Bengaluru Rain: ರಣಬಿಸಿಲಿಗೆ ಕಾದ ಬೆಂಗಳೂರಿಗೆ ತಂಪೆರೆದ ಮಳೆರಾಯ
Bengaluru Rain: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ರಣಬಿಸಿಲು ಮುಂದುವರೆದಿದೆ. ಈ ನಡುವೆಯೇ ಇಷ್ಟು ದಿನ ಬಿಸಿಲಿಗೆ ಬೆಂದಿದ್ದ ರಾಜ್ಯ ರಾಜಧಾನಿ ಬೆಂಗಳೂರಿಗೆ ಇದೀಗ ಇಂದು (ಮಾರ್ಚ್ 22) ಸಂಜೆ ಸುಮಾರು 4:45ರ ವೇಳೆಗೆ ಮಳೆರಾಯ ತಂಪೆರೆದಿದ್ದಾನೆ. ಇದರಿಂದ ನಗರದ ಜನರಿಗೆ ನಮ್ಮದಿ ತಂದಂತಾಗಿದೆ. ಹಾಗಾದ್ರೆ ಎಲ್ಲೆಲ್ಲಿ ಮಳೆಯಾಗಿದೆ ಎಂದು ಇಲ್ಲಿ ತಿಳಿಯಿರಿ.
ಬೆಂಗಳೂರಿನಲ್ಲಿ ಸುಮಾರು ಅರ್ಧ ಗಂಟೆಯಿಂದ ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆಯಾಗಿದೆ. ಮೆಜೆಸ್ಟಿಕ್, ಯಶವಂತಪುರ, ಶೇಷಾದ್ರಿಪುರ, ಕೆಆರ್ ಪುರಂ, ಹೆಬ್ಬಾಳ, ಬ್ಯಾಟರಾಯನಪುರ, ಯಲಹಂಕ, ಕೆಂಪೇಗೌಡ ವಿಮಾನ ನಿಲ್ದಾಣ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಿದೆ.

ಗುಡುಗು ಸಿಡಿಲು ಸಹಿತ ಸುರಿದ ಮಳೆಯಿಂದ ವಿಮಾನ ಹಾರಾಟದಲ್ಲಿ ಭಾರಿ ವಿಳಂಬವಾಗಿದೆ. ಕಳೆದ ಒಂದು ವಾರದಲ್ಲಿ ಬೆಗಳೂರಿನಲ್ಲಿ 38 ಡಿಗ್ರಿ ತಾಪಮಾನ ದಾಖಲಾಗಿತ್ತು. ಇದೀಗ ಇಷ್ಟು ದಿನ ಬಿಸಿಲಿಗೆ ತತ್ತರಿಸಿದ್ದ ಬೆಂಗಳೂರಿನಲ್ಲಿ ರಣಮಳೆ ಸುರಿದಿದ್ದು, ಹಲವೆಡೆ ರಸ್ತೆಗಳು ಚರಂಡಿಯಂತೆ ಮಾರ್ಪಟ್ಟ ಪರಿಣಾಮ ವಾಹನಸವಾರರು ಪರದಾಡಿದ ಘಟನೆಗಳು ನಡೆದಿವೆ. ಅಲ್ಲದೆ, ರಾತ್ರಿ ವೇಳೆಗೆ ಮಳೆ ಮತ್ತಷ್ಟು ಚುರುಕು ಪಡೆಯಲಿದೆ ಎನ್ನುವ ಮುನ್ಸೂಚನೆಯೂ ಇದೆ.
ಯಲಹಂಕ ಸುತ್ತಮುತ್ತ ಸಹ ಧಾರಾಕಾರ ಮಳೆ ಸುರಿದಿದೆ. ಮಳೆಯಿಂದಾಗಿ ಸಾರ್ವಜನಿಕರು ಪರದಾಡಿದ ಘಟನೆ ನಡೆಸಿದೆ. ಯಲಹಂಕದ ಅಟ್ಟೂರು ಬಡಾವಣೆಯಲ್ಲಿ ರಸ್ತೆ ಬದಿಯಲ್ಲಿ ಮಳೆ ನೀರು ಹರಿಯುತ್ತಿರುವ ಹಿನ್ನೆಲೆ ಕೆಲಸ ಮುಗಿಸಿ ಮನೆ ತೆರಳಲು ವಾಹನ ಸವಾರರು ಪರದಾಡಿದರು.
