Bengaluru Second Airport: ಈ ಕಾರಣಕ್ಕೆ ಮಾಗಡಿ ಭಾಗದಲ್ಲೂ ಎರಡನೇ ವಿಮಾನ ನಿಲ್ದಾಣ ಡೌಟ್!
ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ನಿರ್ಮಿಸುವ ವಿಚಾರ ಇನ್ನೂ ಕಗ್ಗಂಟಾಗಿ ಉಳಿದಿದೆ. ರಾಜ್ಯ ಸರ್ಕಾರ ಮಾಡಿದ ಪ್ಲ್ಯಾನ್ ಎಲ್ಲವೂ ತಲೆಕೆಳಗಾಗುತ್ತಿದೆ. ಮೊದಲಿಗೆ ಮೂರು ಜಾಗ ಗುರುತಿಸಿದ್ದ ರಾಜ್ಯ ಸರ್ಕಾರ ಬಳಿಕ ಅದೂ ಬೇಡ, ಇದೂ ಬೇಡ ಎಂದು ಸೈಲೆಂಟಾಗಿ ರಾಮನಗರ ಜಿಲ್ಲೆಯ ಮಾಗಡಿ ಬಳಿ ಹೊಸ ಏರ್‌ಪೋರ್ಟ್ ನಿರ್ಮಾಣಕ್ಕೆ ಮಾಸ್ಟರ್‌ಪ್ಲ್ಯಾನ್ ಮಾಡಿತ್ತು. ಆದರೆ ಈಗಿನ ಬೆಳವಣಿಗೆಗಳನ್ನು ನೋಡಿದರೆ ಮಾಗಡಿ ಭಾಗದಲ್ಲೂ ಏರ್‌ಪೋರ್ಟ್ ನಿರ್ಮಾಣವಾಗುವುದು ಅನುಮಾನ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಕಾರಣವೇನು ಗೊತ್ತಾ?
ಮೊದಲಿಗೆ ರಾಜ್ಯ ಸರ್ಕಾರ ಎರಡನೇ ಏರ್‌ಪೋರ್ಟ್ ನಿರ್ಮಾಣಕ್ಕಾಗಿ ಕನಕಪುರ ರಸ್ತೆ ಹಾಗೂ ಮಾಗಡಿ ಭಾಗದಲ್ಲಿ ಜಾಗಗಳನ್ನು ಗುರುತಿಸಿತ್ತು. ಅಲ್ಲಿಗೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ತಂಡ ಬಂದು ಸ್ಥಳಪರಿಶೀಲನೆಯೂ ನಡೆಸಿತ್ತು. ಆದರೆ, ಸದ್ದಿಲ್ಲದೆ ಮಾಗಡಿ ಬಳಿಯೂ ಏರ್‌ಪೋರ್ಟ್‌ಗಾಗಿ ಸ್ಥಳ ಗುರುತು ಮಾಡುವ ಕೆಲಸ ಶುರುವಾಗಿತ್ತು. ಕನಕಪುರ ರಸ್ತೆ ಅಥವಾ ಕುಣಿಗಲ್ ಬಳಿ ಏರ್‌ಪೋರ್ಟ್ ನಿರ್ಮಾಣಕ್ಕೆ ಅಷ್ಟೇನೂ ವಿರೋಧ ವ್ಯಕ್ತವಾಗಿರಲಿಲ್ಲ. ಆದರೆ ಮಾಗಡಿ ಬಳಿ ಈ ಯೋಜನೆಗೆ ರೈತರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

