ಆಗಸ್ಟ್ 15ಕ್ಕೆ ಬೆಂಗಳೂರಲ್ಲಿ ಅದ್ಧೂರಿ 'ಫ್ರೀಡಂ ಹಬ್ಬ' ಸಂಭ್ರಮ: ರಾತ್ರಿ 10ರವರೆಗೆ ವಿವಿಧ ಕಲೆ, ಸಂಸ್ಕೃತಿಗಳ ಮಹೋತ್ಸವ
ಬೆಂಗಳೂರು: ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ಬೆಂಗಳೂರು ಸೇರಿದಂತೆ ಇಡೀ ರಾಜ್ಯವೇ ಸಜ್ಜಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಸ್ವಾತಂತ್ರ್ಯೋತ್ಸವವನ್ನು ವಿಭಿನ್ನವಾಗಿ, ವಿಜೃಂಭಣೆಯಿಂದ ಎಲ್ಲ ಭಾಷಿಗರು, ಸಮುದಾಯಗಳ ಜನರಲ್ಲ ಕೂಡಿ ಆಚರಿಸಲಿದ್ದಾರೆ. ಈ ನಿಟ್ಟಿನಲ್ಲಿ ಬೆಂಗಳೂರು ನರಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು 'ಫ್ರೀಡಂ ಹಬ್ಬ' ಘೋಷಿಸಿದ್ದಾರೆ. ಆ.15ರಂದು ಮಧ್ಯಾಹ್ನ 12 ರಿಂದ ರಾತ್ರಿ 10 ರವರೆಗೆ ಏನೆಲ್ಲ ಕಾರ್ಯಕ್ರಮಗಳು ಜರುಗಲಿವೆ? ಇಲ್ಲಿದೆ ಮಾಹಿತಿ..
ಬೆಂಗಳೂರಲ್ಲಿ ನೆಲೆಸಿರುವ ವಿವಿಧ ಸಮುದಾಯಗಳನ್ನು ಪ್ರತಿನಿಧಿಸುವ ಬೆಂಗಳೂರಿಗರು ಒಂದೆಡೆ ಸೇರಿ ಆಚರಿಸುವ ಸ್ವಾತಂತ್ರ್ಯದ ಹಬ್ಬ ಇದಾಗಿದೆ. ಫ್ರೀಡಂ ಹಬ್ಬವು ಸ್ವಾತಂತ್ರ್ಯ ದಿನಾಚರಣೆಯನ್ನು ಕೇವಲ ಸರ್ಕಾರದ ಔಪಚಾರಿಕ ಕಾರ್ಯಕ್ರಮವಾಗಿರಿಸದೇ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ವೈವಿಧ್ಯತೆ ಮತ್ತು ಸಂಸ್ಕೃತಿಯ ದಿನಪೂರ್ತಿ ಸಾರ್ವಜನಿಕ ಸಂಭ್ರಮಾಚರಣೆಯನ್ನಾಗಿ ಪರಿವರ್ತಿಸುತ್ತದೆ ಎಂದು ಸಚಿವರು ಬುಧವಾರ ಮಾಹಿತಿ ನೀಡಿದರು.

'ಫ್ರೀಡಂ ಹಬ್ಬ' ವೀಕ್ಷಿಸಲು ಇರುವ ಸರ್ಕಾರಿ ಕಾರ್ಯಕ್ರಮವಲ್ಲ, ಇದು ಬೆಂಗಳೂರಿನ ಜನರು ಒಟ್ಟಾಗಿ ಆಚರಿಸುವ, ನಿರ್ಮಿಸುವ ಮತ್ತು ತಮ್ಮದಾಗಿಸಿಕೊಳ್ಳುವ ಹಬ್ಬವಾಗಿದೆ. ಜನರು ಸ್ವತಃ ಈ ಆಚರಣೆಯ ಭಾಗವಾದಾಗ ಸ್ವಾತಂತ್ರ್ಯದ ನಿಜವಾದ ಸಂಭ್ರಮ ವ್ಯಕ್ತವಾಗುತ್ತದೆ ಎಂದು ಕರೆ ನೀಡಿದರು.
