Bengaluru 2nd Airport: ಬೆಂಗಳೂರು ಎರಡನೇ ಏರ್‌ಪೋರ್ಟ್ ನಿರ್ಮಾಣಕ್ಕೆ ಎದುರಾಯ್ತು ದೊಡ್ಡ ಸವಾಲು
ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ನಿರ್ಮಿಸುವ ವಿಚಾರ ಸದ್ಯ ಕೇಂದ್ರ ಸರ್ಕಾರದ ಅಂಗಳ ತಲುಪಿದೆ. ರಾಜ್ಯ ಸರ್ಕಾರವು ಈ ಹೊಸ ಏರ್‌ಪೋರ್ಟ್‌ಗಾಗಿ ಮೂರು ಜಾಗಗಳನ್ನು ಗುರುತಿಸಿ, ಕೇಂದ್ರ ಸರ್ಕಾರದ ಅನುಮೋದನೆಗೆ ಕಳುಹಿಸಿಕೊಟ್ಟಿದೆ. ಆದರೆ ಈವರೆಗೆ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರ ನಡುವೆ ಕರ್ನಾಟಕ ಸರ್ಕಾರಕ್ಕೆ ಎರಡನೇ ವಿಮಾನ ನಿಲ್ದಾಣಕ್ಕೆ ಗ್ರೀನ್ ಸಿಗ್ನಲ್ ಪಡೆಯಲು ದೊಡ್ಡ ಸವಾಲು ಎದುರಾಗಿದೆ.
ಕುಣಿಗಲ್ ಸಮೀಪ ಹಾಸನ ಹೆದ್ದಾರಿ ಬಳಿ ಒಂದು ಜಾಗ ಹಾಗೂ ಕನಕಪುರ ರಸ್ತೆಯಲ್ಲಿ ಇನ್ನೆರಡು ಜಾಗ ಈ ಹೊಸ ಏರ್‌ಪೋರ್ಟ್‌ಗಾಗಿ ಗುರುತಿಸಲಾಗಿದೆ. ಈ ಮೂರರಲ್ಲೇ ಒಂದು ಜಾಗ ಫೈನಲ್ ಆಗಬೇಕಿದ್ದು, ಕೇಂದ್ರದ ಒಪ್ಪಿಗೆ ಕಾಯಲಾಗುತ್ತಿದೆ. ಈಗಾಗಲೇ ಈ ಮೂರು ಸ್ಥಳಗಳ ವರದಿಯನ್ನು ಕೇಂದ್ರಕ್ಕೆ ತಲುಪಿಸಿದೆಯಾದರೂ ಅಲ್ಲಿಂದ ಉತ್ತರವಿಲ್ಲ. ಹಾಗಾಗಿ ರಾಜ್ಯ ಸರ್ಕಾರದ ಸಚಿವರು ದೆಹಲಿಗೆ ಹೋಗಲು ನಿರ್ಧರಿಸಿದ್ದಾರೆ. ಇದರ ನಡುವೆ ಮತ್ತೊಂದು ಸವಾಲನ್ನು ಕೂಡ ಎದುರಿಸಬೇಕಾಗಿದೆ.

ರಾಜ್ಯದಲ್ಲಿರುವುದು ಕಾಂಗ್ರೆಸ್ ಸರ್ಕಾರ, ಕೇಂದ್ರದಲ್ಲಿರುವುದು ಬಿಜೆಪಿ ನೇತೃತ್ವದ ಸರ್ಕಾರ. ಹೀಗಾಗಿ ಈ ಕಾರಣದಿಂದಲೂ ಎರಡನೇ ಏರ್‌ಪೋರ್ಟ್‌ಗೆ ಜಾಗ ಫೈನಲ್ ಆಗುವುದು ವಿಳಂಬವಾಗುವ ಸಾಧ್ಯತೆ ಇದೆ. ದೆಹಲಿಗೆ ಹೋಗುವ ವಿಚಾರವಾಗಿ ಮಾತನಾಡಿರುವ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಅಧಿವೇಶನ ಮುಗಿದ ನಂತರ ದೆಹಲಿಗೆ ತೆರಳಿ ಸಂಬಂಧಪಟ್ಟ ಇಲಾಖೆಗಳಿಂದ ಅನುಮೋದನೆ ಪ್ರಕ್ರಿಯೆ ತ್ವರಿತಗೊಳಿಸುವುದಾಗಿ ಹೇಳಿದ್ದಾರೆ.
ಅಲ್ಲದೆ ಎರಡನೇ ಏರ್‌ಪೋರ್ಟ್‌ಗಾಗಿ ಸ್ಥಳ ಪೂರ್ಣಗೊಳಿಸುವ ಕೇಂದ್ರಕ್ಕೆ ಮನವಿ ಮಾಡುವಂತೆ ಕೋರಿ ರಾಜ್ಯ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಹಾಗೂ ವಿ.ಸೋಮಣ್ಣ ಅವರನ್ನೂ ಭೇಟಿಯಾಗಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಅವರದ್ದೇ ಸರ್ಕಾರ ಕೇಂದ್ರದಲ್ಲಿರುವುದರಿಂದ ಪ್ರಕ್ರಿಯೆ ವೇಗವಾಗಿ ಪೂರ್ಣಗೊಳ್ಳುತ್ತೆ ಎಂಬ ಲೆಕ್ಕಾಚಾರದಲ್ಲಿದ್ದಾರೆ.

