ಬೆಂಗಳೂರಿನಲ್ಲಿ 'ತ್ಯಾಜ್ಯದಿಂದ ಸ್ವಾತಂತ್ರ್ಯ' ಅಭಿಯಾನ; 22 ಸಾವಿರ ಟನ್ ಕಸ ತೆರವಿಗೆ ಜಿಬಿಎ ಪ್ಲಾನ್

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬ್ಲಾಕ್ ಸ್ಪಾಟ್ ತೆರವು ಕಾರ್ಯಾಚರಣೆ ಮುಂದುವರಿದೆ. ಪಾದಾಚಾರಿ ಒತ್ತುವರಿ ತೆರವು ಜೊತೆಗೆ ಆಗಸ್ಟ್ 1ರಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) "ತ್ಯಾಜ್ಯದಿಂದ ಸ್ವಾತಂತ್ರ್ಯ" ಅಭಿಯಾನ ಹಮ್ಮಿಕೊಳ್ಳುತ್ತಿದೆ. ಈ ಅಭಿಯಾನಕ್ಕೆ ಇಲಾಖಾವಾರು ನೋಡಲ್ ಅಧಿಕಾರಿಗಳನ್ನು ನಿಯೋಜಿಸುವಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

ಜಿಬಿಎ ವ್ಯಾಪ್ತಿಯಲ್ಲಿ ಬೃಹತ್ ತ್ಯಾಜ್ಯ, ಕಟ್ಟಡ ಭಗ್ನಾವಶೇಷಗಳು ಹಾಗೂ ಗಿಡ-ಗಂಟಿಗಳ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳೊಂದಿಗೆ ನಡೆದ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಆಗಸ್ಟ್ 1ರಿಂದ 31ರವರೆಗೆ ನಡೆಯಲಿರುವ "ತ್ಯಾಜ್ಯದಿಂದ ಸ್ವಾತಂತ್ರ್ಯ" ಅಭಿಯಾನ ಕ್ಕೆ ಸಂಬಂಧಿಸಿದ ಎಲ್ಲಾ ಇಲಾಖೆಗಳು ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಬೇಕು ಎಂದರು.

Bengaluru Freedom From Waste

22 ಸಾವಿರ ಟನ್‌ಗೂ ಅಧಿಕ ತ್ಯಾಜ್ಯ ಗುರುತು

ಬೆಂಗಳೂರು ಘನತ್ಯಾಜ್ಯ ವಿಭಾಗವು ಈಗಾಗಲೇ ನಗರದಲ್ಲಿ 1,616 ಸ್ಥಳಗಳಲ್ಲಿ 22 ಸಾವಿರ ಟನ್‌ಗಿಂತ ಹೆಚ್ಚಿನ ಬೃಹತ್ ತ್ಯಾಜ್ಯ ಹಾಗೂ ಭಗ್ನಾವಶೇಷಗಳನ್ನು ಗುರುತಿಸಿದೆ. ಇದೇ ಮಾದರಿಯಲ್ಲಿ ಇತರೆ ಇಲಾಖೆಗಳೂ ತಮ್ಮ ವ್ಯಾಪ್ತಿಯಲ್ಲಿರುವ ತ್ಯಾಜ್ಯದ ಸ್ಥಳಗಳನ್ನು ಗುರುತಿಸಿ, ತ್ಯಾಜ್ಯದ ಪ್ರಮಾಣವನ್ನು ಅಂದಾಜು ಮಾಡಿ ಮ್ಯಾಪಿಂಗ್ ನಡೆಸಿ, ಅದರ ವಿವರಪಟ್ಟಿಯನ್ನು ತಕ್ಷಣವೇ ಸಲ್ಲಿಸಬೇಕೆಂದು ನಿರ್ದೇಶನ ನೀಡಿದರು.

