೇರಿದಂತೆ ಇನ್ನಿತರ ಹಿಂಗಾರು ಬಿತ್ತನೆ ಮಾಡಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ರಾಯಚೂರಲ್ಲಿ ಶುಕ್ರವಾರ ಭಾರೀ ಮಳೆ ಆಗಿದ್ದು, ರೈತರು ಫುಲ್ ಖುಷ್ ಆಗಿದ್ದಾರೆ. ಹುಬ್ಬಳ್ಳಿಯಲ್ಲಿ ಸುರಿದ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ನಿಂತು ಸಮಸ್ಯೆ ಆಗಿದೆ. ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಕಾಮಗಾರಿ ನಡೆಯುತ್ತಿರುವಂತೆ ಭಾರೀ ಸಂಚಾರ ಅಡಚಣೆ ಆಗಿದ್ದು ಕಂಡು ಬಂತು.
ಕರಾವಳಿ, ಒಳನಾಡು ಜಿಲ್ಲೆಗಳಲ್ಲಿ ಭಾರೀ ಮಳೆ
ರಾಜ್ಯದ ಕರಾವಳಿ ಭಾಗದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ, ಚಿಕ್ಕಮಗಳೂರು, ಚಾಮರಾಜನಗರ, ಮಂಡ್ಯ, ಮದ್ದೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆ ಆಗಲಿದ್ದು, ಇಂದು ನಾಳೆ ಯೆಲ್ಲೋ ಅಲರ್ಟ್ ನೀಡಲಾಗಿದೆ.


Click it and Unblock the Notifications
