ಬೆಂಗಳೂರಿನ ಈ ಭಾಗದಲ್ಲಿ ಶೀಘ್ರ “ಗುಂಡಿ ಮುಕ್ತ ರಸ್ತೆಗಳು” ಕೇಂದ್ರ ಆಯುಕ್ತರು ಹೇಳಿದ್ದೇನು ?
ಬೆಂಗಳೂರಿನಲ್ಲಿ ಕೊನೆಗೂ ಒಂದು ಪಾಲಿಕೆಯ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳು ಮುಕ್ತವಾಗುವ ಮುನ್ಸೂಚನೆ ಸಿಕ್ಕಿದೆ. ಬೆಂಗಳೂರಿನಲ್ಲಿ ರಸ್ತೆಗುಂಡಿಗಳ ಸಂಖ್ಯೆ ಹೆಚ್ಚಳವಾಗಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ನಿತ್ಯವೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನಲ್ಲಿ ಇನ್ನೊಂದು ತಿಂಗಳ ಅವಧಿಯಲ್ಲಿ ಎಲ್ಲಾ ರಸ್ತೆ ಗುಂಡಿಗಳನ್ನು ಮುಚ್ಚಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ರಸ್ತೆಗುಂಡಿಗಳು ಮುಚ್ಚುವ ಕೆಲಸ ಭರದಿಂದ ಸಾಗಿದೆ.
ಇದೀಗ ಬೆಂಗಳೂರಿನ ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಿ "ಗುಂಡಿ ಮುಕ್ತ ರಸ್ತೆಗಳು" ಎಂದು ಘೋಷಿಸಿ ಎಂದು ಆಯುಕ್ತ ರಾಜೇಂದ್ರ ಚೋಳನ್ ಅವರು ಸೂಚನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ದ್ವಿಚಕ್ರ ವಾಹನದ ಮೂಲಕ 18 ಕಿ.ಮೀ ಸಂಚರಿಸಿ ಸ್ಥಳೀಯ ಸಮಸ್ಯೆಗಳ ಅವಲೋಕನ ಮಾಡಿರುವ ಅವರು ಕೆಲವೊಂದು ಪ್ರಮುಖ ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದ್ದಾರೆ.

ಇದರಲ್ಲಿ ಬೆಂಗಳೂರಿನಲ್ಲಿ ರಸ್ತೆಗುಂಡಿಗಳಿಗೆ ಸಂಬಂಧಿಸಿದ ಸೂಚನೆಯೂ ಪ್ರಮುಖವಾಗಿದೆ. ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಿ "ಗುಂಡಿ ಮುಕ್ತ ರಸ್ತೆಗಳು" ಎಂದು ಘೋಷಿಸುವಂತೆ ಆಯುಕ್ತರಾದ ರಾಜೇಂದ್ರ ಚೋಳನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸೋಮವಾರ ಬೆಳಿಗ್ಗೆ ಚಿಕ್ಕಪೇಟೆ ವಿಭಾಗದ ವ್ಯಾಪ್ತಿಯ ಆರ್ಟಿರಿಯಲ್ ಮತ್ತು ಸಬ್-ಆರ್ಟಿರಿಯಲ್ ರಸ್ತೆಗಳ ಮೇಲೆ ದ್ವಿಚಕ್ರ(ಬೈಕ್) ವಾಹನದಲ್ಲಿ ಸಂಚರಿಸಿ, ರಸ್ತೆ ಗುಂಡಿಗಳು, ಕೈಗೊಂಡಿರುವ ರಸ್ತೆ ದುರಸ್ತಿ ಕಾಮಗಾರಿಗಳು ಹಾಗೂ ಇತರೆ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದ ವೇಳೆ ಅವರು ಮಾತನಾಡಿದ್ದಾರೆ.
ಚಿಕ್ಕಪೇಟೆ ವಿಭಾಗದಲ್ಲಿ ಗುಂಡಿ ಮುಕ್ತವಾಗಿರುವ ರಸ್ತೆಗಳಲ್ಲಿ ಜೀಬ್ರಾ ಕ್ರಾಸಿಂಗ್, ಕ್ಯಾಟ್ ಐಸ್, ಲೈನ್ ಮಾರ್ಕಿಂಗ್, ಕರ್ಬ್‌ಗಳಿಗೆ ಬಣ್ಣ ಹಚ್ಚುವ ಮೂಲಕ ಸಮಗ್ರ ಅಭಿವೃದ್ಧಿ ಪಡಿಸಬೇಕು. ನಂತರ "ಗುಂಡಿ ಮುಕ್ತ ರಸ್ತೆಗಳು" ಎಂದು ಘೋಷಿಸಲು ಅಧಿಕಾರಿಗಳಿಗೆ ಸೂಚಿಸಿದರು.
