Bengaluru Property: ಪ್ರಾಪರ್ಟಿದಾರರಿಗೆ ಭರ್ಜರಿ ಗುಡ್‌ನ್ಯೂಸ್ ಕೊಟ್ಟ ಜಿಬಿಎ: ಬಿ ಖಾತಾ & ಇ ಖಾತಾ ಸುಲಭ!
ಬೆಂಗಳೂರಿನಲ್ಲಿ ಇ - ಖಾತಾ ಪಡೆಯುವುದಕ್ಕೆ ಇರುವ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮತ್ತೊಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡೆ. ಬೆಂಗಳೂರಿನಲ್ಲಿ ಆಸ್ತಿಗಳ ಖರೀದಿ ಹಾಗೂ ಮಾರಾಟದಲ್ಲಿ ಲೋಪವಾಗಬಾರದು ಎನ್ನುವ ಕಾರಣಕ್ಕೆ ಇ - ಖಾತಾ ಪರಿಚಯಿಸಲಾಗಿದೆ. ಅಲ್ಲದೇ ಬಿ ಖಾತಾದಿಂದ ಎ ಖಾತಾ ಪರಿವರ್ತನೆಗೂ ಇ - ಖಾತಾ ಕಡ್ಡಾಯ ಮಾಡಲಾಗಿದೆ. ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಇಂಟಿಗ್ರೇಟೆಡ್ ಇ-ಖಾತಾ ವ್ಯವಸ್ಥೆ ಮಾಡಿದೆ.
ಇ - ಖಾತಾ ಪಡೆದುಕೊಳ್ಳುವುದಕ್ಕೆ ಆಸ್ತಿದಾರರಿಗೆ ಆಗುತ್ತಿರುವ ಸಮಸ್ಯೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಹೊಸ ಪದ್ಧತಿಯನ್ನು ಜಾರಿ ಮಾಡಿದೆ. ನಗರ ಸಮೀಕ್ಷೆಯ UPOR(ನಗರ ಆಸ್ತಿ ಮಾಲೀಕತ್ವ ದಾಖಲೆಗಳು) ಆಸ್ತಿ ನಕ್ಷೆಗಳು ಹಾಗೂ ಡ್ರೋನ್ ಮೂಲಕ ಪಡೆದುಕೊಂಡ ಓವರ್-ವ್ಯೂ ಚಿತ್ರಗಳನ್ನು ಈಗ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಇ-ಖಾತಾ ವ್ಯವಸ್ಥೆಯೊಂದಿಗೆ ಸಂಯೋಜಿಸಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಇ-ಖಾತಾದಲ್ಲಿ ಲಭ್ಯವಿರುವ ಮಾಹಿತಿ:
1. ಎಲ್ಲಾ ಮಾಲೀಕರ ವಿವರಗಳು
2. ಎಲ್ಲಾ ಆಸ್ತಿಯ ವಿವರಗಳು
3. ಆಸ್ತಿಯ ಫೋಟೋ
4. ಮಾಲೀಕರ ಫೋಟೋ
5. ಆಸ್ತಿಯ GPS ಅಂಕಿಗಳು
6. ಆಸ್ತಿಯ ಡಿಜಿಟಲ್ ಮ್ಯಾಪ್ ಹಾಗೂ ಅದರ ಸ್ಥಳದ ಚಿತ್ರ
7. ಆಸ್ತಿಯ ತೆರಿಗೆ ವಿವರಗಳು ಮತ್ತು ಬಳಕೆ ವಿವರಗಳು
8. ಬೆಸ್ಕಾಂ ಮೀಟರ್ ಸಂಖ್ಯೆ
9. ಆಸ್ತಿಯ ಮಾಲೀಕತ್ವ ಪಡೆದಿರುವ ದಾಖಲೆ ಸಂಖ್ಯೆ
ಬೆಂಗಳೂರು ನಗರದಲ್ಲಿ ಸುಮಾರು 2 ವರ್ಷಗಳಿಂದ UPOR ಯೋಜನೆಯಡಿಯಲ್ಲಿ ಮಾಡಲಾದ ಕೆಲಸವನ್ನು ಈಗ ಇ-ಖಾತಾ ವ್ಯವಸ್ಥೆಯೊಂದಿಗೆ ಯಶಸ್ವಿಯಾಗಿ ಇಂಟಿಗ್ರೇಟ್ ಮಾಡಲಾಗಿದೆ. ಇ-ಖಾತಾದಲ್ಲಿರುವ ನಿಖರ GPS ಮಾಹಿತಿ UPOR ನಕ್ಷೆ ಮತ್ತು ಚಿತ್ರಗಳನ್ನು ಸರಿಯಾಗಿ ಜೋಡಿಸಲು ಅತ್ಯಂತ ಪ್ರಮುಖವಾಗಿದೆ. ಇದು ಅತ್ಯಂತ ಕಷ್ಟಸಾಧ್ಯವಾದ, ಹೆಚ್ಚಿನ ಪರಿಶ್ರಮ ಬೇಕಾಗುವ ಕೆಲಸ. ಈಗಾಗಲೇ ಸುಮಾರು 1 ಲಕ್ಷ ಸಂಯೋಜಿತ ಇ-ಖಾತಾಗಳನ್ನು ನೀಡಲಾಗಿದ್ದು, ಪ್ರತಿದಿನವೂ ಮತ್ತಷ್ಟು ಹೆಚ್ಚಿಸಲು ಕ್ರಮವಹಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಿಬಿಎ ವ್ಯಾಪ್ತಿಯಲ್ಲಿ ಸುಮಾರು 9 ಲಕ್ಷ ಅಂತಿಮ ಇ-ಖಾತಾಗಳು ನೀಡಲಾಗಿದ್ದು, ಪ್ರತಿದಿನ ಸರಾಸರಿ 2,500 ಇ-ಖಾತಾಗಳನ್ನು ನೀಡಲಾಗುತ್ತಿದೆ. ಸರಾಸರಿ ನಿರೀಕ್ಷಾ ಅವಧಿ ಸುಮಾರು 2 ದಿನಗಳಾಗಿವೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿಶೇಷ ಆಯುಕ್ತರು (ಕಂದಾಯ ಮತ್ತು ಐಟಿ) ಮುನೀಶ್ ಮೌದ್ಗಿಲ್ ಅವರು ಮಾಹಿತಿ ನೀಡಿದ್ದಾರೆ.












Click it and Unblock the Notifications