ಬೆಂಗಳೂರು : ಡೇಟಿಂಗ್ ಆ್ಯಪ್ ಸುಂದರಿಯ ಜಾಲಕ್ಕೆ ಬಿದ್ದು 1.66 ಕೋಟಿ ರೂ. ಕಳೆದುಕೊಂಡ ಟೆಕ್ಕಿ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡೇಟಿಂಗ್ ಆ್ಯಪ್ ಸುಂದರಿಯ ಮೋಹದ ಬಲೆಗೆ ಬಿದ್ದು ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಬರೋಬ್ಬರಿ 1.66 ಕೋಟಿ ರೂಪಾಯಿಗೂ ಅಧಿಕ ಹಣ ಕಳೆದುಕೊಂಡ ಪ್ರಕರಣ ಬಯಲಾಗಿದೆ. ಮದುವೆಯಾಗುವ ಆಮಿಷ ಒಡ್ಡಿ, ಶೇರು ಮಾರುಕಟ್ಟೆ ಹೂಡಿಕೆಯ ನೆಪದಲ್ಲಿ ಸೈಬರ್ ವಂಚಕಿಯೊಬ್ಬಳು ಈ ಬೃಹತ್ ವಂಚನೆ ಎಸಗಿರುವುದು ಎಂದು ತಿಳಿದು ಬಂದಿದೆ. ಈ ಕುರಿತು 29 ವರ್ಷದ ಸಂತ್ರಸ್ತ ಟೆಕ್ಕಿ ನೀಡಿರುವ ದೂರಿನ ಅನ್ವಯ, ಬೆಂಗಳೂರಿನ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಟೆಕ್ಕಿ, ಕಳೆದ ಫೆಬ್ರವರಿ ತಿಂಗಳಿನಲ್ಲಿ 'ಟಾಂಟಾಂ' (Tantan) ಹೆಸರಿನ ಡೇಟಿಂಗ್ ಆ್ಯಪ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಈ ವೇಳೆ ಅವರಿಗೆ 'ರಿಯಾ ಅಗರ್ವಾಲ್' ಎಂಬ ಹೆಸರಿನ ಯುವತಿಯ ಪರಿಚಯವಾಗಿತ್ತು. ದಿನಕಳೆದಂತೆ ಇಬ್ಬರ ನಡುವಿನ ಸ್ನೇಹ ಹತ್ತಿರವಾಗಿದ್ದು, ಇಬ್ಬರು ವಾಟ್ಸ್ಯಾಪ್ ಮತ್ತು ಟೆಲಿಗ್ರಾಂ ಮೂಲಕ ವಿಡಿಯೋ ಕರೆಗಳಲ್ಲಿ ಮಾತನಾಡಲು ಆರಂಭಿಸಿದ್ದರು. ಅಷ್ಟೇ ಅಲ್ಲದೆ, ಪರಸ್ಪರ ಮದುವೆಯಾಗುವ ಬಗ್ಗೆಯೂ ಮಾತುಕತೆ ನಡೆಸಿದ್ದರು ಎನ್ನಲಾಗಿದೆ.

Bengaluru Techie

ಹೂಡಿಕೆ ನೆಪದಲ್ಲಿ ಆಟ ಶುರು

ಟೆಕ್ಕಿಯನ್ನು ಸಂಪೂರ್ಣವಾಗಿ ತನ್ನ ಮಾತಿನ ಮೂಲಕ ಮರುಳಾಗಿಸಿಕೊಂಡಿದ್ದ ರಿಯಾ ಅಗರ್ವಾಲ್, "ನಾವು ಮದುವೆಯಾಗುವ ಮುಂಚೆ ಹೆಚ್ಚಿನ ದುಡ್ಡು ಸಂಪಾದನೆ ಮಾಡೋಣ. ಶೇರು ಮಾರುಕಟ್ಟೆ ಮತ್ತು ಹೂಡಿಕೆಯಲ್ಲಿ ತೊಡಗಿಸಿಕೊಂಡರೆ ಕೆಲವೇ ದಿನಗಳಲ್ಲಿ ಕೋಟಿ ಕೋಟಿ ರೂಪಾಯಿ ಗಳಿಸಬಹುದು" ಎಂದು ನಂಬಿಸಿದ್ದಾಳೆ. ಆಕೆಯ ಮಾತುಗಳನ್ನು ಸತ್ಯವೆಂದು ನಂಬಿದ ಟೆಕ್ಕಿ, ಆಕೆ ಟೆಲಿಗ್ರಾಂ ಆ್ಯಪ್ ಮೂಲಕ ಕಳುಹಿಸಿಕೊಟ್ಟಿದ್ದ ನಕಲಿ ಹೂಡಿಕೆ ಲಿಂಕ್‌ಗಳನ್ನು ಕ್ಲಿಕ್ ಮಾಡಿ ಹಣ ಹೂಡಿಕೆ ಮಾಡಲು ಆರಂಭಿಸಿದ್ದಾರೆ.

