ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಈ ಜಾಗವೇ ಫಿಕ್ಸ್, ಇಬ್ಬರ ಜಗಳದಲ್ಲಿ ಲಾಭ ಯಾರಿಗೆ?
ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ವಿಚಾರವು ಗೊಂದಲದ ಗೂಡಾಗಿದೆ. ರಾಜ್ಯ ಸರ್ಕಾರವು ಹುರುಪಿನಲ್ಲಿ ಮೂರು ಸ್ಥಳಗಳನ್ನು ಗುರುತಿಸಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ತಂಡದಿಂದ ಸ್ಥಳ ಪರಿಶೀಲನೆಯೂ ಮಾಡಿಸಿದೆ. ಇದರ ನಡುವೆಯೇ ಈ ಏರ್‌ಪೋರ್ಟ್ ನಿರ್ಮಾಣದ ವಿಚಾರವಾಗಿ ತಮ್ಮದೇ ಪಕ್ಷದ ನಾಯಕರಿಂದ ಅಪಸ್ವರ ಕೇಳಿಬಂದಿದೆ. ಕಾಂಗ್ರೆಸ್ ಪಕ್ಷದಲ್ಲೇ ನಾಯಕರ ನಡುವೆ ಈ ಏರ್‌ಪೋರ್ಟ್ ಜಾಗದ ವಿಚಾರವಾಗಿ ಫೈಟ್ ಜೋರಾಗಿದೆ.
ಬಿಡದಿ ಬಳಿ ಏರ್‌ಪೋರ್ಟ್ ನಿರ್ಮಾಣವಾಗಲ್ಲ ಎಂದು ಖುದ್ದು ಎಂಬಿ ಪಾಟೀಲ್ ಸ್ಪಷ್ಟಪಡಿಸಿದ್ದರೆ, ಮತ್ತೊಂದೆಡೆ ಈ ಏರ್‌ಪೋರ್ಟ್ ತುಮಕೂರು ಭಾಗದ ಶಿರಾ ಬಳಿ ನಿರ್ಮಾಣವಾಗಲಿ ಎಂದು ಕಾಂಗ್ರೆಸ್ ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಇಬ್ಬರ ಜಗಳದಲ್ಲಿ ಮೂರನೇವರಿಗೆ ಲಾಭ ಎನ್ನುವಂತೆ ಏರ್ಪೋರ್ಟ್ ನಿರ್ಮಾಣಕ್ಕೆ ಈ ಜಾಗವೇ ಫೈನಲ್ ಆಗುವ ಸಾಧ್ಯತೆ ಇದೆ.

