Bengaluru Weather: ಫೆಂಗಲ್ ಚಂಡಮಾರುತ: ಬೆಂಗಳೂರು ನಿವಾಸಿಗಳಿಗೆ ಖುಷಿ ಸುದ್ದಿ
ಬೆಂಗಳೂರು, ನವೆಂಬರ್ 27: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ವಿಪರೀತ ಚಳಿ ವಾತಾವರಣ ನಿರ್ಮಾಣವಾಗಿದೆ. ಈಗಲೋ ಆಗಲೋ ಮಳೆ ಬರುವ ಹಾಗಿದೆ. ಕೆಲವೆಡೆ ಸೋನೆ ಮಳೆ ಸಹ ಸುರಿದಿದ್ದು, ತಾಪಮಾನ ತೀವ್ರ ಇಳಿಕೆ ಕಂಡಿದೆ. ಇತ್ತ ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ವಾಯುಭಾರ ಕುಸಿತವು ಇದೀಗ 'ಫೆಂಗಲ್' ಚಂಡಮಾರುತವಾಗಿ ಬದಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಏನೆಲ್ಲ ಎಫೆಕ್ ಆಗಲಿದೆ, ಭಾರೀ ಮಳೆ ಬರುತ್ತಾ? ಇಲ್ಲವಾ ಎಂಬ ಮುನ್ಸೂಚನೆ ಇಲ್ಲಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ನೀಡಿರುವ ಮುನ್ಸೂಚನೆ ಪ್ರಕಾರ, ಮುಂದಿನ ಎರಡು ದಿನಗಳ ಕಾಲ ಇದೇ ರೀತಿ ಚಳಿ, ತೇವಭರಿತ ಗಾಳಿ ಬೀಸುವಿಕೆ ಲಕ್ಷಣಗಳು ಮುಂದುವರಿಯಲಿವೆ. ಖುಷಿಯ ವಿಚಾರವೇನೆಂದರೆ, ಮುಂದಿನ ಎರಡು ದಿನದ ಬಳಿಕ ಬೆಂಗಳೂರಿನಲ್ಲಿ ಮತ್ತೆ ಚಳಿ ಕಡಿಮೆ ಆಗಿ ಶುಷ್ಕ ವಾತಾವರಣ ಅಂದರೆ ಒಣ ಹವೇ ಸೃಷ್ಟಿಯಾಗಲಿದೆ ಎಂದು ಬುಧವಾರದ ಮುನ್ಸೂಚನಾ ವರದಿ ಮಾಹಿತಿ ನೀಡಿದೆ.

ಬೆಂಗಳೂರಿನ ತಾಪಮಾನ ಎಷ್ಟಿದೆ?
ಸದ್ಯ ಬೆಂಗಳೂರಿನಲ್ಲಿ ಗರಿಷ್ಠ 24 ಹಾಗೂ ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿದೆ. ನವೆಂಬರ್ 30ರಿಂದ ಮತ್ತೆ ನಗರದಲ್ಲಿ ಈ ಚಳಿ ವಾತಾವರಣ ಕಣ್ಮರೆಯಾಗಲಿದೆ. ನಂತರ ವ್ಯಾಪಕ ಬಿಸಿಲು ಬೀಳುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
ಹಿಂಗಾರು ಮಳೆಗಾಲ ಆರಂಭದಲ್ಲಿ ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತೆ ಭಾರೀ ಮಳೆ ಆಗಿತ್ತು. ನಂತರ ಕಡಿಮೆ ಆಗುತ್ತಾ ಬಂದಿತಲ್ಲದೇ ಬೆಂಗಳೂರಿನಲ್ಲಿ ಎರಡು ಮೂರು ದಿನಗಳ ಕಾಲ ಭರ್ಜರಿ ಮಳೆ ಆಯಿತು. ಪ್ರವಾಹ ಸ್ಥಿತಿ ನಿರ್ಮಾಣವಾಗಿತ್ತು..
ಇನ್ನೇನು ಬೆಂಗಳೂರಿನಲ್ಲಿ ಮಳೆ ಕಡಿಮೆ ಆಯಿತು ಎನ್ನುವಷ್ಟರಲ್ಲಿ ಬದಲಾದ ಹವಾಮಾನ ವೈಪರಿತ್ಯಗಳ ಕಾರಣದಿಂದಾಗಿ ಬೆಂಗಳೂರಿನಲ್ಲಿ ಮಬ್ಬು ವಾತಾವರಣ ಕವಿದಿದೆ. ಮುಂದಿನ ಎರಡು ದಿನಗಳ ಬಳಿಕ ವಾತಾವರಣ ಸಹಜ ಸ್ಥಿತಿಗೆ ಮರಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾದ ವಾಯುಭಾರ ಕುಸಿತವು 'ಫೆಂಗಲ್' ಚಂಡಮಾರುತವಾಗಿ ಬದಲಾಗಿದೆ. ಇದು ಬುಧವಾರ ರಾತ್ರಿ ಇಲ್ಲವೇ ನಾಳೆ ಗುರುವಾರ ನವೆಂಬರ್ 28ರಂದು ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.
ಚಂಡಮಾರುತ ಎಫೆಕ್ಟ್ ಸದ್ಯಕ್ಕೆ ಎಲ್ಲೆಲ್ಲಿ?
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಫೆಂಗಲ್ ಚಂಡಮಾರುತದಿಂದ ಬೆಂಗಳೂರು, ಇಲ್ಲವೇ ಕರ್ನಾಟಕದ ಮೇಲೆ ಅಷ್ಟೇನು ಪ್ರಭಾವ ಇರುವುದಿಲ್ಲ. ತಮಿಳುನಾಡು, ಚೆನ್ನೆ, ಶ್ರೀಲಂಕ ಸೇರಿದಂತೆ ಒಂದಷ್ಟು ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯ ಸಾಧ್ಯತೆ ಇದೆ.
ಇನ್ನೂ ತಮಿಳುನಾಡಿನಲ್ಲಿ ಮಕ್ಕಳ ಹಿತದೃಷ್ಟಿಯಿಂದಾಗಿ ಈಗಾಗಲೇ ಶಾಲೆಗಳಿಗೆ ರಜೆ ನೀಡಲಾಗಿದೆ. ಮುಂದಿನ 48 ಗಂಟೆಗಳಲ್ಲಿ ಈ ಚಂಡಮಾರುತದ ತೀವ್ರತೆ ಹೇಗಿರಲಿದೆ ಎಂಬ ಸ್ಪಷ್ಟ ಚಿತ್ರಣ ಸಿಗಲಿದೆ. ಅದಾದ ಬಳಿಕ ಭಾರೀ ಮಳೆಯು ಎಲ್ಲೆಲ್ಲ ಆರ್ಭಟಿಸಲಿದೆ ಎಂಬ ಮಾಹಿತಿ ಸಿಗಲಿದೆ ಎಂದು ಹೇಳಬಹುದು.












Click it and Unblock the Notifications