ಫೆಬ್ರವರಿ 20 ರಿಂದ ಮೇ 7 ರವರೆಗಿನ ಅವಧಿಯಲ್ಲಿ ಟೆಕ್ಕಿ ಒಟ್ಟು 26 ಕ್ಕೂ ಹೆಚ್ಚು ಆನ್‌ಲೈನ್ ವಹಿವಾಟುಗಳ ಮೂಲಕ ಬರೋಬ್ಬರಿ 1,66,37,000 ರೂಪಾಯಿಗಳನ್ನು ಆಕೆ ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಆರಂಭದಲ್ಲಿ ಹೂಡಿಕೆಗೆ ಭಾರೀ ಲಾಭ ಬಂದಿರುವುದಾಗಿ ನಕಲಿ ವೆಬ್‌ಸೈಟ್‌ನಲ್ಲಿ ತೋರಿಸಲಾಗಿತ್ತಾದರೂ, ಟೆಕ್ಕಿಗೆ ಪ್ರಾಯೋಗಿಕವಾಗಿ ಒಂದು ರೂಪಾಯಿ ಲಾಭವೂ ಸಿಕ್ಕಿರಲಿಲ್ಲ. ತಾವು ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಯತ್ನಿಸಿದಾಗ ತಾಂತ್ರಿಕ ತೊಂದರೆ ನೆಪವೊಡ್ಡಲಾಗಿತ್ತು.

ಸಂಪರ್ಕ ಕಡಿತಗೊಳಿಸಿದ ವಂಚಕಿ

ಅಪಾರ ಪ್ರಮಾಣದ ಹಣ ಕೈ ಸೇರಿದ ಬಳಿಕ ಆರೋಪಿ ರಿಯಾ ಅಗರ್ವಾಲ್ ತನ್ನ ವಾಟ್ಸ್ಯಾಪ್ ಹಾಗೂ ಟೆಲಿಗ್ರಾಂ ಖಾತೆಗಳನ್ನು ಡಿಲೀಟ್ ಮಾಡಿ, ಸಂಪರ್ಕ ಕಡಿತಗೊಳಿಸಿದ್ದಾಳೆ. ಇದರಿಂದ ತಾನು ವಂಚನೆಗೆ ಒಳಗಾಗಿರುವುದನ್ನು ಅರಿತ ಟೆಕ್ಕಿ ತಕ್ಷಣವೇ ಸೈಬರ್ ಪೊಲೀಸರ ಮೊರೆ ಹೋಗಿದ್ದಾರೆ. ವಂಚನೆ ಎಸಗಿರುವ ರಿಯಾ ಅಗರ್ವಾಲ್ ಎಂಬುದು ನಕಲಿ ಗುರುತಾಗಿದ್ದು, ಸೈಬರ್ ವಂಚಕರು ಬೇರೆ ಹೆಸರಿನಲ್ಲಿ ಜಾಲ ಹೆಣೆದಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಹಣ ವರ್ಗಾವಣೆಯಾಗಿರುವ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ, ಅವು ಕೆಲವು ಸ್ಥಳೀಯ ರಿಟೇಲ್ ಶಾಪ್‌ಗಳಿಗೆ ಹಾಗೂ ಹೊರರಾಜ್ಯದ ವಿವಿಧ ಬ್ಯಾಂಕ್ ಖಾತೆಗಳಿಗೆ ಲಿಂಕ್ ಆಗಿರುವುದು ಪತ್ತೆಯಾಗಿದೆ. ಸದ್ಯ ಪೊಲೀಸರು ಈ ಖಾತೆಗಳ ಜಾಡನ್ನು ಹಿಡಿದು ತನಿಖೆ ಚುರುಕುಗೊಳಿಸಿದ್ದಾರೆ. ಅಪರಿಚಿತ ಆ್ಯಪ್‌ಗಳು ಹಾಗೂ ಆನ್‌ಲೈನ್ ಲಿಂಕ್‌ಗಳ ಮೂಲಕ ಹಣ ಹೂಡಿಕೆ ಮಾಡುವ ಮುನ್ನ ಸಾರ್ವಜನಿಕರು ಎಚ್ಚರದಿಂದಿರಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+