Bengaluru rain: ಬುಧವಾರ ನಗರದೆಲ್ಲಡೆ ಭರ್ಜರಿ ಮಳೆ ದಾಖಲು, ಎಲ್ಲೆಲ್ಲಿ ಎಷ್ಟು?
ಬೆಂಗಳೂರು, ಅಕ್ಟೋಬರ್ 11: ದೇಶದ ಬಂಗಾಳಕೊಲ್ಲಿ ಕರಾವಳಿ ಭಾಗದಲ್ಲಿ ಉಂಟಾಗಿರುವ ವೈಪರಿತ್ಯಗಳ ಪರಿಣಾಮದಿಂದಾಗಿ ಬೆಂಗಳೂರಿನಲ್ಲಿ ಪ್ರತಿನಿತ್ಯ ಮಳೆ ಸುರಿಯುತ್ತಿದೆ. ಇಂದು ಬುಧವಾರವು ಸಹ ಮಧ್ಯಾಹ್ನದ ನಂತರ ವಿವಿಧ ಬಡಾವಣೆಗಳಲ್ಲಿ ಜೋರು ದಾಖಲಾಗಿದೆ. ಈ ಪೈಕಿ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಅತ್ಯಧಿಕ ಮಳೆ ಆಗಿದ್ದು, ಇದು ತಡರಾತ್ರಿವರೆಗೂ ಮುಂದುವರಿಯಲಿದೆ.
ನಗರದಲ್ಲಿ ನಾಲ್ಕು ದಿನಗಳಿಂದ ನಿರಂತರವಾಗಿ ಜೋರು ಮಳೆ ಸುರಿಯುತ್ತಿದೆ. ಬುಧವಾರ ಬೆಳಗ್ಗೆಯಿಂದಲೇ ಮಬ್ಬು ವಾತಾವರಣ ಇದ್ದು, ಬಿಸಿಲು ಅಪರೂಪವಾಗಿದೆ. ಸಂಜೆ ವಿದ್ಯಾಪೀಠದಲ್ಲಿ ಅಧಿಕ 35 ಮಿಲಿ ಮೀಟರ್ ಮಳೆ ಬಿದ್ದಿದೆ. ಇದರ ಜೊತೆಗೆ ಮಲ್ಲೇಶ್ವರಂ, ಮೆಜೆಸ್ಟಿಕ್, ಚಾಮರಾಜಪೇಟೆ, ಯಶವಂತಪುರ, ಹೆಬ್ಬಾಳ, ವಿಜಯನಗರ, ನಾಯಂಡಹಳ್ಳಿ, ಯಲಹಂಕ, ಕೋರಮಂಗಲ, ಲಾಲ್ ಬಾಗ್, ವಿಧಾನಸೌಧ ಸೇರಿದಂತೆ ಬಹುತೇಕ ಬಡಾವಣೆಗಳಲ್ಲಿ ಬಿರುಸು ಮಳೆ ಆಯಿತು.

ಮಳೆ ನಿರಂತರವಾಗಿ ಸುರಿಯುತ್ತಿದ್ದು, ಪ್ರಮುಖ ರಸ್ತೆಗಳು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ವಾಹನ ಸವಾರರು ನಿರಂತರ ಜಿಟಿ ಜಿಟಿ ಮಳೆಯಿಂದಾಗಿ ಪರದಾಡಿದರು. ಕೆಲವು ರಸ್ತೆ ಜಂಕ್ಷನ್‌ಗಳಲ್ಲಿ ವಾಹನ ದಟ್ಟಣೆ ಕಂಡು ಬಂತು. ಜಡಿ ಮಳೆ ವ್ಯಾಪಾರಕ್ಕೆ ಕಿರಿ ಕಿರಿ ಉಂಟು ಮಾಡಿತು.