ಫ್ರೀಡಂ ಹಬ್ಬ ಕುರಿತು
ಹೆಚ್ಚಿನ ವಿವರಗಳನ್ನು ಹಂಚಿಕೊಂಡ ಕೃಷ್ಣ ಬೈರೇಗೌಡ ಅವರು, ಫ್ರೀಡಂ ಹಬ್ಬವನ್ನು ಆಗಸ್ಟ್ 15ರ ಭಾವನೆಯನ್ನು ಔಪಚಾರಿಕ ಆಚರಣೆಯಿಂದ ನಗರದಾದ್ಯಂತ ಸಂಭ್ರಮಿಸುವ ಜೀವಂತಿಕೆಯಿಂದ ಕೂಡಿದ ಸ್ವಾತಂತ್ರ್ಯ, ಸಂಸ್ಕೃತಿ ಮತ್ತು ನಾಗರಿಕ ಹೆಮ್ಮೆಯ ಹಬ್ಬವಾಗಿ ಪರಿವರ್ತಿಸುವ ಸಾರ್ವಜನಿಕ ಕೇಂದ್ರಿತ ಸ್ವಾತಂತ್ರ್ಯ ದಿನಾಚರಣೆಯಾಗಿ ವಿನ್ಯಾಸಗೊಳಿಸಲಾಗಿದೆ.
ಕಲೆ, ಸಾಂಸ್ಕೃತಿ, ಉಡುಪುಗಳ ಪ್ರದರ್ಶನ
ಬೆಂಗಳೂರಿಗರನ್ನು ಒಂದೆಡೆ ತರುವ ಈ ಹಬ್ಬವು, ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ ಸಮುದಾಯಗಳ ಭವ್ಯ ಪೆರೇಡ್, ಸಾಂಪ್ರದಾಯಿಕ ಉಡುಪುಗಳು, ಜಾನಪದ ಕಲೆಗಳು, ಸಂಗೀತ, ನೃತ್ಯ, ಕರಕುಶಲ ವಸ್ತುಗಳು ಮತ್ತು ಸಾಂಸ್ಕೃತಿಕ ಪ್ರದರ್ಶನಗಳ ಮೂಲಕ ಕರ್ನಾಟಕದ ಶ್ರೀಮಂತ ಪರಂಪರೆ ಮತ್ತು ಭಾರತದ ಅಸಾಧಾರಣ ಸಾಂಸ್ಕೃತಿಕ ವೈವಿಧ್ಯತೆ ಎರಡನ್ನೂ ಸಂಭ್ರಮಿಸಲಿದೆ.
ಬೆಂಗಳೂರಿನ ಎಲ್ಲ ಭಾಷಿಗರು ಸ್ವಾತಂತ್ರ್ಯ ಸಂಭ್ರಮದಲ್ಲಿ..
ಬೆಂಗಳೂರಿನಲ್ಲಿ ನೆಲೆಗೊಂಡಿರುವ ಕನ್ನಡ, ತಮಿಳು, ತೆಲುಗು, ಮಲಯಾಳಂ, ಬಂಗಾಳಿ, ಗುಜರಾತಿ, ಹಿಂದಿ, ಒಡಿಯಾ ಮತ್ತು ಈಶಾನ್ಯ ರಾಜ್ಯಗಳ ಸಮುದಾಯಗಳು ಸೇರಿದಂತೆ ಹಲವು ಭಾಷಿಕ ಸಂಪ್ರದಾಯಗಳನ್ನು ಪ್ರತಿನಿಧಿಸುವ ನಾಗರಿಕರು, ಕೊಡಗು, ಮಂಗಳೂರು, ಉತ್ತರ ಕರ್ನಾಟಕ ಮತ್ತು ರಾಜ್ಯದ ಇತರ ಪ್ರದೇಶಗಳ ಪ್ರತಿನಿಧಿಗಳೊಂದಿಗೆ ಪಾಲ್ಗೊಳ್ಳಲಿದ್ದಾರೆ. ಇದು ವಿಧಾನಸೌಧವನ್ನು ಭಾರತದ 'ವಿವಿಧತೆಯಲ್ಲಿ ಏಕತೆ'ಯ ಜೀವಂತ ವೇದಿಕೆಯನ್ನಾಗಿ ಮಾಡಲಿದೆ. ಫ್ರೀಡಂ ಹಬ್ಬವು ಕುಟುಂಬಗಳು, ಮಕ್ಕಳು, ಕಲಾವಿದರು, ಸಾಂಸ್ಕೃತಿಕ ಸಂಸ್ಥೆಗಳು ಮತ್ತು ಸಮುದಾಯಗಳನ್ನು ಸ್ವಾತಂತ್ರ್ಯದ ಜಂಟಿ ಸಂಭ್ರಮಾಚರಣೆಯಲ್ಲಿ ಒಂದಾಗಲು ಆಹ್ವಾನಿಸುತ್ತದೆ.

ಈ ಆಚರಣೆಯನ್ನು ಸಾರ್ವಜನಿಕರ ಹಬ್ಬವಾಗಿ ರೂಪಿಸಿ, ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ನಡೆಸಲು ಸಲಹೆ ನೀಡಿದ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ನಾಯಕತ್ವ ಮತ್ತು ದೂರದೃಷ್ಟಿ ಮುತ್ಸದ್ಧಿತನಕ್ಕೆ ಸಾಕ್ಷಿ. ಫ್ರೀಡಂ ಹಬ್ಬವು ಬೆಳಿಗ್ಗೆ 11 ಗಂಟೆಗೆ ಮಾಣಿಕ್ ಶಾ ಪೆರೇಡ್ ಮೈದಾನದಲ್ಲಿ ನಡೆಯುವ ಅಧಿಕೃತ ಸ್ವಾತಂತ್ರ್ಯ ದಿನಾಚರಣೆಯ ನಂತರ ಪ್ರಾರಂಭವಾಗಿ ರಾತ್ರಿ 10 ಗಂಟೆಯವರೆಗೆ ಮುಂದುವರಿಯಲಿದೆ. ಈ ಸಮಯದಲ್ಲಿ ವಿಧಾನಸೌಧದ ಸುತ್ತಮುತ್ತಲಿನ ರಸ್ತೆಗಳು ವರ್ಣರಂಜಿತ ಸಾಂಸ್ಕೃತಿಕ ಕಾರಿಡಾರ್ ಆಗಿ ಬದಲಾಗಲಿವೆ.
ಈ ದಿನದ ಪ್ರಮುಖ ಆಕರ್ಷಣೆಗಳಲ್ಲಿ ಸುಮಾರು 40 ತುಕಡಿಗಳನ್ನೊಳಗೊಂಡ ವರ್ಣರಂಜಿತ 'ಇಂಡಿಯಾ ಪೆರೇಡ್', ಸ್ವಾತಂತ್ರ್ಯ ಚಳವಳಿಯ 'ಲಿವಿಂಗ್ ಮ್ಯೂಸಿಯಂ', ಸ್ವಾತಂತ್ರ್ಯ ಸಂಗ್ರಾಮಕ್ಕೆ ಕರ್ನಾಟಕದ ಕೊಡುಗೆಯನ್ನು ಬಿಂಬಿಸುವ ಜಿಲ್ಲಾ ಆಧಾರಿತ ಪೆವಿಲಿಯನ್ಗಳು, ಸಂವಿಧಾನ ಚೌಕ, ಮಕ್ಕಳ ಕಲಿಕೆ ಮತ್ತು ಚಟುವಟಿಕೆ ವಲಯಗಳು, ವಿಧಾನಸೌಧದ ಮಾರ್ಗದರ್ಶಿತ ಪ್ರವಾಸಗಳು, 200 ಅಡಿಗಳ ಸಾರ್ವಜನಿಕ ಕಲಾ ಗೋಡೆ, ಸೋಲ್ ಸಂತೆಯ ಮಳಿಗೆಗಳು, ಸಂಜೆಯ ಸಂಗೀತ ಕಛೇರಿ ಮತ್ತು ಭವ್ಯ ಪಟಾಕಿ ಬಾಣಬಿರುಸುಗಳ (ಫೈರ್ವರ್ಕ್ಸ್) ಪ್ರದರ್ಶನ ಒಳಗೊಂಡಿರಲಿವೆ.