ಮಾಗಡಿ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಬೆಂಗಳೂರಿಗೆ ಹೊಸ ವಿಮಾನ ನಿಲ್ದಾಣ ನಿರ್ಮಿಸುವ ಸಲುವಾಗಿ ಜಾಗ ಗುರುತು ಮಾಡಲಾಗುತ್ತಿದೆ. ಇದಕ್ಕಾಗಿ ಅಧಿಕಾರಿಗಳು ಇಲ್ಲೇ ಬೀಡುಬಿಟ್ಟಿದ್ದು, ಸರ್ವೇ ಕೆಲಸ ಮಾಡಿ ಮಾರ್ಕಿಂಗ್ ಕೂಡ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ವಿಷಯ ತಿಳಿಯುತ್ತಿದ್ದಂತೆ ಈ ಭಾಗದ ರೈತರೆಲ್ಲ ವಿರೋಧದ ಕೂಗು ಎತ್ತಿದ್ದಾರೆ. ಪ್ರಾಣ ಬೇಕಾದ್ರೂ ಬಿಡ್ತೀವಿ, ಇಲ್ಲಿ ಏರ್‌ಪೋರ್ಟ್ ನಿರ್ಮಾಣಕ್ಕೆ ಅವಕಾಶ ಕೊಡೋದಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಸವಾಲ್ ಹಾಕಿದ್ದಾರೆ.
ಅಲ್ಲದೆ ಈ ಭಾಗವು ಕೃಷಿ ಅವಲಂಬಿತ ಪ್ರದೇಶವಾಗಿದ್ದು, ರೈತರು ಇದನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಏರ್‌ಪೋರ್ಟ್ ಬಂದರೆ ನಮ್ಮ ಕೃಷಿ ಭೂಮಿಗಳೆಲ್ಲ ಹಾಳಾಗಿ ನಾವೆಲ್ಲ ಬೀದಿಗೆ ಬರುತ್ತೇವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಏರ್‌ಪೋರ್ಟ್‌ಗಾಗಿ ಅಪಾರ ಪ್ರಮಾಣ ಪರಿಸರವನ್ನು ನಾಶವಾಗಲಿದ್ದು, ಈ ಯೋಜನೆ ವಿರೋಧಿಸಿ ಅಗತ್ಯವಿದ್ದರೆ ದೆಹಲಿಗೆ ಹೋಗಿ ದೂರು ಕೊಡುತ್ತೇವೆ ಎಂದೂ ಎಚ್ಚರಿಕೆ ನೀಡಿದ್ದಾರೆ.

ಸ್ಥಳೀಯ ಮಟ್ಟದಲ್ಲಿ ರೈತ ಸಂಘಟನೆಗಳು ಒಗ್ಗೂಡಿ ಈ ಯೋಜನೆ ವಿರುದ್ಧ ಪ್ರತಿಭಟನೆಗೆ ಇಳಿದಿವೆ. ಒಟ್ಟಾರೆ ಮಾಗಡಿ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಅಡ್ಡಿ ಆತಂಕಗಳೇ ಹೆಚ್ಚಾಗಿರುವ ಕಾರಣ ಇಲ್ಲಿ ಏರ್‌ಪೋರ್ಟ್ ನಿರ್ಮಾಣವಾಗುವುದು ಅನುಮಾನ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಮಾಗಡಿ ಭಾಗದಲ್ಲಿ ರೈತರಿಂದ ಭಾರಿ ವಿರೋಧ ಎದುರಾಗುತ್ತಿರುವುದರಿಂದ ಈ ಜಾಗವನ್ನು ಕೈಬಿಡುವ ಸಾಧ್ಯತೆ ಇದೆ.
ಪರ್ಯಾಯ ಕ್ರಮವೇನು?
ಒಂದು ವೇಳೆ ಮಾಗಡಿ ಜಾಗಗಳನ್ನು ಕೈಬಿಟ್ಟಲ್ಲಿ ಈ ಹಿಂದೆ ಕುಣಿಗಲ್ ಹಾಗೂ ಕನಕಪುರ ರಸ್ತೆಯಲ್ಲಿ ಗುರುತಿಸಿರುವ ಮೂರು ಜಾಗಗಳ ಪೈಕಿ ಯಾವುದಾದರೂ ಒಂದು ಜಾಗ ಫೈನಲ್ ಮಾಡಿ ಅಲ್ಲಿಯೇ ಹೊಸ ವಿಮಾನ ನಿಲ್ದಾಣ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮಾಗಡಿ ರೈತರು ಏರ್‌ಪೋರ್ಟ್‌ಗಾಗಿ ಕೃಷಿ ಭೂಮಿಗಳನ್ನು ಕೊಡುವ ಮಾತೇ ಇಲ್ಲ ಎಂದು ಪಟ್ಟು ಹಿಡಿದಿರುವ ಕಾರಣ ಭೂಸ್ವಾಧೀನ ಪ್ರಕ್ರಿಯೆಗೂ ಭಾರಿ ಸಮಸ್ಯೆ ಎದುರಾಗಲಿದೆ. ಈ ಎಲ್ಲ ಅಂಶಗಳನ್ನು ಅವಲೋಕಿಸಿ ಮಾಗಡಿಯಲ್ಲಿ ಈ ಯೋಜನೆ ಕೈಬಿಡುವ ಸಾಧ್ಯತೆಯೇ ಹೆಚ್ಚು ಎನ್ನಲಾಗುತ್ತಿದೆ.












Click it and Unblock the Notifications