ದೆಹಲಿಯಂತೆ ಬೆಂಗಳೂರು ಗ್ಯಾಸ್ ಚೇಂಬರ್ ಆಗಬಾರದು: ಕರ್ನಾಟಕದ ಪ್ರಭಾವಿ ಸಚಿವ
ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯು ತೀವ್ರ ವಾಯುಮಾಲಿನ್ಯದಿಂದ ತುಂಬಿದ್ದು, ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಚೇಂಬರ್ ಎಂದೇ ಕುಖ್ಯಾತಿ ಗಳಿಸಿದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲೂ ವಾಯುಮಾಲಿನ್ಯ ಪ್ರಮಾಣ ಹೆಚ್ಚಳವಾಗುತ್ತಿದ್ದು ಕಳವಳ ಹೆಚ್ಚಾಗಿದೆ. ಇದೀಗ ಈ ವಿಚಾರವಾಗಿ ಕರ್ನಾಟಕದ ಪ್ರಭಾವಿ ಸಚಿವರೊಬ್ಬರು ಮಹತ್ವದ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಏನಿದು ಬೆಂಗಳೂರು ವಾಯುಮಾಲಿನ್ಯ ಗೇಸ್ ಚೇಂಬರ್ ಎನ್ನುವ ಚರ್ಚೆ ವಿವರ ಇಲ್ಲಿದೆ.
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ವಾಯುಮಾಲಿನ್ಯ ಹೆಚ್ಚಳವಾಗುತ್ತಿದೆ. ಈ ಬಗ್ಗೆ ಇದೀಗ ರಾಜ್ಯ ಸಚಿವ ಈಶ್ವರ್ ಖಂಡ್ರೆ ಅವರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಈಶ್ವರ್ ಖಂಡ್ರೆ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಬರೆದಿರುವ ಪೋಸ್ಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಾಯುಮಾಲಿನ್ಯ ಅತೀವ ಗಂಭೀರ ಹಂತ ತಲುಪಿರುವುದು ಎಲ್ಲರಿಗೂ ಎಚ್ಚರಿಕೆಯ ಸಂಕೇತವಾಗಿದೆ. ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದಾಗ ಹೊಗೆ ಮತ್ತು ಮಂಜಿನಿಂದ ಕೂಡಿದ ವಾತಾವರಣದಲ್ಲಿ ಉಸಿರಾಡಲೂ ಕಷ್ಟವಾಯಿತು ಎಂದು ಹೇಳಿದ್ದಾರೆ.

ಮುಂದುವರಿದು ಬೆಂಗಳೂರು ನಗರಕ್ಕೂ ಇಂತಹ ಪರಿಸ್ಥಿತಿ ಬರಬಾರದು ಎಂಬ ದೃಢ ಸಂಕಲ್ಪದೊಂದಿಗೆ, ಎಲ್ಲ ಅಗತ್ಯ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವಿವಿಧ ಅಭಿವೃದ್ಧಿ ಯೋಜನೆಗಳಿಂದ ಪರಿಸರದ ಮೇಲೆ ಆಗುವ ಪರಿಣಾಮಗಳ ಕುರಿತು ಚರ್ಚಿಸಲು ರಾಜ್ಯ ತಜ್ಞರ ನಿಷ್ಕರ್ಷ ಸಮಿತಿ (SEAC), SEIAA ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ, ನೂತನ ವರ್ಷದಲ್ಲಿ ಪ್ರಕೃತಿ ಮತ್ತು ಪರಿಸರ ಸಂರಕ್ಷಣೆಗೆ ಸಂಕಲ್ಪ ಮಾಡಬೇಕೆಂದು ತಿಳಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಪರಿಸರ ಸಂರಕ್ಷಣೆಗೆ ರೂಪಿಸಿರುವ ಎಲ್ಲಾ ಕಾಯಿದೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ, ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ನಗರಗಳನ್ನು ಸುರಕ್ಷಿತವಾಗಿಟ್ಟುಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿರುವ ಅವರು, ಸ್ವಚ್ಛ ಗಾಳಿ - ಆರೋಗ್ಯಕರ ಜೀವನ ಹಾಗೂ ಪರಿಸರ ರಕ್ಷಣೆ ನಮ್ಮ ಕರ್ತವ್ಯ ಎಂದಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ ಏನಿತ್ತು ?
ಇನ್ನು ಸಚಿವ ಈಶ್ವರ್ ಖಂಡ್ರೆ ಅವರ ಟ್ವೀಟ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೋಮಶೇಖರ ಬಜ್ಜಣ್ಣ ಎನ್ನುವವರು ವಲಸೆ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಿ. ಯಾವ ಸರ್ಕಾರ ಬಂದರೂ ವಲಸೆ ನಿಯಂತ್ರಣ ಬಿಟ್ಟು ಬೇರೆಲ್ಲವೂ ಮಾತಾಡುತ್ತೀರಿ ಎಂದು ಹೇಳಿದ್ದಾರೆ. ಕ್ರುಶಿಕ ಎವಿ ಎನ್ನುವವರು ರಸ್ತೆ ಕಾಲುದಾರಿ ಕಿತ್ತು ಹೋಗದಂತೆ ಹಾಗೂ ರಸ್ತೆಗಳಲ್ಲಿ ಗುಂಡಿ ಇರದಂತೆ ಸರ್ಕಾರ ನೋಡಿಕೊಳ್ಳಬೇಕು. ಹಸಿರು ಹೊದಿಕೆ ಹೆಚ್ಚಿಸಿ, ರಸ್ತೆ ಕಾಲುದಾರಿ ವ್ಯಾಕ್ಯೂಮ್ ಕ್ಲಿನರ್ ಬಳಸಿ ಚೊಕ್ಕಮಾಡಿ ಹೊಸ ನಿರ್ಮಾಣಗಳಲ್ಲಿ ಧೂಳು ನಿರ್ವಹಣೆಗೆ ನಿಯಮ ರೂಪಿಸಿ, ಹೆಚ್ಚು ಸರ್ಕಾರಿ ಬಸ್ ಹಾಗೂ ರೈಲು ಸೇವೆ ಇರಲಿ, ಯಾವುದೇ ಕಾರಣಕ್ಕೂ ಕಸ ಸುಡದಂತೆ ತಡೆಯಿರಿ. ಮುಖ್ಯವಾಗಿ ಅನಿಯಂತ್ರಿತ ವಲಸೆ ತಡೆಯಿರಿ, ಊರು ಉಳಿಯತ್ತದೆ ಎಂದಿದ್ದಾರೆ.
ಈ ರೀತಿ ಹಲವರು ಕಮೆಂಟ್ ಮಾಡಿದ್ದಾರೆ. ಮುಖ್ಯವಾಗಿ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹಲವರು ಸರ್ಕಾರದಿಂದ ಇನ್ನಷ್ಟು ಸುಧಾರಣೆ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications