Bengaluru Rain: ಜೋರು ಮಳೆಗೆ ತತ್ತರಿಸಿದ ಬೆಂಗಳೂರು, ಇನ್ನೆಷ್ಟು ದಿನ ಅಲರ್ಟ್?
ಬೇಸಿಗೆಯ ಬಿರುಬಿಸಿಲಿನಿಂದ ಬೇಯುತ್ತಿದ್ದ ಬೆಂಗಳೂರಿಗೆ ವರುಣನ ಸಿಂಚನವಾಗಿದೆ. ಮಳೆಯಿಂದ ವೆದರ್ ತಂಪಾಯಿತಲ್ಲ? ಎಂದು ಜನ ಕೂಲ್ ಆಗುವಷ್ಟರಲ್ಲಿ ವರುಣ ತನ್ನ ಪ್ರತಾಪ ತೋರಿದ್ದಾನೆ. ಮೊದಲಿಗೆ ಸಣ್ಣಮಳೆಯಾಗಿ ನಗರಕ್ಕೆ ಎಂಟ್ರಿ ಕೊಟ್ಟು ಗಂಟೆಗಟ್ಟಲೆ ಸುರಿದು ಸಿಟಿ ಮಂದಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಶನಿವಾರ ಸಂಜೆಯಿಂದ ಶುರುವಾದ ಮಳೆ ಬಳಿಕ ಧಾರಾಕಾರವಾಗಿ ಸುರಿದಿದೆ. ಮಳೆಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ನೀರು ಹರಿದು ವಾಹನ ಸಂಚಾರಕ್ಕೂ ಕೂಡ ಭಾರಿ ತಲೆನೋವಾಗಿದೆ. ಬೆಂಗಳೂರಿನಲ್ಲಿ ಇನ್ನೂ ಎಷ್ಟು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನೀಡಿರುವ ಮಾಹಿತಿ ಇಲ್ಲಿದೆ ತಿಳಿಯಿರಿ..
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕಲಬುರಗಿ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ಯಾದಗಿರಿಯ ಪ್ರತ್ಯೇಕ ಸ್ಥಳಗಳಲ್ಲಿ ಇಂದು ಮತ್ತು ನಾಳೆ ಗುಡುಗು ಸಹಿತ ಮಳೆ ಭಾರಿ ಮಳೆಯಾಗುವ ಸಾಧ್ಯತೆ. ಬೆಂಗಳೂರಿನ ಹೆಬ್ಬಾಳ, ನಾಗವಾರ, ಆರ್.ಟಿ ನಗರ, ಮಾನ್ಯತಾ ಟೆಕ್ ಪಾರ್ಕ್, ಮೇಖ್ರಿ ಸರ್ಕಲ್, ಸದಾಶಿವನಗರ, ಟೌನ್ಹಾಲ್, ಯಲಹಂಕ, ಕೆಆರ್ ಮಾರ್ಕೆಟ್, ಮೆಜೆಸ್ಟಿಕ್, ಹೆಣ್ಣೂರು, ಟಿನ್ ಫ್ಯಾಕ್ಟರಿ, ಕೆಆರ್ ಪುರ, ಯಲಹಂಕ, ಕಲ್ಯಾಣನಗರ, ವಿಧಾನಸೌಧ, ಕೆ.ಆರ್.ಸರ್ಕಲ್, ಕಾರ್ಪೋರೇಷನ್, ಜೆ.ಪಿ.ನಗರ, ಜಯನಗರ, ವಿಜಯನಗರ, ಯಶವಂತಪುರ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಹಲವೆಡೆ ಭಾರಿ ಮಳೆ ವರದಿಯಾಗಿದೆ. ಮಳೆಯ ಹಿನ್ನೆಲೆ ವಿಮಾನಗಳ ಸಂಚಾರಕ್ಕೂ ಸಮಸ್ಯೆ ಉಂಟಾಗಿ ಹಾರಾಟದಲ್ಲಿ ವ್ಯತ್ಯಯವಾಗಿತ್ತು.

ಮಳೆಯಿಂದ ಎಲ್ಲೆಲ್ಲಿ ಅವಾಂತರ?
ಭಾರಿ ಮಳೆಯಿಂದ ಯಲಹಂಕ ಕಾಫಿ ಡೇ ಬಳಿ ಮಳೆ ನೀರು ನಿಂತಿರುವುದರಿಂದ ವಿಮಾನ ನಿಲ್ದಾಣ ರಸ್ತೆಯ ಕಡೆಗೆ ನಿಧಾನಗತಿಯ ಸಂಚಾರವಿತ್ತು. ರಾಮಮೂರ್ತಿ ನಗರದ ಆಂಡರ್‌ಪಾಸ್‌ನಲ್ಲೂ ಮಳೆ ನೀರು ನಿಂತು ಟಿನ್ ಫ್ಯಾಕ್ಟರಿ ಕಡೆಗೆ ಸಂಚಾರ ಕಷ್ಟವಾಗಿತ್ತು. ಹುಣಸಮಾರನಹಳ್ಳಿ ಬಳಿ ಮಳೆ ನೀರು ನಿಂತ ಕಾರಣ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಕಡೆಗೆ ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು. ರೂಪೇನ ಅಗ್ರಹಾರ ಬಳಿಯೂ ಭಾರಿ ಮಳೆಯಿಂದ ನೀರು ನಿಂತು ಹೊಸೂರು ರಸ್ತೆ ಕಡೆಗೆ ನಿಧಾನಗತಿಯ ಸಂಚಾರ ಕಂಡುಬಂತು.
ಕೊಡಿಗೇಹಳ್ಳಿ ಮೇಲ್ಸೇತುವೆ ಬಳಿ ಮಳೆ ನೀರು ನಿಂತು ವಿಮಾನ ನಿಲ್ದಾಣದ ಕಡೆಗೆ ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು. ವಿದ್ಯಾಶಿಲ್ಪ ಕಡೆಯಿಂದ ವಿಮಾನ ನಿಲ್ದಾಣದ ಕಡೆಗೆ, ಫಾರೆಸ್ಟ್ ಆಫೀಸ್‌ನಿಂದ ಹೆಬ್ಬಾಳದ ಕಡೆಗೆ, ಸರ್ಜಾಪುರದಿಂದ ಕೊಡತಿ ಗೇಟ್ ಕಡೆಗೆ, ಹೆಣ್ಣೂರು ಜಂಕ್ಷನ್‌ನಿಂದ ನಾಗವಾರದ ಕಡೆಗೂ ಮಳೆ ನೀರು ನಿಂತು ಟ್ರಾಫಿಕ್ ಜಾಮ್ ಅಧಿಕವಾಗಿತ್ತು. ರಾತ್ರಿಯಿಡೀ ಬಿಡುವಿಲ್ಲದೆ ಮಳೆಯಾಗಿದ್ದು, ಇಂದು ಕೂಡ ಮಳೆ ಮುಂದುವರಿಯಲಿದೆ.

ಬೆಂಗಳೂರು ನಗರ ಪ್ರದೇಶದಲ್ಲಿ ಇಂದು ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಸಾಧಾರಣ ಅಥವಾ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಗರಿಷ್ಠ ತಾಪಮಾನವು ಕ್ರಮವಾಗಿ 33 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್‌ವರೆಗೆ ಇರಲಿದೆ. ಮುಂದಿನ ಎರಡು ದಿನಗಳ ಕಾಲ ಭಾಗಶಃ ಮೋಡ ಕವಿದ ವಾತಾವರಣದೊಂದಿಗೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಹೇಳಿದೆ.












Click it and Unblock the Notifications