ಬೆಂಗಳೂರು ಉಬರ್ ಬೈಕ್ ಚಾಲಕನ ಮಾಸಿಕ ಸಂಬಳ ಕೇಳಿ ದಂಗಾದ ಐಟಿ ಉದ್ಯೋಗಿಗಳು; ನೆಟ್ಟಿಗರು ಹೇಳೋದೇನು?
ಬೆಂಗಳೂರು, ಡಿಸೆಂಬರ್, 07: ರಾಜ್ಯ ರಾಜಧಾನಿ ಬೆಂಗಳೂರಿನ ಯಾವುದೇ ಐಟಿ ಕಂಪನಿಯಲ್ಲಿ ಕೆಲಸ ಮಾಡುವ ಒಬ್ಬ ಸಾಮಾನ್ಯ ಉದ್ಯೋಗಿಯ ಸಂಬಳ 30-40,000 ರೂಪಾಯಿ ಇತ್ತಂದರೆ ಅದೇ ಹೆಚ್ಚು. ಅಂತಹದ್ದರಲ್ಲಿ ಇಲ್ಲೊಬ್ಬ ಉಬರ್ ಬೈಕ್ ಚಾಲಕ ತನ್ನ ತಿಂಗಳ ಸಂಬಳ ಬರೋಬ್ಬರಿ 80,000 ರೂಪಾಯಿ ಎಂದು ಹೇಳಿಕೊಂಡಿರುವ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ. ಹಾಗಾದರೆ ಇದಕ್ಕೆ ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ ಎಂದು ಇಲ್ಲಿ ತಿಳಿಯಿರಿ.
ಉಬರ್ ಚಾಲಕ ತನ್ನ ತಿಂಗಳ ಸಂಬಳದ ಬಗ್ಗೆ ಹೇಳಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಆತ ಪ್ರತಿ ತಿಂಗಳು ನಾನು 80,000 ರೂಪಾಯಿ ಹಣ ಸಂಪಾದಿಸುತ್ತೇನೆ. ಕೇವಲ ಉಬರ್ ಬೈಕ್ ಚಾಲನೆ ಮಾಡುವುದರಿಂದ ಇಷ್ಟು ಹಣ ನನಗೆ ಸಿಗುತ್ತದೆ. ಇಷ್ಟು ಹಣ ಸಿಗುತ್ತದೆ ಅಂದರೆ ಜನರು ನಗುತ್ತಾರೆ ಎಂದು ಹೇಳಿಕೊಂಡಿದ್ದಾನೆ.

ಅಲ್ಲದೆ, ದಿನಕ್ಕೆ 13 ಗಂಟೆ ಕೆಲಸ ಮಾಡುತ್ತೇನೆ. ಹೆಚ್ಚು ಕೆಲಸ ಮಾಡಿದರೆ ಮಾತ್ರ ಇಷ್ಟೊಂದು ಹಣ ಸಿಗಲು ಸಾಧ್ಯವಾಗುತ್ತದೆ. ಯಾವ ಕಂಪನಿಯೂ ಇಷ್ಟು ಹಣ ನೀಡಲು ಸಾಧ್ಯವಿಲ್ಲ. ಆಯಾಸ ಆದರೆ, ಮೊಬೈಲ್ ಆಫ್ ಮಾಡಿ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ. ಉಳಿದ ಸಮಯದಲ್ಲಿ ನನ್ನ ಇಷ್ಟದ ಕೆಲಸವನ್ನು ಇಷ್ಟಪಟ್ಟು ಮಾಡುತ್ತೇನೆ. ನನಗಂತ ಯಾರೂ ಇಲ್ಲ. ಇಲ್ಲಿ ನನಗೆ ನಾನೇ ಮಾಲೀಕ ಎಂದು ಉಬರ್ ಚಾಲಕ ಹೇಳಿಕೊಂಡಿರುವ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದ್ದು, ಇದಕ್ಕೆ ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಇದು ನಂಬಲು ಅಸಾಧ್ಯ. ಆತ ಸುಳ್ಳು ಹೇಳುತ್ತಿದ್ದಾನೆ ಎಂದು ಕೆಲವರು ಕಮೆಂಟ್ ಮಾಡಿದ್ದರೆ, ಮತ್ತೊಂದು ಕಡೆ ಕೆಲವರು ಶ್ರಮದಿಂದ ಪ್ರತಿಫಲ ಸಿಕ್ಕೇ ಸಿಗುತ್ತದೆ. ದಿನಕ್ಕೆ 13 ಗಂಟೆ ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸಂಚಾರ ಮಾಡುವುದು ಸುಲಭದ ಮಾತಲ್ಲ. ಇಂತಹ ಸ್ಥಿತಿಯಲ್ಲೂ ಈ ರೀತಿ 13 ಗಂಟೆ ಕೆಲಸ ಮಾಡಿದರೆ, ಮುಂದಿನ 2 ವರ್ಷದಲ್ಲಿ ಆತನಿಗೆ ಹಲವು ರೋಗಗಳು ಬರುವುದಂತೂ ನಿಶ್ಚಿತ ಎಂದು ಕಾಮೆಂಟ್ ಮಾಡಿದ್ದಾರೆ.
30 ದಿನಕ್ಕೆ ಪ್ರತಿದಿನ 13 ಗಂಟೆ ಅಂತಾ ಲೆಕ್ಕ ಹಾಕಿದರೆ, 78,000 ರೂಪಾಯಿ ಆಗುತ್ತದೆ. ಹಾಗಾದರೆ ಬೈಕ್‌ಗೆ ಪೆಟ್ರೋಲ್, ಎಲೆಕ್ಟ್ರಿಕ್ ಎಲ್ಲಿಂದ ಬರುತ್ತದೆ? ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ವಾರಕ್ಕೆ 1 ರಜೆ ಅಂದರೆ, ತಿಂಗಳಿಗೆ 4-5 ರಜೆಗಳು ಕೆಳೆಯುತ್ತವೆ. ಇಷ್ಟೊಂದು ಸಂಪಾದನೆ ಮಾಡಲು ಹೇಗೆ ಸಾಧ್ಯ? ಈ ವ್ಯಕ್ತಿ ಹೇಳುತ್ತಿರುವುದು ಪಕ್ಕಾ ಸುಳ್ಳು ಎಂದು ಹೇಳುತ್ತಿದ್ದಾರೆ.
ಈ ವಿಡಿಯೋ ನೋಡಿದ ಮತ್ತೊಬ್ಬ ನೆಟ್ಟಿಗರೊಬ್ಬರು, "ಕೆಲಸ ಯಾವುದಾದರೇನು ಶ್ರದ್ಧೆಯಿಂದ ಮಾಡಬೇಕು. ಕೆಲಸದಲ್ಲಿ ಶ್ರದ್ಧೆ ಇದ್ದರೆ, ಲಕ್ಷ್ಮೀ ಹುಡುಕಿಕೊಂಡು ಬರುತ್ತಾಳೆಂದು," ಕಾಮೆಂಟ್ ಬಾಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಹಲವರು ಸೇರಿದ್ರೆ ಇಂತಹ ಕೆಲಸಕ್ಕೆ ಸೇರಿಕೊಳ್ಳಬೇಕು ಅಂತಲೂ ಹೇಳುತ್ತಿದ್ದಾರೆ.
ಈ ವಿಡಿಯೋವನ್ನು Karnataka Portfolio ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಡಿಸೆಂಬರ್ 4ರಂದು ಈ ವಿಡಿಯೋ ಅಪ್ಲೋಡ್ ಆಗಿದ್ದು, 6,00,000ಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದು, 3,317 ಮೆಚ್ಚುಗೆಗಳು, 40 ಜನ ಕಾಮೆಂಟ್ ಮಾಡಿದ್ದಾರೆ.












Click it and Unblock the Notifications