Bengaluru Second Airport: ಈ ಕಾರಣಕ್ಕೆ ಬೆಂಗಳೂರಿಗೆ 2ನೇ ವಿಮಾನ ನಿಲ್ದಾಣ ಸದ್ಯಕ್ಕಿಲ್ಲ: ಕೇಂದ್ರ ಸರ್ಕಾರ
ಬೆಂಗಳೂರಿಗೆ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ವಿಚಾರದಲ್ಲಿ ಭಾರೀ ಹಿನ್ನಡೆಯಾಗಿದೆ. ರಾಜ್ಯ ಸರ್ಕಾರವು ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಹೊಸ ವಿಮಾನ ನಿಲ್ದಾಣಕ್ಕಾಗಿ ಜಾಗಗಳನ್ನು ಗುರುತಿಸಿತ್ತು. ಆದರೆ ಲೋಕಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚೆಯಾಗಿದ್ದು, ಸದ್ಯಕ್ಕೆ ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ಸಿಗುವುದು ಅನುಮಾನ ಎಂದು ಎಂದು ಕೇಂದ್ರ ಸರ್ಕಾರ ಸುಳಿವು ನೀಡಿದೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ದಟ್ಟಣೆ ತಗ್ಗಿಸುವ ಉದ್ದೇಶದಿಂದ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸುವುದಾಗಿ ಕರ್ನಾಟಕ ಸರ್ಕಾರ ಹೇಳಿತ್ತು. ಅಲ್ಲದೆ ಕನಕಪುರ ರಸ್ತೆ, ಕುಣಿಗಲ್ ಬಳಿ ಜಾಗಗಳನ್ನೂ ಫಿಕ್ಸ್ ಮಾಡಿತ್ತು. ಇದಕ್ಕೆ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ಟೆಂಡರ್ ಕೂಡ ಕರೆದು ಎಲ್ಲ ರೀತಿಯ ತಯಾರಿ ಮಾಡಿಕೊಂಡಿತ್ತು. ಇದರ ನಡುವೆ ಕೇಂದ್ರ ಸರ್ಕಾರ ಹೊಸ ವಿಮಾನ ನಿಲ್ದಾಣದ ಬಗ್ಗೆ ಸಂಸತ್‌ನಲ್ಲಿ ಅಚ್ಚರಿ ವಿಚಾರ ತಿಳಿಸಿದೆ.

ಯಾವುದೇ ಪ್ರಸ್ತಾವನೆ ಬಂದಿಲ್ಲ
ಕರ್ನಾಟಕದ ಬಿಜೆಪಿ ಸಂಸದರಾದ ಪಿ.ಸಿ.ಮೋಹನ್ ಅವರು ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ನಿರ್ಮಿಸುವ ಬಗ್ಗೆ ಲೋಕಸಭೆಯಲ್ಲಿ ಪ್ರಶ್ನೆ ಕೇಳಿದ್ದು, ಇದಕ್ಕೆ ಕೇಂದ್ರ ಸರ್ಕಾರ ಸ್ಪಷ್ಟವಾದ ಉತ್ತರ ನೀಡಿದೆ. 'ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸುವ ಅಥವಾ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್‌ಎಎಲ್) ವಿಮಾನ ನಿಲ್ದಾಣವನ್ನು ವಾಣಿಜ್ಯ ಪ್ರಯಾಣಿಕರ ಕಾರ್ಯಾಚರಣೆಗಾಗಿ ಮತ್ತೆ ತೆರೆಯುವ ಯಾವುದೇ ಪ್ರಸ್ತಾವನೆಯನ್ನು ನಾವು ಸ್ವೀಕರಿಸಿಲ್ಲ' ಎಂದು ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಸ್ಪಷ್ಟಪಡಿಸಿದ್ದಾರೆ.
'ಕರ್ನಾಟಕ ಸರ್ಕಾರದ ಕೋರಿಕೆಯಂತೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಉನ್ನತ ತಂಡವು ಬೆಂಗಳೂರು ಸುತ್ತಮುತ್ತ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಭಾವ್ಯ ಸ್ಥಳ ಪರಿಶೀಲನೆ ನಡೆಸಿತ್ತು. ಬಳಿಕ ಪ್ರಾಥಮಿಕ ವರದಿಯನ್ನೂ ಕೊಟ್ಟಿದೆ. ಇದಾದ ಬಳಿಕ ಕರ್ನಾಟಕ ಸರ್ಕಾರದಿಂದ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳ ನೀತಿಯಡಿ ಕೇಂದ್ರ ಸರ್ಕಾರಕ್ಕೆ ಯಾವುದೇ ಪ್ರಸ್ತಾವನೆ ಬಂದಿಲ್ಲ' ಎಂದು ಉತ್ತರಿಸಿದ್ದಾರೆ.