ಈ ವಿಮಾನ ನಿಲ್ದಾಣಕ್ಕೆ ಕನಕಪುರ ರಸ್ತೆಯಲ್ಲಿ ಎರಡು ಜಾಗ ಹಾಗೂ ಕುಣಿಗಲ್ ಬಳಿ ಒಂದು ಜಾಗವನ್ನು ಗುರುತಿಸಿಲಾಗಿದ್ದು, ಇತ್ತೀಚೆಗಷ್ಟೇ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ತಂಡ ಈ ಜಾಗಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದೆ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದುಕೊಂಡಿರುವಾಗಲೇ ತುಮಕೂರು ಭಾಗದ ರಾಜಕಾರಣಿಗಳಿಗೆ ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಶಿರಾ ಬಳಿ ಈ ವಿಮಾನ ನಿಲ್ದಾಣ ನಿರ್ಮಿಸುವುದು ಸೂಕ್ತ ಎಂದು ಪಟ್ಟು ಹಿಡಿದು ಕೇಂದ್ರದ ಬಾಗಿಲು ತಟ್ಟಿದ್ದಾರೆ. ಇದಕ್ಕೆ ಬಿಜೆಪಿ ಸಂಸದ ವಿ.ಸೋಮಣ್ಣ ಕೂಡ ಎಂಟ್ರಿ ಕೊಟ್ಟಿದ್ದು, ತುಮಕೂರು ಭಾಗಕ್ಕೇ ಏರ್‌ಪೋರ್ಟ್ ತರಲು ಕೇಂದ್ರದ ಮೇಲೆ ಒತ್ತಡ ಹಾಕೇ ಹಾಕ್ತೀವಿ ಎಂದು ಸವಾಲೊಡ್ಡಿದ್ದಾರೆ. ತುಮಕೂರಿನಲ್ಲಿ ಏರ್‌ಪೋರ್ಟ್‌ಗೆ ಅತ್ಯುತ್ತಮ ಜಾಗವೊಂದಿದೆ. ಅಲ್ಲಿಗೂ ಪ್ರಾಧಿಕಾರದ ತಂಡವನ್ನು ಕರೆಸುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ.
ಕನಕಪುರ ರಸ್ತೆಯಲ್ಲಿ ಏರ್‌ಪೋರ್ಟ್‌ಗೆ ವಿರೋಧ
ಇನ್ನು ಹೇಗಾದರೂ ಮಾಡಿ ಈ ಹೊಸ ವಿಮಾನ ನಿಲ್ದಾಣವನ್ನು ಬೆಂಗಳೂರು ದಕ್ಷಿಣ ಭಾಗ ಅಥವಾ ರಾಮನಗರ, ಕನಕಪುರಕ್ಕೆ ಸಮೀಪದಲ್ಲೇ ನಿರ್ಮಾಣ ಮಾಡಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಪಣ ತೊಟ್ಟಿದ್ದಾರೆ. ಇದೆ ಕಾರಣಕ್ಕೆ ಕನಕಪುರ ರಸ್ತೆಯಲ್ಲೆ ಎರಡೆರಡು ಜಾಗ ಗುರುತು ಮಾಡಲಾಗಿದೆ. ಇದರಿಂದ ತವರು ಕ್ಷೇತ್ರದ ಅಭಿವೃದ್ಧಿಯ ಕನಸು ಕಂಡಿದ್ದರು ಡಿಕೆ ಶಿವಕುಮಾರ್. ಆದರೆ, ಬಿಡದಿ ಬಳಿ ಹೊಸ ವಿಮಾನ ನಿಲ್ದಾಣ ನಿರ್ಮಿಸುವ ಮಾತೇ ಇಲ್ಲ ಎಂದು ಸಚಿವ ಎಂಬಿ ಪಾಟೀಲ್ ಅವರು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಡಿಕೆ ಶಿವಕುಮಾರ್ ಅವರ ಕನಸು ನುಚ್ಚುನೂರಾಗಿದೆ ಎಂದು ಹೇಳಲಾಗುತ್ತಿದೆ.

ಕುಣಿಗಲ್ ಜಾಗ ಅಂತಿಮ?
ಕನಕಪುರ ರಸ್ತೆಯಲ್ಲಿ ಏರ್‌ಪೋರ್ಟ್ ಬೇಕು ಎಂದು ಕೆಲ ನಾಯಕರು ಹೇಳುತ್ತಿದ್ದರೆ, ಅಲ್ಲಿ ಬೇಡ ತುಮಕೂರು ಭಾಗದಲ್ಲಿ ನಿರ್ಮಾಣವಾಗಲಿ ಎಂದು ಹಲವು ನಾಯಕರು ಡಿಮ್ಯಾಂಡ್ ಮಾಡುತ್ತಿದ್ದಾರೆ. ಒಟ್ಟಾರೆ ಏರ್‌ಪೋರ್ಟ್ ವಿಚಾರವಾಗಿ ಹಗ್ಗಜಗ್ಗಾಟ ಮುಂದುವರಿದಿದೆ. ಆದರೆ, ರಾಜ್ಯ ಸರ್ಕಾರ ಕುಣಿಗಲ್ ಬಳಿ ಗುರುತಿಸಿರುವ ಜಾಗದ ಬಗ್ಗೆ ಅಷ್ಟೊಂದು ವಿರೋಧ ವ್ಯಕ್ತವಾಗಿಲ್ಲ. ಇದು ತುಮಕೂರು ರಸ್ತೆ ಹಾಗೂ ತುಮಕೂರು ನಗರಕ್ಕೂ ಸಮೀಪದಲ್ಲೇ ಇರುವುದರಿಂದ ಈ ಜಾಗದಲ್ಲಿ ಏರ್‌ಪೋರ್ಟ್ ನಿರ್ಮಾಣವಾದರೆ ಒಳ್ಳೆಯದೇ ಎಂಬ ಅಭಿಪ್ರಾಯದಲ್ಲಿದ್ದಾರೆ. ಹಾಗಾಗಿ ತುಮಕೂರು ಭಾಗದ ನಾಯಕರ ಕೂಗನ್ನು ಸೈಲೆಂಟ್ ಮಾಡಲು ಕುಣಿಗಲ್ ಬಳಿಯ ಸ್ಥಳವನ್ನೇ ಫೈನಲ್ ಮಾಡಬಹುದು ಎಂದು ಚರ್ಚೆ ಶುರುವಾಗಿದೆ.












Click it and Unblock the Notifications