ಸಂಚಾರ ಸಲಹೆ
— K.R.PURA TRAFFIC POLICE.BENGALURU. (@KRPURATRAFFIC) March 22, 2025
ಕಸ್ತೂರಿ ನಗರ ಕಡೆಯಿಂದ M M T ಜಂಕ್ಷನ್ (ಕೆ ಆರ್ ಪುರ) ಕಡೆಗೆ ಹೋಗುವ ಮಾರ್ಗದಲ್ಲಿ ಎಂ. ಎಂ. ಟಿ ಬಸ್ ನಿಲ್ದಾಣದ ಹತ್ತಿರ ಮಳೆ ನೀರು ನಿಂತಿರುವುದರಿಂದ ವೈಟ್‌ಫೀಲ್ಡ್, ಮಹದೇವಪುರ ಮತ್ತು ಕೆ ಆರ್ ಪುರ ಕಡೆಗೆ ಹೋಗುವ ವಾಹನಗಳ ಸಂಚಾರ ನಿಧಾನಗತಿಯಲ್ಲಿರುತ್ತದೆ, ವಾಹನ ಸವಾರರು/ಚಾಲಕರು ಸಹಕರಿಸಲು ಕೋರಿದೆ. pic.twitter.com/D8xXOrSSIw
ಸಂಚಾರ ಸಲಹೆ: ಕಸ್ತೂರಿ ನಗರ ಕಡೆಯಿಂದ MMT ಜಂಕ್ಷನ್ (ಕೆಆರ್ ಪುರ) ಕಡೆಗೆ ಹೋಗುವ ಮಾರ್ಗದಲ್ಲಿ ಎಂ.ಎಂ.ಟಿ ಬಸ್ ನಿಲ್ದಾಣದ ಹತ್ತಿರ ಮಳೆ ನೀರು ನಿಂತಿದೆ. ಆದ್ದರಿಂದ ವೈಟ್‌ಫೀಲ್ಡ್, ಮಹದೇವಪುರ ಮತ್ತು ಕೆಆರ್ ಪುರ ಕಡೆಗೆ ಹೋಗುವ ವಾಹನಗಳ ಸಂಚಾರ ನಿಧಾನಗತಿಯಲ್ಲಿರುತ್ತದೆ. ವಾಹನ ಸವಾರರು ಸಹಕರಿಸುವಂತೆ ಪೊಲೀಸರು ಮನವು ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಇಷ್ಟು ದಿನ ರಣಭೀಕರ ಬಿಸಿಲಿನಿಂದ ನನಗರದ ಜನ ಬೇಸತ್ತು ಹೇಗಿದ್ದರು. ಇದೀಗ ಮಳೆ ಸುರಿದ ಹಿನ್ನೆಲೆ ಜನರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ. ಮತ್ತೊಂದೆಡೆ ಇಂದು ಸುರಿದ ಮಳೆಯಿಂದಾಗಿ ನಗರದ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ.
ಕೋಲಾರ ನಗರ, ಶ್ರೀನಿವಾಸಪುರ ಸೇರಿದಂತೆ ಹಲವೆಡೆ ಅರ್ಧ ಗಂಟೆ ಮಳೆ ಸುರಿದಿದೆ. ಆ ಮೂಲಕ ಭೂಮಿಗೆ ಮಳೆರಾಯ ತಂಪರೆದಿದ್ದಾನೆ. ಬಿಸಿಲಿನ ತಾಪದಿಂದ ಜಿಲ್ಲೆಯ ಜನರು ತತ್ತರಿಸಿದ್ದರು. ಆದರೆ, ಮಳೆರಾಯನ ಆರ್ಭಟದಿಂದ ಜನರಲ್ಲಿ ಸಂತಸ ಮೂಡಿದೆ. ಕಳೆದರೆಡು ದಿನಗಳಿಂದ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಮಳೆ ಸುರಿದಿದ್ದು, ಮಳೆಯಿಂದ ಜಾನುವಾರಗಳಿಗೆ ಕುಡಿಯುವ ನೀರು ಮತ್ತು ಮೇವಿಗೆ ಸಹಕಾರಿಯಾಗಿದೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಳೆ ಅಬ್ಬರಿಸಿದೆ. ಬೇಲೂರಿನಲ್ಲಿ ಅರ್ಧಗಂಟೆ ಆಲಿಕಲ್ಲು ಸಹಿತ ಮಳೆ ಸುರಿದಿದೆ. ಆ ಮೂಲಕ ಬಿಸಿಲಿನ ಬೇಗೆಯಿಂದ ಹೈರಾಣಾಗಿದ್ದ ರೈತರು, ಕಾಫಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.












Click it and Unblock the Notifications