ನಗರದ ಮಕ್ಕಳಿಗೆ ಬಾಗಿಲು ತೆರೆಯಲಿದೆ ವಿಧಾನಸೌಧ
ಈ ಆಚರಣೆಯಲ್ಲಿ ಮಕ್ಕಳು ಕೇಂದ್ರಬಿಂದು. ಅನೇಕ ಮಕ್ಕಳಿಗೆ ಭವ್ಯವಾದ ವಿಧಾನಸೌಧದ ಒಳಗಡೆ ಹೆಜ್ಜೆ ಹಾಕುವ ಅಪರೂಪದ ಅವಕಾಶ ಸಿಗಲಿದೆ. ಬಹುತೇಕರಿಗೆ ಇದು ಮೊದಲ ಅನುಭವವಾಗಿದ್ದು, ಅವರನ್ನು ರಾಜ್ಯದ ಶ್ರೇಷ್ಠ ಸಂಸ್ಥೆಯೊಂದರ ಜೊತೆ ಮಾತ್ರವಲ್ಲದೆ, ಅದು ಪ್ರತಿನಿಧಿಸುವ ಪ್ರಜಾಪ್ರಭುತ್ವ ಮತ್ತು ಪೌರತ್ವದ ಮೌಲ್ಯಗಳೊಂದಿಗೂ ಜೋಡಿಸಲಿದೆ ಎಂದರು.
ಗಸ್ಟ್ 15 ರಂದು ಆ ಬಾಗಿಲುಗಳ ಮೂಲಕ ನಡೆದುಬರುವ ಪ್ರತಿಯೊಂದು ಮಗುವೂ ಜೀವಮಾನವಿಡೀ ನೆನಪಿನಲ್ಲಿ ಉಳಿಯುವ ನೆನಪಿನೊಂದಿಗೆ ಮನೆಗೆ ಹಿಂತಿರುಗಲಿದ್ದಾರೆ. ಪ್ರಜಾಪ್ರಭುತ್ವವು ಮಕ್ಕಳು ಪಠ್ಯಪುಸ್ತಕಗಳಲ್ಲಿ ಮಾತ್ರ ಓದುವ ವಿಷಯವಾಗಿ ಉಳಿಯಬಾರದು; ಅದು ಜೀವಂತವಾಗುವ ಸಂಸ್ಥೆಯಲ್ಲೇ ಅವರು ಅದನ್ನು ಅನುಭವಿಸಬೇಕು.
'ಮಕ್ಕಳ ಮೇಳ'
ಮಾರ್ಗದರ್ಶಿತ ಪ್ರವಾಸಗಳ ಜೊತೆಗೆ, 'ಮಕ್ಕಳ ಮೇಳ', ಕಲಾಕಾರರು ಸ್ವಾತಂತ್ರ್ಯ ಹೋರಾಟಗಾರರನ್ನು ಜೀವಂತಗೊಳಿಸುವ 'ಮಕ್ಕಳ ಫ್ರೀಡಂ ವಿಲೇಜ್', ಸಂವಾದಾತ್ಮಕ ಕಲಿಕೆಯ ಆಟಗಳು, ಕಥೆ ಹೇಳುವಿಕೆ ಮತ್ತು ಕರಕುಶಲ ಕಾರ್ಯಾಗಾರಗಳನ್ನು ಕಿರಿಯ ಮಕ್ಕಳಿಗೆ ವಿದ್ಯಾರ್ಥಿಗಳ ಪಾಲಿಗೆ ಈ ದಿನವನ್ನು ಶೈಕ್ಷಣಿಕ ಹಾಗೂ ಆನಂದದಾಯಕವಾಗಿಸಲು ವಿನ್ಯಾಸಗೊಳಿಸಲಾಗಿದೆ.
