OYE Space ಹೆಸರಿನಲ್ಲಿ ಬಾಡಿಗೆದಾರರಿಗೆ, ಮನೆ ಮಾಲೀಕರಿಗೆ ಮಕ್ಮಲ್ ಟೋಪಿ!
ಬೆಂಗಳೂರು, ಮಾ. 11: ಮನೆ ಲೀಸ್ ಪಡೆಯುವರನ್ನು ಟಾರ್ಗೆಟ್ ಮಾಡಿ ಕಾರ್ಪೋರೇಟ್ ಸ್ಟೈಲ್‌ನಲ್ಲಿ ದೋಖಾ ಮಾಡುವ ದೊಡ್ಡ ದಂಧೆ ರಾಜಧಾನಿ ಬೆಂಗಳೂರಿನಲ್ಲಿ ಟಿಸಿಲೊಡೆದಿದೆ.
ಅದೂ ಖ್ಯಾತ ಉದ್ಯಮಿ ನಂದನ್ ನೀಲಕಣಿ ಅವರೊಂದಿಗೆ ತೆಗೆಸಿಕೊಂಡಿರುವ ಭಾವಚಿತ್ರ ಮುಂದಿಟ್ಟುಕೊಂಡು ಕಾರ್ಪೋರೇಟ್ ಸ್ಟೈಲ್ ನಲ್ಲಿ ಟೆಕ್ಕಿಗಳಿಗೆ ಮೋಸ ಮಾಡಲಾಗಿದೆ.
ಮನೆ ಲೀಸ್‌ಗೆ ಕೊಡಿಸುವ ಹೆಸರಿನಲ್ಲಿ ಹುಟ್ಟಿಕೊಂಡಿದ ಕಂಪನಿಯೊಂದು ಕಟ್ಟಿದ ಮನೆಗಳನ್ನು ಮಾಲೀಕರಿಂದ ತಿಂಗಳ ಬಾಡಿಗೆ ಲೆಕ್ಕದಲ್ಲಿ ಪಡೆಯುವುದು. ಅದೇ ಮನೆಗಳನ್ನು ಲೀಸ್ ಕೊಡುವ ನೆಪದಲ್ಲಿ ಲಕ್ಷಾಂತರ ರೂಪಾಯಿಗಳನ್ನು ಪಡೆದು ಮೋಸ ಮಾಡುವುದು. ಹೀಗೆ oye Space ಹೆಸರಿನಲ್ಲಿ ಅನೇಕರಿಗೆ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಕುರಿತು ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಸರಣಿ ದೂರುಗಳು ದಾಖಲಾಗಿವೆ.

ಎಲೆಕ್ಟ್ರಾನಿಕ್ ಸಿಟಿ, ಆನೇಕಲ್, ಹೆಬ್ಬಗೋಡಿ ಸುತ್ತಮತ್ತ ಹೀಗೆ ಮನೆ ಮಾಲೀಕರಿಗೆ ಹಾಗೂ ಸಾಫ್ಟ್‌ವೇರ್ ಇಂಜಿನಿಯರ್‌ಗಳಿಗೆ ಮೋಸ ಮಾಡಿದ್ದು, ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಗೋಡಿ ಪೊಲೀಸ್ ಠಾಣೆಗಳಲ್ಲಿ ಸರಣಿ ದೂರು ದಾಖಲಾಗಿವೆ. ಓಯಿ ಸ್ಪೇಸ್‌ನ ಸುನೀಲ್ ಮೋರೆ ಶಿವಾಜಿ ರಾವ್, ರಾಮ್ ತೇಜ ಹರಿ ಗೇಲಾ ಎಂಬುವರು ವಂಚನೆ ಮಾಡಿದ ಆರೋಪಕ್ಕೆ ಗುರಿಯಾಗಿದ್ದಾರೆ.

ಹೊಸ ಸ್ಟೈಲ್ ವಂಚನೆ:
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಓಯಿ ಸ್ಪೇಸ್ ಹೆಸರಿನಲ್ಲಿ ಹೈಟೆಕ್ ಕಚೇರಿ ತೆರೆದಿದ್ದ ಆರೋಪಿಗಳು, ಕಮ್ಮಸಂದ್ರ, ಹೆಬ್ಬಗೋಡಿ, ತಲಘಟ್ಟಪುರ, ಶಿಕಾರಿಪಾಳ್ಯ, ಹೊಸರೋಡ್ ಸುತ್ತಮುತ್ತ ಖಾಲಿ ಇರುವ ಮನೆಗಳನ್ನು ಗುರುತಿಸಿ ಮನೆಗಳನ್ನು ಮಾಲೀಕರಿಂದ ತಿಂಗಳ ಬಾಡಿಗೆ ಮೇಲೆ ಪಡೆದು ಒಡಂಬಡಿಕೆ ಮಾಡಿಕೊಂಡಿದ್ದಾರೆ.

