Bengaluru Skydeck: ಸ್ಕೈಡೆಕ್ ಯೋಜನೆಗೆ ಜಾಗ ಫೈನಲ್, 46.25 ಎಕ್ರೆಯಲ್ಲಿ ನಿರ್ಮಾಣಕ್ಕೆ ಮೆಗಾ ಪ್ಲ್ಯಾನ್
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ನೂರಾರು ಕೋಟಿ ವೆಚ್ಚದ ವೀಕ್ಷಣಾ ಗೋಪುರ -ಸ್ಕೈಡೆಕ್ (skydeck) ನಿರ್ಮಾಣಕ್ಕೆ ಕೊನೆಗೂ ಸ್ಥಳ ಅಂತಿಮವಾಗಿದೆ. ಇತ್ತೀಚೆಗೆ ನಿರ್ಮಾಣವಾದ 'ಮೇಜರ್ ಆರ್ಟೀರಿಯಲ್ ರೋಡ್' (ಇದನ್ನು ಎಸ್.ಎಂ. ಕೃಷ್ಣ ರಸ್ತೆ) ಸಮೀಪ, ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆ ಸಂಪರ್ಕಿಸುವ ಪ್ರದೇಶ ಸಮೀಪ ಕೆಂಪೇಗೌಡ ಬಡಾವಣೆಯ 46.25 ಎಕರೆ ಜಾಗ ಫೈನಲ್ ಆಗಿದೆ. ಇಂದು ಕೆಪಿಎಂಜಿ ತಂಡದ ಸದಸ್ಯರು ಸ್ಥಳಕ್ಕೆ ಭೇಟಿ ಪರಿಶೀಲಿಸಲಿದ್ದಾರೆ.
ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕನಸಿನ ಯೋಜನೆಗಳಲ್ಲಿ ಇದು ಸ್ಕೈಡೆಕ್ ಯೋಜನೆ ಸಹ ಒಂದಾಗಿದ್ದು, 250 ಮೀಟರ್ ಎತ್ತರದಲ್ಲಿ ಒಟ್ಟು 600 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕೀಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) ಈ ಎತ್ತರದ ವೀಕ್ಷಣಾ ತಾಣಕ್ಕಾಗಿ (observation deck) ಜಾಗವನ್ನು ಗುರುತಿಸಿದೆ ಎಂದು ಬಿಡಿಎ ಸೈಟ್ ಇಂಜಿನಿಯರ್ ಅನಿಲ್ ಕುಮಾರ್ ಖಚಿತಪಡಿಸಿದ್ದಾರೆ ಎಂದು 'ಇಂಡಿಯನ್ ಎಕ್ಸ್‌ಪ್ರೆಸ್ ಡಾಟ್ ಕಾಮ್' ವರದಿ ಮಾಡಿದೆ.

ಎಲ್ಲಿ ನಿರ್ಮಾಣ?
ಇಲ್ಲಿನ ಭೀಮನಕುಪ್ಪೆ ಗ್ರಾಮದ ಸರ್ವೆ ನಂಬರ್ 104 ಮತ್ತು 75 ಹಾಗೂ ಚಲ್ಲಘಟ್ಟ ಗ್ರಾಮದ ಸರ್ವೆ ನಂಬರ್ 13, 58/3 ಮತ್ತು 49 ರಲ್ಲಿ ಜಾಗದಲ್ಲಿ ವೀಕ್ಷಣಾ ಗೋಪುರ ತಲೆ ಎತ್ತಲಿದೆ. ರಾಜಧಾನಿಯ ಸಂಸ್ಕೃತಿ, ಇತಿಹಾಸ ತಿಳಿಯಲು, ಮುಖ್ಯವಾಗಿ ಪ್ರವಾಸೋದ್ಯಮ ಮತ್ತು ಮನರಂಜನಾ ತಾಣವನ್ನಾಗಿ ಮಾಡಲು ಈಗಾಗಲೇ ಪ್ಲ್ಯಾನ್ ರೂಪಿಸಲಾಗಿದೆ.
ಈ ಸ್ಕೈಡೆಕ್ ಜಾಗದಲ್ಲಿ ವೀಕ್ಷಣೆಗೆ ಮಾತ್ರವಲ್ಲದೇ ವಿಶಾಲ ಜಾಗದಲ್ಲಿ ರೆಸ್ಟೋರೆಂಟ್‌ಗಳು, ಕಾರ್ಯಕ್ರಮ ಆಯೋಜನೆಗೂ ಅವಕಾಶ ನೀಡಲಾಗುತ್ತದೆ. ಒಟ್ಟಾರೆ ಬೆಂಗಳೂರಿನಲ್ಲಿ ಪ್ರವಾಸಿಗರಿಗೆ ಇದೊಂದು ಬೆಸ್ಟ್ ಹಾಟ್ ಸ್ಪಾಟ್ ಆಗಲಿದೆ.
ಈ ಹಿಂದೆ ಯೋಜಗೆ ಅನುಷ್ಠಾನಕ್ಕಾಗಿ ಹೆಮ್ಮಿಗೆಪುರ, ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಬೈಯಪ್ಪನಹಳ್ಳಿ ಸಮೀಪದ ಜಾಗಗಳನ್ನು ಗುರುತಿಸಲಾಗಿತ್ತು. ಆದರೆ ಹಾಲಿ ವಿಮಾನ ನಿಲ್ದಾಣಕ್ಕೆ ಬರುವ ಮತ್ತು ಅಲ್ಲಿಂದ ತೆರಳುವು ವಿಮಾನಗಳ ಸಂಚಾರ ಯಾವುದೇ ರೀತಿಯ ತೊಂದರೆ ಆಗದಂತೆ ಮುನ್ನೆಚ್ಚರಿಕೆ ದೃಷ್ಟಿಯಿಂದ ನಗರ ಪಶ್ಚಿಮ ಭಾಗದಲ್ಲಿ ಜಾಗ ಫೈನಲ್ ಮಾಡಲಾಗಿದ್ದು, ಇತರ ಹಳೆಯ ಜಾಗಗಳನ್ನು ಕೈ ಬಿಡಲಾಗಿದೆ ಎಂದು ಬಿಡಿಎ ಅಧಿಕಾರಿ ತಿಳಿಸಿದ್ದಾರೆ.
