Bengaluru Weather: ಬೆಂಗಳೂರಲ್ಲಿ ಮಳೆ ಬರ್‌ಬೋದು, ಚಳಿ ಇನ್ನೂ ಜಾಸ್ತಿ ಆಗ್ಬೋದು; ಬೆಚ್ಚಗೆ ಮನೇಲಿದ್ದು ಏನ್ ಮಾಡ್ಬೋದೋ ನೋಡಿ
ಬೆಂಗಳೂರು: ನಮ್ಮ ಬೆಂಗಳೂರಿನ ವೆದರ್ ಅಂದ್ರೆ ನಿಜಕ್ಕೂ ವಿಚಿತ್ರ. ಯಾವಾಗ ಮಳೆ ಬರುತ್ತೋ, ಯಾವಾಗ ಚಳಿ ನಡುಗಿಸುತ್ತೋ, ಯಾವಾಗ ಬಿಸಿಲು ಸುಡುತ್ತೋ ಅಂತ ಊಹೆ ಮಾಡೋಕೂ ಆಗಲ್ಲ. ಆ ರೀತಿಯ ಹವಾಮಾನ್ಯ ವೈಪರೀತ್ಯದಿಂದ ಕೂಡಿದ ನಮ್ಮ ಬೆಂಗಳೂರು. ಒಂದೆರಡು ದಿನ ಚಳಿಯ ಕಾಟ ತಪ್ಪಿತು ಅಂತ ನಿಟ್ಟುಸಿರುಬಿಡುವಷ್ಟರಲ್ಲಿ ಮೈ ಗಡಗಡ ನಡುಗುತ್ತೆ. ಈ ಬಾರಿ ಚಳಿಗಾಲದ ಸ್ಥಿತಿ ಅಕ್ಷರಶಃ ಇದೇ ರೀತಿ ಇದೆ. ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ ತಾಪಮಾನದಲ್ಲಿ ಗಮನಾರ್ಹ ಕುಸಿತ ಕಂಡುಬಂದಿದ್ದು, ವೀಕೆಂಡ್‌ನಲ್ಲಿ ಮಳೆ ಕೂಡ ಬರಬಹುದು ಎನ್ನುತ್ತಿದೆ ಹವಾಮಾನ ಇಲಾಖೆ.
ನಗರದಾದ್ಯಂತ ಕಳೆದ ಎರಡು ದಿನಗಳಿಂದ ಮುಂಜಾನೆ ಮತ್ತು ತಡರಾತ್ರಿ ಚಳಿ ವಾತಾವರಣ ನಿರ್ಮಾಣವಾಗಿದೆ. ಭಾರತದ ಹವಾಮಾನ ಇಲಾಖೆಯ (ಐಎಂಡಿ) ಮೂರು ಪ್ರಮುಖ ವೀಕ್ಷಣಾಲಯಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಇಳಿಕೆಯಾಗಿದ್ದು, ಈ ಸಮಯದಲ್ಲಿ ಸಾಮಾನ್ಯಕ್ಕಿಂತ ತಂಪಾಗಿರುವ ವಾತಾವರಣ ಇರುವ ಮುನ್ಸೂಚನೆ ನೀಡಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಕನಿಷ್ಠ ತಾಪಮಾನ 13.2 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದು, ಇದು ಸಾಮಾನ್ಯಕ್ಕಿಂತ ಸುಮಾರು 1.2 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ. ಗರಿಷ್ಠ ತಾಪಮಾನ 25.6 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಈ ಋತುಮಾನದ ಸರಾಸರಿಗಿಂತ 2 ಡಿಗ್ರಿವರೆಗೆ ಕುಸಿತ ಕಂಡಿದೆ. ಬೆಂಗಳೂರಿನ ಪೂರ್ವದ ಎಚ್‌ಎಎಲ್ ವಿಮಾನ ನಿಲ್ದಾಣದ ಹವಾಮಾನ ಕೇಂದ್ರವು ತಂಪಾದ ಹವಾಮಾನವನ್ನು ವರದಿ ಮಾಡಿದೆ. ಕನಿಷ್ಠ ತಾಪಮಾನವು 14.4 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ ತಾಪಮಾನ 26.1 ಡಿಗ್ರಿ ಸೆಲ್ಸಿಯಸ್ ಆಗಿದೆ. ಕ್ರಮವಾಗಿ 1.3 ಡಿಗ್ರಿ ಸೆಲ್ಸಿಯಸ್ ಕುಸಿತ ಕಂಡುಬಂದಿದೆ.
ತಾಪಮಾನ ಕುಸಿತಕ್ಕೆ ಕಾರಣವೇನು?
