ದಾಖಲೆ ಪ್ರಮಾಣದಲ್ಲಿ ಬೆಂಗಳೂರಲ್ಲಿ ಮಳೆ, 2-3 ದಿನ ಒದ್ದೆ ಮುದ್ದೆ
ಬೆಂಗಳೂರು, ನ.15: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ತಮಿಳುನಾಡಿನಲ್ಲಿ ಮುಂದಿನ ಒಂದು ವಾರ ಭಾರಿ ಮಳೆ ಬೀಳಲಿದ್ದು, ಇದರ ಪರಿಣಾಮ ಉದ್ಯಾನ ನಗರಿ ಬೆಂಗಳೂರಿನ ಮೇಲೂ ಆಗಲಿದೆ. ಮುರ್ನಾಲ್ಕು ದಿನ ತಂಪಾದ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ತಮಿಳುನಾಡಿನಲ್ಲಿ ಕಳೆದ ಐದು ದಿನಗಳಿಂದ ಭಾರಿ ಮಳೆಗೆ ಜನತೆ ತತ್ತರಿಸಿದ್ದಾರೆ. ಸುಮಾರು 55 ಜನರನ್ನು ಬಲಿ ಪಡೆದಿರುವ ಮಳೆ ತನ್ನ ಆರ್ಭಟ ಮುಂದುವರೆಸಲಿದ್ದು, ಚೆನ್ನೈ, ರಾಮನಾಥ ಪುರಂ, ಹೊಸೂರು, ಕೃಷ್ಣಗಿರಿ, ತಿರುವಣ್ಣಾಮಲೈ, ವೆಲ್ಲೂರು, ಕಡಲೂರ್ ಸೇರಿದಂತೆ ಹತ್ತಾರು ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳಲಿದೆ. ['ರೋನು' ಅಬ್ಬರಕ್ಕೆ ರೋದಿಸುತ್ತಿರುವ ತಮಿಳುನಾಡು]

ತಮಿಳುನಾಡು ಅಲ್ಲದೆ ಕೇರಳ, ಆಂಧ್ರಪ್ರದೇಶದ ಕರಾವಳಿ ಭಾಗ, ಕರ್ನಾಟಕದ ದಕ್ಷಿಣ ಒಳನಾಡಿನ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ರಾಮನಗರ, ಹಾಸನ, ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆ ನಿರೀಕ್ಷಿಸಲಾಗಿದೆ.
ಬೆಂಗಳೂರಲ್ಲಿ ದಾಖಲೆ ಮಳೆ: ಕಳೆದ ನೂರು ವರ್ಷಗಳಲ್ಲೇ ದಾಖಲಾಗದ ಪ್ರಮಾಣದಲ್ಲಿ ಮಳೆ ಈ ತಿಂಗಳು ಕಂಡಿದೆ. ಅಕ್ಟೋಬರ್ ತಿಂಗಳಲ್ಲಿ ಮಳೆ ಕಾಣದ ಉದ್ಯಾನ ನಗರಿ, ನವೆಂಬರ್ 1 ರಿಂದ ಇಲ್ಲಿ ತನಕ 221 ಎಂಎಂ ಮಳೆ ಕಂಡಿದೆ.
ಕಳೆದ ನವೆಂಬರ್ ನಲ್ಲಿ 54.1 ಎಂಎಂ ಮಾತ್ರ ಮಳೆ ಬಿದ್ದಿತ್ತು. ಹವಾಮಾನ ಮುನ್ಸೂಚನೆಯಂತೆ ಮಳೆ ಬಿದ್ದರೆ ನವೆಂಬರ್ ತಿಂಗಳ ಸಾರ್ವಕಾಲಿಕ ದಾಖಲೆಯಾದ 252.2 ಎಂಎಂ ಸುಲಭವಾಗಿ ದಾಟಬಹುದು. 1916ರ ನಂತರ ಈ ಪ್ರಮಾಣದಲ್ಲಿ ಮಳೆಯನ್ನು ಬೆಂಗಳೂರಿಗರು ಕಂಡಿಲ್ಲ. (ಒನ್ ಇಂಡಿಯಾ ಸುದ್ದಿ)


Click it and Unblock the Notifications
