Bengaluru 2nd Airport: ಕನಕಪುರ ರಸ್ತೆ vs ಕುಣಿಗಲ್ ರಸ್ತೆ: ಎರಡನೇ ಏರ್‌ಪೋರ್ಟ್ ಆದ್ರೆ ಹೂಡಿಕೆಗೆ ಯಾವುದು ಬೆಸ್ಟ್?
ಬೆಂಗಳೂರಿನಲ್ಲಿ ಎರಡನೇ ಅಂತರರಾಷ್ಟ್ರೀಯ ಹಸಿರು ವಿಮಾನ ನಿಲ್ದಾಣಕ್ಕೆ ರಾಜ್ಯ ಸರ್ಕಾರ ಮೂರು ಸ್ಥಳಗಳನ್ನು ಗುರುತು ಮಾಡಿದೆ. ಈ ಜಾಗಗಳ ಪೂರ್ವಕಾರ್ಯಸಾಧ್ಯತಾ ಅಧ್ಯಯನಕ್ಕಾಗಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ತಂಡವು ಇದೇ ಏಪ್ರಿಲ್ 7ರಿಂದ 9ರ ವೇಳೆಗೆ ರಾಜ್ಯಕ್ಕೆ ಬರಲಿದ್ದಾರೆ. ಕನಕಪುರ ರಸ್ತೆಯಲ್ಲಿ ಎರಡು ಹಾಗೂ ನೆಲಮಂಗಲ-ಕುಣಿಗಲ್ ರಸ್ತೆಯಲ್ಲಿ ಒಂದು ಜಾಗ ಸೇರಿದಂತೆ ಒಟ್ಟು ಮೂರು ಸ್ಥಳಗಳನ್ನು ಪಟ್ಟಿ ಮಾಡಲಾಗಿದೆ. ಇದರ ಬೆನ್ನಲ್ಲೇ ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿಗಲು ಹೊಸ ಏರ್‌ಪೋರ್ಟ್ ಫೈನಲ್ ಜಾಗದ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಹಾಗಾದರೆ ಇವುಗಳಲ್ಲಿ ಯಾವ ಸ್ಥಳ ರಿಯಲ್ ಎಸ್ಟೇಟ್‌ಗೆ ಪೂರಕವಾಗಿದೆ ಎಂಬ ವಿಶ್ಲೇಷಣೆ ಇಲ್ಲಿದೆ.
ಹೊಸ ಏರ್‌ಪೋರ್ಟ್‌ಗೆ ಗುರುತಿಸಿರುವ ಕನಕಪುರ ರಸ್ತೆ ಹಾಗೂ ನೆಲಮಂಗಲ ಜಾಗಗಳ ಸ್ವರೂಪ ಹೀಗಿದೆ. ಒಂದು ವೇಳೆ ಕನಕಪುರ ರಸ್ತೆಯಲ್ಲಿ ವಿಮಾನ ನಿಲ್ದಾಣ ತಲೆ ಎತ್ತಿದರೆ ಮೊದಲಿಗೆ ಇಲ್ಲಿನ ಆಸ್ತಿ ಮೌಲ್ಯ ಏರಿಕೆಯಾಗಲಿದೆ. ಕನಕಪುರ ರಸ್ತೆ ಈಗಾಗಲೇ ಬೃಹತ್ ಅಭಿವೃದ್ಧಿಯ ಹಂತದಲ್ಲಿದ್ದು, ಏರ್‌ಪೋರ್ಟ್ ಬಂದರೆ ಶೇ 40ರವರೆಗೆ ಆಸ್ತಿ ಬೆಲೆ ಏರಿಕೆ ನಿರೀಕ್ಷಿಸಬಹುದು.

