ಬೆಂಗಳೂರಿನಲ್ಲಿ ಮಹಿಳೆಯರ ಒಳಉಡುಪು ಕದ್ದು ವಿಕೃತಿ, ಕೇರಳ ಮೂಲದ ವಿಕೃತ ಯುವಕ ಬಂಧನ
ಬೆಂಗಳೂರು: ನಗರದ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಮಹಿಳೆಯರ ಒಳಉಡುಪುಗಳನ್ನು ಕಳವು ಮಾಡಿ, ಅವುಗಳನ್ನು ಧರಿಸಿ ಫೋಟೋ ತೆಗೆದುಕೊಳ್ಳುತ್ತಿದ್ದ ವಿಕೃತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಅಲ್ಲದೆ ಸಾರ್ವಜನಿಕವಾಗಿ ಮಹಿಳೆಯರ ಗೌರವಕ್ಕೆ ಧಕ್ಕೆ ತಂದ ಆರೋಪದ ಮೇಲೆ ಕೇರಳ ಮೂಲದ 23 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಯುವಕನನ್ನು ಕೇರಳ ಮೂಲದ ಅಮಲ್ ಎನ್.ಅಜಿಕುಮಾರ್ ಎಂದು ಗುರುತಿಸಲಾಗಿದೆ. ಈತ ಹೆಬ್ಬಗೋಡಿಯ ಗಣೇಶ ದೇವಸ್ಥಾನದ ಸಮೀಪ ವಾಸವಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಭಾಗದಲ್ಲಿ ನಿರಂತರವಾಗಿ ಒಳಉಡುಪುಗಳು ಕಾಣೆಯಾಗುತ್ತಿರುವುದರಿಂದ ಮಹಿಳೆಯರು ಭಯಭೀತರಾಗಿದ್ದು, ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಜನವರಿ 19ರಂದು ಹೆಬ್ಬಗೋಡಿ ವ್ಯಾಪ್ತಿಯ ವಿದ್ಯಾನಗರ ಪ್ರದೇಶದ ನಿವಾಸಿಗಳಿಂದ ಈ ಬಗ್ಗೆ ಪೊಲೀಸರಿಗೆ ಹಲವು ದೂರುಗಳು ಸಹ ಬಂದಿದ್ದವು. ತಡರಾತ್ರಿ ವೇಳೆ ಮನೆಗಳ ಮೇಲ್ಚಾವಣಿ, ಅಂಗಣಗಳ ಮೂಲಕ ಸಂಚರಿಸುತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬ ಬಟ್ಟೆ ಒಣಗಿಸಲು ಹಾಕಿದ್ದ ಮಹಿಳೆಯರ ಒಳಉಡುಪುಗಳನ್ನು ಕಳವು ಮಾಡುತ್ತಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು.
ಒಳ ಉಡುಪು ತಾನೇ ಧರಿಸಿ ಫೋಟೋಗೆ ಪೋಸ್
ಪೊಲೀಸರ ತನಿಖೆಯಲ್ಲಿ ಮತ್ತಷ್ಟು ಆತಂಕಕಾರಿ ಸಂಗತಿಗಳು ಬಹಿರಂಗವಾಗಿದ್ದು, ಈತ ಕೇವಲ ಕಳ್ಳತನ ಮಾತ್ರ ಮಾಡುತ್ತಿರಲಿಲ್ಲ. ಬದಲಾಗಿ ಆರೋಪಿಯು ಕದ್ದ ಒಳಉಡುಪುಗಳನ್ನು ತಾನೇ ಧರಿಸಿ, ಫೋಟೋಗಳನ್ನು ತೆಗೆದುಕೊಂಡು ವಿಕೃತಿ ಮೆರೆಯುತ್ತಿದ್ದ ಎಂದು ತಿಳಿದುಬಂದಿದೆ. ಈ ಕೃತ್ಯವು ಮಹಿಳೆಯರ ಗೌರವ ಮತ್ತು ಗೌಪ್ಯತೆಗೆ ಗಂಭೀರ ಅವಮಾನವಾಗಿದ್ದು, ಮಾನಸಿಕ ಹಿಂಸೆ ಉಂಟುಮಾಡುವ ಉದ್ದೇಶಪೂರ್ವಕ ಕೃತ್ಯ ಎಂದು ಪೊಲೀಸರು ವಿವರಿಸಿದ್ದಾರೆ.
ಆರೋಪಿ ಮನೆಯಲ್ಲಿ ಒಳ ಉಡುಪುಗಳ ರಾಶಿ
ಹೋಯ್ಸಳ ತಂಡದವರು ತ್ವರಿತ ಕಾರ್ಯಾಚರಣೆ ನಡೆಸಿ, ಒಳಉಡುಪು ಕಳವು ಮಾಡುತ್ತಿದ್ದ ಸಂದರ್ಭದಲ್ಲೇ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಆರೋಪಿಯ ಮನೆ ಶೋಧ ನಡೆಸಿದ ವೇಳೆ, ದೊಡ್ಡ ಪ್ರಮಾಣದಲ್ಲಿ ಮಹಿಳೆಯರ ಒಳಉಡುಪುಗಳು ಹಾಗೂ ಅವುಗಳನ್ನು ಧರಿಸಿ ತೆಗೆದ ಹಲವು ಫೋಟೋಗಳು ಪತ್ತೆಯಾಗಿವೆ. ಈ ಎಲ್ಲವನ್ನು ಸಾಕ್ಷ್ಯವಾಗಿ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 303(2), 329(4) ಮತ್ತು 79ರ ಅಡಿಯಲ್ಲಿ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ (ಸುಮೊಟೋ) ಕೇಸ್ ದಾಖಲಾಗಿದೆ. ಆರೋಪಿಯು ದೀರ್ಘಕಾಲದಿಂದ ಇಂತಹ ಕೃತ್ಯಗಳಲ್ಲಿ ತೊಡಗಿದ್ದಾನೆ ಎಂಬ ಅನುಮಾನ ಪ್ರಾಥಮಿಕ ತನಿಖೆಯಿಂದ ವ್ಯಕ್ತವಾಗಿದೆ. ಈ ಪ್ರಕರಣದ ಕುರಿತು ಪೊಲೀಸರು ಇನ್ನಷ್ಟು ತನಿಖೆ ಮುಂದುವರೆಸುತ್ತಿದ್ದು, ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಈ ಘಟನೆ ಬಳಿಕ ಸ್ಥಳೀಯ ಮಹಿಳೆಯರು ತಮ್ಮ ಭದ್ರತೆ ಕುರಿತು ಆತಂಕ ವ್ಯಕ್ತಪಡಿಸಿದ್ದು, ಪೊಲೀಸ್ ಗಸ್ತು ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ. ಹೊರರಾಜ್ಯದಿಂದ ಬಂದು ಇಲ್ಲಿ ನೆಲೆಸಿ, ಇಂತಹ ವಿಕೃತಿ ಮೆರೆಯುತ್ತಿರುವ ಯುವಕನನ್ನು ಕಂಡು ಬೆಂಗಳೂರಿಗರು ಬೆಚ್ಚಿಬಿದ್ದಿದ್ದಾರೆ.












Click it and Unblock the Notifications