ವೀಕ್ಷಕನಾಗದೇ ಭಾಗವಹಿಸಿ
ಬ್ಯಾರಿಕೇಡ್ ಗಳ ಹಿಂದೆ ನಿಂತು ಅಧಿಕೃತ ಸಮಾರಂಭಗಳನ್ನು ವೀಕ್ಷಿಸುವ ಬದಲಿಗೆ, ನಾಗರಿಕರು ಸ್ವತಃ ಕಲಾವಿದರಾಗಿ, ಸ್ವಯಂಸೇವಕರಾಗಿ, ಸಾಂಸ್ಕೃತಿಕ ರಾಯಭಾರಿಗಳಾಗಿ ಮತ್ತು ಭಾಗವಹಿಸುವವರಾಗಿ ಪ್ರಮುಖ ವೇದಿಕೆ ಪಡೆದುಕೊಳ್ಳಲಿದ್ದಾರೆ. ಜಾನಪದ ಪ್ರದರ್ಶನಗಳು, ಸಾಂಪ್ರದಾಯಿಕ ಸಂಗೀತ, ಸಮುದಾಯದ ಮೆರವಣಿಗೆಗಳು ಮತ್ತು ಸಾಂಸ್ಕೃತಿಕ ಪ್ರಸ್ತುತಿಗಳು ವಿಧಾನಸೌಧದ ಸುತ್ತಮುತ್ತಲಿನ ರಸ್ತೆಗಳನ್ನು ವರ್ಣರಂಜಿತ ಸಾಂಸ್ಕೃತಿಕ ಕಾರಿಡಾರ್ ಆಗಿ ಪರಿವರ್ತಿಸುವುದರೊಂದಿಗೆ, ಫ್ರೀಡಂ ಹಬ್ಬವನ್ನು ಕೇವಲ ವೀಕ್ಷಿಸುವುದಕ್ಕಿಂತ ಹೆಚ್ಚಾಗಿ ಭಾಗವಹಿಸಿ ಎಂದು ಕರೆ ನೀಡಿದರು.
ಫ್ರೀಡಂ ಹಬ್ಬಕ್ಕೆ ನೋಂದಾಯಿಸಿಕೊಳ್ಳಿ
ವಿಶೇಷ ಫ್ರೀಡಂ ಹಬ್ಬದ ವೆಬ್ಸೈಟ್ ಮತ್ತು ಸಹಾಯವಾಣಿಯ ಮೂಲಕ ವಿವಿಧ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳಿಗೆ ನೋಂದಾಯಿಸಿಕೊಳ್ಳುವಂತೆ ಅವರು ನಾಗರಿಕರಿಗೆ ಮನವಿ ಮಾಡಿದರು. ಇದರ ವಿವರಗಳನ್ನು ಮುಂದಿನ 48 ಗಂಟೆಗಳಲ್ಲಿ ಹಾಗೂ ಸರ್ಕಾರದ ಅಧಿಕೃತ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಪ್ರಕಟಿಸಲಾಗುವುದು. ಈ ದಿನವನ್ನು ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಒಗ್ಗಟ್ಟಿನ ಸಂಭ್ರಮವಾಗಿ ಯೋಜಿಸುವಂತೆ ಅವರು ಕುಟುಂಬಗಳಿಗೆ ಪ್ರೋತ್ಸಾಹಿಸಿದರು.
ಫ್ರೀಡಂ ಹಬ್ಬ: ಮುಖ್ಯಾಂಶಗಳು
ಆಗಸ್ಟ್ 15ರಂದು ವಿಧಾನಸೌಧ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಹಾಗೂ ರಸ್ತೆಗಳಲ್ಲಿ ಮಧ್ಯಾಹ್ನ 12 ರಿಂದ ರಾತ್ರಿ 10 ರವರೆಗೆ ನಡೆಯಲಿದೆ.
ಫ್ರೀಡಂ ಪೆರೇಡ್ (ಸ್ವಾತಂತ್ರ್ಯ ನಡಿಗೆ): ಭಾರತದ ವೈವಿಧ್ಯಮಯ ಸಂಸ್ಕೃತಿಗಳು, ಕರ್ನಾಟಕದ ಪ್ರದೇಶಗಳು ಮತ್ತು ವೃತ್ತಿಪರರನ್ನು ಪ್ರತಿನಿಧಿಸುವ ಸುಮಾರು 40 ತುಕಡಿಗಳು ಜಾನಪದ ಪ್ರದರ್ಶನಗಳು, ಸಂಗೀತ ಮತ್ತು ಸಾಂಸ್ಕೃತಿಕ ಪ್ರದರ್ಶನಗಳನ್ನೊಳಗೊಂಡ ವರ್ಣರಂಜಿತ ಸ್ವಾತಂತ್ರ್ಯ ದಿನದ ಪೆರೇಡ್ನಲ್ಲಿ ಪಾಲ್ಗೊಳ್ಳಲಿವೆ.