'ಕೇಂದ್ರ ಸರ್ಕಾರ ಹಾಗೂ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್) ನಡುವಿನ ಒಪ್ಪಂದದ ಪ್ರಕಾರ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎಎಲ್) ಸುಮಾರು 150 ಕಿಲೋಮೀಟರ್ ವ್ಯಾಪ್ತಿಯಲ್ಲಿ 25 ವರ್ಷಗಳ ಮುನ್ನ ಯಾವುದೇ ಹೊಸ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಮಾಡುವಂತಿಲ್ಲ. ಈಗ ಮೈಸೂರು ಮತ್ತು ಹಾಸನವನ್ನು ದೇಶೀಯ ವಿಮಾನ ನಿಲ್ದಾಣಗಳಾಗಿ ಅಭಿವೃದ್ಧಿಪಡಿಸುವುದನ್ನು ಹೊರತುಪಡಿಸಿ ಬೇರೆ ವಿಮಾನ ನಿಲ್ದಾಣಗಳ ಸುಧಾರಣೆ ಅಥವಾ ಮೇಲ್ದರ್ಜೆಗೆ ಏರಿಸುವುದಕ್ಕೂ ಅನುಮತಿ ನೀಡಲಾಗುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
'ಈಗಿನ ಬೆಂಗಳೂರು ವಿಮಾನ ನಿಲ್ದಾಣದಿಂದ 150 ಕಿ.ಮೀ. ವ್ಯಾಪ್ತಿಯೊಳಗೆ ಯಾವುದೇ ಹೊಸ ವಿಮಾನ ನಿಲ್ದಾಣದ ನಿರ್ಮಾಣ ಅಥವಾ ಹಳೆಯ ಎಚ್‌ಎಎಲ್ ವಿಮಾನ ನಿಲ್ದಾಣದ ಪುನರಾರಂಭಕ್ಕೆ ನಿಯಮಗಳ ಪ್ರಕಾರ ಬಿಐಎಎಲ್‌ನಿಂದ ಒಪ್ಪಿಗೆ ಪಡೆಯಲೇಬೇಕು. ಕೆಂಪೇಗೌಡ ಏರ್‌ಪೋರ್ಟ್ ಉದ್ಘಾಟನೆಯಾದ 25 ವರ್ಷಗಳವರೆಗೆ ಈ ಒಪ್ಪಂದದ ಷರತ್ತುಗಳು ಅನ್ವಯವಾಗುತ್ತವೆ' ಎಂದಿದ್ದಾರೆ.
ಟೆಂಡರ್ ಕರೆದಿರುವ ಸರ್ಕಾರ
ಕನಕಪುರ ರಸ್ತೆಯಲ್ಲಿ ಚೂಡಹಳ್ಳಿ ಮತ್ತು ಸೋಮನಹಳ್ಳಿ, ತುಮಕೂರು ಕಡೆಗೆ ಇರುವ ನೆಲಮಂಗಲ-ಕುಣಿಗಲ್ ರಸ್ತೆಯಲ್ಲಿರುವ ಜಾಗಗಳನ್ನು ಹೊಸ ವಿಮಾನ ನಿಲ್ದಾಣಕ್ಕಾಗಿ ಅಂತಿಮಗೊಳಿಸಿ ತಲಾ ಸುಮಾರು 4,500 ಎಕರೆಗಳನ್ನು ಗುರುತಿಸಲಾಗಿದೆ. ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮವು ಇತ್ತೀಚೆಗೆ ಬೆಂಗಳೂರು ಹೊಸ ವಿಮಾನ ನಿಲ್ದಾಣದ ಕುರಿತು ವಿವರವಾದ ಕಾರ್ಯಸಾಧ್ಯತಾ ಅಧ್ಯಯನಕ್ಕಾಗಿ ಸಲಹೆಗಾರರನ್ನು ನೇಮಿಸಲು ಟೆಂಡರ್ ಕರೆದಿತ್ತು. ಹೀಗಾಗಿ ಕಾರ್ಯಸಾಧ್ಯತಾ ಅಧ್ಯಯನ ಶೀಘ್ರದಲ್ಲೇ ಆರಂಭವಾಗಬೇಕಿದೆ. ಆದರೆ ಕೇಂದ್ರ ಸರ್ಕಾರವು ಈ ಬಗ್ಗೆ ನಮಗೆ ಯಾವುದೇ ಪ್ರಸ್ತಾವನೆ ಬಂದಿಲ್ಲ, ಸದ್ಯಕ್ಕೆ ಅದು ಸಾಧ್ಯವೂ ಇಲ್ಲ ಎಂದಿರುವುದರಿಂದ ರಾಜ್ಯ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ.












Click it and Unblock the Notifications