Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ
Bengaluru Property: ಬೆಂಗಳೂರಿನ ಆಸ್ತಿದಾರರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಅಂತಿಮ ಸಂದೇಶವೊಂದನ್ನು ಹಂಚಿಕೊಂಡಿದೆ. ಆಸ್ತಿಗಳನ್ನು ಉಳಿಸಿಕೊಳ್ಳಬೇಕಾದರೆ ಈ ನಿಯಮಗಳನ್ನು ಪಾಲನೆ ಮಾಡುವುದು ಅತ್ಯಂತ ಮುಖ್ಯವಾಗಿದೆ. ಆದರೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಂಚಿಕೊಂಡಿರುವ ಈ ಸಂದೇಶವು ಬೆಂಗಳೂರಿನ ಎಲ್ಲಾ ಆಸ್ತಿದಾರರಿಗೂ ಅನ್ವಯ ಆಗುವುದಿಲ್ಲ. ಯಾವೆಲ್ಲ ಆಸ್ತಿದಾರರಿಗೆ ಅನ್ವಯ ಆಗಲಿದೆ ಎನ್ನುವ ವಿವರ ಇಲ್ಲಿದೆ.
ನಗರ ಪಾಲಿಕೆಗಳು - ದೀರ್ಘಕಾಲದ ಆಸ್ತಿ ತೆರಿಗೆ ಬಾಕಿದಾರರ ಆಸ್ತಿಗಳನ್ನು ಕೊನೆಯ ಕ್ರಮವಾಗಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿವೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದೀರ್ಘಕಾಲದಿಂದ ಬಾಕಿಯಿರುವ ಆಸ್ತಿ ತೆರಿಗೆ ವಸೂಲಾತಿಗೆ ಪರಿಣಾಮಕಾರಿ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ, ನಗರ ಪಾಲಿಕೆಗಳು ದೀರ್ಘಕಾಲದ ಬಾಕಿದಾರರ ವಿರುದ್ಧ "ಕೊನೆಯ ಹಂತದ ಕ್ರಮ"ವನ್ನು ಜಾರಿಗೊಳಿಸಿವೆ.

ಬೇಡಿಕೆ ನೋಟಿಸ್ ಜಾರಿ, ಆಸ್ತಿ ಅಟಾಚ್ಮೆಂಟ್ ಹಾಗೂ ಸಾರ್ವಜನಿಕ ಹರಾಜು ಮೂಲಕ ವಸೂಲಾತಿ ಸೇರಿದಂತೆ ಕಾನೂನುಬದ್ಧ ಕ್ರಮಗಳನ್ನು ಹಲವು ಬಾರಿ ಕೈಗೊಂಡಿದ್ದರೂ, ಕೆಲವು ಪ್ರಕರಣಗಳಲ್ಲಿ ಬಾಕಿ ಪಾವತಿ ಆಗದೇ ಇರುವುದರಿಂದ ಹಾಗೂ ಹರಾಜು ಪ್ರಕ್ರಿಯೆಯಲ್ಲಿ ಯಾರೂ ಭಾಗವಹಿಸದಿರುವುದರಿಂದ ಸಮಸ್ಯೆಗಳು ಬಗೆಹರಿಯದೆ ಉಳಿದಿವೆ. ಇಂತಹ ಅಪರೂಪದ ಸಂದರ್ಭಗಳಲ್ಲಿ, ಕಾನೂನುಬದ್ಧ ಎಲ್ಲಾ ವಸೂಲಾತಿ ಕ್ರಮಗಳು ಪೂರ್ಣಗೊಂಡು ಹರಾಜು ಪ್ರಕ್ರಿಯೆಗಳು ವಿಫಲವಾದಲ್ಲಿ, ನಗರ ಪಾಲಿಕೆಗಳು ಈಗ ಸೂಚಿಸಲಾದ ಅಧಿಸೂಚಿತ ಬೆಲೆಗೆ ಆಸ್ತಿಗಳನ್ನು ಸ್ವತಃ ಖರೀದಿಸುವ ಕ್ರಮ ಕೈಗೊಳ್ಳಲಿವೆ ಎಂದು ಹೇಳಲಾಗಿದೆ.
ಆಸ್ತಿದಾರರಿಗೆ / ಆಸ್ತಿಗಳಿಗೆ ಸಂಬಂಧಿಸಿದಂತೆ ಪ್ರಮುಖ ಅಂಶಗಳು
ಕೊನೆಯ ಹಂತದ ವಸೂಲಾತಿ ಕ್ರಮ: ಈ ಕ್ರಮವನ್ನು ಕೇವಲ ಎಲ್ಲಾ ಕಾನೂನುಬದ್ಧ ಪ್ರಕ್ರಿಯೆಗಳು (ಬೇಡಿಕೆ ನೋಟಿಸ್, ಅಟಾಚ್ಮೆಂಟ್, ಹರಾಜು) ಪೂರ್ಣಗೊಂಡ ನಂತರ ಮಾತ್ರ ಜಾರಿಗೊಳಿಸಲಾಗುತ್ತದೆ.
