Bengaluru Suburban Rail: ಭೂಸ್ವಾಧೀನ ಕಾರಣಕ್ಕೆ ಯೋಜನೆ ವಿಳಂಬ, ಒಂದೇ ವರ್ಷಕ್ಕೆ ಶೇ.9ರಷ್ಟು ವೆಚ್ಚ ಏರಿಕೆ!
ಬೆಂಗಳೂರು: ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ (BSRP) ಸಂಬಂಧಿಸಿದಂತೆ ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಲು, ಭೂಸ್ವಾಧೀನ, ಅನುಷ್ಠಾನ ಮತ್ತು ಕಾಮಗಾರಿ ವೇಗ ಹೆಚ್ಚಿಸಲು ಕೆ-ರೈಡ್, ಕರ್ನಾಟಕ ಸರ್ಕಾರ ಹಾಗೂ ರೈಲ್ವೆ ಸಚಿವಾಲಯದ ನಡುವೆ ನಿಯಮಿತ ಸಮನ್ವಯ ಸಭೆಗಳು ನಡೆಸಲಾಗುತ್ತಿದೆ. ಯೋಜನೆ ವಿಳಂಬದಿಂದಾಗಿ 2026-27ರಲ್ಲಿ ಒಂದೇ ಆರ್ಥಿಕ ವರ್ಷದಲ್ಲಿ ಶೇ.9 ಪಟ್ಟು ಹೆಚ್ಚಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಸಂಸದ ಪಿಸಿ ಮೋಹನ್ ಅವರು ಬೆಂಗಳೂರು ಉಪನಗರ ರೈಲು ಯೋಜನೆಯ (BSRP) ಸ್ಥಿತಿಗತಿಯ ಕುರಿತು ಕೇಳಿದ ಪ್ರಶ್ನೆಗಳಿಗೆ ಕೇಂದ್ರ ರೈಲ್ವೆ ಸಚಿವರನ್ನು ಈ ರೀತಿ ಉತ್ತರಿಸಿದ್ದಾರೆ ಎಂದು ಸಂಸದರು ಎಕ್ಸ್ ಮೂಲಕ ಯೋಜನೆ ಅಪ್ಡೇಟ್ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ವೃತ್ತಾಕಾರವಾಗಿ ಜಾರಿಗೊಳಿಸಲು ಉದ್ದೇಶಿಸಲಾದ 148.17 ಕಿಲೋ ಮೀಟರ್ ಉದ್ದದ ಬೆಂಗಳೂರು ಉಪನಗರ ರೈಲು ಯೋಜನೆಯನ್ನು (BSRP) ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿ (K-RIDE) ಅನುಷ್ಠಾನಗೊಳಿಸುತ್ತಿದೆ. ಇದರಲ್ಲಿ ಶೇ. 51 ಪಾಲು ಕರ್ನಾಟಕ ಸರ್ಕಾರ ಹೊಂದಿದೆ. ಈಗಾಗಲೇ ಶೇ. 15,767 ಕೋಟಿ ವೆಚ್ಚದಲ್ಲಿ ಮಂಜೂರಾತಿ ನೀಡಲಾಗಿದೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಶೇ. 20ರಷ್ಟು ವೆಚ್ಚ ಭರಿಸುತ್ತಿದ್ದು, ಉಳಿದ ಶೇ.60ರಷ್ಟು ಹಣವನ್ನು ಸಾಲದ ರೂಪದಲ್ಲಿ ಪಡೆಯಲಾಗುತ್ತದೆ ಎಂದು ಸಚಿವರು ಹೇಳಿದರು.
ರಾಜ್ಯ ಸರ್ಕಾರದಿಂದ ಯೋಜನೆ ವಿಳಂಬ!
ಯೋಜನೆಗೆ ಅಗತ್ಯವಾದ ಭೂಸ್ವಾಧೀನ ವಿಳಂಬವಾಗಿದೆ. ಖಾಸಗಿ ಭೂಮಿಯನ್ನು ಸ್ವಾಧೀನಕ್ಕೆ ಪಡೆದು ಅದನ್ನು ಸರ್ಕಾರ ವರ್ಗಾಯಿಸದ ಕಾರಣ ಯೋಜನೆಯ ಪ್ರಗತಿ ನಿಧಾನವಾಗಿದ್ದನ್ನು ರಾಜ್ಯ ಸರ್ಕಾರವೇ ಒಪ್ಪಿಕೊಂಡಿದೆ. K-RIDE ನಲ್ಲಿ ಪೂರ್ಣಾವಧಿ ವ್ಯವಸ್ಥಾಪಕ ನಿರ್ದೇಶಕರ ಅನುಪಸ್ಥಿತಿಯು ಸಹ ಕಾಮಗಾರಿ ಆಮೆಗತಿ ಸಾಗಲು ಕಾರಣವಾಗಿತ್ತು. ಸದ್ಯ ಪೂರ್ಣಾವಧಿ ವ್ಯವಸ್ಥಾಪಕ ನಿರ್ದೇಶಕರು ನೇಮಕವಾಗುವ ಮೂಲಕ ಎಲ್ಲ ಗೊಂದಲ ಬಗೆಹರಿದಿದೆ ಎಂದು ಸಂಸದರಿಗೆ ಸಚಿವರು ತಿಳಿಸಿದರು.
