ಪಾಕ್ ಪರ ಘೋಷಣೆ ಪ್ರಕರಣ: ಅಮೂಲ್ಯಾ ಗೆ ಮೊದಲೇ ಎಚ್ಚರಿಕೆ ನೀಡಿದ್ದ ಪೊಲೀಸರು
ಬೆಂಗಳೂರು, ಫೆಬ್ರವರಿ 24: ಪಾಕಿಸ್ತಾನದ ಪರ ಘೋಷಣೆ ಕೂಗಿದ್ದ ಅಮೂಲ್ಯ ಲಿಯೋನಾ ಗೆ ಬೆಂಗಳೂರು ಪೊಲೀಸರು ಕಳೆದ ತಿಂಗಳಷ್ಟೆ ಎಚ್ಚರಿಕೆ ನೀಡಿದ್ದರು.
ಹೌದು, ಅಮೂಲ್ಯ ಲಿಯೋನಾ ಜನವರಿ ತಿಂಗಳಲ್ಲಿ ವಿಧಾನಸೌಧದ ಬಳಿ ಸಿಎಎ-ಎನ್‌ಆರ್‌ಸಿ ವಿರುದ್ಧ ಭಿತ್ತಿಪತ್ರ ಪ್ರದರ್ಶನ ಮಾಡಿದ್ದರು. ಆಗಲೇ ವಿಧಾನಸೌಧ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದರು.
ಅಮೂಲ್ಯ ಲಿಯೋನಾ ಳನ್ನು ವಶಕ್ಕೆ ಪಡೆವಾಗ ಸಾಕಷ್ಟು ಪ್ರತಿರೋಧ ತೋರಿದ್ದ ಆಕೆ, ನೆಲದ ಮೇಲೆಲ್ಲಾ ಬಿದ್ದು ಹೊರಳಾಡಿ ಮಹಿಳಾ ಪೊಲೀಸರನ್ನು ಹೈರಾಣುಗೊಳಿಸಿದ್ದಳು.

ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಆಕೆ ಇನ್ನೂ ವಿದ್ಯಾರ್ಥಿಯೆಂದು ಅರಿತ ಪೊಲೀಸರು 'ಇನ್ನು ಮುಂದೆ ಹೀಗೆ ಮಾಡುವುದಿಲ್ಲ' ಎಂದು ಮುಚ್ಚಳಿಕೆ ಪತ್ರ ಬರೆಸಿಕೊಂಡು ಆಕೆಯನ್ನು ಬಿಡುಗಡೆ ಮಾಡಿದ್ದರು.
ಈಚೆಗಷ್ಟೆ ಅಮೂಲ್ಯ ಕಾರ್ಯಕ್ರಮವೊಂದರಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿರುವ ಪ್ರಕರಣವನ್ನು ಎಸ್‌ಐಟಿ ತನಿಖೆ ನಡೆಸುತ್ತಿದ್ದು, ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಆಕೆ ಈ ಹಿಂದೆ ಭಾಗವಹಿಸಿದ್ದ ಪ್ರತಿಭಟನೆಗಳು, ವೇದಿಕೆ ಸಮಾರಂಭಗಳ ವಿಡಿಯೋ ಚಿತ್ರಣ, ಆಯೋಜಕರಿಂದ ಮಾಹಿತಿಯನ್ನು ಎಸ್‌ಐಟಿ ಕಲೆ ಹಾಕುತ್ತಿದೆ.
ಅಮೂಲ್ಯ ಹುಟ್ಟೂರಿಗೂ ಎಸ್‌ಐಟಿ ಭೇಟಿ ನೀಡಿತ್ತು, ಅಮೂಲ್ಯ ಪೋಷಕರನ್ನೂ ಎಸ್‌ಐಟಿ ವಿಚಾರಣೆಗೆ ಒಳಪಡಿಸಿತ್ತು.












Click it and Unblock the Notifications