ಅಧಿಸೂಚಿತ ಬೆಲೆಗೆ ಪಾಲಿಕೆ ಖರೀದಿ: ಆಸ್ತಿಯನ್ನು ಪೂರ್ವನಿರ್ಧರಿತ ಅಧಿಸೂಚಿತ ಬೆಲೆಗೆ (ಮಾರ್ಗದರ್ಶಕ ಮೌಲ್ಯಕ್ಕೆ ಸಂಬಂಧಿಸಿದಂತೆ) ನಗರ ಪಾಲಿಕೆಗೆ ಮಾರಾಟವಾದಂತೆ ಪರಿಗಣಿಸಲಾಗುತ್ತದೆ.
ಬಾಕಿಗಳ ಹೊಂದಾಣಿಕೆ: ಮಾರಾಟದ ಮೊತ್ತದಿಂದ ಎಲ್ಲಾ ಬಾಕಿ ಆಸ್ತಿ ತೆರಿಗೆ, ದಂಡ, ಬಡ್ಡಿ ಹಾಗೂ ಆಡಳಿತ ವೆಚ್ಚಗಳನ್ನು ಸಂಪೂರ್ಣವಾಗಿ ವಸೂಲಿಸಲಾಗುತ್ತದೆ.
ಮಾಲೀಕರಿಗೆ ಬಾಕಿ ಹಣ ಮರುಪಾವತಿ: ಬಾಕಿ ಮೊತ್ತಗಳನ್ನು ಕಡಿತಗೊಳಿಸಿದ ನಂತರ ಉಳಿದಿರುವ ಮೊತ್ತವನ್ನು ಮೂಲ ಖಾತೆದಾರರಿಗೆ (ಆಸ್ತಿ ಮಾಲೀಕರಿಗೆ) ಬ್ಯಾಂಕ್ ವರ್ಗಾವಣೆ ಮೂಲಕ ಹಿಂತಿರುಗಿಸಲಾಗುತ್ತದೆ. ಇದು ಪಾರದರ್ಶಕತೆ ಮತ್ತು ನ್ಯಾಯತೆಯನ್ನು ಖಚಿತಪಡಿಸುತ್ತದೆ.
ಆಸ್ತಿಯ ಹಸ್ತಾಂತರ: ಆಸ್ತಿ ಯಾವುದೇ ಹೊರೆಗಳಿಲ್ಲದೆ ನಗರ ಪಾಲಿಕೆಗೆ ವರ್ಗಾವಣೆಗೊಂಡು, ಮಾಲೀಕತ್ವ ದಾಖಲೆಗಳನ್ನು ತದನಂತರ ನವೀಕರಿಸಲಾಗುತ್ತದೆ.
ಬಾಕಿದಾರರಿಗೆ ಅಂತಿಮ ಅವಕಾಶ: ಈ ಹಂತದಲ್ಲಿಯೂ ಬಾಕಿದಾರರಿಗೆ ಒಂದು ತಿಂಗಳ ಅಂತಿಮ ಅವಧಿಯನ್ನು ನೀಡಿ, ಬಡ್ಡಿ ಸೇರಿದಂತೆ ಎಲ್ಲಾ ಬಾಕಿ ಮೊತ್ತವನ್ನು ಪಾವತಿಸಲು ಅವಕಾಶ ನೀಡಲಾಗುತ್ತದೆ. ಈ ಅವಧಿಯಲ್ಲಿ ಪಾವತಿ ಮಾಡಿದಲ್ಲಿ ಸ್ವಾಧೀನ ಕ್ರಮವನ್ನು ಹಿಂತೆಗೆದುಕೊಳ್ಳಲಾಗುತ್ತದೆ ಮತ್ತು ಆಸ್ತಿಯನ್ನು ಹಿಂತಿರುಗಿಸಲಾಗುತ್ತದೆ ಎಂದು ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ,
Bengaluru Property: ಆಸ್ತಿದಾರರಿಗೆ ಜಿಬಿಎ ಸಲಹೆ
ಇನ್ನು ಬೆಂಗಳೂರಿನ ಆಸ್ತಿದಾರರು ತಮ್ಮ ಆಸ್ತಿ ತೆರಿಗೆ ಬಾಕಿಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿ, ಬಲವಂತದ ವಸೂಲಾತಿ ಕ್ರಮಗಳನ್ನು ತಪ್ಪಿಸಿಕೊಳ್ಳುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಮನವಿ ಮಾಡಿದ್ದಾರೆ. ಈ ಕ್ರಮವು ಹಣಕಾಸಿನ ಶಿಸ್ತನ್ನು ಕಾಪಾಡಲು, ನಗರ ಪಾಲಿಕೆಯ ಆದಾಯವನ್ನು ಹೆಚ್ಚಿಸಲು ಹಾಗೂ ತೆರಿಗೆ ಪಾವತಿಸುವವರ ನಡುವೆ ಸಮಾನತೆಯನ್ನು ಸಾಧಿಸಲು ಉದ್ದೇಶಿತವಾಗಿದೆ. ನಗರ ಪಾಲಿಕೆಗಳು ಪಾರದರ್ಶಕ, ಕಾನೂನುಬದ್ಧ ಹಾಗೂ ನಾಗರಿಕ ಕೇಂದ್ರಿತ ಆಡಳಿತಕ್ಕೆ ಬದ್ಧವಾಗಿದ್ದು, ದೀರ್ಘಕಾಲದಿಂದ ಬಾಕಿಯಿರುವ ತೆರಿಗೆ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಕ್ರಮ ಕೈಗೊಳ್ಳುತ್ತಿವೆ ಎಂದು ಹೇಳಲಾಗಿದೆ.












Click it and Unblock the Notifications