BSRP ನಾಲ್ಕು ಕಾರಿಡಾರ್ ಸ್ಥಿತಿಗತಿ ಹೇಗಿದೆ?
* ಸಂಪಿಗೆ ಕಾರಿಡಾರ್-1: ಕೆಎಸ್ಆರ್ ಬೆಂಗಳೂರು ನಗರ-ದೇವನಹಳ್ಳಿ (41.4 ಕಿಮೀ) ಜೋಡಿಸುವ ಕಾರಿಡಾರ್ ಇದಾಗಿದ್ದು, ಜಾರಿಗೆ ಅನುಮೋದನೆ ದೊರೆತಿದೆ. ರಾಜ್ಯ ಸರ್ಕಾರದಿಂದ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ. ಸಿಗ್ನಲಿಂಗ್, ದೂರಸಂಪರ್ಕ ಮತ್ತು ವಿದ್ಯುತ್ ಉಪಯುಕ್ತತೆಗಳ ಸ್ಥಳಾಂತರ ಆರಂಭವಾಗಿದೆ. ಲಭ್ಯ ಭೂಮಿ ಸಿಗುತ್ತಿದ್ದಂತೆ ಗುತ್ತಿಗೆ ಕಂಪನಿಗಳು ಕಾಮಗಾರಿ ಆರಂಭಿಸುತ್ತವೆ.
* ಮಲ್ಲಿಗೆ ಕಾರಿಡಾರ್-2: ಬೈಯ್ಯಪ್ಪನಹಳ್ಳಿ-ಚಿಕ್ಕಬಾಣಾವರ (25.01 ಕಿಮೀ) ನಡುವೆ ಸಂಪರ್ಕ ಕಲ್ಪಿಸುವ ಈ ಕಾರಿಡಾರ್ ವ್ಯಾಪ್ತಿಯಲ್ಲಿ ಭೂಸ್ವಾಧೀನದ ಕೆಲಸ ಪೂರ್ಣಗೊಂಡಿದೆ. ನೀಡಲಾದ ನಿಲ್ದಾಣ ಕಟ್ಟಡಗಳಿಗೆ ಪ್ರತ್ಯೇಕ ಒಪ್ಪಂದಗಳು ಮತ್ತು ನಿರ್ಮಾಣ ಪ್ರಗತಿಯಲ್ಲಿದೆ. ಬಾಕಿ ಕಾಮಗಾರಿಗಳ ಪೂರ್ಣಕ್ಕೆ ವೇಗಗೊಳಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
* ಪಾರಿಜಾತ ಕಾರಿಡಾರ್-3: ಕೆಂಗೇರಿಯಿಂದ ವೈಟ್‌ಫೀಲ್ಡ್ (35.52 ಕಿಮೀ) ಜೋಡಿಸುವ ಈ ಮಾರ್ಗಕ್ಕೆ ರೈಲ್ವೆ ಇಲಾಖೆ ಅನುಮೋದನೆ ಕೊಟ್ಟಿದೆ. ಭೂಸ್ವಾಧೀನ ಮತ್ತು ಜಾಗ ಹಸ್ತಾಂತರ ಪ್ರಕ್ರಿಯೆಗಳು ನಡೆಯುತ್ತಿವೆ. ಇದು ಮುಗಿಯುತ್ತಿದ್ದಂತೆ ಬಾಕಿ ಕೆಲಸಗಳು ನಡೆಯಲಿವೆ. ಶೀಘ್ರವೇ ಕೆಲಸಗಳು ಆರಂಭಗೊಳ್ಳಲಿವೆ ಎಂದು ಹೇಳಲಾಗುತ್ತಿದೆ.
