Water Shutdown: ಬೆಂಗಳೂರು ಜಲಮಂಡಳಿ: ಈ ದಿನ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ
ಬೆಂಗಳೂರು, ಜೂನ್ 16: ಕಾವೇರಿ 5ನೇ ಕೊಳವೆ ಮಾರ್ಗಕ್ಕೆ ಹೊಸ 3000 ಮಿ.ಮೀ. ವ್ಯಾಸ ಕೊಳವೆ ಮಾರ್ಗದ ಜೋಡಣೆ ಮತ್ತು ವಿವಿಧ ವಾರ್ಷಿಕ/ನಿಯಮಿತ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ಈ ವಾರದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ದಿನಾಂಕ, ಸಮಯದ ವಿವರ ನೀಡಿರುವ ಬೆಂಗಳೂರು ಜಲಮಂಡಳಿಯು ನೀರಿನ ಸಂಗ್ರಹಕ್ಕೆ ಸೂಚನೆ ನೀಡಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ತಿಳಿಸಿರುವಂತೆ, ಜೂನ್ 19-06-2025 ಬೆಳಗ್ಗೆ, 6 ಗಂಟೆಯಿಂದ ದಿನಾಂಕ 20-06-2025ರ ಬೆಳಗ್ಗೆ 6 ಗಂಟೆಯವರೆಗೆ ಒಟ್ಟು 24 ಗಂಟೆಗಳು ಕಾವೇರಿ ನೀರು ಸರಬರಾಜು ಯೋಜನೆ ಹಂತ-1 ರಿಂದ ಹಂತ-5 ರದಿಂದ ಜಲರೇಚಕ ಯಂತ್ರಗಳನ್ನು (ನೀರು ಪಂಪಿಂಗ್) ಸ್ಥಗಿತಗೊಳಿಸಲಾಗುತ್ತಿದೆ.

ಬೃಹತ್ ಬೆಂಗಳೂರು ನಗರದ ಜನತೆಗೆ ಯಾವುದೇ ಅಡತಡೆಯಿಲ್ಲದೆ ನೀರನ್ನು ಸರಬರಾಜು ಮಾಡುತ್ತದೆ ಸದುದ್ದೇಶದಿಂದ ಟಿ.ಕೆ. ಹಳ್ಳಿಯಲ್ಲಿ ಕಾವೇರಿ 5ನೇ ಪೈಪ್ ಮಾರ್ಗಕ್ಕೆ ಹೊಸ 3000 ಮಿ.ಮೀ. ವ್ಯಾಸ ಕೊಳವೆ ಮಾರ್ಗದ ಜೋಡಣೆ ಮಾಡಲಾಗುತ್ತದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಸೂಚಿಸಿರುವ ವಿದ್ಯುತ್ ಸ್ಥಾವರಗಳ ವಾರ್ಷಿಕ ನಿರ್ವಹಣೆ, ತುರ್ತು ಕಾಮಗಾರಿ ಮತ್ತು ವಿವಿಧ ವಾರ್ಷಿಕ/ನಿಯಮಿತ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳಬೇಕಾಗಿದೆ.
ಈ ಕಾರಣದಿಂದ ಮೇಲೆ ತಿಳಿಸಿದ ದಿನಾಂಕಗಳಂದು (ಗುರುವಾರದಿಂದ ಶುಕ್ರವಾರ) ಒಟ್ಟು 24 ಗಂಟೆಗಳು ಕಾವೇರಿ ನೀರು ಸರಬರಾಜು ಯೋಜನೆ ಎಲ್ಲ ಹಂತದ ಜಲರೇಚಕ ಯಂತ್ರಗಳು ಸ್ಥಗಿತಗೊಳ್ಳಲಿವೆ. ಹೀಗಾಗಿ ಕಾವೇರಿ ನೀರು ಸರಬರಾಜು ಯೋಜನೆ ಹಂತ-1 ರಿಂದ ಹಂತ-5 ರಡಿ ವ್ಯಾಪ್ತಿಯಲ್ಲಿ ಸರಬರಾಜು ಆಗುವ ನೀರಿನಲ್ಲಿ ವ್ಯತ್ಯಯವಾಗಲಿದೆ. ಆದ್ದರಿಂದ ಬೆಂಗಳೂರು ಜನರು ಮತ್ತು ವಾಣಿಜ್ಯ/ಕೈಗಾರಿಕಾ ಪ್ರದೇಶಗಳಿಗೆ ಮುಂಜಾಗ್ರತೆಯಾಗಿ ನೀರನ್ನು ಸಂಗ್ರಹಣೆ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.












Click it and Unblock the Notifications