ಕೇಂದ್ರದ ಮನವೊಲಿಸ್ತಾರಾ ಸಚಿವರು?
ಆದರೆ, ಅಸಲಿಗೆ ಇಲ್ಲೇ ಈಗ ಸಮಸ್ಯೆ ಎದುರಾಗಲಿದೆ. ರಾಜಕೀಯವಾಗಿ ನೋಡುವುದಾದರೆ ಈಗ ಕೇಂದ್ರ ಸರ್ಕಾರದಿಂದ ಅನುಮೋದನೆಗೆ ಸಹಕರಿಸಿದರೆ, ಅದರ ಕ್ರೆಡಿಟ್ ಕೊನೆಗೆ ಕಾಂಗ್ರೆಸ್‌ನವರಿಗೇ ಸೇರುತ್ತದೆ ಎಂಬ ಕಾರಣದಿಂದಲೂ ಕೇಂದ್ರದಲ್ಲಿರೋ ರಾಜ್ಯ ಸಚಿವರು ಇದಕ್ಕೆ ಸ್ಪಂದಿಸದೇ ಇರಬಹುದು. ಒಂದು ವೇಳೆ ಸ್ಪಂದಿಸಿದರೂ ಮತ್ತೊಂದು ಸವಾಲು ಕೂಡ ಇದೆ.
ಅದೇನೆಂದರೆ, ಸಚಿವ ಸೋಮಣ್ಣ ಅವರಿಗೆ ಈ ಏರ್‌ಪೋರ್ಟ್ ತುಮಕೂರು ಭಾಗದಲ್ಲಿ ಬರಬೇಕಿತ್ತು ಎನ್ನುವ ಆಸೆಯಿತ್ತು. ಮತ್ತೊಂದೆಡೆ ಕನಕಪುರ ರಸ್ತೆಯಲ್ಲಿ ಅಂದ್ರೆ ಕುಮಾರಸ್ವಾಮಿ ಅವರ ರಾಮನಗರಕ್ಕೆ ಅನುಕೂಲವಾಗಬಹುದು ಎಂದು ಒಪ್ಪಿಕೊಳ್ಳಲೂಬಹುದು. ಅಥವಾ ಇದರಿಂದ ತಮ್ಮ ರಾಜಕೀಯ ವಿರೋಧಿ ಡಿಕೆ ಶಿವಕುಮಾರ್ ಅವರಿಗೆ ಲಾಭವಾಗುತ್ತದೆ ಎಂಬ ಕಾರಣದಿಂದ ನಿಕಾಕರಿಸಲೂಬಹುದು. ಮತ್ತೊಂದೆಡೆ ಪ್ರಹ್ಲಾದ್ ಜೋಶಿ ಅವರು ಉತ್ತರ ಕರ್ನಾಟಕ ಭಾಗದ ನಾಯಕರಾಗಿರುವುದರಿಂದ ಬೆಂಗಳೂರಿನಲ್ಲಿ ನಿರ್ಮಾಣವಾಗೋ ಈ ಏರ್‌ಪೋರ್ಟ್ ಬಗ್ಗೆ ತಲೆಕೆಡಿಸಿಕೊಳ್ಳದೆಯೂ ಇರಬಹುದು.
ಹಾಗಾಗಿ ಸದ್ಯ ಎರಡನೇ ಏರ್‌ಪೋರ್ಟ್ ಭವಿಷ್ಯವನ್ನು ಕೇಂದ್ರ ಸರ್ಕಾರವೇ ನಿರ್ಧರಿಸಬೇಕಿದೆ. ವೈಯಕ್ತಿಕ ರಾಜಕೀಯ ದ್ವೇಷ ಹಾಗೂ ಭಿನ್ನ ಪಕ್ಷಗಳಿರುವ ಕಾರಣಕ್ಕೆ ಕೇಂದ್ರದಿಂದ ಸ್ಥಳ ಫೈನಲ್ ಆಗುವುದು ವಿಳಂಬವಾಗಬಹುದು. ಸದ್ಯ ಕಾಂಗ್ರೆಸ್ ಸರ್ಕಾರದ ಮುಂದೆ ಈ ಎಲ್ಲ ಸವಾಲುಗಳಿದ್ದು, ಇವುಗಳನ್ನು ಮೆಟ್ಟಿನಿಂತು ಹೇಗೆ ಏರ್‌ಪೋರ್ಟ್ ನಿರ್ಮಾಣಕ್ಕೆ ಅಡಿಗಲ್ಲು ಹಾಕುತ್ತದೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.












Click it and Unblock the Notifications