* ಕನಕ ಕಾರಿಡಾರ್-4: ಹೀಲಲಿಗೆ-ರಾಜನಕುಂಟೆ (46.25 ಕಿಮೀ): ಭೂಸ್ವಾಧೀನ ಪ್ರಗತಿಯಲ್ಲಿದೆ. ಸ್ವಾಧೀನಪಡಿಸಿಕೊಂಡ 57 ಎಕರೆಗಳಲ್ಲಿ 43 ಎಕರೆ. ನಿಲ್ದಾಣ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ. ಹಲವು ತಿಂಗಳುಗಳ ಹಿಂದೆ 'ಕನಕ ಮತ್ತು ಮಲ್ಲಿಗೆ' ಮಾರ್ಗದ ನಿರ್ಮಾಣ ಕೆಲಸಗಳು ಆರಂಭಗೊಂಡಿವೆ. ನಿಲ್ದಾಣಗಳ ನಿರ್ಮಿಸುವ ಮುನ್ನ ಸಮೀಕ್ಷೆ, ಮೇಲಿಂದ ಮೇಲೆ ಅಧಿಕಾರಿಗಳ ಪರಿಶೀಲನೆ ನಡೆಯುತ್ತಿದೆ. ಕಾಮಗಾರಿಗೆ ವೇಗ ನೀಡುವಂತೆ ಜನಪ್ರತಿನಿಧಿಗಳು ಸೂಚನೆ ನೀಡಿದ್ದಾರೆ.
ಅಂದಾಜು ವೆಚ್ಚ ಶೇ.9 ಪಟ್ಟು ಹೆಚ್ಚಳ
ಕರ್ನಾಟಕದ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸದಾ ಸಹಕಾರ ನೀಡುತ್ತದೆ, ಈ ವಿಚಾರದ ನಾವು ಬದ್ಧರಾಗಿದ್ದೇವೆ. ರೈಲ್ವೆ ಬಜೆಟ್ ಹಂಚಿಕೆ 2026-27ರಲ್ಲಿ ವರ್ಷಕ್ಕೆ 835 ಕೋಟಿಯಿಂದ (2009-14) 7,748 ಕೋಟಿಗೆ ಹೆಚ್ಚಾಗಿದೆ. ಅಂದರೆ ಈ ಮೊದಲು ಅಂದಾಜಿಸಿದ್ದ ಅಂದಾಜು ವೆಚ್ಚಕ್ಕಿಂತ ಶೇ.9 ಪಟ್ಟು ಹೆಚ್ಚಾಗಿದೆ ಎಂದು ಸಂಸದರ ಪ್ರಶ್ನೆಗೆ ಅಶ್ವಿನಿ ವೈಷ್ಣವ್ ಉತ್ತರಿಸಿದರು.
2014 ಮತ್ತು 2026ರ ಮಧ್ಯದ ಅವಧಿಯಲ್ಲಿ ರಾಜ್ಯದಲ್ಲಿ ಬರೋಬ್ಬರಿ 1,769 ಕಿ.ಮೀ ಹೊಸ ರೈಲ್ವೆ ಮಾರ್ಗಗಳನ್ನು ನಿಯೋಜಿಸಲಾಗಿದೆ. 2009 ರಿಂದ 2014ರ ಮಧ್ಯೆ ಕೇವಲ 565 ಕಿಲೋ ಮೀಟರ್ ರೈಲು ಮಾರ್ಗ ಅಭಿವೃದ್ಧಿಗೆ ಆದ್ಯತೆ ನೀಡಲಾಗಿತ್ತು ಎಂದು ಯುಪಿಎ ಸರ್ಕಾರಕ್ಕೆ ಟಾಂಟ್ ನೀಡಿದರು.
2026ರ ಏಪ್ರಿಲ್ 1ರ ಹೊತ್ತಿಗೆ ಕರ್ನಾಟಕದಾದ್ಯಂತ 49,272 ಕೋಟಿ ರೂಪಾಯಿ ವೆಚ್ಚದ 25 ರೈಲ್ವೆ ಯೋಜನೆಗಳು (15 ಹೊಸ ಮಾರ್ಗಗಳು ಮತ್ತು 10 ಕಡೆ ರೈಲ್ವೆ ಹಳಿ ಡಬ್ಲಿಂಗ್ ಯೋಜನೆಗಳು) ಕಾರ್ಯ ಗತಗೊಳ್ಳುತ್ತಿವೆ. ಅನೇಕ ಕಡೆಗಳಲ್ಲಿ ಯೋಜನೆಗಳ ಅನುಷ್ಠಾನ, ಕಾಮಗಾರಿ ಪ್ರಗತಿಯಲ್ಲಿವೆ ಎಂದು ಸಚಿವರು ವಿವರಿಸಿದ್ದಾರೆ ಎಂದು ಪಿಸಿ ಮೋಹನ್ ತಿಳಿಸಿದ್ದಾರೆ.


Click it and Unblock the Notifications