ದ್ವಿಚಕ್ರದ ಮೂಲಕ 18 ಕಿ.ಮೀ ಸಂಚಾರ: ಇನ್ನು ಚಿಕ್ಕಪೇಟೆ ವಿಭಾಗದಲ್ಲಿ ಒಟ್ಟು 22.67 ಕಿ.ಮೀ ಉದ್ದದ ಆರ್ಟಿರಿಯಲ್ ಮತ್ತು ಸಬ್-ಆರ್ಟಿರಿಯಲ್ ರಸ್ತೆಗಳಿದ್ದು, ಈ ಪೈಕಿ 18 ಕಿ.ಮೀ ಉದ್ದದ ರಸ್ತೆಯಲ್ಲಿ ದ್ವಿಚಕ್ರ ವಾಹನದ ಮೂಲಕ ಸಂಚರಿಸಿ, ಸ್ಥಳೀಯ ಸಮಸ್ಯೆಗಳನ್ನು ತಕ್ಷಣವೇ ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ದ್ವಿಚಕ್ರ ವಾಹನದ ಮೂಲಕ ಸಂಚರಿಸಿದ ರಸ್ತೆಗಳು: ಅಧಿಕಾರಿಗಳೊಂದಿಗೆ ದ್ವಿಚಕ್ರ ವಾಹನದ ಮೂಲಕ ಬುಲ್ ಟೆಂಪಲ್ ರಸ್ತೆ, ವಾಣಿವಿಲಾಸ್ ರಸ್ತೆ (ಪಶ್ಚಿಮ ದ್ವಾರ), ಶಂಕರ ಮಠ ರಸ್ತೆ, ಕೆ.ಆರ್. ರಸ್ತೆ, ನ್ಯಾಷನಲ್ ಕಾಲೇಜು (ಎಡಭಾಗ), ಆರ್.ವಿ. ರಸ್ತೆ, ಟೀಚರ್ಸ್ ಕಾಲೇಜು (ಎಡಭಾಗ), ಕನಕನಪಾಳ್ಯ ರಸ್ತೆ, ಟಿ. ಮರಿಗೌಡ ರಸ್ತೆ, ಹೊಸೂರು ರಸ್ತೆ, ಕೃಂಬಿಗಲ್ ರಸ್ತೆ (ಪಶ್ಚಿಮ ದ್ವಾರ, ಬಲಭಾಗ), ಜೆ.ಸಿ. ರಸ್ತೆ, ಪೂರ್ಣಿಮಾ ಟಾಕೀಸ್ ರಸ್ತೆ ಹಾಗೂ ಲಾಲ್‌ಬಾಗ್ ರಸ್ತೆಗಳಲ್ಲಿ ಪರಿಶೀಲನೆ ನಡೆಸಿ ಸಂಚಾರವನ್ನು ಮುಕ್ತಾಯಗೊಳಿಸಿದ್ದಾರೆ.
1. ಎಲ್ಲಾ ರಸ್ತೆ ಗುಂಡಿಗಳನ್ನು ತುರ್ತಾಗಿ ಹಾಗೂ ಗುಣಮಟ್ಟ ಕಾಪಾಡಿಕೊಂಡು ಮುಚ್ಚಬೇಕು.
2. ಚಿಕ್ಕಪೇಟೆ ವಿಭಾಗದ ವ್ಯಾಪ್ತಿಯ ಪ್ರಮುಖ ಜಂಕ್ಷನ್‌ಗಳಿಗೆ ಬೇರೆ ಬೇರೆ ವಿನ್ಯಾಸ ರೂಪಿಸಿ ಅನುಷ್ಠಾನಗೊಳಿಸಬೇಕು.
3. ಹೊಸೂರು ರಸ್ತೆಯ ಮೇಲ್ಮೈ ತೀರಾ ಹಾಳಾಗಿದೆ, ಅದಕ್ಕೆ ತಕ್ಷಣವೇ ಡಾಂಬರೀಕರಣ (Resurfacing) ಮಾಡಬೇಕು.
4. ರಸ್ತೆ ಬದಿಯ ತ್ಯಾಜ್ಯ (ಬ್ಲಾಕ್ ಸ್ಪಾಟ್‌ಗಳು) ತೆರವುಗೊಳಿಸಿ, ಮತ್ತೆ ಬ್ಲಾಕ್ ಸ್ಪಾಟ್‌ಗಳಾಗದಂತೆ ತಡೆಯಬೇಕು.
5. ಜೆ.ಸಿ. ರಸ್ತೆಯಲ್ಲಿರುವ ಪಾಲಿಕೆ ಜಾಗದ ಸುತ್ತಲೂ ಕಾಂಪೌಂಡ್/ತಂತಿ ಬೇಲಿ ಹಾಕಿ, ಜಾಗದ ಅಭಿವೃದ್ಧಿಗೆ ವಿಸ್ತೃತ ಯೋಜನಾ ವರದಿ (DPR) ತಯಾರಿಸಬೇಕು ಎನ್ನುವುದು ಸೇರಿದಂತೆ ಕೆಲವೊಂದು ಪ್ರಮುಖ ಸೂಚನೆಗಳನ್ನು ಆಯುಕ್ತರು ನೀಡಿದ್ದಾರೆ.












Click it and Unblock the Notifications