Bengaluru Property: ನಗರದ ಈ ಆಸ್ತಿಗಳ ವಶಕ್ಕೆ ಪಡೆಯಲು ನಿರ್ಧಾರ: ಬೆಂಗಳೂರು ಕೇಂದ್ರ ನಗರ ಪಾಲಿಕೆ
Bengaluru Property: ಬೆಂಗಳೂರಿನಲ್ಲಿ ಗುತ್ತಿಗೆ ಅವಧಿ ಮುಕ್ತಾಯವಾಗಿರುವ ಆಸ್ತಿಗಳ ವಶಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ನಗರ ಪಾಲಿಕೆಗಳು ಮುಂದಾಗಿವೆ. ಈ ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಸ್ತಿತ್ವದಲ್ಲಿ ಸರ್ಕಾರದ ಆಸ್ತಿಗಳನ್ನು ಗುತ್ತಿಗೆ ನೀಡಲಾಗುತ್ತಿತ್ತು. ಅದೇ ಮಾದರಿಯನ್ನು ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅವಧಿಯಲ್ಲೂ ವಿಸ್ತರಿಸಲಾಗಿದೆ. ಆದರೆ ಗುತ್ತಿಗೆ ಅವಧಿ ಮುಗಿರುವ ಸರ್ಕಾರಿ ಆಸ್ತಿಗಳನ್ನು ವಶಕ್ಕೆ ಪಡೆಯಲು ನಿರ್ಧರಿಸಲಾಗಿದೆ.
ಮುಂದುವರಿದು ಬೆಂಗಳೂರಿನಲ್ಲಿ ಖಾಲಿ ಇರುವ ನಗರ ಪಾಲಿಕೆ ಜಾಗಗಳಲ್ಲಿ ನಗರ ಪಾಲಿಕೆಯ ಅಧಿಕಾರಿ ಹಾಗೂ ಸಿಬ್ಬಂದಿಗೆ ವಸತಿ ಗೃಹಗಳನ್ನು ನಿರ್ಮಿಸಲು ಕ್ರಮ ವಹಿಸಲು ನಿರ್ಧರಿಸಲಾಗಿದೆ. ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ಅವರು ಕಂದಾಯ ವಿಭಾಗದ ಅಧಿಕಾರಿಗಳೊಂದಿಗೆ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ್ದು, ಈ ಸಭೆಯಲ್ಲಿ ಕೆಲವೊಂದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಬೆಂಗಳೂರು ಕೇಂದ್ರ ನಗರ ಪಾಲಿಕೆಗೆ ಸೇರಿದ ಸ್ವತ್ತುಗಳನ್ನು ಗುತ್ತಿಗೆ ಆಧಾರದ ಮೇಲೆ ಸಾರ್ವಜನಿಕರಿಗೆ, ಸಂಘ-ಸಂಸ್ಥೆಗಳಿಗೆ ಇನ್ನಿತರೆ ಉಪಯೋಗಕ್ಕಾಗಿ ಗುತ್ತಿಗೆ ಆಧಾರದ ಮೇಲೆ ನೀಡಲಾಗಿರುವ ಎಲ್ಲಾ ಆಸ್ತಿಗಳ ಪಟ್ಟಿ ಮಾಡಲು ಸೂಚಿಸಿದ್ದಾರೆ. ಗುತ್ತಿಗೆ ನೀಡಲಾದ ಜಾಗಗಳ ಪೈಕಿ ಗುತ್ತಿಗೆ ಅವಧಿ ಮುಕ್ತಾಯಗೊಂಡ ಪ್ರಕರಣಗಳಲ್ಲಿ ಅಂತಹ ಸ್ವತ್ತು ಗುತ್ತಿಗೆ ಪಡೆದ ಸಂಘ-ಸಂಸ್ಥೆ/ ಸಾರ್ವಜನಿಕರಿಗೆ ನೋಟಿಸ್ ಜಾರಿ ಮಾಡಲು ಹಾಗೂ ಇದಕ್ಕೆ ಪ್ರತ್ಯತ್ತರಕ್ಕಾಗಿ 15 ದಿನಗಳ ಕಾಲಾವಕಾಶ ನೀಡಲು ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮುಂದುವರಿದು 15 ದಿನದೊಳಗಾಗಿ ನೋಟಿಸ್‌ಗೆ ಯಾವುದೇ ರೀತಿಯ ಉತ್ತರ ಬಾರದಿದ್ದರೆ, ಅಂತಹ ಸ್ವತ್ತುಗಳನ್ನು ನಗರ ಪಾಲಿಕೆ ವಶಕ್ಕೆ ಪಡೆದುಕೊಳ್ಳಲು ಆಯುಕ್ತರು ನಿರ್ದೇಶನ ನೀಡಿದ್ದಾರೆ.