ನಗರದ ಹೊರ ವರ್ತುಲ ರಸ್ತೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಸ್ತೆಗಳು, ಪ್ರಮುಖ ರಸ್ತೆಗಳು ಹಾಗೂ ಪ್ರಮುಖ ಜಂಕ್ಷನ್‌ಗಳಲ್ಲಿ ಸಮಗ್ರ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಬೇಕು. ತ್ಯಾಜ್ಯ ತೆರವು ಕಾರ್ಯಾಚರಣೆಯೊಂದಿಗೆ ಪಾದಚಾರಿ ಮಾರ್ಗ ಹಾಗೂ ರಸ್ತೆ ಬದಿಯಲ್ಲಿ ಬೆಸ್ಕಾಂನ ಬಳಕೆಯಲ್ಲಿಲ್ಲದ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವುದು, ಅಗತ್ಯವಿರುವ ಟ್ರಾನ್ಸ್‌ಫಾರ್ಮರ್‌ಗಳು ಮತ್ತು ವಿದ್ಯುತ್ ತಂತಿಗಳನ್ನು ಸ್ಥಳಾಂತರಿಸುವುದು, ಹಾಗೆಯೇ ಜಲಮಂಡಳಿಯ ರಸ್ತೆ ಬದಿಯಲ್ಲಿರುವ ಪೈಪ್‌ಗಳನ್ನು ತೆರವುಗೊಳಿಸುವ ಕಾರ್ಯವನ್ನೂ ಕೈಗೊಳ್ಳಬೇಕೆಂದರು.

ಬೃಹತ್ ತ್ಯಾಜ್ಯ ತೆರವು ಕಾರ್ಯಾಚರಣೆಗೆ ಅಗತ್ಯವಿರುವ ವಾಹನಗಳು, ಯಂತ್ರೋಪಕರಣಗಳು ಹಾಗೂ ಸಿಬ್ಬಂದಿಯ ಪಟ್ಟಿ ಸಿದ್ಧಪಡಿಸಬೇಕು. ನೋಂದಾಯಿತ ವಾಹನಗಳ ಮೂಲಕವೇ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕು, ಅದಕ್ಕಾಗಿ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳಬೇಕು.

ಇಲಾಖೆಗಳು ಜಂಟಿಯಾಗಿ ಕಾರ್ಯನಿರ್ವಹಿಸಿ

"ತ್ಯಾಜ್ಯದಿಂದ ಸ್ವಾತಂತ್ರ್ಯ" ಅಭಿಯಾನ ಜಿಬಿಎ, ನಗರ ಪಾಲಿಕೆಗಳು, ಮೆಟ್ರೋ, ರೈಲ್ವೆ, ಕೆ-ರೈಡ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಬಿಡಿಎ, ಕೆಐಎಡಿಬಿ, ಬೆಸ್ಕಾಂ, ಜಲಮಂಡಳಿ ಸೇರಿದಂತೆ ಎಲ್ಲಾ ಸಂಬಂಧಿತ ಇಲಾಖೆಗಳು ಜಂಟಿಯಾಗಿ ಕಾರ್ಯನಿರ್ವಹಿಸುವ ಮೂಲಕ ಯಶಸ್ವಿಗೊಳಿಸಬೇಕೆಂದು ಹೇಳಿದರು.

ಗಿಡ-ಗಂಟಿಗಳನ್ನು ತೆರವುಗೊಳಿಸಿ

ರೈಲ್ವೆ ಹಳಿಗಳ ಪಕ್ಕದಲ್ಲಿ ಗಿಡ-ಗಂಟಿಗಳು ವ್ಯಾಪಕವಾಗಿ ಬೆಳೆದು ನಗರದ ಸೌಂದರ್ಯಕ್ಕೆ ಧಕ್ಕೆಯುಂಟು ಮಾಡುತ್ತಿವೆ. ಈ ಸಂಬಂಧ ರೈಲ್ವೆ ಹಾಗೂ ಕೆ-ರೈಡ್ ಅಧಿಕಾರಿಗಳು ಸಮಗ್ರ ಯೋಜನೆ ರೂಪಿಸಿ ಗಿಡ-ಗಂಟಿಗಳನ್ನು ತೆರವುಗೊಳಿಸುವಂತೆ ತಿಳಿಸಿದರು.

