Bengaluru Rain Alert: ಮೇ 3 ರವರೆಗೆ ನಗರದಲ್ಲಿ ಉತ್ತಮ ಮಳೆ
ಬೆಂಗಳೂರು, ಏಪ್ರಿಲ್ 30: ವಾತಾವರಣದಲ್ಲಿ ಉಂಟಾದ ವೈಪರಿತ್ಯಗಳ ಪ್ರಭಾವದಿಂದಾಗಿ ಬೆಂಗಳೂರಿನಲ್ಲಿ ಪೂರ್ವ ಮುಂಗಾರು ಚುರುಕಾಗಿದೆ. ಶನಿವಾರ ರಾತ್ರಿ ವಿವಿಧ ಬಡಾವಣೆಗಳಲ್ಲಿ ಸುರಿದ ಮಳೆ ಇನ್ನೂ ಮೂರು ದಿನಗಳವರೆಗೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದ ಕರಾವಳಿ ಭಾಗದಲ್ಲಿ ಸಮುದ್ರ ಮಟ್ಟದಲ್ಲಿ ಮೇಲ್ಮೈ ಸುಳಿಗಾಳಿ ತೀವ್ರಗೊಂಡಿದೆ. ಅದರ ಪ್ರಭಾವದಿಂದ ಮಳೆ ಸುರಿಸುವ ಮಾರುತಗಳು ಎಲ್ಲೆಡೆ ಸಕ್ರಿಯವಾಗವೆ. ಈ ಕಾರಣದಿಂದ ಕಳೆದ ಕೆಲವು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಮಳೆ ಅಬ್ಬರ ಜೋರಾಗಿದೆ.

ಮುಂದಿನ ಮೂರು ದಿನ ಮೇ 3ರವರೆಗೆ ಬೆಂಗಳೂರಿನ ವಿವಿಧೆಡೆ ವ್ಯಾಪಕ ಮಳೆ ಬರಲಿದೆ. ಪ್ರತಿದಿನ ಸಂಜೆ ನಂತರ ಮಳೆ ಸುರಿಯುವ ಲಕ್ಷಣಗಳು ಹೆಚ್ಚಿದೆ. ಗುಡುಗು ಮಿಂಚಿನ ಆರ್ಭಟ ಜೊತೆಗೆ ಗಾಳಿಯ ವೇಗವು ಜಾಸ್ತಿ ಇರಲಿದೆ. ಬಿಸಿಲು ಕಂಡಿದ್ದ ಬೆಂಗಳೂರಿನಲ್ಲಿ ಮುಂದಿನ ವಾರ ತಂಪು ವಾತಾವರಣ ಸೃಷ್ಟಿಯಾಗಲಿದೆ.
ಮೇ 3ರವರೆಗೆ ದಿನಾಲೂ ಮೋಡ ಕವಿದ ವಾತಾವರಣ ಕಂಡು ಬರಲಿದೆ. ಗರಿಷ್ಠ ತಾಪಮಾನ 33 ಮತ್ತು ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಬಹುದು ಎಂದು ಹವಾಮಾನ ಮುನ್ಸೂಚನಾ ವರದಿ ತಿಳಿಸಿದೆ.

ಅಧಿಕ ಮಳೆ ಆಗಿದ್ದೆಲ್ಲಿ?
ಶನಿವಾರ ಸಂಜೆ ನಂತರ ಜೋರು ಮಳೆ ಆರಂಭವಾಯಿತು. ಈ ವೇಳೆ ಬಸವನಗುಡಿ ಮತ್ತು ವಿದ್ಯಾಪೀಠ 26.5 ಮಿಲಿ ಮೀಟರ್ ಅಧಿಕ ಮಳೆ ಬಿದ್ದಿದೆ. ಉಳಿದಂತೆ ವರ್ತೂರಲ್ಲಿ 23.5 ಮಿ.ಮೀ., ಅಂಜನಾಪುರ 22 ಮಿ.ಮೀ., ಎಚ್‌ಎಎಲ್ ಏರ್‌ಪೋರ್ಟ್ 20.5 ಮಿ.ಮೀ., ಬೆಂಗಳೂರು ಉತ್ತರ ಮತ್ತು ಸಂಪಂಗಿರಾಮನಗರ ತಲಾ 19ಮಿ.ಮೀ., ನಾಗರಭಾವಿ ಮತ್ತು ಹಂಪಿನಗರ 16.5 ಮಿ.ಮೀ., ಚೌಡೇಶ್ವರಿ ವಾರ್ಡ್, ಯಲಹಂಕ ತಲಾ 13.5 ಮಿ.ಮೀ., ಚಾಮರಾಜಪೇಟೆ 13ಮಿ.ಮೀ. ಮತ್ತು ರಾಜರಾಜೇಶ್ವರಿ ನಗರದಲ್ಲಿ 12.5 ಮಿ.ಮೀ. ಮಳೆ ದಾಖಲಾಗಿದೆ ಎಂದು ಬೆಂಗಳೂರು ಹವಾಮಾನ ಇಲಾಖೆ ವರದಿ ತಿಳಿಸಿದೆ.
ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
ಮುಂದಿನ 48 ಗಂಟೆಗಳಲ್ಲಿ ಕರಾವಳಿ ಭಾಗದ ಜಿಲ್ಲೆಗಳ ಹಗುರ ಮಳೆ ಸಾಧ್ಯತೆ ಇದೆ. ಅದೇ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ ಧಾರವಾಡ, ಗದಗ, ಬೆಳಗಾವಿ, ಕಲಬುರಗಿ, ಕೊಪ್ಪಳ ಸೇರಿ ಇನ್ನಿತರ ಜಿಲ್ಲೆಗಳಲ್ಲಿ ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ. ಮೀನುಗಾರರಿಗೆ ಯಾವುದೇ ಎಚ್ಚರಿಕೆ ಇಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ.












Click it and Unblock the Notifications