Bengaluru Water Issue: ಟ್ಯಾಂಕರ್ ನೀರಿಗೆ ದರ ನಿಗದಿ: ಉಲ್ಲಂಘಿಸಿದರೆ ಕ್ರಮ
ಬೆಂಗಳೂರು, ಫೆಬ್ರವರಿ 29: ಬೆಂಗಳೂರಿನಲ್ಲಿ ಕುಡಿಯುವ ಕಾವೇರಿ ನೀರಿಗೆ ಹಾಹಾಕಾರ ಶುರುವಾಗಿದೆ. ಜಲಮಂಡಳಿಗೆ ನೀರು ಪೂರೈಕೆಗೆ ಕೊರತೆ ಎದುರಾಗಿದ್ದು, ಇತ್ತ ಟ್ಯಾಂಕರ್ ನೀರು ಪೂರೈಕೆಯಲ್ಲಿ ಮಾಫಿಯಾ ಶುರುವಾಗಿದೆ ಎನ್ನಲಾಗಿದೆ. ಇದಕ್ಕೆಲ್ಲ ಬಿಬಿಎಂಪಿ ಹಾಗೂ ಬೆಂಗಳೂರು ಜಲಮಂಡಳಿ ಅಧಿಕಾರಿಗಳು ಮೂಗುದಾರ ಹಾಕಲು ನಿರ್ಧರಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಬೇಸಿಗೆಯಲ್ಲಿ ನೀರು ಪೂರೈಸುವ ಟ್ಯಾಂಕರ್‌ಗಳ ದರ ಕೆಲವೇ ದಿನಗಳಲ್ಲಿ ನಾಲ್ಕರಿಂದ ಐದು ಪಟ್ಟು ಹೆಚ್ಚಾಗಿದೆ. ನೀರಿಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಟ್ಯಾಂಕ್ ಮಾಫಿಯಾ ಹಾವಳಿ ಶುರುವಾಗಿದೆ. ಹೀಗಾಗಿ ಬಿಬಿಎಂಪಿ-ಜಲಮಂಡಳಿಯು ಟ್ಯಾಂಕರ್‌ಗೆ ಇಂತಿಷ್ಟು ಎಂದು ದರ ನಿಗದಿ ಮಾಡಲಿವೆ.

