3.6 ಲಕ್ಷ ರೂ. ಖರ್ಚು ಮಾಡಿ 80 ಸಾವಿರ ಉಳಿಸಿದ ಬೆಂಗಳೂರು ಟೆಕ್ಕಿ: Viral ಆಯ್ತು ಸಾಫ್ಟ್‌ವೇರ್ ಇಂಜಿನಿಯರ್ ತಿಂಗಳ ಬಜೆಟ್
ಬೆಂಗಳೂರಿನಲ್ಲಿ ಜೀವನ ನಿರ್ವಹಣೆ ಸ್ವಲ್ಪ ದುಬಾರಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಇಲ್ಲೊಬ್ಬ ಸಾಫ್ಟ್‌ವೇರ್ ಇಂಜಿನಿಯರ್ ಕೇವಲ ಒಂದೇ ತಿಂಗಳಲ್ಲಿ ಬರೋಬ್ಬರಿ 3.6 ಲಕ್ಷ ರೂಪಾಯಿಗಳನ್ನು ಖರ್ಚು ಮಾಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಮಾರ್ಚ್ ತಿಂಗಳಲ್ಲಿ ತಮ್ಮ ಒಟ್ಟು ಖರ್ಚುಗಳೇನು ಎಂಬುದರ ಕುರಿತು ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ವಿವರವಾಗಿ ಹಂಚಿಕೊಂಡಿದ್ದಾನೆ.
ಸೌರಜ ಎಂಬ ಹೆಸರಿನ ಈ ಯುವಕ ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಇದರಲ್ಲಿ ಅವರು ತಮ್ಮ ಮಾಸಿಕ ಖರ್ಚಿನ ಸಂಪೂರ್ಣ ಲೆಕ್ಕಾಚಾರವನ್ನು ಬಿಚ್ಚಿಟ್ಟಿದ್ದಾರೆ. ಹೊಸ ಬೈಕ್ ಖರೀದಿ, ಊರಿಗೆ ಕಳುಹಿಸಿದ ಹಣ, ಮನೆ ಬಾಡಿಗೆ, ಮ್ಯೂಚುವಲ್ ಫಂಡ್ ಹೂಡಿಕೆಗಳು, ದಿನಸಿ ಮತ್ತು ಪ್ರಯಾಣದ ಖರ್ಚುಗಳು ಇಷ್ಟು ದೊಡ್ಡ ಮೊತ್ತದಲ್ಲಿ ಸೇರಿವೆ. ಈ ವಿಡಿಯೋ ಇದೀಗ ನೆಟ್ಟಿಗರ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ವೈರಲ್ ಆಗುತ್ತಿದೆ.

ಈ ವೈರಲ್ ವಿಡಿಯೋದಲ್ಲಿ ಮಾತನಾಡಿರುವ ಸೌರಜ, "ಬೆಂಗಳೂರಿನಲ್ಲಿ ವಾಸಿಸುವ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಮಾರ್ಚ್ ತಿಂಗಳಲ್ಲಿ ನಾನು 3.6 ಲಕ್ಷ ರೂಪಾಯಿಗಳನ್ನು ಹೇಗೆ ಖರ್ಚು ಮಾಡಿದೆ ಎಂಬುದನ್ನು ಬನ್ನಿ ನೋಡೋಣ. ಕಳೆದ ತಿಂಗಳು ನಾನು ಏನಕ್ಕೆಲ್ಲ ಹಣ ಖರ್ಚು ಮಾಡಿರುವೆ ಎಂಬುದರ ಪಟ್ಟಿ ಇಲ್ಲಿದೆ" ಎಂದು ವಿವರಿಸಲು ಶುರುಮಾಡಿದ್ದಾರೆ. "ನನ್ನ ಅತಿ ದೊಡ್ಡ ಮತ್ತು ದುಬಾರಿ ಖರ್ಚು ಎಂದರೆ ಅದು ನನ್ನ ಹೊಸ ಬೈಕ್. ನಾನು ಫೆಬ್ರವರಿ ತಿಂಗಳ ಕೊನೆಯಲ್ಲಿ ಇದನ್ನು ಖರೀದಿಸಿದೆ. ಕ್ರೆಡಿಟ್ ಕಾರ್ಡ್ ಬಳಸಿ ಬೈಕ್‌ನ ಎಕ್ಸ್-ಶೋರೂಮ್ ಬೆಲೆಯನ್ನು ಪಾವತಿಸಿದ್ದೆ. ಹೀಗಾಗಿ ಮಾರ್ಚ್‌ನಲ್ಲಿ ಆ ಕ್ರೆಡಿಟ್ ಕಾರ್ಡ್ ಬಿಲ್ ತೀರಿಸಬೇಕಿತ್ತು. ಆ ಮೊತ್ತವು ಸುಮಾರು 2.51 ಲಕ್ಷ ರೂಪಾಯಿಗಳಾಗಿತ್ತು" ಎಂದು ಅವರು ವಿವರಿಸಿದ್ದಾರೆ. ಇದೇ ಅವರ ಖರ್ಚಿನ ಬಹುದೊಡ್ಡ ಭಾಗವಾಗಿತ್ತು.
ಹೊಸ ಬೈಕ್ ಜೊತೆಗೆ ತಾವು ಕುಟುಂಬಕ್ಕೂ ಆರ್ಥಿಕವಾಗಿ ಬೆಂಬಲ ನೀಡುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ. "ನಾನು ನನ್ನ ತಾಯಿಗೆ ಮತ್ತು ಮನೆ ಖರ್ಚಿಗೆಂದು ಪ್ರತಿ ತಿಂಗಳು ಹಣ ಕಳುಹಿಸುತ್ತೇನೆ, ಅದು ಸುಮಾರು 50,000 ರೂಪಾಯಿಗಳಷ್ಟಾಗುತ್ತದೆ. ನಂತರ ಭವಿಷ್ಯದ ದೃಷ್ಟಿಯಿಂದ ಎಸ್ಐಪಿ (SIP) ಮತ್ತು ಇತರ ಹೂಡಿಕೆಗಳಿಗಾಗಿ ಸುಮಾರು 20,000 ರೂಪಾಯಿಗಳನ್ನು ಮೀಸಲಿಡುತ್ತೇನೆ" ಎಂದಿದ್ದಾರೆ. ಇನ್ನು ಬೆಂಗಳೂರಿನಂತಹ ಮಹಾನಗರದಲ್ಲಿ ಮನೆ ಬಾಡಿಗೆ ಪ್ರಮುಖವಾಗಿರುತ್ತದೆ. ಈ ಬಗ್ಗೆ ಮಾತನಾಡಿರುವ ಅವರು, "ನಾನು 3 ಬಿಎಚ್‌ಕೆ (3 BHK) ಫ್ಲಾಟ್‌ನಲ್ಲಿ ಸ್ನೇಹಿತರೊಂದಿಗೆ ವಾಸಿಸುತ್ತಿದ್ದೇನೆ. ಇದರಲ್ಲಿ ನನ್ನ ಪಾಲಿನ ಬಾಡಿಗೆ ಸುಮಾರು 18,000 ರೂ. ಬರುತ್ತದೆ" ಎಂದು ಹೇಳಿದ್ದಾರೆ.