ಮಕ್ಕಳ ಮೇಳ: ಸ್ವಾತಂತ್ರ್ಯದ ಬಗ್ಗೆ ಕಲಿಯುವುದನ್ನು ತೊಡಗಿಸಿಕೊಳ್ಳುವಂತೆ ಮತ್ತು ಆನಂದದಾಯಕವಾಗಿಸಲು ಸಂವಾದಾತ್ಮಕ ಆಟಗಳು, ಕಥೆ ಹೇಳುವಿಕೆ, ಕಲೆ, ಕರಕುಶಲ ವಸ್ತುಗಳು, ಸೃಜನಶೀಲ ಕಾರ್ಯಾಗಾರಗಳು ಮತ್ತು ಕುಟುಂಬ ಚಟುವಟಿಕೆಗಳನ್ನು ಹೊಂದಿರುವ ಮಕ್ಕಳಿಗಾಗಿಯೇ ಮೀಸಲಾದ ವಲಯ.
ಸೋಲ್ ಸಂತೆ ಹಬ್ಬ: 120 ಕ್ಕೂ ಹೆಚ್ಚು ಆಯ್ದ ಜೀವನಶೈಲಿ, ಕರಕುಶಲ ವಸ್ತುಗಳು, ಜೈವಿಕ ಉಡುಪುಗಳು, ಆಟಿಕೆಗಳು, ಜವಳಿ ಮತ್ತು ಆಹಾರ ಮಳಿಗೆಗಳು ದಿನವಿಡೀ ಉತ್ಸಾಹಭರಿತ ಹಬ್ಬದ ವಾತಾವರಣವನ್ನು ನಿರ್ಮಿಸಲಿವೆ.
ಲಿವಿಂಗ್ ಮ್ಯೂಸಿಯಂ - ಸ್ವಾತಂತ್ರ್ಯದ ಪಯಣ: ಕಲಾಕೃತಿಗಳು, ಪ್ರದರ್ಶನಗಳು, ಜೀವಂತ ಅಭಿನಯಗಳು ಮತ್ತು ಸ್ಮರಣಾರ್ಥ ಅಂಚೆಕಾರ್ಡ್ಗಳ ಮೂಲಕ ಭಾರತದ ಸ್ವಾತಂತ್ರ್ಯ ಚಳವಳಿಯ ಪ್ರಮುಖ ಮೈಲಿಗಲ್ಲುಗಳನ್ನು ಮರುಸೃಷ್ಟಿಸುವ ವಾಕ್-ಥ್ರೂ ಮ್ಯೂಸಿಯಂ.
ಕರ್ನಾಟಕ ಫ್ರೀಡಂ ಪಾಥ್ (ಸ್ವಾತಂತ್ರ್ಯ ಪಥ): ನಾಟಕ, ಸಾಂಸ್ಕೃತಿಕ ಪ್ರದರ್ಶನಗಳು, ಸ್ಥಳೀಯ ಸಂಪ್ರದಾಯಗಳು ಮತ್ತು ಬೆಂಗಳೂರಿನ ಜಿಲ್ಲಾ ಸಮುದಾಯಗಳ ಭಾಗವಹಿಸುವಿಕೆಯ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಕರ್ನಾಟಕದ ಕೊಡುಗೆಯನ್ನು ಆಚರಿಸುವ ಜಿಲ್ಲಾ ಆಧಾರಿತ ಪೆವಿಲಿಯನ್ಗಳು.
ಸಂವಿಧಾನ ಚೌಕ: ಸಾರ್ವಜನಿಕರು ಸಂವಿಧಾನ ರಚನಾ ಸಭೆಯ ಗ್ಯಾಲರಿಗಳನ್ನು ವೀಕ್ಷಿಸಬಹುದು, ಅಪರೂಪದ ಸಂವಿಧಾನಾತ್ಮಕ ದಾಖಲೆಗಳನ್ನು ನೋಡಬಹುದು ಮತ್ತು ದಿನವಿಡೀ ಪ್ರಸ್ತಾವನೆಯ ಸಮೂಹ ವಾಚನದಲ್ಲಿ ಪಾಲ್ಗೊಳ್ಳಬಹುದು.