ಬೆಂಗಳೂರಿನಲ್ಲಿ ಒಟ್ಟು 3500 ನೀರಿನ ಟ್ಯಾಂಕರ್ ನೋಂದಣಿ ಆಗಿವೆ. ಬಿಬಿಎಂಪಿಯಲ್ಲಿ 60 ಟ್ಯಾಂಕರ್‌ಗಳೂ ವ್ಯಾಪಾರ ಪರವಾನಗಿ ಪಡೆದಿದ್ದಾರೆ. ನೀರಿನ ವ್ಯವಹಾರ ನಡೆಸುವ ಎಲ್ಲರಿಗೂ ನಗರಕ್ಕೆ ನೀರು ಪೂರೈಕೆಗಾಗಿ ನೋಂದಣಿಗೆ ಸರ್ಕಾರ ಅವಕಾಶ ಕಲ್ಪಿಸಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)- ಬೆಂಗಳೂರು ಜಲಮಂಡಳಿ ಅಧಿಕಾರಿಗಳು ಬೆಂಗಳೂರಲ್ಲಿನ ನೀರಿನ ಅಭಾವ ಕುರಿತು ಬುಧವಾರ ಸಭೆ ನಡೆಯಿತು. ಈ ವೇಳೆ ನೀರಿನ ಟ್ಯಾಂಕರ್ ದರ ನಿಗದಿಗೆ ಅಧಿಕಾರಿಗಳು ತೀರ್ಮಾನಿಸಿದರು.
ನಿಗದಿತ ದರಕ್ಕೆ ಹೆಚ್ಚಿನ ಹಣ ಪಡೆದರೆ ಕಾನೂನು ಕ್ರಮ
ದರ ನಿಗದಿ ಮಾಡಿದ ಬಳಿಕವೇ ಟ್ಯಾಂಕರ್ ಮಾಲೀಕರು ಹೆಚ್ಚಿನ ದರ ಪಡೆದರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಸೇರಿದಂತೆ ಇತರ ಕಾಯ್ದೆಯಡಿ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು. ಸದ್ಯ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ನಾಲ್ಕು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಸಮಸ್ಯೆ ಇರುವ ಸ್ಥಳಗಳನ್ನು ಗುರುತಿಸಿದ್ದು, ಟ್ಯಾಂಕರ್ ನೀರು ಒದಗಿಸಲು ಕ್ರಮ ಕೈಗೊಂಡಿದ್ದೇವೆ ಎಂದು ಜಲಮಂಡಳಿ (BWSSBP) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಮಸ್ಯೆಯ ಪರಿಹಾರಕ್ಕೆ 200 ನೀರಿನ ಟ್ಯಾಂಕರ್ ಬಳಕೆ
ಬೆಂಗಳೂರಿನ 110 ಹಳ್ಳಿಗಳು ಬರುವ 30 ವಾರ್ಡ್‌ಗಳಿಗೊಬ್ಬ ಸಹಾಯಕ ಇಂಜಿನಿಯರ್ ನೇಮಕ ಮಾಡಲಾಗುವುದು. ಜಿಲ್ಲಾಧಿಕಾರಿಗಳು,ಜಲಮಂಡಳಿ ಸಮ್ಮುಖದಲ್ಲಿ 200 ನೀರಿನ ಟ್ಯಾಂಕರ್ ಪಡೆದುಕೊಳ್ಳಲಾಗುವುದು. ಇದರಲ್ಲಿ ನೂರು ಟ್ಯಾಂಕ್‌ಗಳಿಂದ ನಗರದ ಜನರಿಗೆ ಮತ್ತು ಬಾಕಿ ಒಂದುನೂರು ಟ್ಯಾಂಕರ್‌ನಿಂದ 110 ಹಳ್ಳಿಗಳ ನೀರಿನ ಸಮಸ್ಯೆ ಪರಿಹಾರಾರ್ಥವಾಗಿ ನೀರು ಪೂರೈಕೆಗೆ ಬಳಕೆ ಮಾಡಿಕೊಳ್ಳಲಾಗುವುದು ಜಲಮಂಡಳಿ ತಿಳಿಸಿದೆ.

ಪ್ರಸ್ತುತದಲ್ಲಿ ಬೆಂಗಳೂರಿನಲ್ಲಿ 130 ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್. ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಜಳಮಂಡಳಿಯಿಂದ 10.84 ಲಕ್ಷ ನೀರಿನ ಸಂಪರ್ಕ ಹೊಂದಿವೆ. ನಗರದಲ್ಲಿ 10955 ಕೊಳವೆ ಬಾವಿಗಳಲ್ಲಿ 1214 ಕೊಳವೆ ಬಾವಿಗಳು ಬತ್ತಿದ್ದು, 3700 ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಈ ಸಂಬಂಧ ಸರಿಪಡಿಸಬಹುದಾದ ಕೊಳವೆ ಬಾವಿಗಳನ್ನು ಗುರುತಿಸಿ ಅಂತಹವುಗಳನ್ನು ಫ್ಲಷಿಂಗ್ ಹಾಗೂ ರೀಡ್ರಿಲ್ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದರು.
ಟ್ಯಾಂಕರ್ ದರ ಪಟ್ಟಿ
1000 ಲೀಟರ್ ನ ಟ್ಯಾಂಕರ್ ಬೆಲೆ- 238 ರೂಪಾಯಿ (ಕೆಲವೆಡೆ)
1500 ಲೀಟರ್ ನ ಟ್ಯಾಂಕರ್ ಬೆಲೆ- 1500 ರೂಪಾಯಿ (ಕೆಲ ದಿನಗಳ ಹಿಂದೆ)
1500 ಲೀಟರ್ ನ ಟ್ಯಾಂಕರ್ ಬೆಲೆ- 2850 ರೂಪಾಯಿ ಗೆ ಏರಿಕೆ (ಹಾಲಿ)












Click it and Unblock the Notifications