ನಗರ ಪಾಲಿಕೆ ಕಚೇರಿಗಳ ನವೀಕರಣ
ಬೆಂಗಳೂರಿನ ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ದುರಸ್ತಿಯಲ್ಲಿರುವ ನಗರ ಪಾಲಿಕೆಯ ಕಚೇರಿಗಳನ್ನು ನವೀಕರಣಗೊಳಿಸಿ ಸುಸ್ಥಿತಿಯಲ್ಲಿರಿಸಲು ಮತ್ತು ಅಧಿಕಾರಿಗಳು ಹಾಗೂ ಸಿಬ್ಬಂದಿಯ ದೈನಂದಿನ ಕಾರ್ಯನಿರ್ವಹಣೆಗೆ ಅನುಕೂಲವಾಗಲು ಹಾಗೂ ಸಾರ್ವಜನಿಕರ ಕೆಲಸಕಾರ್ಯಗಳಿಗೆ ಅನುವಾಗುವಂತೆ ಅಗತ್ಯ ಪೀಠೋಪಕರಣಗಳನ್ನು ಅಳವಡಿಸಿಕೊಳ್ಳಲು ಸೂಚನೆ ನೀಡಲಾಗಿದೆ.
Bengaluru Property: ಅಧಿಕಾರಿ - ಸಿಬ್ಬಂದಿಗೆ ವಸತಿ ಗೃಹ
ಇನ್ನು ಬೆಂಗಳೂರು ಕೇಂದ್ರ ನಗರ ಪಾಲಿಕೆ ಸೇರಿದ ಖಾಲಿ ಸ್ವತ್ತುಗಳನ್ನು ಗುರುತಿಸಿ, ಅಂತಹ ಸ್ಥಳಗಳಲ್ಲಿ ನಗರ ಪಾಲಿಕೆಯ ಅಧಿಕಾರಿ ಹಾಗೂ ಸಿಬ್ಬಂದಿ ವಾಸಕ್ಕೆ ಅನುಕೂಲವಾಗುವಂತೆ ವಸತಿ ಗೃಹಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಕೇಂದ್ರ ನಗರ ಪಾಲಿಕೆಗೆ ಸೇರಿದ ಖಾಲಿ ಸ್ವತ್ತುಗಳನ್ನು ಗುರುತಿಸಿ ಅಂತಹ ಸ್ಥಳಗಳಲ್ಲಿ ವಾಣಿಜ್ಯ ಉದ್ದೇಶಕ್ಕೆ ಕಟ್ಟಡ ನಿರ್ಮಿಸಿದ್ದಲ್ಲಿ ಇದರಿಂದ ನಗರ ಪಾಲಿಕೆಗೆ ಕಂದಾಯ ಬರುವುದರಿಂದ ಈ ನಿಟ್ಟಿನಲ್ಲಿ ಕ್ರಮ ವಹಿಸಲು ಆಯುಕ್ತರು ನಿರ್ದೇಶನ ನೀಡಿದ್ದಾರೆ.
ಮುಖ್ಯವಾಗಿ ಬೆಂಗಳೂರಿನ ನಗರ ಪಾಲಿಕೆ ವತಿಯಿಂದ ಗುತ್ತಿಗೆ ಪಡೆದ ಜಾಗದಲ್ಲಿ ಯಾವ ಉದ್ದೇಶಕ್ಕಾಗಿ ಗುತ್ತಿಗೆ ಪಡೆದಿದ್ದಾರೆಯೋ ಅದನ್ನು ಹೊರತುಪಡಿಸಿ ಬೇರೆ ರೀತಿಯಲ್ಲಿ ಇನ್ನಿತರೆ ವಾಣಿಜ್ಯ ಚಟುವಟಿಕೆಗಳಿಗೆ ಉಪಯೋಗಿಸುತ್ತಿದ್ದಲ್ಲಿ ಅಂತಹ ಗುತ್ತಿಗೆ ಜಾಗ ಪಡೆದ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸಭೆಯಲ್ಲಿ ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್, ಕಂದಾಯ ಅಪರ ಆಯುಕ್ತರಾದ ಕೆ. ರಂಗನಾಥ್, ಕಂದಾಯ ಅಧಿಕಾರಿಗಳು, ಸಹ ಕಂದಾಯ ಅಧಿಕಾರಿಗಳು ಹಾಜರಿದ್ದರು.












Click it and Unblock the Notifications