Bengaluru 2nd Airport: ಎರಡನೇ ಏರ್‌ಪೋರ್ಟ್ ಎಲ್ಲಿ ನಿರ್ಮಾಣವಾಗಬೇಕು? ಜನ ಹೆಚ್ಚು ವೋಟ್ ಮಾಡಿದ್ದು ಇದೇ ಜಾಗಕ್ಕೆ
ಬೆಂಗಳೂರಿಗೆ ಎರಡನೇ ಏರ್‌ಪೋರ್ಟ್ ನಿರ್ಮಾಣ ಮಾಡಲು ಕರ್ನಾಟಕ ಸರ್ಕಾರವು ಮೂರು ಜಾಗಗಳನ್ನು ಗುರುತಿಸಿದೆ. ಈ ಮೂರರ ಪೈಕಿ ಒಂದು ಜಾಗದಲ್ಲಿ ಹೊಸ ವಿಮಾನ ನಿಲ್ದಾಣಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ಕೊಡಲಿದೆ. ಈ ಜಾಗಗಳಲ್ಲಿ ಎರಡು ಕನಕಪುರ ರಸ್ತೆಯಲ್ಲಿದ್ದರೆ, ಮತ್ತೊಂದು ಕುಣಿಗಲ್ ಬಳಿ ಇದೆ. ಭವಿಷ್ಯದ ದೃಷ್ಟಿಯಿಂದ ಈ ಮೂರೂ ಜಾಗಗಳನ್ನು ಅವಲೋಕಿಸಿ ಏರ್‌ಪೋರ್ಟ್‌ಗಾಗಿ ಸ್ಥಳ ನಿಗದಿ ಮಾಡಲಾಗಿದೆ. ಆದರೆ ಈ ಮೂರರಲ್ಲಿ ಯಾವ ಜಾಗದಲ್ಲಿ ಹೊಸ ಏರ್‌ಪೋರ್ಟ್ ನಿರ್ಮಾಣವಾದರೆ ಒಳ್ಳೆಯದು ಎಂಬ ಪ್ರಶ್ನೆಗೆ ಜನ ಉತ್ತರವೂ ಕೊಟ್ಟಿದ್ದಾರೆ. ಅಚ್ಚರಿಯೆಂದರೆ ಬಹುತೇಕರು ಈ ಸ್ಥಳವನ್ನೇ ಆಯ್ಕೆ ಮಾಡಿದ್ದಾರೆ.
ಹೌದು ಎಕ್ಸ್‌ನಲ್ಲಿ (ಟ್ವಿಟರ್) ಬೆಂಗಳೂರಿನ ಎರಡನೇ ಏರ್‌ಪೋರ್ಟ್ ಯಾವ ಜಾಗದಲ್ಲಿ ನಿರ್ಮಾಣವಾದರೆ ಒಳ್ಳೆಯದು ಎಂದು ಪ್ರಶ್ನೆ ಕೇಳಿ ಮೂರು ಆಯ್ಕೆಗಳನ್ನೂ ನೀಡಲಾಗಿತ್ತು. ಇವು ಈಗಾಗಲೇ ಸರ್ಕಾರ ಗುರುತು ಮಾಡಿರುವ ಜಾಗಗಳು. ಈ ಪ್ರಶ್ನೆಗೆ ಹಲವು ಮಂದಿ ಉತ್ತರ ನೀಡಿದ್ದಾರೆ. ಈ ಆಯ್ಕೆಗಳ ಪೈಕಿ ಒಂದು ಜಾಗಕ್ಕೆ ಹೆಚ್ಚು ಮಂದಿ ವೋಟ್ ಮಾಡಿದ್ದಾರೆ. ಇವರ ಪ್ರಕಾರ ಈ ಹೊಸ ಏರ್‌ಪೋರ್ಟ್ ಈ ಭಾಗದಲ್ಲೇ ನಿರ್ಮಾಣವಾಗುವುದು ಒಳ್ಳೆಯದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಹಾಗಾದ್ರೆ ಯಾವುದು ಜನ ಮೆಚ್ಚಿರುವ ಆ ಜಾಗ? ಎಂಬ ಮಾಹಿತಿ ಇಲ್ಲಿದೆ ನೋಡಿ..

