Bengaluru: ನಸುಕಿನ ಜಾವ 3 ಗಂಟೆಗೆ ರಾಪಿಡೋ ರೈಡರ್ ತೋರಿದ ಮಾನವೀಯತೆಗೆ ಮಹಿಳೆ ಫಿದಾ, Video Viral

ಬೆಂಗಳೂರು: ಮಹಿಳೆಯರ ಸುರಕ್ಷತೆಯ ವಿಚಾರದಲ್ಲಿ ಆಗಾಗ ಹಲವು ನಕಾರಾತ್ಮಕ ಸುದ್ದಿಗಳು ಕೇಳಿಬರುತ್ತಿರುವ ಈ ಕಾಲದಲ್ಲಿ, ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಒಂದು ಅತ್ಯಂತ ಹೃದಯಸ್ಪರ್ಶಿ ಘಟನೆಯೊಂದು ಬೆಳಕಿಗೆ ಬಂದಿದೆ. ಬೆಳಗಿನ ಜಾವ 3 ಗಂಟೆಯ ನಡುರಾತ್ರಿಯಲ್ಲಿ ಒಬ್ಬಂಟಿಯಾಗಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ನೀಡಿದ ನೆರವು, ನಗರದ ಮೇಲಿನ ಅವರ ನಂಬಿಕೆಯನ್ನು ಹೆಚ್ಚಿಸಿದೆ. ಐಶ್ವರ್ಯ ಕಲ್ಪಾರ್ಜುನ್ ಎಂಬ ಯುವತಿಯೇ ಈ ಸುಂದರ ಅನುಭವವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ವೈರಲ್‌ ವಿಡಿಯೋದಲ್ಲಿ ಏನಿದೆ?

ತಮ್ಮ ವಿಡಿಯೋದಲ್ಲಿ ಘಟನೆಯನ್ನು ಎಳೆಎಳೆಯಾಗಿ ವಿವರಿಸಿರುವ ಐಶ್ವರ್ಯ, ತಾವು ವಿಮಾನ ನಿಲ್ದಾಣದಿಂದ (ಏರ್‌ಪೋರ್ಟ್) ಕಾಡುಗೋಡಿಗೆ ಬಂದಿಳಿದಾಗ ನಡೆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. "ಇಂದು ನನ್ನ ಜೀವನದಲ್ಲಿ ಅತ್ಯಂತ ಸುಂದರವಾದ ಘಟನೆಯೊಂದು ನಡೆಯಿತು. ನಾನು ವಿಮಾನ ನಿಲ್ದಾಣದಿಂದ ಬಸ್ ಮೂಲಕ ಕಾಡುಗೋಡಿಗೆ ಬಂದೆ. ಆಗ ಸಮಯ ಬೆಳಗಿನ ಜಾವ 3 ಗಂಟೆ. ನಾನು ಮನೆಗೆ ಹೋಗಲು ಕ್ಯಾಬ್ ಬುಕ್ ಮಾಡಲು ಪ್ರಯತ್ನಿಸುತ್ತಿದ್ದೆ. ಆದರೆ, ನನ್ನ ಮನೆ ಕೇವಲ 3 ಕಿಲೋಮೀಟರ್ ದೂರದಲ್ಲಿದ್ದ ಕಾರಣ ಯಾವುದೇ ಕ್ಯಾಬ್ ಸಿಗುತ್ತಿರಲಿಲ್ಲ. ನಾನು ಒಬ್ಬಂಟಿಯಾಗಿರುವುದನ್ನು ಗಮನಿಸಿದ ಬಸ್ ಕಂಡಕ್ಟರ್, ನನಗೆ ಕ್ಯಾಬ್ ಸಿಗುವವರೆಗೂ ನನ್ನೊಂದಿಗೇ ನಿಂತು ನನಗೆ ಧೈರ್ಯ ತುಂಬಿದರು" ಎಂದು ಅವರು ಹೇಳಿದ್ದಾರೆ.

Bengaluru

ಆ ಬಳಿಕ ಅಲ್ಲಿಗೆ ಬಂದ ರ‍್ಯಾಪಿಡೋ (Rapido) ಚಾಲಕನೊಬ್ಬರು ಐಶ್ವರ್ಯ ಅವರಿಗೆ ಸಹಾಯ ಹಸ್ತ ಚಾಚಿದ್ದಾರೆ. "ಒಬ್ಬ ರ‍್ಯಾಪಿಡೋ ಚಾಲಕ ನನ್ನ ಬಳಿ ಬಂದು ಡ್ರಾಪ್ ಮಾಡುವುದಾಗಿ ಹೇಳಿದರು. ನಾನು ಎಷ್ಟು ಹಣ ಕೊಡಬೇಕು ಎಂದು ಕೇಳಿದಾಗ, ಅವರು 'ಪರವಾಗಿಲ್ಲ, ಮೊದಲು ಕೂತ್ಕೊಳ್ಳಿ, ಮ್ಯಾಪ್‌ನಲ್ಲಿ ಲೊಕೇಶನ್ ಹಾಕಿ' ಎಂದು ಅತ್ಯಂತ ಗೌರವದಿಂದ ಹೇಳಿದರು" ಎಂದು ಐಶ್ವರ್ಯ ತಿಳಿಸಿದ್ದಾರೆ.