ಬಂಗಾಳಕೊಲ್ಲಿ ಸಮುದ್ರ ಮೇಲ್ಭಾಗದಿಂದ ಆಂಧ್ರ ಪ್ರದೇಶದ ಕರಾವಳಿ ಮಾರ್ಗವಾಗಿ ತಮಿಳುನಾಡು ಹಾದು ಕನ್ಯಾಕುಮಾರ್ ವರೆಗೆ ಸ್ಟ್ರಪ್ ಹಾದು ಹೋಗಿದೆ. ಈ ಸುಳಿಗಾಳಿ ಎತ್ತರ ಸುಮಾರು ಎರಡು ಕಿಲೋ ಮೀಟರ್ ಇದೆ. ಇದರಿಂದಾಗಿ ಬೆಂಗಳೂರು ನಗರ ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಿಗೆ ಕೆಲವು ದಿನಗಳಿಂದ ಧಾರಾಕಾರವಾಗಿ ಮಳೆ ಆಗುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬುಧವಾರ ಎಲ್ಲೆಲ್ಲಿ ಎಷ್ಟು ಮಳೆ ಆಗಿದೆ
ಇಂದು ಸಂಜೆ 5.30 ಗಂಟೆ ವರೆಗಿನ ಮಳೆ ದಾಖಲಾತಿ ವರದಿ ಪ್ರಕಾರ ಬೆಂಗಳೂರಿನ ಉತ್ತರಹಳ್ಳಿ 19.5 ಮಿಲಿ ಮೀಟರ್, ವರ್ತೂರು 19.5 ಮಿ.ಮೀ, ಹಂಪಿನಗರ 17 ಮಿ.ಮೀ, ವಿವಿಪುರಂ 16 ಮಿ.ಮೀ, ಎಚ್‌ಎಎಲ್ ವಿಮಾನ ನಿಲ್ದಾಣ 16 ಮಿ.ಮೀ, ನಾಯಂಡಹಳ್ಳಿ 15ಮಿ.ಮೀ, ಪಟ್ಟಾಭಿರಾಮನಗರ 14.5ಮಿ.ಮೀ, ಸಂಪಂಗಿರಾಮನಗರ 14.5 ಮಿ.ಮೀ, ಕಾಟನ್ ಪೇಟೆ 14.5 ಮಿ.ಮೀ, ಗಾಳಿ ಆಂಜನೇಯ ಟೆಂಪಲ್ ವಾರ್ಡ್ 13.5 ಮಿ.ಮೀ, ವನ್ನಾರಪೇಟೆ 13 ಮಿ.ಮೀ, ಕೆಂಗೇರಿ 10.5 ಮಿ.ಮೀ, ರಾಜರಾಜೇಶ್ವರಿ ನಗರ 10 ಮಿ.ಮೀ ಮಳೆ ದಾಖಲಾಗಿದೆ.
ಬೆಂಗಳೂರಿಗೆ ಮುನ್ಸೂಚನೆ ಏನಿದೆ?
ಸಿಲಿಕಾನ್ ಸಿಟಿ ಬೆಂಗಳೂರಿಗೆ ಮುಂದಿನ 48 ಗಂಟೆಗಳ ಕಾಲ ಇದೇ ರೀತಿ ವ್ಯಾಪಕವಾಗಿ ಮಳೆ ಆಗಲಿದೆ. ಇದರೊಂದಿಗೆ ಕೆಲವು ಕಡೆಗಳಲ್ಲಿ ಸಾಮಾನ್ಯ ಮಳೆ ದಾಖಲಾಗಬಹುದು ಎಂದು ಹೇಳಲಾಗಿದೆ. ನಿತ್ಯ ಸಂಜೆ ನಂತರ ಬಿರುಸು ಮಳೆ ದಾಖಲಾಗಲಿದೆ. ಈ ವೇಳೆ ತೇವ ಭರಿತ ಗಾಳಿ ಬೀಸುವುದರಿಂದ ಎಲ್ಲೆಡೆ ತಂಪು ವಾತಾವರಣ ಕಂಡು ಬರಲಿದೆ. ನಂತರ ಶುಕ್ರವಾರದಿಂದ ಮಳೆಯಲ್ಲಿ ತುಸು ಇಳಿಕೆ ಆಗಲಿದ್ದು, ಅಕ್ಟೊಬರ್ 16 ವರೆಗೆ ತುಂತುರು ಮಳೆ ಮುಂದುವರಿಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಹವಾಮಾನ ವರದಿ ಮುನ್ಸೂಚನೆ ನೀಡಿದೆ.












Click it and Unblock the Notifications