ಇಂದು ಕೆಪಿಎಂಜಿ ತಂಡದಿಂದ ಸ್ಥಳ ಭೇಟಿ
ಯೋಜನೆಯನ್ನು ಸಮರ್ಥವಾಗಿ ಜಾರಿಗೊಳಿಸುವ ಉದ್ದೇಶದಿಂದ ಬಿಡಿಎ, ಜಾಗತಿಕ ಸಲಹಾ ಸಂಸ್ಥೆಯಾದ 'ಕೆಪಿಎಂಜಿ' ಯನ್ನು 'ವಹಿವಾಟು ಸಲಹೆಗಾರ'ರನ್ನಾಗಿ (transaction adviser) ನೇಮಕ ಮಾಡಿಕೊಳ್ಳಲಾಗಿದೆ. ಈ ತಂಡದ ಸದಸ್ಯರು ಇಂದು ಬುಧವಾರ (ನವೆಂಬರ್ 4) ಸ್ಥಳ ಪರಿಶೀಲಿಸಿ ಇನ್ನಷ್ಟು ಮಾಹಿತಿಯನ್ನು ಸರ್ಕಾರಕ್ಕೆ ಒದಗಿಸಲಿದ್ದಾರೆ.
ಸ್ಕೈಡೆಕ್ ಕಾಮಗಾರಿ ಪೂರ್ವದಲ್ಲಿ ಎಲ್ಲ ಸಿದ್ಧತೆಗಳು ಅಂತಿಮ ಹಂತಕ್ಕೆ ಬಂದಿವೆ. ಇನ್ನಷ್ಟು ಬಾಕಿ ಕೆಲಸಗಳು ಡಿಸೆಂಬರ್ ಅಂತ್ಯಕ್ಕೆ ಮುಗಿಯುತ್ತಿದ್ದಂತೆ ಯೋಜನೆಯ ರೂಪುರೇಷೆ ತಯಾರಾಗಲಿದೆ. ಬಳಿಕವೇ ಟೆಂಡರ್, ಬಿಡ್ ಇತರ ಪ್ರಕ್ರಿಯೆಗಳು ಶುರುವಾಗಲಿವೆ ಎಂದು ತಿಳಿಸಿದ್ದಾರೆ.
ವ್ಯಾಜ್ಯದ ಸ್ಥಳ ಯೋಜನೆಗೆ ಅಂತಿಮ!
ಹೌದು, ಸರ್ಕಾರದ ಪ್ರಮುಖ ಸ್ಕೈಡೆಕ್ ಸ್ಥಾಪನೆಗೆ ಅಂತಿಮಗೊಳಿಸಲಾದ ಪ್ರಸ್ತುತ ಜಾಗವು ಕಾನೂನು ವ್ಯಾಜ್ಯದಲ್ಲಿದೆ ಎನ್ನಲಾಗಿದೆ. 2010ರಲ್ಲಿ ಕೆಂಗೇರಿ ಹೋಬಳಿಯ ಚಲ್ಲಘಟ್ಟ ಗ್ರಾಮದಲ್ಲಿರುವ ಸರ್ವೆ ನಂ. 13ರ ಐದು ಎಕರೆ ಭೂಮಿಯನ್ನು ಖಾಸಗಿ ಸಂಘಕ್ಕೆ (ಶ್ರೀ ಮಾರುತಿ ಹ್ಯಾಂಡಿಕಾಪ್ಟ್ ವೆಲ್‌ಫೇರ್ ಅಸೋಸಿಯೇಷನ್) ನೀಡಿದ್ದರು. ಈ ಸಂಘವು ಇಲ್ಲಿ ಸುಮಾರು 200ಕ್ಕೂ 20x30 ಸೈಟ್ ಮಾಡಿ ವಿತರಣೆಗೆ ಪ್ಲ್ಯಾನ್ ಮಾಡಿಕೊಂಡಿದೆ. ಅದಕ್ಕಾಗಿ ಸಮಿತಿ ರಚಿಸಿ ಒಂದಷ್ಟು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದೆ. ಸದ್ಯ ಬಿಡಿಎ ಈ ಜಾಗಕ್ಕಾಗಿ ಸಂಘಕ್ಕೆ ಬೇರೆಡೆ ಐದು ಎಕರೆ ಜಾಗ ನೀಡಲು ನಿರ್ಧರಿಸಿದೆ. ಆದರೆ ಬಿಡಿಎ ನಿರ್ಧಾರದ ವಿರುದ್ಧ ಸಂಘ ನ್ಯಾಯಾಲಯದ ಮೊರೆ ಹೋಗಿದೆ. ಹೀಗಾಗಿ ಜಾಗದ ವಿಚಾರ ಕೋರ್ಟ್‌ನಲ್ಲಿದ್ದು, ಮುಂದಿನ ದಿನಗಳಲ್ಲಿ ಈ ಕುರಿತು ಇನ್ನಷ್ಟು ಅಪ್ಡೇಟ್ ಸಿಗಲಿದೆ.


Click it and Unblock the Notifications