"ನನ್ನನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದ ನಂತರ, ನಾನು ಅವರಿಗೆ ಎಷ್ಟು ಹಣ ಕೊಡಬೇಕು ಎಂದು ಮತ್ತೊಮ್ಮೆ ಕೇಳಿದೆ. ಅದಕ್ಕೆ ಆ ಚಾಲಕ, 'ತುಂಬಾ ತಡವಾಗಿದೆ, ಹೀಗಾಗಿ ನಿಮ್ಮನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವುದು ನನ್ನ ಜವಾಬ್ದಾರಿಯಾಗಿತ್ತು. ನಾನು ಇಷ್ಟೇ ಹಣ ಕೊಡಿ ಎಂದು ಖಚಿತವಾಗಿ ಕೇಳುವುದಿಲ್ಲ, ಬದಲಾಗಿ ನಿಮಗೆ ಎಷ್ಟು ಸರಿ ಅನಿಸುತ್ತದೆಯೋ ಅಷ್ಟನ್ನು ಮಾತ್ರ ಕೊಡಿ' ಎಂದು ಹೇಳಿದರು. ಸಂಪೂರ್ಣವಾಗಿ ಹೊಸ ನಗರವೊಂದರಲ್ಲಿ, ಬೆಳಗಿನ ಜಾವ 3 ಗಂಟೆಗೆ ಅಪರಿಚಿತರೊಬ್ಬರ ಈ ಮಾತು ನನಗೆ ಅತ್ಯಂತ ಸುರಕ್ಷಿತ ಭಾವನೆಯನ್ನು ನೀಡಿತು" ಎಂದು ಯುವತಿ ಹರ್ಷ ವ್ಯಕ್ತಪಡಿಸಿದ್ದಾರೆ.

ತಮ್ಮ ಪೋಸ್ಟ್‌ನ ಕ್ಯಾಪ್ಶನ್‌ನಲ್ಲಿ ಐಶ್ವರ್ಯ, "ಎಲ್ಲಾ ಗಂಡಸರೂ ಒಂದೇ ತರಹ ಇರುವುದಿಲ್ಲ. ಇಂದು ನೀವು ನೋಡಿದ ಅತ್ಯಂತ ಸುಂದರವಾದ ವಿಚಾರ ಇದಾಗದಿರಬಹುದು, ಆದರೆ ನನಗೆ ಇದು ನಿಜಕ್ಕೂ ವಿಶೇಷ. ನಡುರಾತ್ರಿ 3 ಗಂಟೆಗೆ ಹೊಸ ನಗರದಲ್ಲಿ ಇಬ್ಬರು ಅಪರಿಚಿತರು ನನಗೆ ತೋರಿದ ಕಾಳಜಿ ನನಗೆ ಸುರಕ್ಷತೆಯ ಭಾವನೆ ಮೂಡಿಸಿತು. ಒಬ್ಬಂಟಿ ಮಹಿಳೆಯಾಗಿ ಪ್ರಯಾಣಿಸುವಾಗ ಸಿಗುವ ಈ ನೆಮ್ಮದಿ ಎಂಥದ್ದು ಎಂಬುದು ಹೆಣ್ಣುಮಕ್ಕಳಿಗೆ ಮಾತ್ರ ಅರ್ಥವಾಗುತ್ತದೆ. ಇಂತಹ ಘಟನೆಗಳು ಅಪರೂಪ ಎಂಬುದು ನಿರಾಸೆ ಮೂಡಿಸಿದರೂ, ಇದು ನೆನಪಿನಲ್ಲಿ ಉಳಿಯುವಂತದ್ದು" ಎಂದು ಬರೆದುಕೊಂಡಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್‌ಗಳ ಸುರಿಮಳೆಗರೆದಿದ್ದಾರೆ. ಇಂತಹ ಘಟನೆಗಳು ಮಾನವೀಯತೆಯ ಮೇಲಿನ ನಂಬಿಕೆಯನ್ನು ಮರುಕಳಿಸುವಂತೆ ಮಾಡುತ್ತವೆ ಎಂದು ಹಲವರು ಶ್ಲಾಘಿಸಿದ್ದಾರೆ. "ಯುವತಿಗೆ ಸಹಾಯ ಸಿಗುವವರೆಗೂ ಜೊತೆಯಲ್ಲಿದ್ದ ಬಸ್ ಕಂಡಕ್ಟರ್ ಅವರ ಕಾರ್ಯ ನಿಜಕ್ಕೂ ಶ್ರೇಷ್ಠ, ಇದು ನಿಜವಾದ ಮಾನವೀಯತೆ" ಎಂದು ಒಬ್ಬರು ಕಮೆಂಟ್ ಮಾಡಿದರೆ, "ಇಂತಹ ಸಣ್ಣ ಸಣ್ಣ ಕಾಳಜಿಯ ನಡೆಗಳು ಹೊಸ ಊರಿನಲ್ಲಿ ಮಹಿಳೆಯರಿಗೆ ಭರವಸೆ ಮೂಡಿಸುತ್ತವೆ" ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಬೆಂಗಳೂರಿನ ಮಾನವೀಯತೆಯನ್ನು ಈ ಘಟನೆ ಮತ್ತೊಮ್ಮೆ ಎತ್ತಿಹಿಡಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+