ದೈನಂದಿನ ಖರ್ಚುಗಳ ಕುರಿತು ಮತ್ತಷ್ಟು ಮಾಹಿತಿ ನೀಡಿರುವ ಅವರು, ಅಡುಗೆ ಮಾಡುವವರು ಮತ್ತು ಮನೆಗೆಲಸದವರ ಖರ್ಚು ಸುಮಾರು 3,700 ರೂ., ಹೊರಗಿನಿಂದ ಫುಡ್ ಆರ್ಡರ್ ಮತ್ತು ಡಿನ್ನರ್‌ಗೆ 2,000 ರೂ. ಖರ್ಚಾಗಿದೆ ಎಂದಿದ್ದಾರೆ. ಇವರ ಮನೆಯ ವಿದ್ಯುತ್ ಬಿಲ್ 700 ರೂ. ಬಂದಿದೆ. ದಿನಸಿಗೆಂದು 5,000 ರೂ. ಖರ್ಚಾಗಿದೆ. ವಿಶೇಷವೆಂದರೆ, ಫೋನ್ ಮತ್ತು ಇಂಟರ್ನೆಟ್ ಬಿಲ್‌ಗಳನ್ನು ಇವರ ಕಂಪನಿಯೇ ಭರಿಸುವುದರಿಂದ ಆ ಖರ್ಚುಗಳು ಇವರಿಗೆ ಉಳಿತಾಯವಾಗಿವೆ. ಇನ್ನು ಹೊಸ ಬೈಕ್ ಖರೀದಿಸಿದ ಕಾರಣ ಈ ತಿಂಗಳು ಇಂಧನ ಮತ್ತು ಪ್ರಯಾಣದ ವೆಚ್ಚ ತುಸು ಹೆಚ್ಚಾಗಿದೆ. "ಮೊದಲ ಸರ್ವೀಸ್‌ಗೂ ಮುನ್ನ ಬೈಕ್‌ನಲ್ಲಿ 1,000 ಕಿಲೋಮೀಟರ್ ಪೂರೈಸುವ ಆಸೆ ನನಗಿತ್ತು. ಹೀಗಾಗಿ ನಾನು ಕೊಡಗಿಗೆ ಪ್ರವಾಸ ಕೈಗೊಂಡಿದ್ದೆ. ಆ ಟ್ರಿಪ್‌ಗೆ ನನ್ನ ಪಾಲಿನ ಖರ್ಚು ಸುಮಾರು 6,000 ರೂ. ಬಂದಿತ್ತು" ಎಂದು ವಿವರಿಸಿದ್ದಾರೆ.
ಎಲ್ಲ ಲೆಕ್ಕಾಚಾರಗಳನ್ನು ಮುಕ್ತಾಯಗೊಳಿಸುತ್ತಾ ಅವರು, "ಒಟ್ಟಾರೆಯಾಗಿ ಮಾರ್ಚ್ ತಿಂಗಳ ನನ್ನ ಖರ್ಚು 3,59,000 ದಿಂದ 3,60,000 ರೂ.ಗಳವರೆಗೆ ಆಗಿದೆ. ಆದರೆ ಅಚ್ಚರಿಯ ವಿಚಾರವೆಂದರೆ, ಇಷ್ಟೆಲ್ಲಾ ಖರ್ಚು ಮಾಡಿದ ಮೇಲೂ, ಮಾರ್ಚ್‌ನಲ್ಲಿ ನಾನು ಪಡೆದ ಸಂಬಳದಲ್ಲಿ ಸುಮಾರು 80,000 ರೂಪಾಯಿಗಳನ್ನು ಉಳಿತಾಯ ಮಾಡಿದ್ದೇನೆ" ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಟೆಕ್ಕಿಗಳ ಸಂಬಳ, ಜೀವನಶೈಲಿ ಮತ್ತು ಖರ್ಚು ಮಾಡುವ ಅಭ್ಯಾಸಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. "ತಿಂಗಳಿಗೆ 3.6 ಲಕ್ಷ ಖರ್ಚು ಮಾಡಿ, 80 ಸಾವಿರ ಉಳಿಸುವುದು ನಿಜಕ್ಕೂ ಅದ್ಭುತ" ಎಂದು ಕಾಮೆಂಟ್ ಮಾಡಿದ್ದಾರೆ. "ಬೈಕ್ ಖರೀದಿಯೇ ಇಡೀ ತಿಂಗಳ ಲೆಕ್ಕಾಚಾರವನ್ನು ಬದಲಿಸಿದೆ" ಎಂದು ಮತ್ತೊಬ್ಬರು ಹೇಳಿದ್ದಾರೆ. "ಈ ವಿಡಿಯೋ ನೋಡಿದ ಮೇಲೆ ಅವರ ಒಟ್ಟು ಸಂಬಳ ಎಷ್ಟಿರಬಹುದು ಎಂದು ತಿಳಿಯುವ ಕುತೂಹಲ ಹೆಚ್ಚಾಗಿದೆ, ಖರ್ಚಿನ ಬಗ್ಗೆ ಯಾರಿಗೂ ಆಸಕ್ತಿಯಿಲ್ಲ" ಎಂದು ಕೆಲವರು ತಮಾಷೆ ಮಾಡಿದ್ದಾರೆ.












Click it and Unblock the Notifications