ಹೆಬ್ಬಾಳ ಪ್ರದೇಶದ ಸ್ವಚ್ಛತೆಗೆ ಜಂಟಿ ಪರಿಶೀಲನೆ ನಡೆಸಿ

ಹೆಬ್ಬಾಳ ಜಂಕ್ಷನ್ ಸುತ್ತಮುತ್ತಲಿನ ಪ್ರದೇಶ ಹಾಗೂ ಮೇಲ್ಸೇತುವೆಯ ಕೆಳಭಾಗವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವ ಉದ್ದೇಶದಿಂದ ಉತ್ತರ ನಗರ ಪಾಲಿಕೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ, ಯೋಜನೆ ರೂಪಿಸಿ ಸ್ವಚ್ಛತಾ ಕಾರ್ಯ ನಡೆಸಬೇಕು.

ಬೃಹತ್ ಪ್ರಮಾಣದಲ್ಲಿ ತ್ಯಾಜ್ಯ ತೆರವು ಕಾರ್ಯಾಚರಣೆ ನಡೆಯಲಿರುವ ಹಿನ್ನೆಲೆಯಲ್ಲಿ, ತ್ಯಾಜ್ಯವನ್ನು ವಿಲೇವಾರಿ ಮಾಡಲು ಐದು ಅನಾಥ ಕ್ವಾರಿಗಳನ್ನು ಗುರುತಿಸಲಾಗಿದೆ. ನಗರ ಪಾಲಿಕೆ ಹಾಗೂ ವಿವಿಧ ಇಲಾಖೆಗಳು ಮಧ್ಯಂತರ ತ್ಯಾಜ್ಯ ಸಂಗ್ರಹ ಸ್ಥಳಗಳನ್ನು ಗುರುತಿಸಿ ಅವುಗಳ ಪಟ್ಟಿಯನ್ನು ಸಲ್ಲಿಸಬೇಕು. ಮೊದಲು ಆ ಜಾಗಗಳಲ್ಲಿ ತಾತ್ಕಾಲಿಕವಾಗಿ ತ್ಯಾಜ್ಯವನ್ನು ಸಂಗ್ರಹಿಸಿ, ನಂತರ ಅಲ್ಲಿಂದ ಅನಾಥ ಕ್ವಾರಿಗಳಿಗೆ ಸಾಗಿಸಿ ವಿಲೇವಾರಿ ಮಾಡುವ ವ್ಯವಸ್ಥೆ ಕಲ್ಪಿಸಬೇಕೆಂದು ತಾಕೀತು ಮಾಡಿದರು.

5 ಕ್ವಾರಿಗಳ ಗುರುತು

ಬೃಹತ್ ತ್ಯಾಜ್ಯ ವಿಲೇವಾರಿಗಾಗಿ ಯರಪ್ಪನಹಳ್ಳಿ, ಮಾರೇನಹಳ್ಳಿ, ವೆಂಕಟಪುರ, ವಿಟ್ಟಸಂದ್ರ ಹಾಗೂ ಕಲ್ಲುಬಾಳು ಸೇರಿದಂತೆ ಐದು ಅನಾಥ ಕ್ವಾರಿಗಳನ್ನು ಗುರುತಿಸಲಾಗಿದೆ. ನಗರದ ವಿವಿಧ ಭಾಗಗಳಿಂದ ತೆರವುಗೊಳಿಸುವ ತ್ಯಾಜ್ಯವನ್ನು ಈ ಕ್ವಾರಿಗಳಲ್ಲಿ ವಿಲೇವಾರಿ ಮಾಡಲಾಗುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+