ಚಿಲ್ಡ್ರನ್ಸ್ ಫ್ರೀಡಂ ವಿಲೇಜ್ (ಮಕ್ಕಳ ಸ್ವಾತಂತ್ರ್ಯ ಗ್ರಾಮ): ಭಾರತದ ಸ್ವಾತಂತ್ರ್ಯ ಚಳವಳಿಯ ಅರಿವನ್ನು ಮೂಡಿಸುವ ಮೂಲಕ ಮಕ್ಕಳ ಎದುರು ಸ್ವಾತಂತ್ರ್ಯ ಹೋರಾಟಗಾರರನ್ನು ಜೀವಂತಗೊಳಿಸುವುದು, ರಸಪ್ರಶ್ನೆಗಳು, ಸಂವಾದಾತ್ಮಕ ಕಲಿಕೆ ಮತ್ತು ತಕ್ಷಣದ ಬಹುಮಾನಗಳ ಮೂಲಕ ಮಕ್ಕಳನ್ನು ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವುದು.
ವಿಧಾನಸೌಧದ ಮಕ್ಕಳ ಮಾರ್ಗದರ್ಶಿತ ಪ್ರವಾಸ: ಕಿರಿಯ ವೀಕ್ಷಕರು ಮತ್ತು ಅವರ ಕುಟುಂಬದವರು ತರಬೇತಿ ಪಡೆದ ಸ್ವಯಂಸೇವಕರ ನೇತೃತ್ವದಲ್ಲಿ ವಿಶೇಷವಾಗಿ ಆಯೋಜಿಸಲಾದ ಮಾರ್ಗದರ್ಶಿತ ಪ್ರವಾಸಗಳ ಮೂಲಕ ಶಾಸನಸಭೆಯನ್ನು ವೀಕ್ಷಿಸುವ ಅಪರೂಪದ ಅವಕಾಶವನ್ನು ಪಡೆಯಲಿದ್ದಾರೆ.
ಫ್ರೀಡಂ ವಾಲ್ (ಸ್ವಾತಂತ್ರ್ಯ ಗೋಡೆ): 200 ಅಡಿಗಳ ಸಾರ್ವಜನಿಕ ಕಲಾ ಗೋಡೆಯು ನಾಗರಿಕರಿಗೆ ಬರವಣಿಗೆ, ವರ್ಣಚಿತ್ರ ಮತ್ತು ಜಂಟಿ ಕಲಾಕೃತಿಗಳ ಮೂಲಕ ಸ್ವಾತಂತ್ರ್ಯದ ಅರ್ಥವನ್ನು ವ್ಯಕ್ತಪಡಿಸಲು ಆಹ್ವಾನಿಸುತ್ತದೆ.
ಫ್ರೀಡಂ ಕಲೆಕ್ಟಿವ್ ಸಂಗೀತ ಹಬ್ಬ: ಪ್ರಮುಖ ಸಂಗೀತಗಾರರು ಮತ್ತು ಕಲಾವಿದರು ಪ್ರದರ್ಶನ ನೀಡಲಿದ್ದು, ಕನ್ನಡ ಹಾಗೂ ಇತರ ಭಾರತೀಯ ಭಾಷೆಗಳಲ್ಲಿ ಪ್ರದರ್ಶನ ನೀಡಿ ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಆಚರಿಸುವ ಬೃಹತ್ ಸಂಜೆ ಸಂಗೀತ ಕಛೇರಿಯ ನೇತೃತ್ವ ವಹಿಸಲಿದ್ದು, ಸಾರ್ವಜನಿಕರ ಸಾಮೂಹಿಕ ಗಾಯನದೊಂದಿಗೆ ಮುಕ್ತಾಯಗೊಳ್ಳಲಿದೆ.
ಬೃಹತ್ ಬಾಣಬಿರುಸು (ಫೈರ್ವರ್ಕ್ಸ್) ಪ್ರದರ್ಶನ: ಫ್ರೀಡಂ ಹಬ್ಬವು ವಿಧಾನಸೌಧದ ಮೇಲೆ ನಡೆಯುವ ಅದ್ಭುತ ಪಟಾಕಿ ಪ್ರದರ್ಶನದೊಂದಿಗೆ ಮುಕ್ತಾಯಗೊಳ್ಳಲಿದ್ದು, ಬೆಂಗಳೂರಿಗೆ ಈ ವರ್ಷದ ಸ್ವಾತಂತ್ರ್ಯ ದಿನವು ಸ್ಮರಣೀಯವಾಗಲಿದೆ.


Click it and Unblock the Notifications