ಇದೇ ಮನೆಗಳ ಕೇವಲ 15 ರಿಂದ 20 ಲಕ್ಷ ರೂ.ಗಳಿಗೆ ಭೋಗ್ಯಕ್ಕೆ ಲಭ್ಯವಿದೆ ಎಂದು ಓಯಿ ಸ್ಪೇಸ್ ವತಿಯಿಂದ ಜಾಹೀರಾತು ನೀಡಲಾಗಿತ್ತು. ಬಾಡಿಗೆ ಕಟ್ಟುವುದರಿಂದ ತಪ್ಪಿಸಿಕೊಳ್ಳಲು ಆಸೆಪಟ್ಟ ಟೆಕ್ಕಿಗಳು ಜಾಹೀರಾತುಗಳಿಗೆ ಮರುಳಾಗಿ 15 ರಿಂದ 20 ಲಕ್ಷ ರೂ. ಪಾವತಿಸಿ ಮನೆಗಳನ್ನು ಭೋಗ್ಯಕ್ಕೆ ಹಾಕಿಸಿಕೊಂಡಿದ್ದಾರೆ. ಮನೆ ಮಾಲೀಕರಿಗೆ ಎರಡು ಮೂರು ತಿಂಗಳು ಬಾಡಿಗೆ ಕಟ್ಟಿ ಆ ಬಳಿಕ ಓಯಿ ಸ್ಪೇಸ್ ನವರು ಕೈ ಎತ್ತಿದ್ದಾರೆ. ಮನೆಯಲ್ಲಿರುವ ಟೆಕ್ಕಿಗಳನ್ನ ಹೋಗಿ ಕೇಳಿದ್ರೆ, ನೋಡಿ, ನಾವು ಹದಿನೈದು ಲಕ್ಷ ರೂ. ಕೊಟ್ಟು ಭೋಗ್ಯಕ್ಕೆ ಹಾಕಿಸಿಕೊಂಡಿದ್ದೇವೆ ಎಂದು ದಾಖಲೆ ತೋರಿಸಿದ್ದಾರೆ. ಇನ್ನೂ ಕೆಲವರು ಮನೆ ಮಾಲೀಕರು ತಮ್ಮ ಪ್ರಭಾವ ಬಳಿಸಿ ಟೆಕ್ಕಿಗಳನ್ನು ಮನೆಗಳಿಂದ ಖಾಲಿ ಮಾಡಿಸಿದ್ದಾರೆ.

ಮನೆಗಳನ್ನು ಭೋಗ್ಯಕ್ಕೆ ಕೊಡಿಸುವ ಸೋಗಿನಲ್ಲಿ ಹೆಸಗುವ ದೋಖಾದಿಂದ ಅಮಾಯಕರ ಮನೆ ಮಾಲೀಕರು ಹಾಗೂ ಟೆಕ್ಕಿಗಳು ಕೈ ಕೈ ಮಿಲಾಯಿಸಿಕೊಂಡು ಜಗಳ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಸರಣಿ ದೂರುಗಳನ್ನು ನೀಡಿ ನ್ಯಾಯ ಕೊಡಿಸುವಂತೆ ಮನೆ ಮಾಲೀಕರು ಪೊಲೀಸ್ ಠಾಣೆಗಳಿಗೆ ಅಲೆಯುತ್ತಿದ್ದಾರೆ. ಕೇಶವ ನಾರಾಯಣ, ಅಕ್ಷಯ್, ಬಾಲಮುರುಗನ್ ಹೀಗೆ ಅನೇಕರು ದೂರು ಕೊಟ್ಟಿದ್ದಾರೆ. ಕಂಪನಿಗೆ ಶಿವಕುಮಾರ್ ಎಂಬಾತನನ್ನು ಮ್ಯಾನೇಜರ್ ಆಗಿ ನೇಮಕಗೊಂಡಿದ್ದು, ಟೆಕ್ಕಿಗಳನ್ನೇ ಟಾರ್ಗೆಟ್ ಮಾಡಿ ಈ ಭೋಗ್ಯದ ಸ್ಕೀಮ್ ನಲ್ಲಿ ಬ್ಲೇಡ್ ಹಾಕಿರುವ ಆರೋಪ ಕೇಳಿ ಬಂದಿದೆ.
ಮನೆಗೆ ಭೋಗ್ಯಕ್ಕೆ ಪಡೆದವರಿಂದ ಕೋಟ್ಯಂತರ ರೂಪಾಯಿ ಹಣವನ್ನು ಪಡೆದು ಮೋಸ ಮಾಡಲಾಗಿದೆ. ಮನೆ ಭೋಗ್ಯಕ್ಕೆ ಪಡೆಯುವ ಹೆಸರಿನಲ್ಲಿ ಪಡೆದ ಹಣವನ್ನು ವಾಪಸು ಕೊಡಿ ಎಂದು ಮಾಲೀಕನನ್ನು ಕೇಳದರೆ, ನನ್ನ ಬಳಿ ಈಗ ಹಣವಿಲ್ಲ, ಏನು ಬೇಕಾದರೂ ಮಾಡಿಕೊಳ್ಳಿ ಎಂದು ದಮ್ಕಿ ಹಾಕಿ ಕಳಿಸಿದ್ದಾನೆ. ಇದರಿಂದ ನೊಂದ ಜನರು ನ್ಯಾಯ ಕೋರಿ ಪೊಲೀಸ್ ಠಾಣೆಗಳ ಮೆಟ್ಟಿಲೇರುತ್ತಿದ್ದಾರೆ.












Click it and Unblock the Notifications