ನಗರದ ಮಧ್ಯ ಭಾಗದಲ್ಲಿರುವ ಬೆಂಗಳೂರು ನಗರ ವೀಕ್ಷಣಾಲಯವು ಕನಿಷ್ಠ 14.9 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ 25.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನವನ್ನು ದಾಖಲಿಸಿದೆ. ಈ ಭಾಗದಲ್ಲಿ ತಾಪಮಾನ 1.1 ಡಿಗ್ರಿ ಸೆಲ್ಸಿಯಸ್‌ವರೆಗೆ ಕುಸಿದಿದೆ. ತಾಪಮಾನದಲ್ಲಿನ ಕುಸಿತವು ನೈಋತ್ಯ ಬಂಗಾಳಕೊಲ್ಲಿಯಲ್ಲಿ ಸುಮಾರು 13 ಕಿ.ಮೀ ವೇಗದಲ್ಲಿ ಪಶ್ಚಿಮ-ವಾಯುವ್ಯಕ್ಕೆ ಚಲಿಸುತ್ತಿದ್ದ ಆಳವಾದ ವಾಯುಭಾರ ಕುಸಿತಕ್ಕೆ ಸಂಬಂಧಿಸಿದೆ. ಜನವರಿ 8ರಂದು ಬೆಳಿಗ್ಗೆ ಇದು ವ್ಯವಸ್ಥೆಯು ಶ್ರೀಲಂಕಾದಿಂದ ಪೂರ್ವ-ಆಗ್ನೇಯಕ್ಕೆ ಸುಮಾರು 360 ಕಿ.ಮೀ ದೂರದಲ್ಲಿದೆ. ನೈರುತ್ಯ ಕೊಲ್ಲಿಯಾದ್ಯಂತ ಪಶ್ಚಿಮ-ವಾಯುವ್ಯಕ್ಕೆ ಚಲಿಸುವ ನಿರೀಕ್ಷೆಯಿದೆ ಎಂದು ಐಎಂಡಿ ಅಧಿಕಾರಿಗಳು ತಾಪಮಾನ ಕುಸಿತಕ್ಕೆ ಕಾರಣ ವಿವರಿಸಿದ್ದಾರೆ. ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಯು ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಾದ್ಯಂತ ವಾತಾವರಣದ ಪರಿಸ್ಥಿತಿಗಳ ಮೇಲೆ ಪ್ರಭಾವ ಬೀರುತ್ತಿದ್ದು, ಇದರ ಪರಿಣಾಮವಾಗಿ ತಂಪಾದ ತಾಪಮಾನ ಮತ್ತು ಮೋಡ ಕವಿದ ವಾತಾವರಣ ಹೆಚ್ಚಾಗಲಿದೆ.
ಮಳೆ ಸಾಧ್ಯತೆ
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಜನವರಿ 10 ಮತ್ತು 11ರಂದು ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ವ್ಯಾಪಕ ಮಳೆಯ ನಿರೀಕ್ಷೆಯಿಲ್ಲದಿದ್ದರೂ, ಅಲ್ಪಾವಧಿಯ ಮಳೆಯು ಚಳಿಗೆ ಕಾರಣವಾಗಬಹುದು ಮತ್ತು ಹಗಲಿನ ತಾಪಮಾನವನ್ನು ಕಡಿಮೆ ಮಾಡಬಹುದು. ಮುಂದಿನ ಕೆಲವು ದಿನಗಳಲ್ಲಿ ತಂಪಾದ ಬೆಳಿಗ್ಗೆ, ಆಹ್ಲಾದಕರ ಮಧ್ಯಾಹ್ನ ಮತ್ತು ಸ್ವಲ್ಪ ಚಳಿಯ ರಾತ್ರಿಗಳಿಗೆ ಸಿದ್ಧರಾಗಿರಲು ಹವಾಮಾನ ಅಧಿಕಾರಿಗಳು ನಿವಾಸಿಗಳಿಗೆ ಸಲಹೆ ನೀಡಿದ್ದಾರೆ. ಇದರ ಕಾರಣ ಬೆಂಗಳೂರಿನಲ್ಲಿ ವಿಶಿಷ್ಟವಾದ ಚಳಿಗಾಲದಂತಹ ಹವಾಮಾನ ಪರಿಸ್ಥಿತಿ ಮುಂದುವರಿಯಲಿದೆ. ಹೀಗಾಗಿ ಮನೆಯಿಂದ ಹೊರಬರುವ ಮುನ್ನ ಚಳಿ ಹಾಗೂ ಮಳೆಯ ಬಗ್ಗೆ ಎಚ್ಚರ ವಹಿಸುವಂತೆ ಸಲಹೆ ನೀಡಿದೆ.












Click it and Unblock the Notifications