ಎಕ್ಸ್‌ನಲ್ಲಿ ಮನೋಜ್ ಎಂಬುವವರು ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಕ್ಕಾಗಿ ಏಪ್ರಿಲ್ 7 ಮತ್ತು 9ರ ನಡುವೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ತಂಡವು ಕಾರ್ಯಸಾಧ್ಯತಾ ಅಧ್ಯಯನವನ್ನು ನಡೆಸಲು ಸಜ್ಜಾಗಿದೆ. ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿ ಸ್ಥಾಪನೆಯಾಗಲಿದೆ ಎಂದು ನೀವು ಭಾವಿಸುತ್ತೀರಿ? ಎಂದು ಪ್ರಶ್ನೆ ಕೇಳಿದ್ದರು. ಆಯ್ಕೆಗಳಾಗಿ ಕನಕಪುರ ರಸ್ತೆಯ ಕೆ.ಚೂಡಹಳ್ಳಿ, ಕನಕಪುರ ರಸ್ತೆಯ ಸೋಮನಹಳ್ಳಿ ಹಾಗೂ ಕುಣಿಗಲ್ ರಸ್ತೆಯ ಸೋಲೂರು ಎಂದು ನೀಡಿದ್ದರು.
ಸೋಲೂರು ಆಯ್ಕೆ ಮಾಡಿದ ಹೆಚ್ಚು ಮಂದಿ
ಈ ಪೈಕಿ ಇಲ್ಲಿವರೆಗೆ ಶೇ 66.7ರಷ್ಟು ಮಂದಿ ಕುಣಿಗಲ್ ರಸ್ತೆಯ ಸೋಲೂರು ಬಳಿಯೇ ಹೊಸ ಏರ್‌ಪೋರ್ಟ್ ನಿರ್ಮಾಣವಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕನಕಪುರ ರಸ್ತೆಯ ಕೆ.ಚೂಡಹಳ್ಳಿ ಹಾಗೂ ಸೋಮನಹಳ್ಳಿ ಬಳಿ ಏರ್‌ಪೋರ್ಟ್ ಬರಬೇಕು ಎಂದು ತಲಾ ಶೇ 16.7 ಮಂದಿ ವೋಟ್ ಮಾಡಿದ್ದಾರೆ. ಕುಣಿಗಲ್ ರಸ್ತೆಯ ಸೋಲೂರು ಬಳಿಯೇ ಎರಡನೇ ಏರ್‌ಪೋರ್ಟ್ ಬರುವುದು ಒಳ್ಳೆಯದು ಎನ್ನುವುದು ಹೆಚ್ಚು ಮಂದಿಯ ಅಭಿಪ್ರಾಯ ಎಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಮತ್ತೊಂದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ಕಾಂಗ್ರೆಸ್ ಸರ್ಕಾರದ ವತಿಯಿಂದ ಕನಕಪುರ ರಸ್ತೆಗೆ ಸಮೀಪ ಹಾಗೂ ನೆಲಮಂಗಲ-ಕುಣಿಗಲ್ ರಸ್ತೆಯಲ್ಲಿ ಸ್ಥಳವನ್ನು ಗುರುತಿಸಿ ಈ ಪ್ರಸ್ತಾವನೆಯನ್ನು ಕೇಂದ್ರಕ್ಕೆ ರವಾನಿಸಲಾಗಿದೆ. ಶೀಘ್ರವೇ ಈ ಸಂಬಂಧ ದೆಹಲಿಗೆ ಭೇಟಿ ನೀಡಿ, ಈ ಪ್ರಸ್ತಾಪಿಸಿರುವ ಸ್ಥಳಗಳ ಬಗ್ಗೆ ಕೇಂದ್ರ ಸರ್ಕಾರದ ಸಂಬಂಧಿತ ಇಲಾಖೆ, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಅಂತಿಮ ಅನುಮೋದನೆ ಪಡೆಯುವುದಾಗಿ ಎಂಬಿ ಪಾಟೀಲ್ ಮಾಹಿತಿ ನೀಡಿದ್ದಾರೆ. ಅಲ್ಲದೆ ಈ ಹೊಸ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಯಾರ ಒತ್ತಡ ಅಥವಾ ಒತ್ತಾಯಕ್ಕೂ ಮಣಿಯದೆ, ಬೆಂಗಳೂರಿನ ಭವಿಷ್ಯದ ಬೆಳೆವಣಿಗೆ, ಕೈಗಾರಿಕೋದ್ಯಮ, ಉದ್ಯೋಗ ಸೃಷ್ಟಿಯನ್ನ ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಿರುವುದಾಗಿ ಹೇಳಿದ್ದಾರೆ. ಕೆಲವೇ ದಿನಗಳಲ್ಲಿ ಏರ್‌ಪೋರ್ಟ್‌ಗೆ ಅಂತಿಮ ಸ್ಥಳ ನಿಗದಿಯಾಗುವ ಸಾಧ್ಯತೆ ಇದೆ.












Click it and Unblock the Notifications