ಈಗಾಗಲೇ ಇರುವ ನೈಸ್ ರಸ್ತೆ, ಮೈಸೂರು ರಸ್ತೆ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸಂಪರ್ಕ ಉತ್ತಮವಾಗಿದ್ದು, ಈ ಭಾಗದಲ್ಲಿ ಮೂಲಸೌಕರ್ಯ ಅಭಿವೃದ್ಧಿಯಾಗಲಿದೆ. ಇದು ಬೆಂಗಳೂರಿಗೆ ಹತ್ತಿರದಲ್ಲೇ ಇರುವ ಕಾರಣ ಎಲೆಕ್ಟ್ರಾನಿಕ್ ಸಿಟಿ, ಜಿಗಣಿ, ಬನ್ನೇರುಘಟ್ಟ, ಆನೇಕಲ್, ರಾಮನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳು ಹೂಡಿಕೆಗೆ ಸೂಕ್ತ ಎಂದು ಅಂದಾಜಿಸಲಾಗಿದೆ. ಬಳಿಕ ಇಲ್ಲಿ ವಸತಿ ಯೋಜನೆಗಳಿಗೆ ಹೆಚ್ಚು ಬೇಡಿಕೆ ಹೆಚ್ಚಾಗಿ ಅಪಾರ್ಟ್‌ಮೆಂಟ್‌ಗಳು, ವಿಲ್ಲಾಗಳು ಕೂಡ ಅಭಿವೃದ್ಧಿಯಾಗಲಿವೆ.
ನೆಲಮಂಗಲ ಬಳಿ ಹೇಗಿದೆ ವ್ಯವಸ್ಥೆ?
ನೆಲಮಂಗಲ ಬಳಿ ಗುರುತಿಸಲಾದ ಜಾಗದಲ್ಲಿ ಹೊಸ ಏರ್‌ಪೋರ್ಟ್ ನಿರ್ಮಾಣವಾದ್ರೆ ಬೃಹತ್ ವಾಣಿಜ್ಯ ಬೆಳವಣಿಗೆ ಸಾಧ್ಯತೆ ಇದೆ. ಈ ಭಾಗವನ್ನು ಕೈಗಾರಿಕಾ ಅಭಿವೃದ್ಧಿಗೆ ಸೂಕ್ತವಾದ ಜಾಗ ಎನ್ನಲಾಗಿದೆ. ಐಟಿ, ಲಾಸಜಿಸ್ಟಿಕ್ಸ್ ಹಬ್ ಬರಲು ಕೂಡ ಅನುಕೂಲಕರವಾಗಿದೆ. ತುಮಕೂರು ರಸ್ತೆ, ಪೀಣ್ಯ, ಯಲಹಂಕ ಪ್ರದೇಶಗಳಿಗೆ ಹತ್ತಿರ ಇರುವುದರಿಂದ ಬೆಂಗಳೂರಿಗೆ ಸಂಪರ್ಕವೂ ಸುಲಭವಾಗಲಿದೆ. ಹುಬ್ಬಳ್ಳಿ, ಧಾರವಾಡ, ಮುಂಬೈ ಸಂಪರ್ಕ ಕೂಡ ಸುಲಭವಾಗಲಿದೆ.

ಇಲ್ಲಿ ಅಗ್ಗದ ಬೆಲೆಗೆ ಹೂಡಿಕೆ ಅವಕಾಶ ಕೂಡ ಇದ್ದು, ಈಗಿನ ದರಕ್ಕೆ ಭೂಮಿ ಖರೀದಿಸಿದರೆ, ಏರ್‌ಪೋರ್ಟ್ ಬಂದ ನಂತರ ಶೇ 50ರಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕನಕಪುರ ರಸ್ತೆ ಹೋಲಿಸಿದರೆ ಈ ಪ್ರದೇಶ ತುಸು ಬೆಂಗಳೂರಿನಿಂದ ದೂರವೇ ಇರಲಿದ್ದು, ಸಂಪೂರ್ಣವಾಗಿ ಅಭಿವೃದ್ಧಿಯಾಗಲು ಕನಿಷ್ಠ 10 ವರ್ಷಗಳಾದರೂ ಬೇಕಾಗಬಹುದು ಎನ್ನಲಾಗಿದೆ.
ಕನಕಪುರ ರಸ್ತೆಯು ವಸತಿ ಹೂಡಿಕೆ, ಐಟಿ ಉದ್ಯೋಗ ವೃದ್ಧಿಗೆ ಸೂಕ್ತವಾದರೆ, ನೆಲಮಂಗಲ ಪ್ರದೇಶವು ವಾಣಿಜ್ಯ ಹೂಡಿಕೆಗೆ, ಕೈಗಾರಿಕಾ ಅಭಿವೃದ್ಧಿ, ಹಾಗೂ ದೊಡ್ಡ ದೊಡ್ಡ ಲಾಜಿಸ್ಟಿಕ್ಸ್ ಹಬ್ಸ್ ಬೆಳೆಯಲು ಪೂರಕವಾಗಿದೆ. ಹೂಡಿಕೆದಾರರ ದೃಷ್ಟಿಯಿಂದ ನೋಡುವುದಾದರೆ ಕನಕಪುರ ರಸ್ತೆಯು ಶೀಘ್ರ ಪ್ರಯೋಜನಕ್ಕೆ ಉತ್ತಮವಾಗಿದ್ದರೆ, ನೆಲಮಂಗಲವು ದೀರ್ಘಕಾಲಿಕ ಹೂಡಿಕೆ ಉತ್ತಮವಾದ ಜಾಗ ಎನ್ನಲಾಗಿದೆ. ಹಾಗಾಗಿ ಈ ಎರಡೂ ಜಾಗಗಳ ಮೇಲೆ ರಿಯಲ್ ಎಸ್ಟೇಟ್ ಉದ್ಯಮ ಕಣ್ಣಿಟ್ಟಿದೆ. ಒಮ್ಮೆ ಸ್ಥಳ ಫೈನಲ್ ಆದರೆ ಅದರ ಲಾಭ ಪಡೆಯಲು ತುದಿಗಾಲಲ್ಲಿ ನಿಂತಿದೆ.












Click it and Unblock the Notifications